ಚಿತ್ರದ ಶೀರ್ಷಿಕೆ ‘ಭೀಮ’ ಯಾವ ಅರ್ಥದಲ್ಲಿ ಬಳಕೆಯಾಗಿದೆ?
ಸಾಮಾನ್ಯವಾಗಿ ಬಲವಿದ್ದವನಿಗೆ ‘ಭೀಮ’ ಎನ್ನುತ್ತೇವೆ. ಅದೇ ಅರ್ಥದಲ್ಲಿ ಚಿತ್ರದ ಶೀರ್ಷಿಕೆಯಿದೆ. ನಾನಾ ಕಾರಣಗಳಿಂದಾಗಿ ಪ್ರತಿ ಮನೆಯಲ್ಲಿಯೂ ಒಬ್ಬ ‘ಭೀಮ’ನಿರಬೇಕು. ಈ ಸಿನಿಮಾದಲ್ಲಿ ಒಂದು ಜವಾಬ್ದಾರಿ ಹೊತ್ತಿದ್ದೇನೆ. ಪ್ರಸ್ತುತ ಯುವಕರ ಸ್ಥಿತಿಗತಿ ತೆರೆದಿಟ್ಟಿರುವೆ. ಕೆಲಸದಲ್ಲಿರುವ ಪಾಲಕರ ಮಕ್ಕಳು ಬದುಕನ್ನು ಯಾವ ರೀತಿ ಮಾಡಿಕೊಂಡಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿರುವೆ.
ಚಿತ್ರದಲ್ಲಿ ಕಲಾವಿದರಲ್ಲದ ಅನೇಕರು ನಟಿಸಿದ್ದಾರೆಯೇ?
ಸತ್ಯ ಘಟನೆಗಳನ್ನು ನೋಡಿ, ವ್ಯಕ್ತಿಗಳನ್ನು ಲೈವ್ ಆಗಿ ಇಂಟರ್‌ವ್ಯೂ ಮಾಡಿ, ಅದಕ್ಕೆ ಹೋಲುವಂತಹ ಕಲಾವಿದರಿಂದ ನಟನೆ ಮಾಡಿಸಿದ್ದೇನೆ. ಸ್ಕ್ರಿಪ್ಟ್ ಬರೆಯುವಾಗ ಒಂದಷ್ಟು ಯುವಕರನ್ನು ಭೇಟಿ ಮಾಡಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ವಿಚಿತ್ರ ವ್ಯಕ್ತಿತ್ವ. ‘ಡಾರ್ಕ್ ಶೇಡ್ ಆಫ್ ದಿ ಯೂತ್’ ಅಂತಾರಲ್ಲ, ಆ ರೀತಿಯ ಕಥೆಗಳು. ಅವರಲ್ಲಿ ಕೆಲವರು ನೋಡಲಿಕ್ಕೆ ತುಂಬ ವಿಚಿತ್ರವಾಗಿದ್ದರು. ಅವರ ಮಾತಿನ ಶೈಲಿನ ಭಿನ್ನವಾಗಿತ್ತು. ಹೀಗಾಗಿ ಅಂತಹ ಪಾತ್ರಗಳನ್ನು ಅದೇ ಹುಡುಗರಿಂದಲೇ ಮಾಡಿಸಿದ್ದೇನೆ. ನಟನೆ ಗೊತ್ತಿಲ್ಲದವರಿಂದ ನಟನೆ ಮಾಡಿಸಿದ್ದೇನೆ. ತುಂಬಾ ಚೆನ್ನಾಗಿ ನಟಿಸಿದ್ದಾರೆ. ನಾನು ಯಾವತ್ತು ‘ಮೈನಸ್’ ಎಂಬ ಪದವನ್ನು ಯೋಚಿಸುವುದಿಲ್ಲ. ಹಾಗೆ ಯೋಚಿಸುತ್ತ ಕುಳಿತರೆ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ‘ಪ್ಲಸ್’ ಅಂತಲೇ ಹೋಗಬೇಕು. ಇವರ ನಟನೆ ಪ್ಲಸ್ ಆಗಿದೆ.
ಚಿತ್ರ ಪೂರ್ಣವಾಗಿ ಡ್ರಗ್ಸ್ ಕುರಿತ ಕಥೆ ಹೊಂದಿದೆಯಾ?
ಡ್ರಗ್ಸ್ ಎಂಬುದಕ್ಕಿಂತ ಇಂದಿನ ಯುವಕರ ಸ್ಥಿತಿಗತಿಯ ಕಥೆ. ತಂದೆ, ತಾಯಿಗೆ ಏನು ಬೆಲೆ ಕೊಡುತ್ತಾರೆ, ಕಾಲೇಜಿನಲ್ಲಿ ಏನೆಲ್ಲ ನಡೆಸುತ್ತಾರೆ ಎಂಬ ರೀತಿ ವಿಷಯಗಳನ್ನು ಹೇಳಿದ್ದೇನೆ. ‘ಭೀಮ’ ಒಂದು ವಿಶೇಷ ಊಟ. ವೆಜ್, ನಾನ್‌ವೆಜ್ ಎರಡೂ ಇದೆ. ಜೊತೆಗೆ ಸಿಹಿ ಕೂಡ ಇದೆ. ಅದು ಸಪ್ರೈಸ್. ಚಿತ್ರದ ನೋಡಿದ ಮೇಲೆ ನಿಮಗೆ ಅದರೊಳಗಿರುವ ಸಿಹಿಯ ಬಗ್ಗೆ ತಿಳಿಯಲಿದೆ.
ಈ ಚಿತ್ರವು ಮುಚ್ಚುತ್ತಿರುವ ಚಿತ್ರಮಂದಿರಗಳ ಬಾಗಿಲು ತೆರೆಸುತ್ತದೆಯಾ?
ಆ ಚಿತ್ರಮಂದಿರಗಳ ಸುತ್ತಲಿನ ಜನ ಬಂದು ನೋಡ್ತಾರೆ ಎಂಬ ಭರವಸೆ ಇದೆ. ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಲು ಕಾಯುತ್ತಿದ್ದೇನೆ. ವಿಷಯ ಚೆನ್ನಾಗಿದ್ದರೆ ಸಿನಿಮಾ ನೋಡುತ್ತಾರೆ. ಹೊಸಬರ ಸಿನಿಮಾ ಅಂದಾಗ ಮೌತ್ ಪಬ್ಲಿಸಿಟಿ ಹೆಚ್ಚು ಬೇಕಾಗುತ್ತದೆ. ಚಿರಪರಿಚಿತ ನಟರಿದ್ದರೆ ಜನ ಬೇಗ ಬರುತ್ತಾರೆ. ಪ್ರೇಕ್ಷಕರಿಗೆ ನಟನ ಪರಿಚಯ ಎಷ್ಟಿದೆ ಎಂಬುದು ಕೂಡ ಮುಖ್ಯ. ಮಾಮೂಲಿ ರೀತಿಯ ಸಿನಿಮಾ ನೋಡುವವರು ವಿಶ್ವಾಸದಿಂದ ಬರುತ್ತಾರೆ.
‘ಸಲಗ’ಕ್ಕಿಂತ ‘ಭೀಮ’ ಹೇಗೆ ಭಿನ್ನ...
ನಮ್ಮ ಕೆಲಸವನ್ನು ಇನ್ನೊಬ್ಬರಿಗೆ ಕೊಡಲು ಸಾಧ್ಯವಿಲ್ಲ. ಕೆಲವೊಮ್ಮೆ ಅವರಿಗೆ ಅರ್ಥ ಮಾಡಿಸುವುದು ಕಷ್ಟವಾಗುತ್ತದೆ. ಹೀಗಾಗಿ ನಿರ್ದೇಶನಕ್ಕೆ ಇಳಿದೆ. ಇರುವ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ‘ಸಲಗ’ ನಿರ್ದೆಶನ ಮಾಡಿದೆ. ಈಗ ‘ಭೀಮ’ ಆಗಿದೆ. ಎರಡರಲ್ಲಿಯೂ ಮಾಸ್ ಮತ್ತು ಮನರಂಜನೆ ಅಂಶಗಳಿವೆ. ಆದರೆ ಈ ಚಿತ್ರ ಬೇರೆಯದೇ ರೀತಿಯ ಕಥೆ ಮತ್ತು ನಿರೂಪಣೆ ಹೊಂದಿದೆ. ಇದು ಗಮನಹರಿಸಿರುವ ಕ್ಷೇತ್ರವೇ ಬೇರೆ. ಮಾಮೂಲಿ ಆ್ಯಕ್ಷನ್ ಚಿತ್ರವಲ್ಲ.
ನಿಮ್ಮ ಮುಂದಿನ ಸಿನಿಮಾಗಳು...?
ಸದ್ಯ ಪೂರ್ತಿ ಗಮನ ಈ ಚಿತ್ರದ ಮೇಲಿದೆ. ಇದಕ್ಕಾಗಿ ವರ್ಷಗಳನ್ನು ಕೊಟ್ಟಿರುವೆ. ‘ಕಾಟೇರ’ ನಿರ್ದೇಶಕ ಜಡೇಶ್ ಹಂಪಿ ಜೊತೆ ಈಗಾಗಲೇ ಇನ್ನೊಂದು ಸಿನಿಮಾ ಘೋಷಣೆಯಾಗಿದೆ. ಅದು ಚಿತ್ರೀಕರಣದ ಹಂತದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.