ಎವ್ರೊ–748 ಸ್ಥಾನ ತುಂಬಲಿರುವ ಸಿ–295
ಭಾರತದಲ್ಲೇ ತಯಾರಾಗಲಿರುವ ಮಧ್ಯಮ ಗಾತ್ರದ ಸಿ–295 ಸೇನಾ ಸರಕುಸಾಗಣೆ ವಿಮಾನಗಳು ಭಾರತೀಯ ವಾಯುಪಡೆಯಲ್ಲಿ ದಶಕಗಳಿಂದ ಕಾರ್ಯಾಚರಿಸುತ್ತಿರುವ ಎವ್ರೊ ಎಚ್‌ಎಸ್–748 ವಿಮಾನಗಳ ಜಾಗ ತುಂಬಲಿವೆ. 1960ರ ದಶಕದಲ್ಲಿ ತಯಾರಾಗಿರುವ ಈ ವಿಮಾನಗಳು ಈಗ ಹಳೆಯದಾಗಿದ್ದು, ಅವುಗಳ ನಿರ್ವಹಣೆಯೇ ವಾಯುಪಡೆಗೆ ದೊಡ್ಡ ಸವಾಲಾಗಿದೆ. ಈ ವಿಮಾನಗಳ ಬದಲಿಗೆ ಅತ್ಯಾಧುನಿಕ ಮತ್ತು ಬಹೂಪಯೋಗಿ ಸಿ–295 ಸರಕು ಸಾಗಣೆ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ತೀರ್ಮಾನಿಸಿತ್ತು. 56 ವಿಮಾನಗಳನ್ನು ಖರೀದಿಸಲು ಭಾರತ ಏರ್‌ಬಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಎರಡು ಟರ್ಬೊಪ್ರೊಪೆಲ್ಲರ್ ಎಂಜಿನ್‌ಗಳನ್ನು ಹೊಂದಿರುವ ಸಿ–295 ವಿಮಾನವನ್ನು ಕಡಿಮೆ ಉದ್ದದ ರನ್‌ವೇ ಇರುವ ಜಾಗಗಳಲ್ಲೂ ಇಳಿಸಬಹುದು. ಪ್ರತಿಕೂಲ ಅಥವಾ ತುರ್ತುಪರಿಸ್ಥಿತಿಯಲ್ಲಿ ಕಡಿಮೆ ಸ್ಥಳಾವಕಾಶ ಇರುವಲ್ಲಿಯೂ ವಿಮಾನವನ್ನು ಇಳಿಸಬಹುದು. ಟೇಕ್ ಆಫ್ ಮಾಡಬಹುದು. ಕನಿಷ್ಠ 670 ಮೀಟರ್ ಉದ್ದದ ರನ್‌ವೇ ಇದ್ದರೆ ಸಲೀಸಾಗಿ ಟೇಕ್ ಆಫ್ ಮಾಡಬಹುದು. ಇಳಿಯುವುದಕ್ಕೆ 320 ಮೀಟರ್ ಉದ್ದದ ರನ್‌ವೇ ಸಾಕು. ಸೇನಾ ಸರಕು ಸಾಗಣೆ ಮಾತ್ರವಲ್ಲದೇ ವಿವಿಧ ಉದ್ದೇಶಗಳಿಗೂ ಬಳಸಬಹುದು ಎನ್ನುವುದು ಈ ವಿಮಾನದ ಹೆಗ್ಗಳಿಕೆ. ಸೈನಿಕರು, ಪ್ಯಾರಾಟ್ರೂಪರ್‌ಗಳನ್ನು ಕರೆದೊಯ್ಯಲು, ರಕ್ಷಣಾ ಕಾರ್ಯಾಚರಣೆಗೆ, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ, ನೌಕಾ ನಿಗಾ ವ್ಯವಸ್ಥೆಗೆ, ಗಡಿ ಕಾಯಲು, ಆಗಸದಲ್ಲೇ ವಿಮಾನಗಳಿಗೆ ಇಂಧನ ತುಂಬಿಸಲು ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಈ ವಿಮಾನವನ್ನು ಬಳಸಬಹುದು.