ಬ್ರಿಟಿಷರು ಭಾರತವನ್ನು ತೊರೆಯುವಾಗ ಇಲ್ಲಿದ್ದ 536 ಸಂಸ್ಥಾನಗಳಿಗೂ ಸ್ವಾತಂತ್ರ್ಯವನ್ನು ನೀಡಿದ್ದರು. ಭಾರತಕ್ಕೆ ಸೇರುವ ಅಥವಾ ಪಾಕಿಸ್ತಾನಕ್ಕೆ ಸೇರುವ ಅಥವಾ ಸ್ವತಂತ್ರ ಸಂಸ್ಥಾನವಾಗಿ ಉಳಿಯುವ ಆಯ್ಕೆಯನ್ನು ಆ ಎಲ್ಲಾ ಸಂಸ್ಥಾನಗಳಿಗೆ ನೀಡಲಾಗಿತ್ತು. ಆಗ ಜಮ್ಮು–ಕಾಶ್ಮೀರದ ರಾಜ ಹರಿಸಿಂಗ್ ಸ್ವತಂತ್ರವಾಗಿ ಉಳಿಯುವುದನ್ನು ಆಯ್ಕೆ ಮಾಡಿಕೊಂಡಿದ್ದರು.

ಹೀಗಾಗಿ 1947ರ ಆಗಸ್ಟ್ನಲ್ಲೇ ಕಾಶ್ಮೀರವು ಭಾರತದೊಂದಿಗೆ ವಿಲೀನವಾಗಲಿಲ್ಲ. ಆದರೆ ಸ್ವತಂತ್ರವಾಗಿ ಉಳಿಯುವ ಅವರ ಆಯ್ಕೆ ದುಬಾರಿಯಾಗಿ ಪರಿಣಮಿಸಿತ್ತು. ಪಾಕಿಸ್ತಾನವು ಕಾಶ್ಮೀರದ ಮೇಲೆ ಅತಿಕ್ರಮಣ ಮಾಡಿತ್ತು. ಅದನ್ನು ಎದುರಿಸಲಾಗದ ಹರಿಸಿಂಗ್, ಭಾರತದ ನೆರವನ್ನು ಕೇಳಿದ್ದರು. ಜಮ್ಮು–ಕಾಶ್ಮೀರವನ್ನು ಭಾರತದೊಂದಿಗೆ ವಿಲೀನ ಮಾಡಿದರೆ ಮಾತ್ರ, ಪಾಕಿಸ್ತಾನವನ್ನು ಎದುರಿಸಲು ನೆರವು ನೀಡುವುದಾಗಿ ಭಾರತ ಷರತ್ತು ಹಾಕಿತ್ತು. ಅದಕ್ಕೆ ಒಪ್ಪಿದ್ದ ಹರಿಸಿಂಗ್, ಭಾರತದೊಂದಿಗೆ ಸೇರಿದ್ದರೂ ಸ್ವಾಯತ್ತೆಯನ್ನು ಉಳಿಸಿಕೊಳ್ಳುವ ಷರತ್ತು ಒಡ್ಡಿದ್ದರು. ಹೀಗೆ ಪರಸ್ಪರ ಷರತ್ತುಗಳ ಮೂಲಕವೇ ಜಮ್ಮು–ಕಾಶ್ಮೀರವನ್ನು ಭಾರತದೊಂದಿಗೆ ವಿಲೀನ ಮಾಡಲಾಗಿತ್ತು. ಸಂವಿಧಾನವನ್ನು ರಚಿಸುವಾಗ ಆ ಷರತ್ತುಗಳನ್ನು 370ನೇ ವಿಧಿಯ (ಕರಡು ಸಂವಿಧಾನದಲ್ಲಿ 306ಎ ವಿಧಿ) ಅಡಿ ಸೇರಿಸಲಾಯಿತು.

ಭಾರತದೊಂದಿಗೆ ವಿಲೀನವಾದರೂ ಜಮ್ಮು–ಕಾಶ್ಮೀರದ ವಿದೇಶಾಂಗ ವ್ಯವಹಾರ, ರಕ್ಷಣೆ ಮತ್ತು ಸಂವಹನ ವಿಚಾರಗಳಲ್ಲಿ ಮಾತ್ರ ಕೇಂದ್ರ ಸರ್ಕಾರಕ್ಕೆ ಅಧಿಕಾರವಿತ್ತು. ಉಳಿದ ಎಲ್ಲಾ ವಿಚಾರಗಳಲ್ಲೂ ರಾಜ ಹರಿಸಿಂಗ್ ಸ್ವತಂತ್ರ ಅಧಿಕಾರ ಹೊಂದಿದ್ದರು. ಭಾರತದ ಸಂವಿಧಾನ ಅಂಗೀಕಾರವಾದರೂ ಈ ಷರತ್ತುಗಳ ಕಾರಣದಿಂದಾಗಿ ಜಮ್ಮು–ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನವನ್ನು ರಚಿಸಲಾಗಿತ್ತು. ಭಾರತ ಸಂವಿಧಾನವನ್ನೇ ಹೋಲುವ, ಅದರ ನಕಲಿನಂತೆಯೇ ಇದ್ದ ಕಾಯ್ದೆಗಳನ್ನು ಒಳಗೊಂಡಿದ್ದ ಚಿಕ್ಕ ಸಂವಿಧಾನವದು. ಇವೆಲ್ಲವುಗಳ ಹೊರತಾಗಿ ಜಮ್ಮು–ಕಾಶ್ಮೀರದ ಕಾಯಂ ನಿವಾಸಿಗಳಲ್ಲದೇ ಇರುವವರಿಗೆ ಅಲ್ಲಿ ಆಸ್ತಿ ಖರೀದಿಸಲು ಅವಕಾಶವಿರಲಿಲ್ಲ. ಭಾರತ ಸಂವಿಧಾನದ 35ಎ ವಿಧಿಯಲ್ಲಿ ಈ ಹಕ್ಕನ್ನು ರಕ್ಷಿಸಲಾಗಿತ್ತು. ಇದೇ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ.

ಈ ವಿಶೇಷ ಸ್ಥಾನವನ್ನು ಸಾಧ್ಯವಾಗಿಸಿದ್ದ 370ನೇ ವಿಧಿಯ ಬಗ್ಗೆ 60ರ ದಶಕದಿಂದಲೂ ಅಸಮಾಧಾನ ಇದ್ದೇ ಇತ್ತು. ಅದರ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಹಲವು ಬಾರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಆ ವಿಶೇಷ ಸ್ಥಾನವನ್ನು ಸುಪ್ರೀಂ ಕೋರ್ಟ್ ಆಗೆಲ್ಲಾ ಎತ್ತಿಹಿಡಿದಿತ್ತು. 80ರ ದಶಕದಲ್ಲಿ ಈ ಅಸಮಾಧಾನವು ರಾಜಕೀಯ ರೂಪ ಪಡೆಯಿತು. ಈ ವಿಧಿಯನ್ನು ಜನಸಂಘವು ಮೊದಲಿನಿಂದಲೂ ವಿರೋಧಿಸಿಕೊಂಡೇ ಬಂದಿತ್ತು. ನಂತರದ ಬಿಜೆಪಿಯೂ ಅದನ್ನೇ ಮುಂದುವರಿಸಿತ್ತು. 370ನೇ ವಿಧಿಯನ್ನು ರದ್ದುಪಡಿಸಬೇಕು ಎಂಬುದು ಬಿಜೆಪಿಯ ಆಗ್ರಹವಾಗಿತ್ತು. ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ನಡೆಯಲು 370ನೇ ವಿಧಿಯೂ ಒಂದು ಕಾರಣ ಎಂಬ ಸಂಕಥನವನ್ನು ಸೃಷ್ಟಿಸಲಾಗಿತ್ತು. ದೇಶದ ಎಲ್ಲಾ ಪ್ರಜೆಗಳಿಗೂ ಒಂದೇ ಸಂವಿಧಾನ ಅನ್ವಯವಾಗಬೇಕು ಎಂಬ ವಿಚಾರವು 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೊಡ್ಡಮಟ್ಟದಲ್ಲಿ ಚಲಾವಣೆಗೆ ಬಂದಿತು. ಅಧಿಕಾರಕ್ಕೆ ಬಂದರೆ 370ನೇ ವಿಧಿಯನ್ನು ರದ್ದುಪಡಿಸುತ್ತೇವೆ ಎಂದು ಬಿಜೆಪಿ ಘೋಷಿಸಿತ್ತು. ಆದರೆ ಆ ಘೋಷಣೆಯನ್ನು ಜಾರಿಗೆ ತಂದಿದ್ದು 2019ರ ಲೋಕಸಭಾ ಚುನಾವಣೆಯ ನಂತರ.

ಜಮ್ಮು–ಕಾಶ್ಮೀರದಲ್ಲಿ ಚುನಾಯಿತ ಸರ್ಕಾರ ಇಲ್ಲದೇ ಇದ್ದ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ವಿಶೇಷ ಸ್ಥಾನವನ್ನು ತೆಗೆದುಹಾಕಿತು. ಇದರ ವಿರುದ್ಧ ಅಲ್ಲಿನ ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈಗ ಕೇಂದ್ರ ಸರ್ಕಾರದ ಕ್ರಮ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಭಯೋತ್ಪಾದನಾ ಕೃತ್ಯ: ಭಾರಿ ಏರಿಕೆ

ಸಂವಿಧಾನದ 370ನೇ ವಿಧಿಯ ಅಡಿ ನೀಡಲಾದ ವಿಶೇಷ ಸ್ಥಾನವನ್ನು ತೆಗೆದುಹಾಕುವುದರಿಂದ ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು ಎಂದು 2019ರ ಆಗಸ್ಟ್ನಲ್ಲಿ ಕೇಂದ್ರ ಸರ್ಕಾರವು ಹೇಳಿತ್ತು. ಆದರೆ, ವಾಸ್ತವದಲ್ಲಿ ಇದು ಸಾಧ್ಯವಾಗಿಲ್ಲ ಎಂಬುದನ್ನು ಕೇಂದ್ರ ಸರ್ಕಾರದ್ದೇ ದತ್ತಾಂಶಗಳು ಹೇಳುತ್ತವೆ. ಬದಲಿಗೆ ಜಮ್ಮು–ಕಾಶ್ಮೀರದ ವಿಶೇಷ ಸ್ಥಾನವನ್ನು ತೆಗೆದುಹಾಕಿದ ನಂತರ ಭಯೋತ್ಪಾದನಾ ಚಟುವಟಿಕೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ.

ವಿಶೇಷ ಸ್ಥಾನ ತೆಗೆದುಹಾಕುವುದರ ಮೂಲಕ ಭಯೋತ್ಪಾದನಾ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ. ಜತೆಗೆ ಭಯೋತ್ಪಾದನಾ ಚಟುವಟಿಕೆಗಳು ಉಲ್ಬಣಗೊಳ್ಳಲು ಸರ್ಕಾರದ ಈ ಕ್ರಮ ಕಾರಣವಾಗಿದೆ ಎಂಬುದನ್ನೂ ಈ ದತ್ತಾಂಶಗಳು ವಿವರಿಸುತ್ತವೆ.

2017ರಲ್ಲಿ ನಡೆದಿದ್ದ ಭಯೋತ್ಪಾದನಾ ಚಟುವಟಿಕೆಗಳಿಗೆ ಹೋಲಿಸಿದರೆ 2022ರಲ್ಲಿ ನಡೆದ ಕೃತ್ಯಗಳ ಸಂಖ್ಯೆಯಲ್ಲಿ ಒಂದೂವರೆ ಪಟ್ಟಿನಷ್ಟು (ಶೇ 155) ಏರಿಕೆಯಾಗಿದೆ.

2019ರಲ್ಲಿ ವಿಶೇಷ ಸ್ಥಾನ ತೆಗೆದುಹಾಕುವ ಸಂದರ್ಭದಲ್ಲಿ ಜಮ್ಮು–ಕಾಶ್ಮೀರದಾದ್ಯಂತ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಅರೆಸೇನಾ ಪಡೆಗಳ ಸಿಬ್ಬಂದಿ ಮತ್ತು ಸೈನಿಕರ ಸಂಖ್ಯೆಯನ್ನೂ ಹೆಚ್ಚಿಸಲಾಗಿತ್ತು. ಈ ಕಾರಣದಿಂದ 2019ರಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಹೆಚ್ಚುವರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡ ಬೆನ್ನಲ್ಲೇ ಭಯೋತ್ಪಾದನಾ ಕೃತ್ಯಗಳ ಸಂಖ್ಯೆ ಏರಿಕೆಯಾಗಿತ್ತು.

ವಿಶೇಷ ಸ್ಥಾನದ ಹಿನ್ನೋಟ

1947: ಜಮ್ಮು ಮತ್ತು ಕಾಶ್ಮೀರದ ಕೊನೆಯ ರಾಜ ಹರಿಸಿಂಗ್ ಅವರು 1947 ಅಕ್ಟೋಬರ್ 26ರಂದು ಭಾರತದೊಂದಿಗೆ ಸೇರಿಕೊಳ್ಳುವ, ವಿಲೀನ ಸನ್ನದಿಗೆ ಸಹಿ ಹಾಕಿದರು. ವಿದೇಶಾಂಗ ವ್ಯವಹಾರ, ರಕ್ಷಣೆ ಹಾಗೂ ಸಂವಹನ– ಈ ಮೂರು ವಿಷಯಗಳಿಗೆ ಸಂಬಂಧಿಸಿ ಭಾರತ ಸರ್ಕಾರ ನಿರ್ಧಾರ ಕೈಗೊಳ್ಳಬಹುದು ಎಂದು ಅವರು ಒಪ್ಪಿಗೆ ನೀಡಿದರು. ಆ ಮೂಲಕ ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಲು ಒಪ್ಪಿಕೊಳ್ಳಲಾಗಿತ್ತು.

1950: ಜನವರಿ 26ರಂದು ಭಾರತದ ಸಂವಿಧಾನವು ಜಾರಿಯಾಯಿತು. ವಿಶೇಷ ಸ್ಥಾನವನ್ನು ಸಂವಿಧಾನದ 370ನೇ ವಿಧಿಯಲ್ಲಿ ವಿವರಿಸಲಾಯಿತು. ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಪ್ರಥಮ ಬಾರಿಗೆ ರಾಷ್ಟ್ರಪತಿ ಅವರು ಸಾಂವಿಧಾನಿಕ ಆದೇಶವನ್ನು ಹೊರಡಿಸಿದರು. ಆ ಮೂಲಕ ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಲಾಯಿತು.

1952: ಜಮ್ಮು–ಕಾಶ್ಮೀರ ಸರ್ಕಾರ ಹಾಗೂ ಭಾರತ ಸರ್ಕಾರದೊಂದಿಗೆ ‘ದೆಹಲಿ ಒಪ್ಪಂದ’ ಏರ್ಪಟ್ಟಿತ್ತು. ರಾಜ್ಯ ಮತ್ತು ಸಮವರ್ತಿ ಪಟ್ಟಿಯಲ್ಲಿ ಇಲ್ಲದ ವಿಚಾರಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಕಾಯ್ದೆ ರೂಪಿಸಬಹುದು. ಆದರೆ, ಈ ಪಟ್ಟಿಗಳಲ್ಲಿ ಇಲ್ಲದ ವಿಚಾರಗಳ ಬಗೆಗಿನ ತೀರ್ಮಾನಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವೇ ತೆಗೆದುಕೊಳ್ಳುವ ಅವಕಾಶವನ್ನು ವಿಧಿ 248 (ಉಳಿಕೆ ಅಧಿಕಾರ) ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಯಿತು. ಈ ವಿಷಯವನ್ನೇ ‘ದೆಹಲಿ ಒಪ್ಪಂದ’ ಒಳಗೊಂಡಿದೆ.

1954: ದೆಹಲಿ ಒಪ್ಪಂದವನ್ನು ಜಾರಿ ಮಾಡಲು 1954ರಲ್ಲಿ ರಾಷ್ಟ್ರಪತಿ ಅವರು ಸಾಂವಿಧಾನಿಕ ಆದೇಶವನ್ನು ಹೊರಡಿಸಿದರು.

1956: ಜಮ್ಮು ಮತ್ತು ಕಾಶ್ಮೀರದ ಸಂವಿಧಾನವು ಜಾರಿಗೆ ಬಂದಿತು

1962: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಸಾಂವಿಧಾನಿಕ ಅವಕಾಶಗಳಿಗೆ ತಿದ್ದುಪಡಿ ತರುವ ವ್ಯಾಪಕ ಅಧಿಕಾರವು ರಾಷ್ಟ್ರಪತಿಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತು.

1968: ಸಂವಿಧಾನದ 370ನೇ ವಿಧಿಯು ಶಾಶ್ವತ ಸ್ವರೂಪದ್ದು ಎಂದು ಸುಪ್ರೀಂ ಕೋರ್ಟ್ ಹೇಳಿತು

2016: ಜಮ್ಮು– ಕಾಶ್ಮೀರದ ಸಂವಿಧಾನ ಸಭೆಯ ಶಿಫಾರಸಿನ ಮೇಲೆಯೇ 370ನೇ ವಿಧಿಯನ್ನು ರದ್ದುಗೊಳಿಸಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿತು. ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಸಭೆಯು 1957ರಲ್ಲಿಯೇ ವಿಸರ್ಜನೆಗೊಂಡಿದೆ.

2018ರ ಡಿಸೆಂಬರ್: ಸಂವಿಧಾನದ 356ನೇ ವಿಧಿ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿಕೊಂಡು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು.

2019 ಆಗಸ್ಟ್ 5: ರಾಷ್ಟ್ರಪತಿ ಆದೇಶದ ಮೂಲಕ ‘ಸಂವಿಧಾನ ಸಭೆ’ಯ ವ್ಯಾಖ್ಯಾನಕ್ಕೆ ತಿದ್ದುಪಡಿ ತರಲಾಯಿತು. ಆ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲಾಯಿತು.

2019 ಆಗಸ್ಟ್ 9: ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಲಾಯಿತು.

2019 ಆಗಸ್ಟ್ 28: ರಾಷ್ಟ್ರಪತಿ ಅವರ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ರವಾನಿಸಲಾಯಿತು.

2020 ಮಾರ್ಚ್ 2: ಈ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸಾಂವಿಧಾನಿಕ ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು.

2022 ಏಪ್ರಿಲ್ 25: ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯ ನಡೆಯುತ್ತಿದೆ. ಆದ ಕಾರಣ 370ನೇ ವಿಧಿ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರೊಬ್ಬರು ಸುಪ್ರೀಂ ಕೋರ್ಟ್ ಅನ್ನು ಕೋರಿದರು. ಈ ಕಾರಣಕ್ಕಾಗಿ ಬೇಸಿಗೆ ರಜೆ ಬಳಿಕ ಎಲ್ಲ ಅರ್ಜಿಗಳ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿತು.

2023 ಜುಲೈ 3: ಐವರು ನ್ಯಾಯಮೂರ್ತಿಗಳ ಪೀಠದ ಮುಂದೆ ಈ ಎಲ್ಲಾ ಅರ್ಜಿಗಳು ಬಂದವು

2023 ಆಗಸ್ಟ್ 2: ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿತು.

2023 ಸೆಪ್ಟೆಂಬರ್ 5: 23 ಅರ್ಜಿಗಳ ವಿಚಾರಣೆಯನ್ನು 16 ದಿನ ನಡೆಸಿದ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತು

2023 ಡಿಸೆಂಬರ್ 11: ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು.

ಆಧಾರ: ಪಿಟಿಐ, ಸಂವಿಧಾನದ 370ನೇ ವಿಧಿ, ಜಮ್ಮು–ಕಾಶ್ಮೀರ ಮರುರಚನೆ ಕಾಯ್ದೆ–2019, ನ್ಯಾಷನಲ್ ಆರ್ಕೈವ್ ಆಫ್ ಇಂಡಿಯಾದ ದಾಖಲಾತಿಗಳು, ಸಂವಿಧಾನ ರಚನಾ ಸಭೆಯ ಚರ್ಚೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.