ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Election Results: ರಾಜ್ಯದ ಪ್ರಮುಖ ನಾಯಕರು ಹೇಳಿದ್ದೇನು?

Published 5 ಜೂನ್ 2024, 0:09 IST
Last Updated 5 ಜೂನ್ 2024, 0:09 IST
ಅಕ್ಷರ ಗಾತ್ರ
ಬಿಜೆಪಿ- ಜೆಡಿಎಸ್‌ ಒಟ್ಟಾಗಿ ಚುನಾವಣೆ ಎದುರಿಸಿದ್ದು ಫಲ ನೀಡಿದೆ. ಎರಡೂ ಪಕ್ಷಗಳ ಕಾರ್ಯಕರ್ತರ ಶ್ರಮ ಸಾರ್ಥಕವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಕಾಂಗ್ರೆಸ್‌ ಕನಸು ಭಗ್ನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹತ್ತು-ಹಲವು ಆಧಾರ ರಹಿತ ಅಪಪ್ರಚಾರಗಳ ನಡುವೆ ಹಾಗೂ ಕರ್ನಾಟಕದಲ್ಲಿ ಮತ ಬ್ಯಾಂಕ್‌ ಆಧಾರಿತ ಯೋಜನೆಗಳ ಹೆಸರಿನಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ಕುತಂತ್ರದ ನಡುವೆಯೂ ಮೈತ್ರಿ ಪಕ್ಷಗಳು ಉತ್ತಮ ಸಾಧನೆ ತೋರಿವೆ.
–ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಜನರ ಆಶೀರ್ವಾದ,  ಜೆಡಿಎಸ್‌–ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಗೆಲುವು ದೊರೆತಿದೆ. ಶತ್ರು ಭೈರವಿ ಯಾಗದಿಂದಲ್ಲ.  ಕುರಿ, ಮೇಕೆ, ಎಮ್ಮೆ ಕಡಿದು ವಿಜಯಿಗಳಾಗಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ.  ದುರಂಹಕಾರದ ಮಾತುಗಳನ್ನು ಆಡಿದವರಿಗೆ, ಹಣದ ಹೊಳೆ ಹರಿಸಿದವರಿಗೆ ಜನರು ಪಾಠ ಕಲಿಸಿದ್ದಾರೆ. ಎನ್‌ಡಿಎ ಸಾಧನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ದೊಡ್ಡದಿದೆ.
–ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ
ಲೋಕಸಭೆ ಚುನಾವಣೆಯಲ್ಲಿ ಭಾವನೆಗಿಂತ ಬದುಕು, ಅಧಿಕಾರ ರಾಜಕೀಯಕ್ಕಿಂತ ವಿಶ್ವಾಸ ರಾಜಕೀಯ ಗೆದ್ದಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ಮೋದಿ ಹಾಗೂ ರಾಮಮಂದಿರದ ಅಲೆ ಇಲ್ಲವಾಗಿದೆ ಎಂಬುದನ್ನು ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಗೆದ್ದಿದ್ದಾರೆ. ಬಹಳ ಲೆಕ್ಕಾಚಾರದಲ್ಲಿ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದರು. ಇಷ್ಟು ದೊಡ್ಡ ಅಂತರದ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ನನ್ನ ತಮ್ಮ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ, ಜನರು ಮಂಜುನಾಥ್‌ ಅವರಿಗೆ ಅವಕಾಶ ನೀಡಿದ್ದಾರೆ.
–ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ. 
ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದಿದ್ದೇವೆ ಎಂದು ಅಹಂಕಾರದಿಂದ ನಡೆದುಕೊಳ್ಳುತ್ತಿದ್ದ ಕಾಂಗ್ರೆಸ್‌ ನಾಯಕರಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ. ಅಭಿವೃದ್ಧಿ ಕೆಲಸ ಮಾಡದೇ ಗ್ಯಾರಂಟಿ ನಂಬಿಕೊಂಡಿದ್ದ ಕಾಂಗ್ರೆಸ್‌ ದುಡ್ಡು ಖರ್ಚು ಮಾಡಿ ಗೆಲ್ಲಬಹುದು ಎಂದು ಭಾವಿಸಿತ್ತು. ಉಪ ಮುಖ್ಯಮಂತ್ರಿ ತಮ್ಮನೇ ಸೋಲು ಕಂಡಿರುವುದು ಮೈತ್ರಿ ಕೂಟದ ಪರ ಮತದಾರರು ನೀಡಿರುವ ತೀರ್ಪು.
ಆರ್‌. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ.
ಜನರು ಬಿಜೆಪಿ ಬೆಂಬಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇರಬಹುದು. ನಮ್ಮ ಬಳಿ ಜನ ಶಕ್ತಿ ಇದೆ. ಜನಶಸಕ್ತಿ–ರಾಜಶಕ್ತಿ ನಡುವೆ ಸಂಘರ್ಷ ಬಂದಾಗ ಜನಶಕ್ತಿ ಗೆಲ್ಲುತ್ತದೆ. ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಸುಮ್ಮನೆ ಬಿಡುವುದಿಲ್ಲ. ಪಕ್ಷದ ಕಾರ್ಯಕರ್ತರಿಗೆ ವಿನಾಕಾರಣ ತೊದರೆ ಕೊಟ್ಟರೆ ಸುಮ್ಮನಿರುವುದಿಲ್ಲ.  
–ಬಸವರಾಜ ಬೊಮ್ಮಾಯಿ, ವಿಜೇತ ಅಭ್ಯರ್ಥಿ, ಹಾವೇರಿ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಶಕ್ತ ಭಾರತ ನಿರ್ಮಾಣಕ್ಕೆ ಮತದಾರರು ಪಣ ತೊಟಿದ್ದರು. ಅವರ ಪಣದ ಫಲವಾಗಿಯೇ ಮತದಾರರು ಧಾರವಾಡ ಕ್ಷೇತ್ರದಿಂದ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿ, ಆಶೀರ್ವದಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ಕ್ಷೇತ್ರದ ಜನರಿಗಾಗಿ ಇನ್ನಷ್ಟು ಉತ್ತಮ ಕೆಲಸ ಮಾಡುವೆ. 
–ಪ್ರಲ್ಹಾದ ಜೋಶಿ, ಕೇಂದ್ರ ಸಚಿವ (ಧಾರವಾಡ ವಿಜೇತ ಅಭ್ಯರ್ಥಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT