ಶುಕ್ರವಾರ, 5 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಸ್ಟ್‌ ಪಾಸ್‌ ಆದವರಿಗೆ ರಘು ಪಾಠ

Published 5 ಜನವರಿ 2024, 0:17 IST
Last Updated 5 ಜನವರಿ 2024, 0:17 IST
ಅಕ್ಷರ ಗಾತ್ರ

ಅಲ್ಲೊಂದು ಕಾಲೇಜು. ಇದರ ವಿಶೇಷ ಏನೆಂದರೆ ಅದು ಇರುವುದು ‘ಜಸ್ಟ್ ಪಾಸ್’ ಆದವರಿಗೆ ಮಾತ್ರ! ಕೂದಲೆಳೆ ಅಂತರದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆಂದೇ ತೆರೆಯಲಾದ ಕಾಲೇಜಿನ ಕಥೆ ಹೊತ್ತು ಬಂದಿದೆ ‘ಜಸ್ಟ್‌ ಪಾಸ್‌’ ಸಿನಿಮಾ. 

ಈ ಹಿಂದೆ ‘ದೊಡ್ಡಹಟ್ಟಿ ಬೋರೇಗೌಡ’ ಎಂಬ ಸಿನಿಮಾ ಮಾಡಿ ಚಂದನವನದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಕೆ.ಎಂ.ರಘು ಇದೀಗ ವಿಭಿನ್ನವಾದ ಕಥಾಹಂದರದ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಕಾಲೇಜಿಗೆ ರಂಗಾಯಣ ರಘು ಪ್ರಾಂಶುಪಾಲರಾಗಿದ್ದಾರೆ. ಜೀವಮಾನದ ಸಂಪಾದನೆಯಿಂದ ಕಾಲೇಜು ಆರಂಭಿಸಿ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಗುರುವಾಗಿ ಅವರಿಲ್ಲಿ ನಟಿಸಿದ್ದಾರೆ. ಜಸ್ಟ್ ಪಾಸ್ ಆದವರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಪ್ರತಿಭೆ ಇರುತ್ತದೆ. ಒಂದಷ್ಟು ತಲೆಹರಟೆ ವಿದ್ಯಾರ್ಥಿಗಳೂ ಇರುತ್ತಾರೆ. ಇವರನ್ನೆಲ್ಲ ಪ್ರಾಂಶುಪಾಲರು ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಚಿತ್ರದ ಒನ್‌ಲೈನರ್. 

ಶ್ರೀ ಈ ಚಿತ್ರದ ನಾಯಕ. ಪ್ರಣತಿ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಪ್ರಕಾಶ್ ತುಮಿನಾಡು, ದೀಪಕ್ ರೈ, ದಾನಪ್ಪ, ಗೋವಿಂದೇ ಗೌಡ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ‘ಈ ಚಿತ್ರದಲ್ಲಿ ಕಥೆ ಹಾಗೂ ರಂಗಾಯಣ ರಘು ಅವರ ಪಾತ್ರಕ್ಕೆ ಅದರದೇ ಆದ ತೂಕವಿದೆ. ಅವರಿಗೆ ಕಥೆ ಹೇಳಿದಾಕ್ಷಣ, ಅವರ ಧಿರಿಸು ಹೇಗಿರಬೇಕು ಎಂದು ಅವರೇ ಡಿಸೈನ್ ಮಾಡಿಕೊಂಡರು. ಮೂರು ಪಂಚೆ, ಮೂರು ಶರ್ಟು, ಕೋಟು ಮತ್ತು 2 ಪೇಟ ಇಟ್ಟುಕೊಂಡಿರುವ ಸಾದಾಸೀದಾ ಮನುಷ್ಯ. ಇಡೀ ಸಿನಿಮಾದಲ್ಲಿ ಒಂದೇ ಚಪ್ಪಲಿ ಬಳಸಿದ್ದಾರೆ. ಅವರ ಪಾತ್ರದ ಬಗ್ಗೆ ಮತ್ತಷ್ಟು ವಿಶೇಷತೆಗಳಿವೆ’ ಎನ್ನುತ್ತಾರೆ ರಘು.

ರಾಯ್ಸ್ ಎಂಟರ್‌ಟೈನ್ಮೆಂಟ್‌ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ, ಸುಜಯ್ ಕುಮಾರ್ ಛಾಯಾಚಿತ್ರಗ್ರಹಣವಿದೆ. ಫೆಬ್ರುವರಿಯಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT