ಬೆಂಗಳೂರಿನ ಅತ್ಯಂತ ಹಳೆಯ ರಂಗತಂಡಗಳ ಪೈಕಿ ‘ಬೆನಕ’ಕ್ಕೆ ಮೊದಲ ಸ್ಥಾನವಿದೆ. ರಂಗಜಂಗಮ ಬಿ.ವಿ. ಕಾರಂತರಿಂದ 1970ರಲ್ಲಿ ಸ್ಥಾಪಿತವಾದ ಈ ತಂಡ ಕನ್ನಡ ಹವ್ಯಾಸಿ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ‘ಸತ್ತವರ ನೆರಳು’, ‘ಹಯವದನ’, ‘ಜೋಕುಮಾರಸ್ವಾಮಿ’, ‘ಗೋಕುಲ ನಿರ್ಗಮನ’, ‘ಕತ್ತಲೆ ಬೆಳಕು’, ‘ತಬರನ ಕಥೆ’ ಬೆನಕದ ಪ್ರಮುಖ ನಾಟಕಗಳು. ಆದರೆ ಬೆನಕ ಮಹಾಮನೆ ಎಂದು ಕರೆಸಿಕೊಳ್ಳಲು ಕಾರಣ ಇಷ್ಟೇ ಅಲ್ಲ. ಬೆನಕದ ಜತೆ ಬೆಳೆದುಬಂದ ಕಲಾವಿದರು ಮತ್ತು ತಂತ್ರಜ್ಞರ ಬಳಗ ಅಷ್ಟು ದೊಡ್ಡದಿದೆ.

ರಂಗಭೂಮಿ ಮತ್ತು ಕನ್ನಡ ಚಿತ್ರರಂಗಗಳಲ್ಲಿ ಖ್ಯಾತಿ ಪಡೆದ ಮಹಾನ್ ಕಲಾವಿದರಲ್ಲಿ ಅನೇಕರು ಬೆನಕ ತಂಡದ ಜೊತೆ ಸಕ್ರಿಯ ಒಡನಾಟ ಇಟ್ಟುಕೊಂಡವರು.

‘ಬೆನಕ’ ತಂಡವನ್ನು ಹುಟ್ಟುಹಾಕಿದ ಬಿ.ವಿ.ಕಾರಂತ ದೇಶದ ರಂಗಭೂಮಿಯ ಬಹುದೊಡ್ಡ ಹೆಸರು. ಕನ್ನಡ ಚಿತ್ರರಂಗದ ಭೀಷ್ಮರೆಂದೇ ಖ್ಯಾತರಾದ ಸಾಹಿತಿ, ನಿರ್ದೇಶಕ, ನಿರ್ಮಾಪಕ ಜಿ.ವಿ.ಅಯ್ಯರ್ ಹಲವಾರು ವರ್ಷಗಳ ಕಾಲ ಬಿ.ವಿ.ಕಾರಂತರ ನಿರ್ದೇಶನದ ‘ಸತ್ತವರ ನೆರಳು’ ನಾಟಕದಲ್ಲಿ ಮುಖ್ಯ ಪಾತ್ರವೊಂದನ್ನು ವಹಿಸಿ ಆಧುನಿಕ ರಂಗಭೂಮಿ ಮತ್ತು ಹೊಸ ತಲೆಮಾರಿನ ಯುವ ಪ್ರತಿಭೆಗಳ ಜೊತೆ ಬೆರೆತಿದ್ದುದು ಈಗ ಇತಿಹಾಸ.

ಪ್ರೇಮಾ ಕಾರಂತರು ಚಲನಚಿತ್ರ ನಿರ್ದೇಶನ, ವಸ್ತ್ರವಿನ್ಯಾಸ, ಮಕ್ಕಳ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ‘ನಾಟಕರತ್ನ’ ಗುಬ್ಬಿ ವೀರಣ್ಣನವರ ಪುತ್ರ ಜಿ.ವಿ.ಶಿವಾನಂದ ಸಹ ಬೆನಕದ ಸದಸ್ಯರಾಗಿ ‘ಸತ್ತವರ ನೆರಳು, ‘ಜೋಕುಮಾರಸ್ವಾಮಿ’ ನಾಟಕಗಳಲ್ಲಿ ಪಾತ್ರವಹಿಸಿದ್ದರು. ಅಲ್ಲದೆ ‘ಅರಸಿ ಬಂದ ಆತ್ಮ’ ನಾಟಕವನ್ನು ನಿರ್ದೇಶಿಸಿದ್ದರು. ಗುಬ್ಬಿ ವೀರಣ್ಣರ ಮೊಮ್ಮಗಳು ಬಿ.ಜಯಶ್ರೀ ಅನೇಕ ವರ್ಷ ಬೆನಕದ ನಾಟಕಗಳಲ್ಲಿ ಅಭಿನಯಿಸಿದ್ದರು.

ಕಾರಂತರ ಆಪ್ತ ಶಿಷ್ಯ ಟಿ.ಎಸ್.ನಾಗಾಭರಣ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಹಾಗೂ ಪ್ರಬುದ್ಧ ನಿರ್ದೇಶಕ. ಸದಭಿರುಚಿಯ ಚಿತ್ರಗಳನ್ನು ನೀಡುತ್ತಿರುವ ನಾಗಾಭರಣ ಬೆನಕವನ್ನು ಈಗಲೂ ಮುನ್ನಡೆಸುತ್ತಿದ್ದಾರೆ.

ಕಲಾವಿದರ ಕಣಜ
ಬೆನಕ ತಂಡದ ಜೊತೆಗೆ ನಾಟಕಗಳಲ್ಲಿ ಅಭಿನಯಿಸುತ್ತಾ ವಿವಿಧ ಕಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು ಅನೇಕರು. ‘ಹಯವದನ, ‘ಸತ್ತವರ ನೆರಳು’ ಮೊದಲಾದ ನಾಟಕಗಳ ಮೂಲಕವೇ ಪರಿಚಯಗೊಂಡ ಕನ್ನಡ ಚಿತ್ರರಂಗದ ಖ್ಯಾತ ನಟ ಸುಂದರ್‌ರಾಜ್. ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟರಾಗಿದ್ದ ದಿ. ಮಾನು, ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮುನ್ನ ಕಾಣಿಸಿಕೊಂಡಿದ್ದು ‘ಸತ್ತವರ ನೆರಳು’ ನಾಟಕದಲ್ಲಿ. ಅದು ಗುತ್ತಿಗೇರಿ ಮಾನಪ್ಪ ಎಂಬ ಹೆಸರಿನಲ್ಲಿ.

ಅನೇಕ ಮೌಲಿಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದು ಮಾತ್ರವಲ್ಲದೆ, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೆನಿಸಿದ ಟಿ.ಎಸ್.ರಂಗಾ ಮತ್ತು ಕನ್ನಡ ಚಿತ್ರರಂಗ ಕಂಡ ಸಂವೇದನಾಶೀಲ ನಟ, ಪರಿಸರವಾದಿ ಸುರೇಶ್ ಹೆಬ್ಳೀಕರ್ ತಂಡದ ನಾಟಕಗಳಲ್ಲಿ ಅಭಿನಯಿಸಿದ್ದರು.

‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಿಂದ ಖ್ಯಾತರಾದ ಚಂದ್ರಶೇಖರ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ‘ಹಯವದನ’ ನಾಟಕಕ್ಕೆ. ‘ಕೋಕಿಲಾ’ ಚಲನಚಿತ್ರದಿಂದ ಹೆಸರು ಗಳಿಸಿದ ಮೋಹನ್ ಅವರ ಮೂಲ ಸೆಲೆ ಇದ್ದದ್ದೂ ಇದೇ ತಂಡದಲ್ಲಿ. ತಮಿಳು ಚಿತ್ರರಂಗದ ಸ್ಟಾರ್ ನಟರಾಗುವ ಮುನ್ನ ‘ಸತ್ತವರ ನೆರಳು, ‘ರಸಗಂಧರ್ವ’, ‘ಇಸ್ಪೀಟ್ ರಾಜ್ಯ’ ಮೊದಲಾದ ನಾಟಕಗಳಲ್ಲಿ ಗಾಯಕರಾಗಿಯೂ ಅವರು ಹೆಸರು ಗಳಿಸಿದ್ದರು. ಮತ್ತೊಬ್ಬ ಪೋಷಕ ನಟ ರಮೇಶ್ ಭಟ್ ಅವರೂ ‘ಬೆನಕ’ದ ‘ಹಯವದನ’, ‘ಜೋಕುಮಾರಸ್ವಾಮಿ’ ನಾಟಕಗಳಲ್ಲಿ ಅಭಿನಯಿಸಿದ್ದರು. ಕಾರಂತರ ಗರಡಿಯಲ್ಲಿ ಪಳಗಿದ ರಮೇಶ್ ಭಟ್ ಮುಂದೆ ನಟರಾಗಿ, ತಂತ್ರಜ್ಞರಾಗಿಯೂ ಹೆಸರು ಗಳಿಸಿದರು.

ಸುಗಮ ಸಂಗೀತ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ರತ್ನಮಾಲಾ ಪ್ರಕಾಶ್ ಎಪ್ಪತ್ತರ ದಶಕದಲ್ಲಿ ತಂಡದ ನಾಟಕಗಳಲ್ಲಿ ಹಾಡುತ್ತಿದ್ದರು. ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ನಟಿ ವೈಶಾಲಿ ಕಾಸರವಳ್ಳಿಯವರಿಗೆ ಹೆಸರು ತಂದುಕೊಟ್ಟಿದ್ದೇ ‘ಹಯವದನ’ ನಾಟಕದ ಪದ್ಮಿನಿಯ ಪಾತ್ರ. ವಿಶೇಷವೆಂದರೆ ಸುಮಾರು ಮೂರು ದಶಕಗಳ ನಂತರ ಅವರು ನಿರ್ವಹಿಸಿದ ಅದೇ ಪಾತ್ರವನ್ನು ಅವರ ಮಗಳು ಅನನ್ಯಾ ಕಾಸರವಳ್ಳಿಯವರು ಯಶಸ್ವಿಯಾಗಿ ನಿರ್ವಹಿಸಿದ್ದು.

ಪೋಷಕ ನಟಿ ಶೋಭಾ ರಾಘವೇಂದ್ರ ಆರಂಭದಿಂದಲೂ ತಂಡದ ಜೊತೆಗಿದ್ದವರು. ಅದರ ಒಡನಾಟ ಇನ್ನೂ ಬಿಟ್ಟಿಲ್ಲ. ಎನ್.ಎಸ್.ಡಿ. (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ) ಪದವೀಧರರಾದ ಅಶೋಕ ಬಾದರದಿನ್ನಿ ಮತ್ತು ಶ್ರೀನಿವಾಸ ಪ್ರಭು ಅವರು ಕೂಡ ಈ ತಂಡದ ನಾಟಕಗಳ ಮೂಲಕ ಬೆಳೆದಿದ್ದಾರೆ.

ಕನ್ನಡ ಚಿತ್ರರಂಗದ ಇಂದಿನ ಯಶಸ್ವಿ ನಟ ಯಶ್ ಅಭಿನಯದ ಯಾನವನ್ನು ಆರಂಭಿಸಿದ್ದು ‘ಬೆನಕ’ದ ವೇದಿಕೆಯಿಂದ. ಕಿರುತೆರೆಯಲ್ಲಿ ಮಿಂಚುತ್ತಿರುವ ಮೈಕೋ ಮಂಜು, ಪೂರ್ಣಚಂದ್ರ ತೇಜಸ್ವಿ, ಪವನ್, ಗಿರೀಶ್, ಬಿ.ವಿ.ಶೃಂಗ, ಸತ್ಯ, ಮೇಘಶ್ರೀ ಭಾಗವತರ್, ಲಕ್ಷ್ಮಿಶ್ರೀ ಭಾಗವತರ್, ವಿದ್ಯಾ ವೆಂಕಟರಾಮ್, ರಾಜಶ್ರೀ, ನಂಜುಂಡ ಮೊದಲಾದವರ ಪಾಲಿಗೆ ಚಿಮ್ಮುಹಲಗೆಯಾಗಿ ‘ಬೆನಕ’ ಕೆಲಸ ಮಾಡಿದೆ. ಇತ್ತೀಚಿನ ಪ್ರಯೋಗಾತ್ಮಕ ಕನ್ನಡ ಚಲನಚಿತ್ರ ‘ತಲ್ಲಣ’ ಚಿತ್ರದ ನಿರ್ದೇಶಕ ಸುದರ್ಶನ್ ಕೂಡ ಬೆನಕದ ಮಕ್ಕಳ ನಾಟಕ ‘ಅಲೀಬಾಬಾ’ದ ಮೂಲಕ ಪರಿಚಯಿತರಾದವರು.

ತಂತ್ರಜ್ಞರ ಬಳಗ
ತಂತ್ರಜ್ಞರ ವಿಷಯಕ್ಕೆ ಬರುವುದಾದರೆ, ಕನ್ನಡ ಚಿತ್ರರಂಗದ ಪ್ರಶಸ್ತಿ ಪುರಸ್ಕೃತ ವಸ್ತ್ರವಿನ್ಯಾಸಕಿ ನಾಗಿಣಿ ಭರಣ ಅವರು ಕಲಾರಂಗಕ್ಕೆ ಪರಿಚಯಗೊಂಡಿದ್ದು ‘ಬೆನಕ’ದ ಮೂಲಕ. ನಟಿಯಾಗಿಯೂ ಅವರು ಗುರುತಿಸಿಕೊಂಡರು. ಅಲ್ಲಿಯೇ ಅವರು ಮತ್ತು ನಾಗಾಭರಣ ಸಂಗಾತಿಗಳಾಗಿದ್ದು.

ರಾಷ್ಟ್ರ ಮಟ್ಟದಲ್ಲಿ ಶ್ರೇಷ್ಠ ನಿರ್ದೇಶಕ ಎನಿಸಿರುವ ಕನ್ನಡದ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಎಪ್ಪತ್ತರ ದಶಕದಲ್ಲಿ ‘ಬೆನಕ’ದ ನಾಟಕಗಳಲ್ಲಿ ನೇಪಥ್ಯದಲ್ಲಿ ಕಾರ್ಯನಿರ್ವಹಿಸಿದ್ದರು ಎನ್ನುವುದು ಹಲವರಿಗೆ ತಿಳಿದಿಲ್ಲ. ರಾಷ್ಟ್ರ ಪ್ರಶಸ್ತಿಯ ಗೌರವಕ್ಕೆ ಪಾತ್ರವಾದ ‘ಅರಿವು’ ಕನ್ನಡ ಚಲನಚಿತ್ರದ ನಿರ್ದೇಶಕರಾದ ಕಟ್ಟೆ ರಾಮಚಂದ್ರ ಬೆಳೆದುಬಂದಿದ್ದು ‘ಬೆನಕ’ದಲ್ಲೇ.

ಕನ್ನಡ ಚಲನಚಿತ್ರರಂಗದಲ್ಲಿ ಕಲಾನಿರ್ದೇಶನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ದಿನೇಶ್ ಮಂಗಳೂರು ಕೂಡ ‘ಬೆನಕ’ದ ಪ್ರತಿಭೆ. ಮತ್ತೊಬ್ಬ ಹೆಸರಾಂತ ಕಲಾ ನಿರ್ದೇಶಕ ಸುಭಾಷ್ ಕಡಕೋಳ ತಮ್ಮ ಕಲಾಜೀವನ ಪ್ರಾರಂಭಿಸಿದ್ದು ತಂಡದ ಮಕ್ಕಳ ನಾಟಕ ‘ಅಲೀಬಾಬಾ’ ಮೂಲಕ. ಖ್ಯಾತ ಛಾಯಾಗ್ರಾಹಕ ದಿ.ಎಸ್.ರಾಮಚಂದ್ರ ಅವರು ೭೦ರ ದಶಕದಲ್ಲಿ ‘ಹಯವದನ’ ನಾಟಕಕ್ಕೆ ಬೆಳಕಿನ ವಿನ್ಯಾಸವನ್ನು ಮಾಡಿದ್ದರು. ಮೇಕಪ್ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಪರಿಚಿತ ಹೆಸರು. ಇವರು ‘ಬೆನಕ’ ತಂಡದ ಜೊತೆ ಜೊತೆಯಲ್ಲೇ ಬೆಳೆದು ಬಂದವರು.

ಕನ್ನಡ ಚಿತ್ರರಂಗದ ಪೋಷಕ ನಟರಾದ ಪೃಥ್ವಿರಾಜ್, ರಾಮಮೂರ್ತಿ, ಬಿ.ವಿ. ನಂಜುಂಡಯ್ಯ, ಐಟಿಐ ಆಂಜಿನಪ್ಪ ‘ಬೆನಕ’ದ ಜೊತೆಗಿದ್ದಾರೆ.

ಚಲನಚಿತ್ರ ಮತ್ತು ಕಿರುತೆರೆ ಮಾಧ್ಯಮ ಮಾತ್ರವಲ್ಲದೆ ಇತರ ಕಲಾ ಪ್ರಕಾರಗಳಲ್ಲಿ ಗುರುತಿಸಿಕೊಂಡ ಅನೇಕರು ‘ಬೆನಕ’ ತಂಡದ ಮೂಲಕವೇ ಬೆಳಕಿಗೆ ಬಂದಿದ್ದಾರೆ. ಲೇಖಕ, ಸುಗಮ ಸಂಗೀತ ಮತ್ತು ರಂಗಗೀತೆಗಳ ಗಾಯಕನಾಗಿ ಗುರುತಿಸಿಕೊಂಡಿರುವ ಆರ್. ಶ್ರೀನಾಥ್ ಅವರೂ ಇದರ ಸದಸ್ಯರು. ೧೯೭೬ರಲ್ಲಿ ‘ಇಸ್ಪೀಟ್ ರಾಜ್ಯ’ ನಾಟಕದ ಮೂಲಕ ಕನ್ನಡ ಹವ್ಯಾಸಿ ರಂಗಭೂಮಿಗೆ ಪದಾರ್ಪಣೆ ಮಾಡಿದ ಕಲಾವಿದ.

ಹಲವಾರು ಪ್ರಯೋಗಾತ್ಮಕ ಚಲನಚಿತ್ರಗಳಲ್ಲಿ ನಟಿಸಿರುವ ಕಲ್ಪನಾ ನಾಗನಾಥ್, ಖ್ಯಾತ ಕಿರುತೆರೆ ನಟಿ, ರಂಗಗೀತೆಗಳ ಗಾಯಕಿ. ಖ್ಯಾತ ಲಯವಾದ್ ಕಲಾವಿದರಾದ ಕಾರ್ತಿಕ್ ಪಾಂಡವಪುರ ಇಂದು ಸುಗಮಸಂಗೀತ ಕ್ಷೇತ್ರದಲ್ಲಿ ಬಿಡುವಿಲ್ಲದ ವಾದ್ಯ ಕಲಾವಿದ. ಕಿರಣ್ ವಿಪ್ರ ಸಂಗೀತ ಸಂಯೋಜಕ, ಗಾಯಕ ಮತ್ತು ಚಲನಚಿತ್ರ ಸಾಹಿತಿ ಕೆ.ಎಸ್.ಶ್ರೀಧರ್ ಕೂಡ ‘ಬೆನಕ’ದ ಕೊಡುಗೆ.

ತಾಲೀಮು ವೀಕ್ಷಿಸಿದ್ದ ಕಮಲಹಾಸನ್
ನಟ, ನಿರ್ದೇಶಕ, ನಿರ್ಮಾಪಕ ಕಮಲ ಹಾಸನ್ ಮತ್ತು ಖ್ಯಾತ ಛಾಯಾಗ್ರಾಹಕ, ನಿರ್ದೇಶಕ ಬಾಲು ಮಹೇಂದ್ರ ಎಪ್ಪತ್ತರ ದಶಕದಲ್ಲಿ ‘ಬೆನಕ’ದ ನಾಟಕಗಳ ರಂಗತಾಲೀಮು ನಡೆಯುವ ವೇಳೆ ಹಾಜರಿರುತ್ತಿದ್ದರಂತೆ. ಅಷ್ಟರ ಮಟ್ಟಿಗೆ ತಂಡದ ನಾಟಕಗಳು, ಕಲಾವಿದರು ಹೆಸರು ಮಾಡಿದ್ದರು. ತಂಡದ ಹೊಸ ಪ್ರಯೋಗವೊಂದು ಅಂದಿನ ಬೆಂಗಳೂರಿನ ರಂಗವಲಯದೊಳಗೆ ಹೊಸ ತರಂಗವನ್ನು ಮೂಡಿಸುತ್ತಿದ್ದುದು ನಿಜ. ಇಂದಿಗೂ ‘ಬೆನಕ’ದಿಂದ ಹೊಸ ನಾಟಕ ಬರುತ್ತಿದೆ ಎಂದರೆ ಅದೇ ನಿರೀಕ್ಷೆ ಇರುವುದು ಹೆಮ್ಮೆಯ ಸಂಗತಿ.

ಒತ್ತಡದಲ್ಲೂ ಉಳಿದ ಬದ್ಧತೆ

1969ರಿಂದ ಬಿ.ವಿ.ಕಾರಂತರ ಜೊತೆ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಕೊಂಡೆ. ಅದು ಅದ್ಭುತ ಕಲಿಕಾ ಸಮಯವಾಗಿತ್ತು. ನಂತರ 1970ರಲ್ಲಿ ಬೆನಕ ತಂಡ ಕಟ್ಟಿದೆವು. ಅಲ್ಲಿಂದ 35 ವರ್ಷ ಅವರ ಒಡನಾಟದಲ್ಲಿ ಬಹಳಷ್ಟು ಕಲಿತಿದ್ದೇನೆ. ಕಾರಂತರು ಭೋಪಾಲ್, ದೆಹಲಿ, ಲಖನೌ ಮುಂತಾದ ಕಡೆ ನಡೆಸುತ್ತಿದ್ದ ನಾಟಕ ಚಟುವಟಿಕೆಯಲ್ಲೂ ಪಾಲ್ಗೊಂಡಿದ್ದೆ. ಕಾರಂತರು ಸುತ್ತಾಟದಲ್ಲಿದ್ದಾಗ ‘ಬೆನಕ’ದ ಜವಾಬ್ದಾರಿ ವಹಿಸಿಕೊಂಡು ನಿರ್ದೇಶಕನಾಗಿ ಬೆಳೆದೆ.

ಕಾರಂತರ ರಂಗ ಪ್ರಯೋಗಗಳನ್ನು ಈಗಲೂ ಮರುಪ್ರಯೋಗ ಮಾಡುವ ಮೂಲಕ ಹಳೆಯ ಮಾದರಿಯನ್ನು ಹೊಸಬರಿಗೆ ತೋರಿಸಿಕೊಡುವ ಪ್ರಯತ್ನ ನಮ್ಮದು. ‘ಹಯವದನ’ ಮತ್ತು ‘ಸತ್ತವರ ನೆರಳು’ ನಾಟಕಗಳಲ್ಲಿ ಈಗ ನಾಲ್ಕನೇ ತಲೆಮಾರು ನಟಿಸುತ್ತಿದೆ. ಹಳೆಯ ಕೊಂಡಿಯಾಗಿ ನಾನು, ನಾಗಿಣಿ ಭರಣ, ಕಲ್ಪನಾ ನಾಗಾನಾಥ್, ಸುಂದರ್ ರಾಜ್ ಸಕ್ರಿಯರಾಗಿದ್ದೇವೆ. ಎಂತಹ ಒತ್ತಡವಿದ್ದರೂ ವರ್ಷದಲ್ಲಿ ಎರಡು ನಾಟಕಗಳನ್ನು ನಿರ್ಮಿಸುವ ಬದ್ಧತೆ ಉಳಿಸಿಕೊಂಡಿದ್ದೇವೆ. ಒಂದೊಂದು ನಾಟಕ ವರ್ಷದಲ್ಲಿ 25ರಿಂದ 30 ಮರು ಪ್ರದರ್ಶನ ಕಾಣುತ್ತದೆ. ಐದರಿಂದ ಹತ್ತು ವರ್ಷ ಅದೇ ಎನರ್ಜಿ ಇಟ್ಟುಕೊಂಡು ಯುವಕರು ನಟಿಸುತ್ತಾರೆ. ಸತ್ತವರ ನೆರಳು ಈಗಾಗಲೇ 500 ಪ್ರದರ್ಶನ ನಡೆಸಿ ದಾಖಲೆ ನಿರ್ಮಿಸಿದೆ.

ರಂಗಭೂಮಿಯ ಬಗೆಗಿನ ಆಸಕ್ತಿಯಿಂದ ಬರುವವರು ಹೆಚ್ಚು ದಿನ ನಿಲ್ಲುತ್ತಾರೆ. ಉಳಿದಂತೆ ಸಿನಿಮಾ, ಕಿರುತೆರೆಗೆ ಪದಾರ್ಪಣೆಯ ಉದ್ದೇಶದಿಂದ ತರಬೇತಿ ಎಂದು ಬರುವವರೂ ಇದ್ದಾರೆ.
– ಟಿ.ಎಸ್. ನಾಗಾಭರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.