ಶೂದ್ರಕನ 'ಮೃಚ್ಛಕಟಿಕ' ನಾಟಕದ ಶ್ಲೋಕವೊಂದು ಹೀಗಿದೆ:

ಯಥೈವ ಪುಷ್ಪಮ್ ಪ್ರಥಮಂ

ವಿಕಾಸೇ ಸಮೇತ್ಯ ಪಾತುಂ ಮಧುಪಾಃ ಪತಂತಿ|

ಏವಂ ಮನುಷ್ಯಸ್ಯ

ವಿಪತ್ತಿ ಕಾಲೇ ಚಿದ್ರೇಶ್ವನರ್ಥಾ ಬಹುಳೀ ಭವಂತಿ ||

'ಮೊದಲು ಹೂ ಅರಳಿದಾಗ ದುಂಬಿಗಳು ಮಕರಂದವನ್ನು ಕುಡಿಯಲು ಒಟ್ಟಾಗಿ ಬಂದು ಮುಗಿ ಬೀಳುತ್ತವೆ. ಅದೇ ರೀತಿಯಲ್ಲಿ ಮನುಷ್ಯನ ವಿಪತ್ತಿನ ಕಾಲದಲ್ಲಿ ಅವಕಾಶ ಸಿಕ್ಕಿತೆಂದು ಒಂದರ ಹಿಂದೊಂದರಂತೆ ಕಷ್ಟಗಳು ಬಂದೊದಗುತ್ತವೆ'. ಇದು ಈ ಶ್ಲೋಕದ ಭಾವಾರ್ಥ.

ಅಂತೆಯೇ ಸುಖಕ್ಕೆ ಹಿಗ್ಗಿ ಕಷ್ಟಕ್ಕೆ ಕುಗ್ಗುವುದು ಮನುಷ್ಯನ ಸಹಜ ಗುಣವೇ ಆದರೂ ಕಷ್ಟಗಳು ಸಾಲು ಸಾಲಾಗಿ ಬಂದು ಕೈ ಕೈ ಮಿಲಾಯಿಸಿದಾಗ ಹತಾಶರಾಗಿ ಮನೋಕ್ಲೇಶದಿಂದ ನರಳುವ ಸ್ಥಿತಿ ತಲುಪಿ ಎಂತಹ ಧೈರ್ಯವಂತರೂ ಅಧೈರ್ಯರಾಗಿ ನೆನೆಗುದಿ ಅನುಭವಿಸುವಂತಾಗುವುದು ಅಷ್ಟೇ ಸ್ವಾಭಾವಿಕ. ಅದರಲ್ಲೂ ನೋವು–ನಲಿವಿನ ನಡುವೆಯೇ ಸ್ವಂತಕ್ಕೊಂದು ಗೂಡು ಕಟ್ಟಿ ಪ್ರೀತಿ ವಾತ್ಸಲ್ಯಗಳೆಂಬ ನೀರೆರೆದು ಪೋಷಿಸಿ ಬೆಳೆಸಿದ ಮಕ್ಕಳು ರೆಕ್ಕೆ ಬಲಿತು ಹಾರಿಹೋದಾಗಲೋ ಅಥವಾ ಅಂದುಕೊಂಡದ್ದೆಲ್ಲವೂ ಆಗದೇ ಹೋದಾಗ ನಿರಾಶೆಯ ಕೂಪಕ್ಕೆ ಜಾರಿ ವೇದನೆ ಅನುಭವಿಸುವುದು ಇಂದಿನ ಯಾಂತ್ರೀಕೃತ ಆಧುನಿಕ ಜಗದ ಸಾಮಾನ್ಯ ದೃಶ್ಯ. ಇನ್ನು ಎಲ್ಲರೂ ಅನುಭವಿಸಲೇಬೇಕಾದ ಜೀವನಸಂಧ್ಯೆಯ ಈ ಹಂತವಂತೂ ಅಸಹನೀಯ. ಮನವೆಂಬ ಮರ್ಕಟ ಸೂಕ್ಷ್ಮವಾಗಿ ಖೇದಕ್ಕೊಳಗಾಗಿ ಶೂನ್ಯಭಾವದಿಂದ ನರಳುವುದು ಈಗಲೇ.

ಆದರೆ ನಾವೆಂದುಕೊಂಡಂತೆ ಜೀವನ ಬರೀ ಹೂವಿನ ಹಾಸಿಗೆಯಲ್ಲ; ಇಲ್ಲಿ ಏಳುಬೀಳುಗಳು ಇದ್ದದ್ದೇ. ಇದೊಂದು ಅರಿವೆಗೆ ಸಿಗದ ಪಯಣವಾದ್ದರಿಂದ ಮುಂದಿನ ಆಗುಹೋಗುಗಳನ್ನು ಉಹಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗಿದ್ದರೂ ಕೆಲವರು ಮುಂದಿನ ಜೀವನದ ಬಗ್ಗೆ ನಿಖರತೆಯಿಂದಿರುತ್ತಾರೆ. ಮುಂದೆ ತನ್ನ ಜೀವನ ಹೀಗೇ ಇರಬೇಕು, ತಾನೇನಾಗಬೇಕು – ಎಂಬುದರ ಕಲ್ಪನೆಯ ಕೂಸಾಗಿ ಆ ನಿಟ್ಟಿನಲ್ಲೇ ಬೆಳೆದು ಅದಕ್ಕಾಗಿ ಶಕ್ತಿಮೀರಿ ಶ್ರಮಿಸುತ್ತಾರೆ. ಜೀವನದಲ್ಲೊಂದು ಗುರಿಯಿಟ್ಟುಕೊಂಡು ಯೋಜನೆಯ ಪ್ರಕಾರ ಪ್ರಯತ್ನಿಸುವುದು ಸಮಂಜಸವಾದರೂ ಅಂದುಕೊಂಡದ್ದೆಲ್ಲವನ್ನೂ ಹೊಂದುವುದು ಕಷ್ಟ; ಮತ್ತದು ಅಸಾಧ್ಯವೇ ಸರಿ. ಹಾಗೇನಾದರೂ ಆದಲ್ಲಿ ಅಂತಹ ಸಂದರ್ಭದಲ್ಲಿ ಹೆಚ್ಚಿನವರು ಹೊಂದಾಣಿಕೆ ಸೂತ್ರಕ್ಕೆ ಬದ್ಧರಾಗಿ ಬಂದದ್ದನ್ನು ಒಪ್ಪಿಕೊಂಡು ಸಾಗುತ್ತಾರೆ. ತಮ್ಮ ಯೋಗ್ಯತೆಗೆ ತಕ್ಕಂತೆ ಅಥವಾ ಯೋಗ್ಯತೆಗೂ ಮೀರಿದ್ದನ್ನು ಪಡೆಯಲು ಕೆಲವರಷ್ಟೇ ಸಮರ್ಥರಾದಲ್ಲಿ ಇನ್ನು ಕೆಲವರು ಯೋಗ್ಯತೆಯಿದ್ದರೂ ತಕ್ಕ ಪ್ರತಿಫಲ ಹೊಂದಲು ಅಸಮರ್ಥರಾಗಿರುತ್ತಾರೆ. ಹೀಗೇಕೆ ಎಂಬ ಜಿಜ್ಞಾಸೆ ಕಾಡಿದಲ್ಲಿ ತರ್ಕಿಸುವುದು ಕಷ್ಟ. ಆಗ ‘ನಾನು ಪಡೆದುಕೊಂಡು ಬಂದದ್ದೇ ಇಷ್ಟು ಎಂದೋ’; ‘ಇದು ವಿಧಿಲಿಖಿತ’ ಅಥವಾ ‘ಇದೇ ನನ್ನ ಹಣೆಬರಹ’ ಎನ್ನುವ ಬಲವಂತದ ಸಮಾಧಾನ ಸಹಾಯಕ್ಕೆ ಬರುತ್ತದೆ. ಮೇಲಾಗಿ ಈ ರೀತಿ ಸಮಜಾಯಿಸಿಕೊಂಡಲ್ಲಿ ಮನಕ್ಕಾಗುವ ಕ್ಲೇಶದ ತೀವ್ರತೆಯಿಂದ ಸದ್ಯಕ್ಕಾದರೂ ಪಾರಾಗಬಹುದು.

’ಇನ್ನೇನು ಮತ್ತೇನು ಗತಿಯೆಂದು ಬೆದರದಿರು
ನಿನ್ನ ಕೈಯೊಳಗಿಹುದೇ ವಿಧಿಯ ಲೆಕ್ಕಣಿಕೆ?’

ಜೀವನಸಾರವನ್ನು ಸರಳ ರೀತಿಯಲ್ಲಿ ಪ್ರತಿಪಾದಿಸುವ ಡಿ. ವಿ. ಗುಂಡಪ್ಪನವರ 'ಮಂಕುತಿಮ್ಮನ ಕಗ್ಗ'ದ ಈ ಸಾಲುಗಳಿಗೆ ಕಷ್ಟನಷ್ಟಗಳಿಂದ ಕುಗ್ಗಿ ಹಿಮ್ಮೆಟ್ಟ ಮನವನ್ನು ಸಂತೈಸಿ ಹುರಿದುಂಬಿಸುವ ದಿವ್ಯಶಕ್ತಿಯಿದೆ. ಪ್ರಸಿದ್ಧ ನಾಟಕಕಾರ ವಿಲಿಯಂ ಶೇಕ್ಸ್‌ಪಿಯರ್‌ನ ‘ಜೀವನವೇ ಒಂದು ನಾಟಕರಂಗ; ಅದರಲ್ಲಿ ನಟಿಸುವ ಪಾತ್ರಧಾರಿಗಳು ನಾವಷ್ಟೇ’ ಎಂಬ ಮಾತಿನಲ್ಲಿಯೂ ಜೀವನಸಾರ ಅಡಗಿದೆ. ನಮ್ಮ ಪಾಲಿಗೆ ವಿಧಾತ ಏನನ್ನು ವಿಧಿಸಿ ಕಳಿಸಿರುತ್ತಾನೋ ಅದನ್ನು ನಟಿಸಿ ಅನುಭವಿಸಲೇಬೇಕು. ಇದರಿಂದ ವಿಮುಖರಾಗಲು ಆಗದು. ಹುಟ್ಟಿನಿಂದಲೇ ಪ್ರಾರಂಭವಾಗುವ ನಟನೆಯ ಈ ಪಯಣದಲ್ಲಿ ಕೆಲವೊಮ್ಮೆ ನಮ್ಮ ಮನೋಸ್ಥೈರ್ಯಕ್ಕೆ ಸವಾಲಾಗುವಂತಹ ಘಟನೆಗಳೂ ಎದುರಾಗುತ್ತವೆ. ಅವುಗಳನ್ನು ಬೇಡವೆಂದು ಅನುಭವಿಸದಿರಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಿ ಮುನ್ನಡೆಯಲೇಬೇಕು; ಹಾಗೆಯೇ ಮಾಡುತ್ತೇವೆ ಕೂಡ.

ಆನಂತರದಲ್ಲಿ ಇಷ್ಟಾದರೂ ಸಾಧಿಸಿದ್ದೇನೆ, ತಕ್ಕಮಟ್ಟಿಗೆ ಸುಖವಾಗಿದ್ದೇನೆ ಎಂದು ಹೆಮ್ಮೆ ಪಟ್ಟುಕೊಂಡರೂ ಕೆಲವೊಂದು ಸಂದರ್ಭದಲ್ಲಿ ಅದು ಕ್ಷಣಿಕವೆನ್ನಿಸಿ ಎಂದೋ ಘಟಿಸಿಹೋದ ಹಳೆಯ ಕಹಿನೆನಪುಗಳಲ್ಲೇ ಮುಳುಗಿ, ವೇದನೆಯನ್ನು ಪಡುವುದು ಹೆಚ್ಚಿನವರ ಜಾಯಮಾನ. ಹಾಗಾದಾಗ ಸಾಧನೆಗಳೆಲ್ಲಾ ಗೌಣವಾಗಿ, ಬೇಡದ ನೆನಪುಗಳ ಸುಳಿಯಲ್ಲಿ ಸಿಲುಕಿ ಸದಾ ಕೊರಗುತ್ತ ತಾವಷ್ಟೇ ಅಲ್ಲದೇ ಸುತ್ತಲಿನ ಪ್ರೀತಿಪಾತ್ರರು-ಒಡನಾಡಿಗಳನ್ನೆಲ್ಲಾ ಖಿನ್ನರಾಗಿಸಿಬಿಡುತ್ತಾರೆ. ಅಹಿತಕರ, ಹಳೆಯ ಘಟನೆಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತ ಸ್ವಮರುಕಪಡುತ್ತ ಕೊರಗುತ್ತಿರುವುದೇ ಇಂತಹವರ ಹುಟ್ಟುಗುಣ. ಸದಾ ಕೊರಗುವುದನ್ನೇ ಚಟವಾಗಿಸಿಕೊಂಡಲ್ಲಿ ಕೇಳುವವರೂ ಸಹ ಒಂದೆರಡು ಸಲ ಕೇಳಿಯಾರು; ಮರುಕ ತೋರಿ ಸಂತೈಸಿಯಾರು. ಆದರಿದು ನಿತ್ಯದ ಚಿತ್ರಣವಾದಾಗ ‘ಅಯ್ಯಪ್ಪ! ಕೊರಗಪ್ಪ ಬರುತ್ತಿದ್ದಾನೆ ಅವನ ಕೈಯಲ್ಲಿ ಸಿಕ್ಕರೆ ಮುಗಿಯಿತು ಕಥೆ’ ಎಂದುಕೊಂಡು ಭೂತದರ್ಶನವಾದಂತೆ ದೂರ ಸರಿಯುವವರೇ ಹೆಚ್ಚು. 'ಕೊರಗಬೇಡಿ ಎಂದು ಹೇಳುವುದು ಸುಲಭ; ಕಹಿ ಘಟನೆಗಳನ್ನು ಅನುಭವಿಸಿದವರಿಗಷ್ಟೇ ಗೊತ್ತು ಅದರ ತೀವ್ರತೆ’. ಇದು ಹೌದಾದರೂ ಅಂತಹ ಅಪ್ರಿಯ ಘಟನೆಗಳನ್ನು ಪ್ರಯತ್ನಪೂರ್ವಕವಾಗಿ ಮರೆಯುವುದರಲ್ಲಿಯೇ ಇದೆ ನಿಜವಾದ ಜಾಣತನ. ಮಾತ್ರವಲ್ಲ ಇದು ಅನಿವಾರ್ಯ ಕೂಡ.

ಕಹಿಘಟನೆಗಳು ಅದರಲ್ಲೂ ಸ್ವಜನರಿಂದಲೇ ನಿಂದನೆ, ದ್ರೋಹ, ಅಗೌರವಗಳಿಗೆ ತುತ್ತಾಗಿ ಮನಸ್ಸು ಘಾಸಿಗೊಂಡಿದ್ದಲ್ಲಿ ಅದನ್ನು ಮರೆಯುವುದು ಅತಿ ಕಷ್ಟ; ಆದರೆ ಆ ಕಹಿಯಿಂದ ಹೊರಬರುವುದು ಅಸಾಧ್ಯವೇನಲ್ಲ. ಅವುಗಳನ್ನು ಸ್ಮೃತಿಪಟಲದಿಂದ ಬೇರುಸಹಿತ ಕಿತ್ತೊಗೆಯಲು ಶ್ರಮಿಸಬೇಕಷ್ಟೇ. ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು. ’ಮನಸ್ಸಿದ್ದಲ್ಲಿ ಮಾರ್ಗ’ ಹೌದಲ್ಲವೇ? ಹಳೆಯ ಸಂಗತಿಗಳನ್ನೇ ಪದೇ ಪದೇ ಹೇಳಿಕೊಂಡು ಕೊರಗುತ್ತಿದ್ದಲ್ಲಿ ಅವು ನೆನಪಿನಾಳದಲ್ಲಿ ಬೇರೂರಿ ಖಿನ್ನತೆ, ನೋವು, ದುಃಖ ಹೆಚ್ಚಿ ಅಸಹಾಯಕತೆಯ ಸ್ಥಿತಿಯಲ್ಲಿ ನರಳುತ್ತಾ ಮನೋಕ್ಲೇಶ ಉಂಟಾಗಿ ಮನಸ್ಸು-ಶರೀರದ ಸ್ವಾಸ್ಥ್ಯ ಕೆಡುತ್ತದೆಯೇ ಹೊರತು ಕೊರಗಿಗೆ ಕಾರಣವಾದ ಘಟನೆಗಳು ಬದಲಾಗಲಾರವು. ಮತ್ತೆ ಮತ್ತೆ ಹೇಳಿಕೊಳ್ಳುತ್ತಾ ಅನುಭವಿಸುವುದು ಖಂಡಿತವಾಗಿಯೂ ಸಲ್ಲದು. ಕಷ್ಟ, ವೇದನೆಗಳನ್ನು ಆಪ್ತರಲ್ಲಿ ಹೇಳಿಕೊಂಡಲ್ಲಿ ಅವುಗಳ ತೀವ್ರತೆಯೇನೋ ತಗ್ಗುತ್ತದೆ ಆದರೆ ಅದನ್ನೇ ಚಟವಾಗಿಸಿಕೊಂಡಲ್ಲಿ ಬೇಡದ ನೆನಪುಗಳ ಹಿಡಿತದಿಂದ ಹೊರಬರಲಾಗದೇ ಖಿನ್ನತೆಗೆ ಜಾರುವುದು ಖಂಡಿತ. ಆದ್ದರಿಂದ ಸದಾ ಕೊರಗುತ್ತಾ ಹೊಸ ಸಮಸ್ಯೆಗಳ ಹುಟ್ಟಿಗೆ ಕಾರಣರಾಗುವುದು ಬೇಡ.

'ಮರೆವು' ನಮಗೆ ದೇವರಿತ್ತ ವರ. ಕಹಿನೆನಪುಗಳನ್ನು ಅಳಿಸಿಹಾಕಲು ಆಗದಿದ್ದರೂ ಖಂಡಿತವಾಗಿಯೂ ಮರೆಯಲೆತ್ನಿಸಬಹುದು. ನಮಗಿಂತಲೂ ಹೀನಸ್ಥಿತಿಯಲ್ಲಿರುವವರೊಡನೆ ನಮ್ಮ ಕಷ್ಟಗಳನ್ನು, ದುರಂತಗಳನ್ನು ತುಲನೆ ಮಾಡಿಕೊಂಡು ಸಮಾಧಾನಿಸಿಕೊಳ್ಳಬೇಕು. ಒಳ್ಳೆಯ ವಿಚಾರವಂತರಾಗಿ ಸಂತಸದಿಂದಿದ್ದು ಮನಸ್ಸಿಗೆ ಮುದನೀಡುವ ಹವ್ಯಾಸದಲ್ಲಿ ತೊಡಗಿಕೊಂಡು ಚಟುವಟಿಕೆಯಿಂದಿರುವತ್ತ ಗಮನ ಕೊಡಬೇಕು. 'ಈಗ ನಾನೇನಾಗಿದ್ದೇನೆ ಅದೇ ನನ್ನ ಸಾಧನೆ' – ಈ ಭಾವವನ್ನು ಬೆಳೆಸಿಕೊಂಡು, ಆತ್ಮವಿಶ್ವಾಸ-ಆತ್ಮಗೌರವದಿಂದ ಎಂತಹ ಪರಿಸ್ಥಿತಿಯನ್ನಾದರೂ ಎದುರಿಸುವೆನೆಂಬ ಛಾತಿಯನ್ನು ಬೆಳೆಸಿಕೊಳ್ಳಬೇಕು.

ಪ್ರತಿಯೊಂದು ಜೀವಿಯೂ ತನ್ನದೇ ಆದ ವಿಶೇಷ ಗುಣ–ಸ್ವಭಾವಗಳಿಂದ ಪ್ರತ್ಯೇಕ ಮಾತ್ರವೇ ಅಲ್ಲ, ಉತ್ತಮನೂ ಹೌದು. ಆ ವಿಶಿಷ್ಟ ಗುಣವನ್ನು ಗುರುತಿಸಿಕೊಂಡು ಅದನ್ನು ತನ್ನಲ್ಲಿಯೇ ಶಕ್ತಿಯುತವಾಗಿಸಲು ನಿಷ್ಠೆಯಿಂದ ಯತ್ನಿಸಿದಲ್ಲಿ ಖಂಡಿತವಾಗಿಯೂ ಜಯಶಾಲಿಗಳಾಗಬಹುದು. ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಕೊಳ್ಳಬೇಕು. ದೇವರ ನಾಮಸ್ಮರಣೆ, ಭಜನೆಗಳಲ್ಲಿ ತೊಡಗಿಕೊಂಡಲ್ಲಿ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ. ದೈನಂದಿನ ಏಕತಾನತೆಯಿಂದ ಹೊರಬರಲು ಆಗಾಗ ಶಕ್ತ್ಯಾನುಸಾರ ಪ್ರವಾಸ ಕೈಗೊಳ್ಳುವುದು; ಹೂಗಿಡಗಳನ್ನು ಬೆಳೆಸಿ ಪ್ರಕೃತಿಗೆ ಹತ್ತಿರವಾಗುವುದು ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯದು. ಸುಮಧುರ ಸಂಗೀತವನ್ನು ಆಲಿಸುವಿಕೆ; ಲಲಿತಕಲೆ ಮುಂತಾದ ಹವ್ಯಾಸಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಕಲಿಕೆಯಲ್ಲಿ ತೊಡಗಿಕೊಂಡಲ್ಲಿ ಜೀವನೋತ್ಸಾಹ ಚಿಗುರುವುದು ದಿಟ. ಹೊಸ ಹೊಸ ವಿಷಯಗಳನ್ನು ಕಲಿಯಲು ಎಂದಿಗೂ ಹಿಂಜರಿಕೆ ಬೇಡ. ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲ.

ಜೀವನವೇ ಒಂದು ಕಲಿಕಾ ಶಿಬಿರ; ಹಂತಹಂತದಲ್ಲೂ ಕಲಿಯುವುದು ಇದ್ದೇ ಇರುತ್ತದೆ. ನಾವೆಂದುಕೊಂಡಂತೆ ಎಲ್ಲವೂ ನಡೆಯದು; ಬಂದದ್ದನ್ನು ಬಂದಂತೆ ಸ್ವೀಕರಿಸುವ ದೃಷ್ಟಿಕೋನವನ್ನು ಬೆಳೆಸಿಕೊಂಡಲ್ಲಿ ಮನಸ್ಸಿಗಾವ ಖೇದವೂ ಇರದು. ಅವಮಾನ, ತಿರಸ್ಕಾರ, ವೈಫಲ್ಯಗಳಿಗೆ ಕುಗ್ಗದೇ ಕೊರಗು, ಋಣಾತ್ಮಕ ವಿಚಾರಗಳನ್ನು ಯೋಚಿಸುವುದನ್ನು, ಬಿಟ್ಟು ಬರಲಿರುವ ಸುಂದರವಾದ ನಾಳೆಗಳ ಕಲ್ಪನೆಯಲ್ಲಿ ಕಾರ್ಯೋನ್ಮುಖರಾದಲ್ಲಿ ಸುಖ, ಶಾಂತಿ, ನೆಮ್ಮದಿಗಳು ನಮ್ಮ ಅಡಿಯಾಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ; ಮಾತ್ರವಲ್ಲ ಯಶಸ್ಸೂ ದಕ್ಕುತ್ತದೆ. ಧನಾತ್ಮಕತೆಯಿಂದ ಜೀವನವನ್ನು ಎದುರಿಸುವ, ಅನುಭವಿಸುವ ಕಲೆ ಬೆಳೆಸಿಕೊಂಡಲ್ಲಿ ನಾವು ಸುಖದ ಅನುಭವದಿಂದ ವಂಚಿತರಾಗಲು ಸಾಧ್ಯವೇ ಇಲ್ಲ. ಇರುವಷ್ಟು ದಿನ ನಗುನಗುತ್ತಾ ಪರರನ್ನೂ ನಗಿಸುತ್ತಾ ಜೀವನವನ್ನು ಹಗುರವಾಗಿಸಿಕೊಳ್ಳೋಣ.

ಜೀವನವೇ ಒಂದು ಕಲಿಕಾ ಶಿಬಿರ; ಹಂತಹಂತದಲ್ಲೂ ಕಲಿಯುವುದು ಇದ್ದೇ ಇರುತ್ತದೆ. ನಾವೆಂದುಕೊಂಡಂತೆ ಎಲ್ಲವೂ ನಡೆಯದು; ಬಂದದ್ದನ್ನು ಬಂದಂತೆ ಸ್ವೀಕರಿಸುವ ದೃಷ್ಟಿಕೋನವನ್ನು ಬೆಳೆಸಿಕೊಂಡಲ್ಲಿ ಮನಸ್ಸಿಗಾವ ಖೇದವೂ ಇರದು.

'ಮರೆವು' ನಮಗೆ ದೇವರಿತ್ತ ವರ. ಕಹಿನೆನಪುಗಳನ್ನು ಅಳಿಸಿಹಾಕಲು ಆಗದಿದ್ದರೂ ಖಂಡಿತವಾಗಿಯೂ ಮರೆಯಲೆತ್ನಿಸಬಹುದು. ನಮಗಿಂತಲೂ ಹೀನಸ್ಥಿತಿಯಲ್ಲಿರುವವರೊಡನೆ ನಮ್ಮ ಕಷ್ಟಗಳನ್ನು, ದುರಂತಗಳನ್ನು ತುಲನೆ ಮಾಡಿಕೊಂಡು ಸಮಾಧಾನಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.