ಹತ್ತು ವರ್ಷಗಳ ಸರಾಸರಿ ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿ ಅಂತರ್ಜಲದ ಪ್ರಮಾಣ ಗಮನಾರ್ಹವಾಗಿ ಇಳಿಕೆಯಾಗಿದೆ
– ಕೆ.ಜಿ.ಸೌಮ್ಯಾ ಹೆಚ್ಚುವರಿ ಪ್ರಭಾರ ಹಿರಿಯ ಭೂವಿಜ್ಞಾನಿ ಅಂತರ್ಜಲ ಕಚೇರಿ ಕೊಡಗು ಜಿಲ್ಲೆ
ಅಂತರ್ಜಲವು ಸಿಕ್ಕವರಿಗೆ ಸೀರುಂಡೆ ಎಂಬಂತಾಗಿರುವುದರಿಂದಲೇ ಪಾತಾಳಕ್ಕೆ ಕುಸಿಯುತ್ತಿದೆ. ಹೀಗಿದ್ದರೂ ಅದೇ ನಮ್ಮ ಕೊನೆಯ ನೆಮ್ಮದಿಯ ತಾಣ. ಅತ್ಯಂತ ಕಡಿಮೆ ಅಂತರ್ಜಲ ಮಟ್ಟ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆದರೆ ಅತಿವೃಷ್ಟಿಯನ್ನು ಹಿಡಿದಿಟ್ಟುಕೊಳ್ಳುವ ಮತ್ತು ಅನಾವೃಷ್ಟಿಯನ್ನು ಸಹಿಸಿಕೊಳ್ಳುವ ಯೋಜನೆಯೇ ನಮ್ಮಲ್ಲಿಲ್ಲ. ‘ಹರ್ ಘರ್ ಜಲ್’ ಎಂದು ಮನೆ ಮನೆಗೆ ನಲ್ಲಿ ಹಾಕಿಸುತ್ತಿರುವವರು ನೀರನ್ನು ಎಲ್ಲಿಂದ ತರುವುದು ಎಂದು ಯೋಚಿಸುತ್ತಿಲ್ಲ. ಅಂತರ್ಜಲ ಬಳಕೆ ನಿಯಂತ್ರಣಕ್ಕೆ ಕಾನೂನು ತರಲು ಸರ್ಕಾರಗಳು ಇಚ್ಛಾಶಕ್ತಿ ತೋರುವುದಷ್ಟೇ ಉಳಿದಿರುವ ದಾರಿ.
–ಯು.ಎನ್.ರವಿಕುಮಾರ್, ಪರಿಸರ ತಜ್ಞ
ಭೂಮಿ ಮೇಲಿನ ಎಲ್ಲ ಬಗೆಯ ಜಲಮೂಲಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಅವೈಜ್ಞಾನಿಕ ಅಭಿವೃದ್ಧಿಯಿಂದ ಹಳ್ಳ ನದಿ ಜಾಲಗಳ ಕೊಂಡಿ ಕಳಚಿದ್ದು ಜಲಾನಯನ ಪ್ರದೇಶ ಕುಗ್ಗಿದೆ. ಭೂಮಿ ಮೇಲಿನ ಸ್ವಾಭಾವಿಕ ಹೊದಿಕೆ ತೆರವುಗೊಳಿಸಿ ಕಾಂಕ್ರೀಟ್ ಮುಚ್ಚಿಗೆ ಮಾಡುವುದು ಹಾಗೂ ಕಾಡು ನಾಶಗೊಳಿಸಿ ಪ್ಲಾಂಟೇಶನ್ ಬೆಳೆಸುವುದು ಅಂತರ್ಜಲ ಮರುಪೂರಣೆಗೆ ದೊಡ್ಡ ಅಡ್ಡಿ. ನೀರು ಆಳಕ್ಕಿಳಿಯುವ ಮೊದಲೇ ಬಳಕೆಯಾಗುತ್ತಿರುವುದು ಮತ್ತೊಂದು ದುರಂತ. ಜಲಾನಯನ ಪ್ರದೇಶಗಳ ರಕ್ಷಣೆಯಾಗಬೇಕು.