ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–2 | ಜೀವಮಾನದ ಸಾಧನೆ: ಮನೆ ಮನಗಳಲ್ಲಿ ಸರೋಜಾ

Published 5 ಜುಲೈ 2024, 1:29 IST
Last Updated 5 ಜುಲೈ 2024, 1:29 IST
ಅಕ್ಷರ ಗಾತ್ರ

ಚತುರ್ಭಾಷಾ ತಾರೆ ಬಿ.ಸರೋಜಾದೇವಿ ಅಪ್ಪಟ ಕನ್ನಡದ ಪ್ರತಿಭೆ. ವಾಸ್ತವವಾಗಿ ಕನ್ನಡ ಚಿತ್ರಗಳಲ್ಲೇ ಅವರ ಸಾಧನೆ ಹಿಮಾಲಯದಷ್ಟಿದೆ. ಆದರೆ ತಮಿಳು ಚಿತ್ರರಂಗ ಅವರ ಮೇಲೆ ಹೊನ್ನಮಳೆ ಸುರಿಸಿದೆ. ಕಿತ್ತೂರು ಚೆನ್ನಮ್ಮ (1961) ಸರೋಜಾದೇವಿ ಅವರ ಅಭಿನಯ ಸಾಮರ್ಥ್ಯ ವನ್ನು ಸಾಬೀತು ಪಡಿಸುವ ಐತಿಹಾಸಿಕ ಚಿತ್ರ. ಉತ್ತರ ಕರ್ನಾಟಕದ ಕಿತ್ತೂರು ಸಂಸ್ಥಾನದಲ್ಲಿ, ಬ್ರಿಟಿಷ್‌ ಅಧಿಕಾರಿಗಳ ದಬ್ಬಾಳಿಕೆಯನ್ನು ಬಗ್ಗುಬಡಿಯುವ ಧೀರೆ ಚೆನ್ನಮ್ಮನ ಕೆಚ್ಚು, ಸಾಹಸ, ಸಂಭಾಷಣೆಯ ಗಡಸು, ಯುದ್ಧದ ಸನ್ನಿವೇಶಗಳು, ಸೈನಿಕರಿಗೆ ಧೈರ್ಯ ತುಂಬುವ ಅವರ ಸಾಮರ್ಥ್ಯ ಸ್ಫೂರ್ತಿದಾಯಕವಾಗಿತ್ತು. ‘ಕಪ್ಪ ಕೊಡಬೇಕಾ ಕಪ್ಪ...’ ಎನ್ನುವ ಸಂಭಾಷಣೆಯಂತೂ ಇಂದಿಗೂ ಏಕಪಾತ್ರಾಭಿನಯ ಮಾಡುವವರ ಫೇವರಿಟ್.

ಕನ್ನಡದಲ್ಲಿ ರಾಜ್‌ಕುಮಾರ್‌ ಅವರ ಜೊತೆ ಅಭಿನಯಿಸಿದ ‘ಅಣ್ಣ ತಂಗಿ’, ಸರೋಜಾದೇವಿ ಅವರ ಪ್ರತಿಭೆಗೆ ಮತ್ತೊಂದು ಉದಾಹರಣೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದಲ್ಲಿ ಜನಿಸಿದವರಾಗಿರುವುದರಿಂದ, ಅವರು ಹಳ್ಳಿಯ ಭಾಷೆಯಲ್ಲಿ ಅಷ್ಟು ಸುಲಲಿತವಾಗಿ ಮಾತನಾಡಲು ಸಾಧ್ಯವಾಗಿದೆ. ಸರೋಜಾದೇವಿ ಅವರ ಚಿತ್ರ ಜೀವನದ ಮತ್ತೊಂದು ಮೈಲಿಗಲ್ಲು, ಕನ್ನಡದ ಮೊಟ್ಟಮೊದಲ ವರ್ಣಮಯ ಚಿತ್ರ ‘ಅಮರ ಶಿಲ್ಪಿ ಜಕಣಾಚಾರಿ’ ಚಿತ್ರದ ನಾಯಕಿಯಾಗಿರುವುದು. ಈ ದಾಖಲೆ ಚಿತ್ರಗಳ ಜೊತೆಜೊತೆಗೇ ನೆನಪಿಗೆ ಬರುವುದು ‘ಮಲ್ಲಮ್ಮನ ಪವಾಡ’, ‘ಭಾಗ್ಯವಂತರು’, ‘ಬಬ್ರುವಾಹನ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ’, ‘ಲಕ್ಷ್ಮೀಸರಸ್ವತಿ’, ‘ಕಥಾಸಂಗಮ’ ಕನ್ನಡದಲ್ಲಿ ಇಷ್ಟೊಂದು ಸದಭಿರುಚಿಯ, ಅತ್ಯುತ್ತಮ ಚಲನಚಿತ್ರಗಳು ಪದ್ಮಭೂಷಣ ಬಿ.ಸರೋಜಾದೇವಿ ಅವರ ಮುಡಿಗೇರಿದ್ದರೂ ಅವರನ್ನು ತಮಿಳು ಚಿತ್ರರಂಗದ ನಟಿ ಎಂದೇ ಬಹಳ ಜನ ಕರೆಯುತ್ತಾರೆ. ಆದರೆ ತಮಿಳು ಚಿತ್ರರಂಗದವರು ಅವರನ್ನು ‘ಕನ್ನಡತ್ತು ಪೈಂಗಿಳಿ’ (ಕನ್ನಡದ ಸುಂದರಗಿಣಿ) ಎಂದೇ ಅಭಿಮಾನದಿಂದ ಕರೆಯುತ್ತಾರೆ. ಕನ್ನಡದಿಂದ ತಮಿಳುನಾಡಿಗೆ ಹೋಗಿ ಸಾಧನೆ ಮಾಡಿ, ಸೂಪರ್‌ಸ್ಟಾರ್‌ಗಳಾದವರ ದೊಡ್ಡ ಪಟ್ಟಿಯೇ ಅಲ್ಲಿದೆ. ಎಂಜಿಆರ್‌ ಜೋಡಿಯಾಗಿ ಸರೋಜಾದೇವಿ ತಮಿಳು ಚಿತ್ರರಂಗದ ಸಾಮ್ರಾಜ್ಞಿಯಾಗಿ ಮೆರೆದವರು.

ಸುಮಾರು 200 ಚಿತ್ರಗಳಲ್ಲಿ ನಾಲ್ಕು ಭಾಷಾ ಚಿತ್ರರಂಗದಲ್ಲಿ ಸರೋಜಾದೇವಿ ಅಭಿನಯದ ಛಾಪು ಮೂಡಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಎಂಜಿಆರ್‌ ಅವರ ಜೋಡಿಯಾಗಿ 26 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅನ್ಬೇವಾ, ಎಂಗವೀಟ್ಟು ಪಿಳ್ಳೈ, ತಿರುಡಾದೆ, ಪಡಕೋಟಿ ಮೊದಲಾದ ಚಿತ್ರಗಳಲ್ಲಿ ಎಂಜಿಆರ್‌-ಸರೋಜಾದೇವಿ ಜೋಡಿಯ ಪ್ರಮುಖ ಚಿತ್ರಗಳು. ತಮಿಳುನಾಡಿನಲ್ಲಿ ಆ ಕಾಲದಲ್ಲಿ ಎಂಜಿಆರ್‌, ಶಿವಾಜಿ ಗಣೇಶನ್‌ ಇಬ್ಬರೂ ಜನಪ್ರಿಯ ನಾಯಕನಟರು. ಅವರಿಗೆ ನಾಯಕಿ ಯಾರು ಎಂದರೆ ಸರೋಜಾದೇವಿ ಅವರಿಗೆ ಆದ್ಯತೆ. ಶಿವಾಜಿ ಗಣೇಶನ್‌ ಅವರೊಂದಿಗೆ ಆಲಯಮಣಿ, ಪಾಲುಂ ಪಳಮುಂ, ಪುದಿಯ ಪರವೈ ಸೇರಿದಂತೆ 22 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನಲ್ಲೂ ನಾಗೇಶ್ವರರಾವ್‌, ಎನ್‌ಟಿಆರ್ ಅವರೊಂದಿಗೆ ನಾಯಕಿಯಾಗಿದ್ದಾರೆ.‌ ಹಿಂದಿಯಲ್ಲಿ ದಿಲೀಪ್‌ಕುಮಾರ್‌, ರಾಜೇಂದ್ರಕುಮಾರ್‌, ಶಮ್ಮಿ ಕಪೂರ್‌, ಸುನಿಲ್‌ ದತ್‌ ಅವರುಗಳ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗ ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ ಮೊದಲಾದ ನಟಿಯರು, ಹಿಂದಿ ಚಿತ್ರರಂಗಕ್ಕೂ ಪ್ರವೇಶ ಪಡೆದಿದ್ದಾರೆ ಎಂದರೆ ಅದಕ್ಕೊಂದು ಪರಂಪರೆಯನ್ನು ಸರೋಜಾದೇವಿ ಅರವತ್ತರ ದಶಕದಲ್ಲೇ ನಿರ್ಮಿಸಿದ್ದೇ  ಕಾರಣ.

ಸರೋಜಾದೇವಿ ಅವರಿಗೆ ಬಾಲ್ಯದಿಂದಲೂ ಕಲೆಯ ಬಗ್ಗೆ ಒಲವಿತ್ತು. ಬೆಂಗಳೂರಿನ ಸೆಂಟ್‌ಥೆರೆಸ ಶಾಲೆಯಲ್ಲಿ ವಿದ್ಯಾಭ್ಯಾಸ. ‘ಶ್ರೀರಾಮ ಪೂಜಾ’ (1953) ಚಿತ್ರದಲ್ಲಿ ಸರೋಜಾದೇವಿ ಅವರಿಗೊಂದು ಪುಟ್ಟಪಾತ್ರವಿತ್ತು. ಮೇಕಪ್‌ ಸುಬ್ಬಣ್ಣ ಅವರ ಜೊತೆ ಹಾಸ್ಯಪಾತ್ರವೊಂದರಲ್ಲಿ ಸರೋಜಾದೇವಿ ಅವರು ಕಾಣಿಸಿಕೊಂಡಿದ್ದರು. ಅದೇ ಅವರ ಮೊದಲ ಸಿನಿಮಾ ಪ್ರವೇಶ. ಅಂದಿನ ಜನಪ್ರಿಯ ನಾಯಕನ ನಟ ಹೊನ್ನಪ್ಪ ಭಾಗವತರ್‌ ಅವರು ‘ಮಹಾಕವಿ ಕಾಳಿದಾಸ’ ಚಲನಚಿತ್ರ ನಿರ್ಮಿಸಲು ಸಜ್ಜಾಗಿದ್ದರು. ಚಿತ್ರದ ಸಂಪೂರ್ಣ ನಿರ್ವಹಣೆಯನ್ನು ಚಿತ್ರ ಸಾಹಿತಿ ಕು.ರಾ.ಸೀತಾರಾಮ ಶಾಸ್ತ್ರೀ ಅವರಿಗೆ ವಹಿಸಿದ್ದರು. ನಾಯಕಿಯ ಹುಡುಕಾಟದಲ್ಲಿದ್ದರು ಭಾಗವತರ್.‌ ಆಗ ಬಿ.ಸರೋಜಾದೇವಿ ಅವರ ಹೆಸರನ್ನು ಮೇಕಪ್‌ ಸುಬ್ಬಣ್ಣ ಅವರು ಸೂಚಿಸಿದರು. ಮೈಸೂರಿನ ನವಜ್ಯೋತಿ ಸ್ಟುಡಿಯೊದಲ್ಲಿ ಸರೋಜಾದೇವಿ ಅವರನ್ನು ಕುರಾಸೀ ಹಾಗೂ ಹೊನ್ನಪ್ಪ ಭಾಗವತರ್‌ ಅವರು ಭೇಟಿಯಾಗಿ ಮಾತನಾಡಿಸುತ್ತಾರೆ. ಮೊದಲ ನೋಟದಲ್ಲಿ ಇಬ್ಬರಿಗೂ ಯಾಕೋ ಹಿಡಿಸಲಿಲ್ಲ. ಹಠಬಿಡದ ಸುಬ್ಬಣ್ಣ ದೇವಸ್ಥಾನವೊಂದರಲ್ಲಿ ಭಾಗವತರ್‌ ಹಾಗೂ ಕುರಾಸೀ ಅವರನ್ನು ಮತ್ತೊಮ್ಮೆ ಮುಖಾಮುಖಿಯಾಗಿಸುತ್ತಾರೆ. ಸಂದರ್ಶನದ ನಂತರ ಕುರಾಸೀ ಅವರಿಗೆ ಸರೋಜಾದೇವಿ ಅವರ ಬಗ್ಗೆ ಭರವಸೆ ಮೂಡಿತಂತೆ. ಈ ಹುಡುಗಿಗೆ ಭವಿಷ್ಯವಿದೆ ಎಂದುಕೊಂಡರಂತೆ. ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಸರೋಜಾದೇವಿ ನಾಯಕಿಯಾದರು. ಅಭಿನಯ, ಸಂಭಾಷಣೆಯಲ್ಲಿನ ಉಚ್ಚಾರ, ಶಬ್ದದ ಏರಿಳಿತಗಳು..ಹೀಗೆ ಅಭಿನಯದ ಎಲ್ಲ ಸೂಕ್ಷಗಳನ್ನೂ ಕುರಾಸೀ ಸರೋಜಾದೇವಿಗೆ ಪಾಠ ಮಾಡಿದರು. ಇದನ್ನು ಸರೋಜಾದೇವಿ ಅವರು ಆಗಾಗ ನೆನಪಿಸಿಕೊಳ್ಳುತ್ತಾರೆ. ಇದರಿಂದಾಗಿಯೇ ‘ಅಣ್ಣತಂಗಿ’ ಯಲ್ಲಿ ಸರೋಜಾದೇವಿ ಅವರಿಗೆ ಉತ್ಕೃಷ್ಟ ಅಭಿನಯ ನೀಡಲು ಸಾಧ್ಯವಾಯಿತು. ಕಾಳಿದಾಸದ ನಂತರ ಹೊನ್ನಪ್ಪ ಭಾಗವತರ್‌ ಅವರ ಮುಂದಿನ ಚಿತ್ರ ‘ಪಂಚರತ್ನ’ದಲ್ಲೂ ಸರೋಜಾದೇವಿ ಅವರೇ ನಾಯಕಿಯಾದರು. ‘ಕೋಕಿಲವಾಣಿ’, ‘ಚಿಂತಾಮಣಿ’, ‘ರತ್ನಗಿರಿ ರಹಸ್ಯ’ (1957) ‘ಕಚದೇವಯಾನಿ’–ಹೀಗೆ ಸಾಲುಸಾಲು ಚಿತ್ರಗಳು ಅವರ ಪಾಲಿಗೆ ಸಾಲುಗಟ್ಟಿ ನಿಂತವು.

ಒಮ್ಮೆ ‘ಕಚ ದೇವಯಾನಿ’ (1956) ಚಿತ್ರದ ಚಿತ್ರೀಕರಣ ಮದರಾಸಿನ ನ್ಯೂಟೋನ್‌ ಸ್ಟುಡಿಯೊದಲ್ಲಿ ನಡೆಯುತ್ತಿತ್ತು. ಕೆ.ಎಸ್.ಅಶ್ವತ್ಥ್‌ ಚಿತ್ರದ ನಾಯಕ. ಬಿ.ಸರೋಜಾದೇವಿ ನಾಯಕಿ. ಬೇರೊಂದು ಚಿತ್ರದ ಚಿತ್ರೀಕರಣದಲ್ಲಿದ್ದ ಎಂಜಿಆರ್‌ ಅವರು ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ಗೆ ಆಗಮಿಸಿದರು. ಅಲ್ಲಿ ಮೊದಲಬಾರಿಗೆ ಸರೋಜಾದೇವಿ ಅವರ ಪರಿಚಯವಾಯಿತು. ತಮ್ಮ ಮುಂದಿನ ಚಿತ್ರಕ್ಕೆ ನಾಯಕಿಯನ್ನಾಗಿ ಸರೋಜಾದೇವಿ ಅವರನ್ನು ಎಂಜಿಆರ್‌ ಆಯ್ಕೆ ಮಾಡಿಕೊಂಡರು. ಅವರಿಬ್ಬರು ನಾಯಕ ನಾಯಕಿಯಾಗಿ ಅಭಿನಯಿಸಿದ ‘ನಾಡೋಡಿ ಮನ್ನನ್’ (1958) ಭರ್ಜರಿ ಯಶಸ್ಸು ಕಂಡಿತು. ಈ ಜೋಡಿ ತಮಿಳು ರಸಿಕರ ಮನಗೆದ್ದಿತು.

ಸರೋಜಾ ಎನ್ನುವ ಹೆಸರಿಗೂ ತಮಿಳುನಾಡಿನ ಸಿನಿಮಾ ಪ್ರೇಕ್ಷಕರಿಗೂ ಯಾವುದೋ ಒಂದು ಅನುಬಂಧವಿದ್ದಂತಿದೆ. ಅಲ್ಲಿ ಈ ಹೆಸರಿನವರಿಗೆ ಬಹಳ ಮರ್ಯಾದೆ. ನಮ್ಮ ಮನೆಯಲ್ಲೂ ಒಬ್ಬಳು ಸರೋಜಾ ಇರಬಾರದೇ ಎನ್ನುವ ಹಂಬಲ ನಲವತ್ತರ ದಶಕದಲ್ಲಿ ಮಧ್ಯಮವರ್ಗದ ಬಹಳ ಜನರ ಮನದಾಕಾಂಕ್ಷೆಯಾಗಿತ್ತು. ಅದಕ್ಕೊಂದು ಕಾರಣವಿದೆ. 1937 ರಲ್ಲಿ ಕೆ.ಸುಬ್ರಮಣ್ಯಂ ಎನ್ನುವ ಸೃಜನಶೀಲ ನಿರ್ದೇಶಕ ‘ಬಾಲಯೋಗಿನಿ’ ಎನ್ನುವ ಸಾಮಾಜಿಕ ಸಂದೇಶವಿರುವ ಚಲನಚಿತ್ರವನ್ನು ನಿರ್ಮಿಸಿದರು. ಈ ಚಿತ್ರದ ಪ್ರಮುಖ ಪಾತ್ರಧಾರಿ ಆರುವರ್ಷದ ಸರೋಜಾ ಎಂಬ ಬಾಲಕಿ. ಚಿತ್ರದ ಕಥಾವಸ್ತು ಮತ್ತು ಬಾಲನಟಿಯ ಮನೋಜ್ಞ ಅಭಿನಯದ ಕಾರಣಕ್ಕೆ ‘ಬಾಲಯೋಗಿನಿ’ ಪ್ರಚಂಡ ಯಶಸ್ಸು ಗಳಿಸಿತು. ‘ಬಾಲಯೋಗಿನಿ’ ಪಾತ್ರದ ಸರೋಜಾ ಮನೆಮನೆ ಮಾತಾದಳು. ಜನರಿಗೆ ಈ ಹೆಸರಿನ ಮೋಹ ಎಷ್ಟಿತ್ತೆಂದರೆ, ಆ ಸಮಯದಲ್ಲಿ ಹುಟ್ಟಿದ ಸಾವಿರಾರು ಹೆಣ್ಣುಮಕ್ಕಳಿಗೆ ಸರೋಜಾ ಎಂದು ಹೆಸರಿಟ್ಟರು. ಮನೆಗಳಿಗೆ ಆ ಹೆಸರಿಟ್ಟರು. ಸರೋಜಾ ಎನ್ನುವ ಹೆಸರಿನಲ್ಲಿ ಹಲವಾರು ಕಂಪನಿಗಳು ಆರಂಭವಾದವು. ಸೋಪು, ಪೇಸ್ಟು, ಟೀ ಮೊದಲಾದ ನಿತ್ಯಬಳಕೆ ವಸ್ತುಗಳು ಮಾರುಕಟ್ಟೆಗೆ ಬಂದವು. ಸರೋಜಾ ಅಭಿನಯಿಸಿದ್ದು ಮೂರೇ ಸಿನಿಮಾ. ಸಂಪ್ರದಾಯಸ್ಥ ಕುಟುಂಬದವರು ಸಿನಿಮಾದಲ್ಲಿ ಸರೋಜಾ ಮುಂದುವರೆಯಲು ಬಿಡಲಿಲ್ಲ. ಆದರೆ ಮೂರೇ ಸಿನಿಮಾದ ಬಾಲನಟಿಯೊಬ್ಬಳು ತಮಿಳುನಾಡಿನಲ್ಲಿ ಕ್ರಾಂತಿ ಎಬ್ಬಿಸಿದ್ದಳು. ತಮಿಳುನಾಡಿನ ಮನೆಮನೆಯಲ್ಲಿ ಸರೋಜಾ ನೆಲಸಿದ್ದಳು. ಈ ಹಿನ್ನೆಲೆಯಿರುವ ತಮಿಳು ಚಿತ್ರರಂಗಕ್ಕೆ ಬಿ.ಸರೋಜಾದೇವಿ ಪ್ರವೇಶಿಸಿದ್ದೇ ತಡ ಪ್ರೇಕ್ಷಕರು ಅವರತ್ತ ಆಕರ್ಷಿತರಾದರು. ಯಶಸ್ಸು ಅವರ ಬೆನ್ನಹಿಂದೆ ಬಂದು ನಿಂತಿತು. ತಮಿಳು ನಿರ್ಮಾಪಕರು ಸೂಟ್‌ಕೇಸ್‌ ಹಿಡಿದುಕೊಂಡು ಸರೋಜಾದೇವಿ ಅವರ ಕಾಲ್‌ಶೀಟ್‌ಗಾಗಿ ಅವರ ಮನೆಯ ಮುಂದೆ ಕ್ಯೂ ನಿಂತಿರುತ್ತಿದ್ದರು ಎನ್ನುತ್ತಾರೆ. ಅವರ ಜನಪ್ರಿಯತೆಯನ್ನು ಮನದಟ್ಟು ಮಾಡಿಕೊಡುವ ಸಿನಿಮಾ ಜಗತ್ತಿನ ಆಡುನುಡಿಯಾಗಿ ಇದನ್ನು ಪರಿಗಣಿಸಬೇಕು.

ಮೂರುವರ್ಷಗಳ ಹಿಂದೆ ತಮಿಳಿನ ‘ಆದವನ್’ ಎನ್ನುವ ಸೂರ್ಯ ನಾಯಕನಾಗಿರುವ ಚಲನಚಿತ್ರದಲ್ಲಿ ಸರೋಜಾದೇವಿ ಅವರು ಅಭಿನಯಿಸಿದ್ದರು. ಅದರಲ್ಲಿ ಅಭಿನಯಿಸಿದ್ದ ಪ್ರತಿಯೊಬ್ಬ ಕಲಾವಿದರೂ ಸರೋಜಾದೇವಿ ಅವರ ಬಗ್ಗೆ ಅಭಿಮಾನದಿಂದ, ಹೆಮ್ಮೆಯಿಂದ, ಗೌರವದಿಂದ ಬೀಗುತ್ತಿದ್ದುದು ಚಿತ್ರದಲ್ಲಿ ದೃಶ್ಯಗೋಚರವಾಗಿತ್ತು. ಅಲ್ಲದೆ, ಸರೋಜಾದೇವಿ ಅವರನ್ನು ಹಾಡಿಹೊಗಳುವ ಹಾಡೊಂದು ಕೂಡ ಇತ್ತು. ಹಿರಿಯ ಕಲಾವಿದೆಯರನ್ನು ಗೌರವದಿಂದ ನಡೆಸಿಕೊಳ್ಳುವುದು ಎಂದರೆ ಹೀಗೇ ಅಲ್ಲವೇ? ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ದಲ್ಲಿ ಜೀವಮಾನಸಾಧನೆ ಪ್ರಶಸ್ತಿಗೆ ಅರ್ಹ ಆಯ್ಕೆ. ಈ ಸಂದರ್ಭದಲ್ಲಿ ‘ನೀವು ಮತ್ತೆ ಸಿನಿಮಾದಲ್ಲಿ ಮುಂದುವರೆಯುತ್ತೀರಾ’ ಎನ್ನುವ ಪ್ರಶ್ನೆಗೆ ಅವರು ಖಡಾಖಂಡಿತವಾಗಿ ‘ಇಲ್ಲ’ ಎಂದು ಹೇಳುವ ಮೂಲಕ ನಿವೃತ್ತಿ ಘೋಷಿಸಿದರು. 86 ವರ್ಷ ವಯಸ್ಸಿನ ಬಿ.ಸರೋಜಾದೇವಿ ಅವರು 69 ವರ್ಷಗಳ ಕಾಲ ಅಭಿನಯ ಸರಸ್ವತಿಯಾಗಿಯೇ ಮೆರೆದವರಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT