ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Ghee | ತುಪ್ಪದಲ್ಲಿರುವುದು ಆರೋಗ್ಯಕರ ಕೊಬ್ಬಿನಾಂಶ: ಪ್ರಯೋಜನಗಳು ಹಲವು

ಡಾ. ಭಾವನಾ ಶರ್ಮಾ
Published 28 ಜೂನ್ 2024, 6:17 IST
Last Updated 28 ಜೂನ್ 2024, 6:17 IST
ಅಕ್ಷರ ಗಾತ್ರ

ಸಾಕಷ್ಟು ಜನರು ತುಪ್ಪ ಸೇವನೆ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆ ಹೊಂದಿದ್ದಾರೆ, ತುಪ್ಪವು ಕೊಬ್ಬಿನಾಂಶದಿಂದ ಕೂಡಿದ್ದು, ಇದರ ಸೇವನೆಯಿಂದ ದೇಹದಲ್ಲಿ ಕೊಬ್ಬು (ಫ್ಯಾಟ್‌) ಹೆಚ್ಚಳವಾಗುತ್ತದೆ ಎಂದು. ಅದರಲ್ಲೂ ದೇಹದ ಆರೋಗ್ಯ ಹಾಗೂ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವವರೇ ತುಪ್ಪದಿಂದ ದೂರವಾಗಿದ್ದಾರೆ. ಆದರೆ, ತುಪ್ಪ ಸೇವನೆ ನಮ್ಮ ದೇಹದ ಆರೋಗ್ಯ ಹಾಗೂ ತ್ವಚೆಯನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ ಎಂಬುದನ್ನೇ ತಿಳಿದಿಲ್ಲ.

ತುಪ್ಪ ರುಚಿಯಲ್ಲಿ ಎಷ್ಟು ಅತ್ಯುತ್ತಮವೋ, ಆರೋಗ್ಯ ಕಾಪಾಡುವಿಕೆಯಲ್ಲೂ ಸಹ ಅಷ್ಟೇ ಉತ್ತಮವಾಗಿದೆ. ಮಕ್ಕಳಿಂದ ಹಿಡಿದು ಇಳಿವಯಸ್ಸಿನವರೂ ಸಹ ತುಪ್ಪ ಸೇವನೆ ಮಾಡುವುದು ಅತ್ಯವಶ್ಯಕ. ಆದರೆ, ತುಪ್ಪದ ಗುಣಮಟ್ಟ ಹಾಗೂ ಪ್ರಮಾಣವನ್ನು ನಿರ್ಧರಿಸಿಕೊಂಡು ಸೇವನೆ ಮಾಡುವುದು ಹೆಚ್ಚು ಸೂಕ್ತ.

ತುಪ್ಪ ಸೇವನೆಯಿಂದಾಗುವ ಆರೋಗ್ಯದ ಪ್ರಯೋಜನಗಳೇನು?

ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿನಾಂಶವಿದೆ. ಇದು ಹೃದಯದ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ಜೊತೆಗೆ, ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಕೀಲುಗಳ ಆರೋಗ್ಯ ಕಾಪಾಡಲು ಉತ್ತಮ ಮನೆ ಮದ್ದು. ತುಪ್ಪದ ನಿಯಮಿತ ಸೇವನೆಯಿಂದ ಕೀಲುಗಳ ಬಿಗಿತ, ಕೀಲು ನೋವು ಸಹ ನಿವಾರಣೆಯಾಗಲಿದೆ. ತುಪ್ಪವು ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲ ಒಳಗೊಂಡಿದ್ದು, ಇದು ನಮ್ಮ ಜೀವಕೋಶಗಳನ್ನು ಕಾಪಾಡಿಕೊಳ್ಳಲು ನೆರವು ನೀಡಲಿದೆ. ಇನ್ನು, ತುಪ್ಪವು ಬ್ಯುಟರಿಕ್ ಆಮ್ಲ ಹೊಂದಿದ್ದು, ಕರುಳಿನಲ್ಲಿ ಪ್ರತಿರಕ್ಷಣಾ ಕೋಶಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ, ಜೊತೆಗೆ ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಸಹ ಬಲಪಡಿಸಲಿದೆ.

ಆಯುರ್ವೇದದ ಪ್ರಕಾರ, ತುಪ್ಪವು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸುವ ಮೂಲಕ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಹೆಚ್ಚಾಗಿ ಗಿಡಮೂಲಿಕೆಗಳ ಔಷಧಿಗಳ ತಯಾರಿಕೆಗೆ ಬಳಸಲಾಗುತ್ತದೆ. ಇದು ದೇಹದ ಪ್ರಮುಖ ಸಾರವನ್ನು ವೃದ್ಧಿಸಿ, ರೋಗಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ತುಪ್ಪವು ಅಗತ್ಯ ಎ, ಡಿ, ಇ ಮತ್ತು ಕೆ ವಿಟಮಿನ್‌ಗಳನ್ನು ಹೊಂದಿದೆ. ಹಾಗೆಯೇ ಖನಿಜಾಂಶಗಳು, ಕ್ಯಾಲ್ಸಿಯಂ, ಫಾಸ್ಫರಸ್ ಅನ್ನು ಸಹ ಒಳಗೊಂಡಿದೆ.

ತ್ವಚೆಗೂ ತುಪ್ಪ ಸೈ...

ಕೇವಲ ಆರೋಗ್ಯವಷ್ಟೇ ಅಲ್ಲ, ನಮ್ಮ ತ್ವಚೆ ಕಾಪಾಡುವಲ್ಲಿಯೂ ತುಪ್ಪ ಪ್ರಮುಖ ಪಾತ್ರವಹಿಸಿದೆ. ತುಪ್ಪದಲ್ಲಿ ಸಾಕಷ್ಟು ಮಾಯಿಶ್ಚರೈಸಿಂಗ್‌ ಗುಣವಿದ್ದು, ಇದರ ಸೇವನೆಯಿಂದ ಚರ್ಮದಲ್ಲಿ ಮಾಯಿಶ್ಚರೈಸಿಂಗ್‌ ಉಳಿದುಕೊಳ್ಳಲಿದೆ, ಚರ್ಮ ಒಣಗುವುದು, ಬಿರುಕು ಬಿಡುವುದು ಇದೆಲ್ಲವೂ ಆಗುವುದಿಲ್ಲ. ಇನ್ನು, ಕೂದಲಿನ ಆರೈಕೆಯಲ್ಲೂ ಸಾಕಷ್ಟು ಪ್ರಯೋಜನವನ್ನು ಒಳಗೊಂಡಿದೆ.

ಸೇವನೆಯಲ್ಲಿ ಮಿತಿ ಇರಲಿ

ತುಪ್ಪ ಆರೋಗ್ಯಕ್ಕೆ ಒಳ್ಳೆಯದೇ ಆದರೆ, ಅದರ ನಿಯಮಿತ ಸೇವನೆಯಿಂದ ಮಾತ್ರ. ಹೆಚ್ಚು ಸೇವಿಸಿದರೆ ಅಮೃತವೂ ವಿಷವೆಂಬಂತೆ, ತುಪ್ಪವನ್ನೂ ಸಹ ಅಗತ್ಯಕ್ಕಿಂತ ಹೆಚ್ಚಾಗಿ ಸೇವನೆ ಮಾಡಿದರೆ ಅದರಿಂದ ಆರೋಗ್ಯದ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಊಟದ ಸಮಯದಲ್ಲಿ ಊಟದ ಪ್ರಮಾಣಕ್ಕೆ ಅನುಗುಣವಾಗಿ ತುಪ್ಪವನ್ನು ಬಳಸಬೇಕು. ಜೊತೆಗೆ, ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಒಳ್ಳೆಯದೆ. ದಿನಕ್ಕೆ ಒಂದರಿಂದ ಎರಡು ಚಮಚದಷ್ಟು ತುಪ್ಪ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದನ್ನೂ ಮೀರಿದರೆ, ಕೊಲೆಸ್ಟ್ರಾಲ್‌ ಆಗಿ ಪರಿವರ್ತನೆಗೊಳ್ಳಬಹುದು.

ತುಪ್ಪದ ಆಯ್ಕೆ ಬಗ್ಗೆ ಗಮನವಿರಲಿ

ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ಹಾಗೂ ಬ್ರಾಂಡ್‌ನ ತುಪ್ಪಗಳು ಲಭ್ಯವಿದೆ. ಆದರೆ, ಎಲ್ಲವೂ ತಾಜಾ ಹಾಗೂ ಶುದ್ಧ ತುಪ್ಪವಾಗಿರುವುದಿಲ್ಲ. ಮನೆಯಲ್ಲಿ ಮಾಡಿದ ತುಪ್ಪವೇ ಹೆಚ್ಚು ಶ್ರೇಷ್ಠ ಮತ್ತು ಆರೋಗ್ಯಕರ.

ಲೇಖಕರು: ಡಾ, ಭಾವನಾ ಶರ್ಮಾ, ಐಟಿಸಿ ಲಿಮಿಟೆಡ್‌ನ ಪೌಷ್ಟಿಕಾಂಶ ವಿಜ್ಞಾನ ವಿಭಾಗದ ಮುಖ್ಯಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT