ಹವಾಮಾನ ಮುನ್ಸೂಚನೆ ಎಂದಕೂಡಲೇ– ‘ಅಲ್ಲಲ್ಲಿ ಚದುರಿದಂತೆ ಮಳೆ’, ‘ಒಳನಾಡಿನಲ್ಲಿ ಮಳೆ’ ಎನ್ನುವಂಥ ಕ್ಲೀಷೆಯ ಪದಪುಂಜಗಳು ನೆನಪಾಗುತ್ತವೆ.

ಹವಾಮಾನ ವರದಿ ರೈತರಿಗೆ ಎಷ್ಟರಮಟ್ಟಿಗೆ ಅನುಕೂಲವೋ ಹೇಳುವುದು ಕಷ್ಟ; ತಮಾಷೆ ಮಾತುಗಳಿಗಂತೂ ಧಾರಾಳವಾಗಿ ಬಳಕೆಯಾಗುತ್ತಿದೆ. ಆದರೆ, ಥಾಯ್ಲೆಂಡ್‌ನಲ್ಲಿನ ಹವಾಮಾನ ವರದಿಯ ಮಾದರಿ ತಮಾಷೆಯದಲ್ಲ. ರೈತರೂ ಸಹಭಾಗಿ ಆಗಿರುವ ಆ ವ್ಯವಸ್ಥೆ ವಸ್ತುಸ್ಥಿತಿಗೆ ಸಮೀಪವಾದುದು, ವಿಶ್ವಾಸಾರ್ಹವಾದುದು.

ಪೂರ್ವ ಥಾಯ್ಲೆಂಡಿನ ಯಸೋಥಾನ್ ಪ್ರಾಂತ್ಯದ ಕುತ್ ಲೋಮ್ ಹಳ್ಳಿಯನ್ನು ತಲುಪಿದ ವೇಳೆಗೆ ಸೂರ್ಯ ವಾಲುತ್ತಿದ್ದ. ಯಾವಯಾವುದೋ ದೇಶಗಳಿಂದ ಒಂದುಗೂಡಿ ಬಂದಿದ್ದವರನ್ನು ನೋಡಿ ಅರೆಕ್ಷಣ ಅಚ್ಚರಿಗೊಂಡ ರೈತ ಕುಡ್ಚುಮ್, ಕೈಯಲ್ಲಿದ್ದ ಗಾಜಿನ ನಳಿಕೆಯನ್ನು ಹುಷಾರಾಗಿ ಇಟ್ಟು ನಮ್ಮೆಡೆಗೆ ಬಂದ.

ಜತೆಗಿದ್ದ ವಿತೂನ್ ‘ಈ ವಾರ ಹೇಗಿದೆ’ ಎಂದು ಕೇಳಿದಾಗ, ‘ಪರವಾಗಿಲ್ಲ. ಎರಡು ದಿನದಲ್ಲಿ ಮಳೆ ಬರಲಿದೆ ಅಂತ ಗೊತ್ತಾಗಿದೆ. ಈಗ ಭತ್ತಕ್ಕೆ ನೀರು ಕೊಡುವುದೇನೂ ಇಲ್ಲ. ಕೃಷಿ ಹೊಂಡದ ಸುತ್ತಲಿನ ತರಕಾರಿಗೆ ಒಂದಷ್ಟು ಕಾಂಪೋಸ್ಟ್ ಕೊಡಬೇಕು’ ಎಂಬ ಉತ್ತರ ಕೊಟ್ಟ.

ಅಲ್ಲೇ ಇದ್ದ ಪಕ್ಕದ ಹಳ್ಳಿಯ ರೈತ ನಾಮ್‌ನ ಭತ್ತದ ಗದ್ದೆಗೆ ಆ ವಾರ ಮಳೆಯ ಅದೃಷ್ಟ ಇರಲಿಲ್ಲ. ‘ನಾನು ನಿನ್ನೆಯಷ್ಟೇ ಟ್ಯಾಂಕಿನಿಂದ ತರಕಾರಿಗೆ ನೀರು ಹಾಯಿಸಿ ಬಂದೆ’ ಎಂದ ನಾಮ್.

ಸ್ಥಳೀಯ ಮಟ್ಟದಲ್ಲಿ ವಾತಾವರಣ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಯಸೋಥಾನ್ ಪ್ರಾಂತ್ಯದಲ್ಲಿ ಅನುಷ್ಠಾನ ಮಾಡಿದ್ದು, ನಾವು ಭೇಟಿ ನೀಡಿದ ಆ ಹಳ್ಳಿಗಳ ರೈತರು ಇದನ್ನೇ ನಂಬಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಮಳೆ– ಗಾಳಿ ‘ಭವಿಷ್ಯ’ದ ಮಾಹಿತಿ ಪಡೆಯಲು ಅಲ್ಲಿನ ರೈತರು ಪರದಾಡಬೇಕಿಲ್ಲ. ತಮ್ಮ ಪ್ರದೇಶದಲ್ಲಿ ಹವಾಗುಣ ಹೇಗಿರಲಿದೆ ಎಂಬ ಮಾಹಿತಿ ಅಂಗೈಯಲ್ಲಿರುವ ಮೊಬೈಲಿನಿಂದ ಲಭ್ಯವಾಗುತ್ತದೆ.

ಅದಕ್ಕೆ ತಕ್ಕಂತೆ ಬೇಸಾಯ ಚಟುವಟಿಕೆಗಳು ಮುಂದಕ್ಕೆ ಸಾಗುತ್ತವೆ. ಮಳೆ ಮಾಹಿತಿಯನ್ನು ಖಚಿತವಾಗಿ ಪಡೆಯುವ ಪ್ರಕ್ರಿಯೆಯಲ್ಲಿ ಅವರೂ ಪಾಲುದಾರರು ಆಗಿರುವುದರಿಂದ, ಅದರಲ್ಲಿ ಅವರಿಗೆ ನಂಬಿಕೆ ಇದೆ.

ಯಸೋಥಾನ್ ಪ್ರಾಂತ್ಯದಲ್ಲಿ ಮಳೆ ಸುರಿಯಲಿದೆ ಎಂಬ ಹವಾಮಾನ ಇಲಾಖೆಯ ಮಾಹಿತಿಗೂ ಕುತ್ ಲೋಮ್ ಗ್ರಾಮದ ಸುತ್ತಮುತ್ತ ಮಳೆ ಸುರಿಯಲಿದೆ ಎಂಬ ಸ್ಥಳೀಯ ಮಟ್ಟದ ಮುನ್ಸೂಚನೆಗೂ ಸಾಕಷ್ಟು ವ್ಯತ್ಯಾಸ ಇದೆಯಲ್ಲ?! ಗಾಳಿ–ಮಳೆ–ಬಿಸಿಲು ಸೇರಿದಂತೆ ವಾತಾವರಣದ ಪ್ರಮುಖ ಬದಲಾವಣೆಯನ್ನು ಸ್ಥಳೀಯ ಮಟ್ಟದಲ್ಲಿ ನಿರ್ವಹಿಸುತ್ತಿರುವ ‘ಸಮುದಾಯ ಹವಾಮಾನ ಮುನ್ಸೂಚನಾ ಕೇಂದ್ರ’ದ ಯಶಸ್ಸು ಕಾಣುವುದು ಇಲ್ಲೇ.

ಹವಾಮಾನ ಬದಲಾವಣೆ ಈಗ ಬಿಸಿಬಿಸಿ ಚರ್ಚೆಯ ವಿಷಯ. ಅದಕ್ಕೆ ಭಾರತವೂ ಹೊರತಲ್ಲ. ಉಪಗ್ರಹಗಳು ಹಾಗೂ ದೇಶದಾದ್ಯಂತ ವಿವಿಧೆಡೆ ಅಳವಡಿಸಲಾದ ಉಪಕರಣಗಳು ಒದಗಿಸುವ ಮಾಹಿತಿಯನ್ನು ಸಂಸ್ಕರಿಸಿ, ಹವಾಮಾನ ಮುನ್ಸೂಚನೆ ಕೊಡುವ ವ್ಯವಸ್ಥೆ ಇದೆ. ಆದರೆ ಅದು ಎಷ್ಟು ಕರಾರುವಾಕ್ಕು ಎಂಬುದು ಎಲ್ಲರಿಗೂ ಗೊತ್ತಿರುವ ಅಂಶ.

ಹಾಗೆಂದು ಅದಕ್ಕಾಗಿ ಹವಾಮಾನ ಇಲಾಖೆಯನ್ನು ದೂಷಿಸಿ ಪ್ರಯೋಜನವಿಲ್ಲ. ಸ್ಥಳೀಯ ಮಟ್ಟದಲ್ಲಿ ಮುನ್ಸೂಚನೆ ಕೊಡುವ ವ್ಯವಸ್ಥೆಯನ್ನು ಈವರೆಗೆ ರೂಪಿಸದೇ ಇರುವುದೇ ವಿಪರ್ಯಾಸ. ಹೀಗಾಗಿಯೇ ‘ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ’ ಎಂಬ ಮಾಹಿತಿ ಅಪೂರ್ಣ ಮತ್ತು ಒಮ್ಮೊಮ್ಮೆ ಬಾಲಿಶ ಅನಿಸಿಬಿಡುತ್ತದೆ!

ಈ ಹಿನ್ನೆಲೆಯಲ್ಲಿ ನೋಡಿದಾಗ, ಹವಾಮಾನ ಬಿಕ್ಕಟ್ಟಿಗೆ ಥಾಯ್ಲೆಂಡಿನ ಹವಾಮಾನ ಬದಲಾವಣೆ ಜ್ಞಾನ ನಿರ್ವಹಣಾ ಕೇಂದ್ರ (ಸಿಸಿಕೆಎಂ) ಅನುಸರಿಸುತ್ತಿರುವ ವಿಧಾನವು ಒಟ್ಟಾರೆ ರೈತ ಸಮುದಾಯದ ಸಮಸ್ಯೆಗೆ ಪರಿಹಾರ ನೀಡುವಂತಿದೆ.

ಸರಳ– ಜಟಿಲ!
ದಿಢೀರ್ ಮಳೆ, ಭೀಕರ ತಾಪಮಾನ ಎದುರಿಸುತ್ತಿರುವ ಜನರಿಗೆ ಈಗ ಹವಾಮಾನ ಬದಲಾವಣೆಯ ವಾಸ್ತವ ಸ್ಥಿತಿ ಅರಿವಾಗುತ್ತಿದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ವಿವೇಚನಾರಹಿತವಾಗಿ ಬಳಸಿದ್ದರ ಪರಿಣಾಮ, ಭೂಮಿಗೆ ಈಗ ಜ್ವರ ಬಂದಿದೆ.

ಅದರ ಫಲಿತಾಂಶ ಕಣ್ಣೆದುರಿಗೇ ಕಾಣುತ್ತಿದೆ. ಬೇಸಿಗೆಯಲ್ಲಿ ವರ್ಷಧಾರೆ, ಮಳೆಗಾಲದಲ್ಲಿ ಮಳೆ ನಾಪತ್ತೆಯಾಗುವುದು, ಮುಂಗಾರು – ಹಿಂಗಾರು ಕೈಕೊಡುತ್ತಿರುವುದು ಸಮಸ್ಯೆಯ ಭೀಕರತೆಯನ್ನು ಹೆಚ್ಚಿಸುವಂತಿದೆ.

ಹವಾಮಾನ ಬದಲಾವಣೆಗೆ ಹೊಂದಿಕೊಂಡು ಆಹಾರ ಉತ್ಪಾದನೆ ಮಾಡಬೇಕಾದ ಅನಿವಾರ್ಯತೆಯಂತೂ ಇದ್ದೇ ಇದೆ. ಆದರೆ ವಾತಾವರಣದ ಮುನ್ಸೂಚನೆಯನ್ನು ಕರಾರುವಾಕ್ಕಾಗಿ ಕೊಡುವ ವ್ಯವಸ್ಥೆ ಎಲ್ಲಿದೆ?

‘ನಮ್ಮ ಎದುರಿಗಿದ್ದ ಸವಾಲು ಕೂಡ ಅದೇ ಆಗಿತ್ತು. ಒಂದು ಪ್ರಾಂತ್ಯದ ವಾತಾವರಣ ಹೇಗಿದೆ ಎಂಬ ಮಾಹಿತಿಯನ್ನೇನೋ ಉಪಗ್ರಹಗಳು ಕೊಡುತ್ತವೆ. ಆದರೆ ಅದು ಎಷ್ಟು ವ್ಯಾಪ್ತಿ ಪ್ರದೇಶಕ್ಕೆ ಒಳಪಡುತ್ತದೆ’ ಎಂದು ಪ್ರಶ್ನಿಸುತ್ತಾರೆ,

‘ಸಿಸಿಕೆಎಂ’ ನಿರ್ದೇಶಕ ಭುಮರಿಂದ್ರ ತಾವರತ್ನ. ಹವಾಮಾನದ ನಿಖರ ಮುನ್ಸೂಚನೆಯನ್ನು ಜನರಿಗೆ ಒದಗಿಸಲು ನಿರ್ಧರಿಸಿದ ‘ಸಿಸಿಕೆಎಂ’, ಅದಕ್ಕೆ ತಂತ್ರಜ್ಞಾನವನ್ನು ಬಳಸಿಕೊಂಡು ನಾಲ್ಕು ವರ್ಷಗಳ ಹಿಂದೆ ಕೆಲಸ ಶುರು ಮಾಡಿತು.

ಇದರ ಕಾರ್ಯವಿಧಾನ ಏಕಕಾಲಕ್ಕೆ ಸರಳ ಹಾಗೂ ಸಂಕೀರ್ಣ! ಅದನ್ನು ಹೀಗೆ ಹೇಳಬಹುದು:ಸಾಮಾನ್ಯವಾಗಿ ತೇವಾಂಶ, ಗಾಳಿ ಬೀಸುವ ದಿಕ್ಕು– ಪ್ರಮಾಣ, ತಾಪಮಾನ, ಮೋಡಗಳ ಚಲನೆ ಇತ್ಯಾದಿ ಮಾಹಿತಿಯನ್ನು ಸಂಸ್ಕರಿಸಿ, ತಂತ್ರಜ್ಞಾನದ ನೆರವಿನೊಂದಿಗೆ ವಿಶ್ಲೇಷಣೆ ನಡೆಸಲಾಗುತ್ತದೆ.

ಒಟ್ಟಾರೆ ಒಂದು ವಿಶಾಲ ಪ್ರದೇಶದಿಂದ ಲಭ್ಯವಾಗುವ ಅಂಶಗಳನ್ನು ಕ್ರೋಡೀಕರಿಸಿ, ಹವಾಮಾನ ಮುನ್ಸೂಚನೆಯನ್ನು ಸಮಗ್ರವಾಗಿ ಕೊಡಲಾಗುತ್ತದೆ. ಅದೇ ಪ್ರಕ್ರಿಯೆಯನ್ನು ಸ್ಥಳೀಯ ಮಟ್ಟದಲ್ಲಿ ನಡೆಸಿದರೆ, ಆಯಾ ಪ್ರದೇಶದ ಜನರಿಗೆ ಅವರ ಊರಿನ ಮಾಹಿತಿ ಕರಾರುವಾಕ್ಕಾಗಿ ಸಿಗಬಹುದಲ್ಲ? ‘ಸಿಸಿಕೆಎಂ’ ಮಾಡಿದ್ದೂ ಇದನ್ನೇ. ಈ ಪ್ರಯತ್ನಕ್ಕೆ ರೈತರು ನೀಡಿದ ಸಹಕಾರ ದೊಡ್ಡದು.

ಎರಡು – ಮೂರು ಹಳ್ಳಿಗಳ ಆಯ್ದ ರೈತರ ಮನೆಗಳ ಮುಂದೆ ಮಳೆಮಾಪಕ, ಉಷ್ಣತಾಮಾಪಕ ಹಾಗೂ ಗಾಳಿಯಂತ್ರ ಸ್ಥಾಪಿಸಲಾಗುತ್ತದೆ. ನಿತ್ಯ ಅದರಲ್ಲಿ ದಾಖಲಾಗುವ ಅಂಕಿಅಂಶಗಳನ್ನು ರೈತರು ಬರೆದಿಟ್ಟುಕೊಳ್ಳುತ್ತಾರೆ.

‘ಸಿಸಿಕೆಎಂ’ನ ಪ್ರತಿನಿಧಿಯೊಬ್ಬ ದಿನವೂ ಅಲ್ಲಿಗೆ ಬಂದು ಆ ಮಾಹಿತಿಯನ್ನು ತೆಗೆದುಕೊಂಡು ಹೋಗುತ್ತಾನೆ. ಹೀಗೆ ಹಲವು ಕಡೆಗಳಿಂದ ಸಂಗ್ರಹವಾಗುವ ಮಾಹಿತಿಯನ್ನು ಬ್ಯಾಂಕಾಕ್‌ನಲ್ಲಿರುವ ಕೇಂದ್ರದ ಮುಖ್ಯ ಕಚೇರಿಗೆ ರವಾನಿಸಲಾಗುತ್ತದೆ. ಅಲ್ಲಿರುವ ಹವಾಮಾನ ತಜ್ಞರು, ಆ ಅಂಶಗಳನ್ನೆಲ್ಲ ವಿಶ್ಲೇಷಿಸಿ ಚಿಕ್ಕ ಚಿಕ್ಕ ಪ್ರದೇಶಗಳ ಮಟ್ಟಿಗೆ (ಉದಾಹರಣೆಗೆ ತಾಲ್ಲೂಕು ಮಟ್ಟ) ಹವಾಮಾನ ಮುನ್ಸೂಚನೆಯನ್ನು ಸಿದ್ಧಪಡಿಸುತ್ತಾರೆ.

ಈಗ ಈ ಸಂದೇಶವನ್ನು ಸಂಬಂಧಿಸಿದ ರೈತರಿಗೆ ನಿಗದಿತ ಸಮಯದಲ್ಲಿ ತಲುಪಿಸುವುದೂ ಮಹತ್ವದ ಕೆಲಸ. ಇದು ‘ಸಿಸಿಕೆಎಂ’ ಮೊಬೈಲ್, ಸಮುದಾಯ ರೇಡಿಯೊ ಹಾಗೂ ರೈತಸಭೆಗಳು ನಡೆಯುವ ತಾಣವನ್ನು ಅವಲಂಬಿಸಿದೆ.

ಹೆಸರು ನೋಂದಾಯಿಸಿಕೊಂಡ ರೈತರಿಗೆ ಎಸ್‌ಎಂಎಸ್ ಮೂಲಕ ಮಾಹಿತಿಯು ಉಚಿತವಾಗಿ ತಲುಪುತ್ತದೆ; ರೇಡಿಯೊದಲ್ಲಿ ಪ್ರದೇಶವಾರು ಮಾಹಿತಿ ಬಿತ್ತರವಾಗುತ್ತದೆ; ಕೃಷಿ ಉತ್ಪನ್ನ ಮಾರಾಟ ಮಳಿಗೆಗಳ ಫಲಕಗಳ ಮೇಲೆ ಆ ಕುರಿತ ಮಾಹಿತಿ ಪತ್ರ ಅಂಟಿಸಲಾಗುತ್ತದೆ.

‘ದೊಡ್ಡ ಪ್ರದೇಶವೊಂದರ ಹವಾಮಾನ ಹೇಗಿರುತ್ತದೆ ಎಂಬುದಕ್ಕೂ, ನಾಲ್ಕೈದು ಗ್ರಾಮಗಳಲ್ಲಿ ಕಂಡು ಬರುವ ಹವಾಮಾನಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಒಂದು ಕಡೆ ಮಳೆ ಸುರಿಯುತ್ತಿದ್ದರೆ, ಅಲ್ಲಿಗೆ ಆರೆಂಟು ಕಿಲೋ ಮೀಟರ್ ದೂರದ ಇನ್ನೊಂದು ಹಳ್ಳಿಯಲ್ಲಿ ಹನಿ ಮಳೆಯೂ ಇರುವುದಿಲ್ಲ. ಇಂಥ ಸಮಯದಲ್ಲಿ ಸ್ಥಳೀಯ ಮಟ್ಟದ ಹವಾಮಾನ ಮುನ್ಸೂಚನೆ ಹೆಚ್ಚು ನೆರವಾಗಬಲ್ಲದು.

ಹುವಾಯ್ ಕಲಾವೊ ಪಟ್ಟಣಕ್ಕೂ ಫಾನ್ ಹೊಮ್ ಎಂಬ ಹಳ್ಳಿಗೂ ಎಂಟು ಕಿಲೋಮೀಟರ್ ದೂರ. ಆದರೆ ಅಲ್ಲಿನ ಹಾಗೂ ಇಲ್ಲಿನ ವಾತಾವರಣ ಬೇರೆ ಬೇರೆಯಾಗಿರುತ್ತದೆ. ಎರಡೂ ಕಡೆಗಳಲ್ಲಿ ಪ್ರತ್ಯೇಕವಾದ ಹವಾಮಾನ ಮುನ್ಸೂಚನೆ ಸಿಕ್ಕಿದರೆ ಎಷ್ಟು ಒಳ್ಳೆಯದು ಅಲ್ಲವೇ?’ ಎಂದು ‘ಗ್ರೀನ್ ನೆಟ್’ ಸಂಸ್ಥೆಯ ಮೈಕೆಲ್ ಕಾಮನ್ಸ್ ಹೇಳುತ್ತಾರೆ.

ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕೃಷಿ ವಿಧಾನಗಳ ಕುರಿತು ಪ್ರಯೋಗ ನಡೆಸುತ್ತಿರುವ ದಕ್ಷಿಣ ಏಷ್ಯಾ ಮೂಲದ ‘ಗ್ರೀನ್ ನೆಟ್’, ಸ್ಥಳೀಯ ಮಟ್ಟದ ಪರಿಹಾರಗಳೇ ಇದಕ್ಕೆ ಉತ್ತರ ನೀಡಬಲ್ಲವು ಎಂದು ಪ್ರತಿಪಾದಿಸುತ್ತಿದೆ. ಥಾಯ್ಲೆಂಡಿನಲ್ಲಿ ನಡೆಯುತ್ತಿರುವ ಅಂಥದೊಂದು ಪ್ರಯತ್ನಕ್ಕೆ ‘ಗ್ರೀನ್ ನೆಟ್’ ಕೈಜೋಡಿಸಿದೆ.

‘ದೇಸಿ’ ಜತೆ ತಂತ್ರಜ್ಞಾನ
ಕುಡ್ ಚಾಮ್ ಹಳ್ಳಿಯ ಹೊರವಲಯದ ತನ್ನ ತೋಟದಲ್ಲಿ ರೈತ ಮೂನ್ ಪೊಲಚಾಯ್ ಭತ್ತದ ಗದ್ದೆಯ ಕಳೆ ತೆಗೆಯುತ್ತಿದ್ದ– ಅದೂ ಅವಸರದಲ್ಲಿ. ಅದಕ್ಕೆ ಕಾರಣ, ಇನ್ನೆರಡು ದಿನದಲ್ಲಿ ಸಾಧಾರಣ ಪ್ರಮಾಣದ ಮಳೆ ಸುರಿಯಲಿದೆ ಎಂಬ ಸೂಚನೆ.

‘ನಾನೀಗ ಈ ಕೆಲಸ ಮಾಡದೇ ಹೋದರೆ ಕಳೆ ಇನ್ನಷ್ಟು ಎತ್ತರಕ್ಕೆ ಬೆಳೆದುಬಿಡುತ್ತದೆ. ಕಿತ್ತಿರುವ ಕಳೆಯನ್ನು ಭತ್ತದ ಪೈರಿನ ಬುಡಕ್ಕೆ ಹಾಕಿದರೆ ನಾಲ್ಕಾರು ದಿನಗಳಲ್ಲಿ ಅದು ಗೊಬ್ಬರವಾಗುತ್ತದೆ’ ಎಂದು ಮೂನ್ ಹೇಳಿದ.

ಮಳೆ–ಗಾಳಿ ಕುರಿತ ಸಾಂಪ್ರದಾಯಿಕ ಜ್ಞಾನ ಕಣ್ಮರೆಯಾಗಿರುವುದು ಈಗ ರೈತರ ಗಮನಕ್ಕೆ ಬರುತ್ತಿದೆ. ಗಾಳಿ ಬೀಸುವ ದಿಕ್ಕು, ತಾಪಮಾನದಲ್ಲಿ ಏರಿಳಿತ, ಮೋಡಗಳ ಚಲನೆಯ ಬಗ್ಗೆ ತಮ್ಮ ಹಿರಿಯರು ಹೇಳುತ್ತಿದ್ದ ಮುನ್ಸೂಚನೆಗಳು ಮತ್ತೆ ಮತ್ತೆ ನೆನಪಾಗುತ್ತಿವೆ.

ರೈತ ನೊಂಗ್ಲುಕ್ ಅದನ್ನೇ ನೆನಪಿಸಿಕೊಳ್ಳುತ್ತಾನೆ: ‘ಮಳೆ ಸುರಿಯುವ ದಿನದ ಬಗ್ಗೆ ನನ್ನ ತಂದೆ ಹಾಗೂ ತಾತ ಖಚಿತವಾಗಿ ಹೇಳುತ್ತಿದ್ದರು. ಆದರೆ ಈಗ ಆ ಜ್ಞಾನ ನಮ್ಮಲ್ಲಿಲ್ಲ. ಹವಾಮಾನ ಬದಲಾವಣೆಯು ಮಳೆ, ಬೇಸಿಗೆ ಕಾಲವನ್ನು ಪಲ್ಲಟಗೊಳಿಸಿದೆ. ಆ ಸಂಕೇತಗಳನ್ನು ನಾವು ಗ್ರಹಿಸುತ್ತಿಲ್ಲ’.

ಖಾಮ್ ಜೆಮ್ ಎಂಬ ರೈತನ ಅನುಭವ ಇನ್ನೊಂದು ಅಚ್ಚರಿ. ‘ಇರುವೆಗಳು ತಮ್ಮ ಮೊಟ್ಟೆಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಿದ ಒಂದು ದಿನದಲ್ಲಿ ಮಳೆ ಬರುತ್ತದೆ ಎಂಬುದನ್ನು ಬಾಲ್ಯದಲ್ಲಿ ಕಂಡಿದ್ದೆ.

ಈಗಲೂ ಅಂಥ ಸನ್ನಿವೇಶ ಕಾಣುತ್ತವೆ. ಆದರೆ ತಂತ್ರಜ್ಞಾನದ ಗದ್ದಲದಲ್ಲಿ ಪ್ರಕೃತಿಯಲ್ಲಿನ ಸೂಕ್ಷ್ಮಗಳನ್ನು ಗಮನಿಸುವ ಸಂವೇದನೆ ಕಳೆದುಕೊಂಡಿದ್ದೇವೆ’ ಎಂಬ ವಿಷಾದದ ನುಡಿ ಖಾಮ್ ಅವರದು.

ಮಳೆ ಮುನ್ಸೂಚನೆ ಕೊಡುವ ದೇಸಿ ಜ್ಞಾನಕ್ಕೇನು ನಮ್ಮಲ್ಲಿ ಕೊರತೆಯೇ? ಆದರೆ ಅದೆಲ್ಲವನ್ನೂ ಮೂಢನಂಬಿಕೆ ಎಂದು ಜರಿದು, ಮೂಲೆಗೆ ತಳ್ಳಲಾಗಿದೆ. ಅದಕ್ಕೆ ಬದಲಾಗಿ ಈಗ ಏನಿದ್ದರೂ ವಿಶಾಲ ವ್ಯಾಪ್ತಿಗೆ ಅನ್ವಯವಾಗುವ ತಂತ್ರಜ್ಞಾನವೊಂದನ್ನೇ ಆಧರಿಸಿದ ಹವಾಮಾನ ಮುನ್ಸೂಚನೆಯ ದರ್ಬಾರು!

ಜೀವ ವೈವಿಧ್ಯದೊಂದಿಗೆ ಸಾವಿರಾರು ಬಗೆಯ ಸೂಕ್ಷ್ಮ ವಾತಾವರಣ (ಮೈಕ್ರೋ ಕ್ಲೈಮೇಟ್) ಹೊಂದಿರುವ ಭಾರತದಲ್ಲಿ ನಿರ್ದಿಷ್ಟ ಪ್ರದೇಶದ ಹವಾಮಾನ ಮಾಹಿತಿ ಕೊಡುವುದೇ ಅಸಾಧ್ಯ. ದೇಸಿ ಜ್ಞಾನವನ್ನು ತಂತ್ರಜ್ಞಾನದೊಂದಿಗೆ ಮೇಳೈಸಿ ಹಳ್ಳಿ ಮಟ್ಟದಲ್ಲಿ ಮಾಹಿತಿ ಕೊಡುವ ಕೇಂದ್ರಗಳು ಈಗಿನ ಅಗತ್ಯ.

ವಾತಾವರಣ ಬದಲಾವಣೆಯ ಬಹುದೊಡ್ಡ ಫಲಾನುಭವಿಗಳಾದ ರೈತರೇ ಹವಾಮಾನ ತಜ್ಞರಾಗಬೇಕು. ಮುಂಗಾರು ಮಳೆ ಆರಂಭವಾಗಿದೆ. ನಮ್ಮ ಊರಿನಲ್ಲಿ ಹವಾಮಾನ ಹೇಗೆಲ್ಲ ಇರಲಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳುವ ಯಸೋಥಾನ್ ಪ್ರಾಂತ್ಯದ ಪ್ರಯೋಗ ನಮ್ಮಲ್ಲಿಗೆ ಯಾಕೆ ಬರಬಾರದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.