ಉಳಿದಿರುವುದು ಎಂಟೇ ಜನ
ಚಿಕ್ಕಮಗಳೂರು: ‘ಕೇರಳದಲ್ಲಿದ್ದ ನಕ್ಸಲರ ತಂಡದಲ್ಲಿ ಬಹುತೇಕರ ಬಂಧನ, ರಾಷ್ಟ್ರ ಮಟ್ಟದಲ್ಲಿ ಕಾರ್ಯಕಾರಿ ಸಮಿತಿಯೊಂದಿಗೆ ಸಂಪರ್ಕ ಕಡಿತಗೊಂಡ ಬಳಿಕ ಕರ್ನಾಟಕದ ನಕ್ಸಲರು ಮತ್ತೆ ತಾಯ್ನಾಡಿನತ್ತ ಮರಳಲು ಯತ್ನಿಸಿದ್ದಾರೆ. ವಿಕ್ರಂ ಗೌಡ ಹತ್ಯೆ ಬಳಿಕ ಈಗ ದಕ್ಷಿಣ ಭಾರತದಲ್ಲಿ ಉಳಿದಿರುವುದು ಎಂಟು ನಕ್ಸಲರು ಮಾತ್ರ, ಅವರಲ್ಲಿ ಏಳು ಜನ ಈಗ ಉಡುಪಿ–ಚಿಕ್ಕಮಗಳೂರು ಜಿಲ್ಲೆಯಲ್ಲೇ ಇದ್ದಾರೆ’ ಎಂದು ಹೇಳುತ್ತವೆ ಮೂಲಗಳು. ಕೇರಳದ ನಕ್ಸಲ್ ನಾಯಕ ಸಂಜೊಯ್ ದೀಪಕ್, ಮೊಹಿಯುದ್ದೀನ್ ಸೇರಿ ಬಹುತೇಕರ ಬಂಧನವಾಯಿತು. ಅಲ್ಲಿ ಉಳಿದಿರುವುದು ಸಂತೋಷ್ ಮಾತ್ರ. ರಾಷ್ಟ್ರ ಮಟ್ಟದ ನಕ್ಸಲ್ ನಾಯಕರೊಂದಿಗೆ ಸಂಜೊಯ್ ದೀಪಕ್ ಸಂಪರ್ಕ ಹೊಂದಿದ್ದ. ಇವರ ಬಂಧನದ ಬಳಿಕ ಎಲ್ಲವೂ ಕಡಿತಗೊಂಡಿತು. ವಯೋಸಹಜ ಅನಾರೋಗ್ಯವೂ ಉಳಿದವರನ್ನು ಕಾಡುತ್ತಿದೆ. ಕೇರಳದಲ್ಲಿ ಮುಂದುವರಿಯಲು ಯಾವುದೇ ಅವಕಾಶ ಇಲ್ಲದ್ದರಿಂದ 8 ಜನರ ತಂಡ ಕರ್ನಾಟಕದತ್ತ ಹೊರಟಿತು. ತಂಡದಲ್ಲಿ ಮುಂಡಗಾರು ಲತಾ, ಜಯಣ್ಣ (ಜಾನ್), ವನಜಾಕ್ಷಿ, ಸುಂದರಿ, ದಿಶಾ (ಕೇರಳ), ಕೋಟೆವುಂಡ ರವಿ, ರಮೇಶ್ (ತಮಿಳುನಾಡು), ವಿಕ್ರಂ ಗೌಡ ಸೇರಿ ಎಂಟು ಜನ ಇದ್ದರು. ಸಂತೋಷ್ ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಎಂಟು ಜನ ಮಾರ್ಚ್‌ನಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಒಂದು ಪ್ರಕರಣ ದಾಖಲಾಯಿತು. ನ. 7ರಂದು ಉಡುಪಿ ಜಿಲ್ಲೆಯಲ್ಲಿ ಕಾಣಿಸಿಕೊಂಡರು. ಮಾರ್ಚ್ 9 ಮತ್ತು 10ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಡೆಗುಂದಿಯ ಮನೆಯೊಂದಕ್ಕೆ ಭೇಟಿ ನೀಡಿದ್ದರು. ಕೇರಳದಿಂದ ಕರ್ನಾಟಕದತ್ತ ತಂಡ ಹೊರಟಿದೆ ಎಂಬ ಮಾಹಿತಿ ಅರಿತು ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ಸಿಬ್ಬಂದಿ ನಿಗಾ ವಹಿಸಿದ್ದರು. ಈ ಎಂಟರಲ್ಲಿ ಈಗ ವಿಕ್ರಂ ಗೌಡ ಹತ್ಯೆಯಾಗಿದೆ. ಉಳಿದವರು ಇದೇ ತಂಡದಲ್ಲಿ ಇದ್ದರು. ಕಡೆಗುಂದಿಯಲ್ಲಿ ಮುಂಡಗಾರು ಲತಾ ಮತ್ತು ಜಯಣ್ಣ ಮಾತ್ರ ಕಾಣಿಸಿಕೊಂಡಿದ್ದು, ಉಳಿದವರೂ ಸುತ್ತಮುತ್ತಲ ಕಾಡಿನಲ್ಲೇ ಇರಬಹುದು ಎಂಬ ಅನುಮಾನ ಇದೆ ಎಂದು ಮೂಲಗಳು ಹೇಳುತ್ತವೆ. ‘ಮಲೆನಾಡಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಸಂದರ್ಭವನ್ನು ಬಳಸಿಕೊಂಡು ಚಳವಳಿ ಕಟ್ಟಲು ಸಾಧ್ಯವೆ ಎಂಬ ಬಗ್ಗೆಯೂ ನಕ್ಸಲ್ ತಂಡ ಆಲೋಚಿಸಿರಬಹುದು. ಸದ್ಯದಲ್ಲೇ ಈ ಎಲ್ಲ ನಕ್ಸಲರು ಸಿಕ್ಕಿಬೀಳುವ ಸಾಧ್ಯತೆಗಳಿವೆ. ತಾವಾಗಿಯೇ ಶರಣಾಗುವುದು ಉತ್ತಮ’ ಎನ್ನುತ್ತವೆ ಈ ಮೂಲಗಳು.