ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಮಾರುಕಟ್ಟೆ: ಷೇರು ಹೂಡಿಕೆಯಲ್ಲಿ ಜಾರಿ ಬೀಳದಿರಿ

Published : 14 ಜುಲೈ 2024, 21:52 IST
Last Updated : 14 ಜುಲೈ 2024, 21:52 IST
ಫಾಲೋ ಮಾಡಿ
Comments

ಷೇರು ಮಾರುಕಟ್ಟೆಗೆ ಮೊದಲ ಬಾರಿಗೆ ಪ್ರವೇಶ ಮಾಡುವ ಬಹುಪಾಲು ಮಂದಿ ಹಣ ಕಳೆದುಕೊಳ್ಳುತ್ತಾರೆ. ಮಾರುಕಟ್ಟೆ ಬಗ್ಗೆ ಸರಿಯಾದ ಅರಿವಿಲ್ಲದಿರುವುದೇ ಇದಕ್ಕೆ ಮೂಲ ಕಾರಣ. ಅರಿತು ಹೂಡಿಕೆ ಮಾಡಿದರೆ ಷೇರುಪೇಟೆ ಸಂಪತ್ತಿನ ಗಣಿಯಾಗುತ್ತದೆ. ಅಳತೆ ಅಂದಾಜಿಲ್ಲದ ಹೂಡಿಕೆ ಮಾಡಿ ದಿಢೀರ್ ಶ್ರೀಮಂತರಾಗಿ ಬಿಡಬೇಕು ಎಂದು ಆತುರಪಟ್ಟರೆ ನಿಮ್ಮ ಸಂಪತ್ತು ಅರಿವಿಗೆ ಬಾರದೆ ಕರಗಿಬಿಡುತ್ತದೆ. ಬನ್ನಿ, ಷೇರು ಹೂಡಿಕೆ ವೇಳೆ ಆಗುವ ಸಾಮಾನ್ಯ ತಪ್ಪುಗಳ ಬಗ್ಗೆ ಅರಿತು ಜಾಗೃತ ಹೂಡಿಕೆದಾರರಾಗೋಣ.


* ಇನ್ವೆಸ್ಟಿಂಗ್ ಮತ್ತು ಟ್ರೇಡಿಂಗ್‌‌ ವ್ಯತ್ಸಾಸ ಅರಿಯಿರಿ: 

ಷೇರುಪೇಟೆಯಲ್ಲಿ ಭವಿಷ್ಯದ ಬೆಳವಣಿಗೆಯ ನೋಟವಿರುವ ಕಂಪನಿಗಳನ್ನು ಅಧ್ಯಯನದ ಮೂಲಕ ಆಯ್ಕೆ ಮಾಡಬೇಕು. ಆ ನಿರ್ದಿಷ್ಟ ಕಂಪನಿಗಳ ಷೇರುಗಳಲ್ಲಿ ಹಣ ತೊಡಗಿಸಿ ಕೆಲ ವರ್ಷಗಳ ಕಾಲ ಮಾರುಕಟ್ಟೆ ಏರಿಳಿತಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸುಮ್ಮನಿರೋದು ಇನ್ವೆಸ್ಟಿಂಗ್. ಇಲ್ಲಿ ಹೂಡಿಕೆದಾರ ದೀರ್ಘಾವಧಿಯಲ್ಲಿ ಉತ್ತಮ ಲಾಭಗಳಿಸುವ ಉದ್ದೇಶ ಹೊಂದಿರುತ್ತಾನೆ. ಇನ್ವೆಸ್ಟಿಂಗ್‌ಗೆ ಪೂರ್ಣಾವಧಿ ಸಮಯ ಮೀಸಲಿಡಬೇಕಿಲ್ಲ. ಜೊತೆಗೆ ಇಲ್ಲಿ ಜಾಸ್ತಿ ರಿಸ್ಕ್ ಇರುವುದಿಲ್ಲ.

ಆದರೆ, ಮಾರುಕಟ್ಟೆ ಏಳಲಿ ಅಥವಾ ಬೀಳಲಿ ಟ್ರೇಡಿಂಗ್‌ನ ಮುಖ್ಯ ಉದ್ದೇಶ ಥಟ್ ಅಂತ ಲಾಭ ಗಳಿಸಲು ಪ್ರಯತ್ನಿಸೋದು. ಟ್ರೇಡಿಂಗ್ ಅನ್ನೋದು ಸೆಕೆಂಡ್‌, ನಿಮಿಷ
ಮತ್ತು ದಿನಗಳ ಲೆಕ್ಕದಲ್ಲಿ ನಡೆಯುತ್ತದೆ. ಇಲ್ಲಿ ರಿಸ್ಕ್ ಹೆಚ್ಚು. ಆದರೆ, ಹೂಡಿಕೆ ನಿರ್ಧಾರ ಸರಿಯಾದರೆ ಲಾಭದ ಸಾಧ್ಯತೆಯೂ ಜಾಸ್ತಿ. ವಾಸ್ತವದಲ್ಲಿ ಟ್ರೇಡಿಂಗ್‌ನಲ್ಲಿ ಬಹುಪಾಲು ಮಂದಿ ದುಡ್ಡು ಕಳೆದುಕೊಳ್ಳುತ್ತಾರೆ. ಟ್ರೇಡಿಂಗ್ ಅನ್ನೋ ಪದದ ಪರಿಚಯವೇ ಇಲ್ಲದೆ ಅನೇಕರು ಲಕ್ಷಾಂತರ ಹಣ ಕಳೆದುಕೊಂಡು ಕೈ ಸುಟ್ಟುಕೊಂಡಿರುವ ಸಾಕಷ್ಟು ನಿದರ್ಶನಗಳಿವೆ.‌

ಟ್ರೇಡಿಂಗ್ ಅನ್ನೋದು ಪರಿಣತರ ಆಟ. ಅದು ಸರಿಯಾಗಿ ಗೊತ್ತಿದ್ದರಷ್ಟೇ ಅದರ ಬಗ್ಗೆ ಯೋಚಿಸಬೇಕು. ಆದರೆ, ಹೂಡಿಕೆ ಅನ್ನೋದು ನಿಧಾನಗತಿಯ ನಿಶ್ಚಿತ ಓಟ. ಇಲ್ಲಿ ಪ್ರತಿಯೊಬ್ಬರೂ ಅರಿತು, ಕಲಿತು ಬಳಿಕ ಹೂಡಿಕೆ ಮಾಡಿದರೆ ಲಾಭದ ಸಿಹಿ ಕಾಣಬಹುದು.

* ತುರ್ತಿನ ಹಣದಲ್ಲಿ ಷೇರು ಖರೀದಿ, ಸಾಲ ಮಾಡಿ ಷೇರು ಹೂಡಿಕೆ: 

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕೆಲವರು ದಿಢೀರ್ ಶ್ರೀಮಂತರಾಗುವ ಹಗಲುಗನಸು ಕಾಣುತ್ತಾರೆ. ಮಕ್ಕಳ ಶಾಲಾ ಶುಲ್ಕಕ್ಕೆ ಕೂಡಿಟ್ಟಿರುವ ಹಣ, ಸಾಲ ಮರುಪಾವತಿಗೆ ಮೀಸಲಿಟ್ಟಿರುವ ನಗದು, ಇನ್ಶೂರೆನ್ಸ್ ಪ್ರೀಮಿಯಂಗಾಗಿ ಹೊಂದಿಸಿರುವ ಮೊತ್ತ, ತುರ್ತು ಅಗತ್ಯಗಳಿಗೆ ಕಾಯ್ದಿರಿಸಿರುವ ದುಡ್ಡನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲು ಮುಂದಾಗುತ್ತಾರೆ. ಇದು ಅತ್ಯಂತ ಅಪಾಯಕಾರಿ
ನಿರ್ಧಾರ. ಷೇರು ಹೂಡಿಕೆಯಲ್ಲಿ ರಿಸ್ಕ್ ಹೆಚ್ಚಿಗೆ ಇರುವ ಕಾರಣ ಲಾಭದ ಸಾಧ್ಯತೆ ಎಷ್ಟಿದೆಯೋ, ನಷ್ಟದ ಸಾಧ್ಯತೆಯೂ ಅಷ್ಟೇ ಇರುತ್ತದೆ ಎನ್ನುವುದನ್ನು ಮರೆಯಬಾರದು.

ತುರ್ತು ಅಗತ್ಯಕ್ಕೆ ಬೇಕಿರುವ ಹಣವನ್ನು ಉಳಿತಾಯ ಖಾತೆ, ಅಲ್ಪಾವಧಿ ಎಫ್‌.ಡಿ, ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಇಡುವುದು ಒಳಿತು. ಇನ್ನು ಶೇ 13ರಿಂದ ಶೇ 18ರ ವರೆಗೂ ಬಡ್ಡಿ ಇರುವ ವೈಯಕ್ತಿಕ ಸಾಲ ಪಡೆದು ಷೇರು ಹೂಡಿಕೆ ಮಾಡುವುದು ಸಹ ಮೂರ್ಖತನದ ನಿರ್ಧಾರವಾಗುತ್ತದೆ.

* ಯಾರೋ ಹೇಳಿದರು ಅಂತ ಹೂಡಿಕೆ ಮಾಡೋದು: 

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಮಾಡಿಕೊಂಡೆ
ಎಂದು ಕೆಲವರು ನನಗೆ ಹೇಳುತ್ತಾರೆ. ಆ ಕೂಡಲೇ ನಾನು ಅವರಿಗೆ ನೀವು ಯಾವ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಿದ್ದೀರಿ, ಅದರ ಬಗ್ಗೆ ಅಧ್ಯಯನ ಮಾಡಿದ್ದೀರಾ, ಆ ಕಂಪನಿಯ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ, ಈ ಹಿಂದೆ ಕಂಪನಿ ಎಷ್ಟು ಲಾಭ ಗಳಿಸಿತ್ತು, ಕಂಪನಿ ಯಾವ ವಲಯಕ್ಕೆ ಸೇರಿದ್ದು ಮತ್ತು ಯಾವ ಉತ್ಪನ್ನ- ಸೇವೆಯನ್ನು ಒದಗಿಸುತ್ತಿದೆ ಎಂದು ಪ್ರಶ್ನಿಸುತ್ತೇನೆ.

ಬಹುತೇಕರಿಗೆ ಆ ಕಂಪನಿಯ ಹೆಸರು ಬಿಟ್ಟರೆ ಮತ್ತೇನು ಗೊತ್ತಿರುವುದಿಲ್ಲ. ಹೀಗೆ ಪೂರ್ವಾಪರ ಅರಿಯದೆ ಯಾರೋ ಹೇಳಿದರು ಎಂಬ ಕಾರಣಕ್ಕೆ ಹೂಡಿಕೆ ಮಾಡಿದರೆ ಲಾಭಗಳಿಸುವುದಕ್ಕೆ ಹೇಗೆ ಸಾಧ್ಯ ಅಲ್ಲವೇ? ಜಗತ್ತಿನ ಶ್ರೇಷ್ಠ ಹೂಡಿಕೆದಾರ
ವಾರನ್ ಬಫೆಟ್ ಯಾವುದೇ ಷೇರಿನಲ್ಲಿ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಅಧ್ಯಯನ ಮಾಡುತ್ತಾರೆ. ಅವರ ಹಿಂದೆ ಒಂದು ತಜ್ಞರ ತಂಡವೇ ಇರುತ್ತದೆ. ಅಷ್ಟೆಲ್ಲಾ ಪರಿಣತಿ ಹೊಂದಿರುವವರೇ ಲೆಕ್ಕಾಚಾರ ಮಾಡಿ ಹೂಡಿಕೆ ಮಾಡುತ್ತಾರೆ ಅಂದರೆ, ನಾವು ಅಧ್ಯಯನ ಮಾಡದೆ ಷೇರಿನಲ್ಲಿ ಹೂಡಿಕೆ ಮಾಡೋದು ತಪ್ಪಲ್ಲವೇ?

* ಷೇರು ಹೂಡಿಕೆ ಮಾಡಿ ತಾಳ್ಮೆ ಕಳೆದುಕೊಳ್ಳುವುದು:

ಶ್ರೀಮಂತಿಕೆಯತ್ತ ನಿಧಾನಗತಿಯ ನಡಿಗೆಯೇ ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಅನುಸರಿಸಿದ ಮಾರ್ಗ. ಸಂಪತ್ತು ವೃದ್ಧಿಗೆ ಸಮಯ ಬೇಕು ಎನ್ನುವ ಸರಳ ಸತ್ಯ ನಮಗೆ ಗೊತ್ತಿರಬೇಕು.

ನೀವೇ ಒಂದು ಬ್ಯುಸಿನೆಸ್ ಅನ್ನು ಇವತ್ತು ಆರಂಭ ಮಾಡಿದ್ದೀರಿ ಅಂದರೆ, ಅದು ಲಾಭ ಗಳಿಸಿ ಉತ್ತಮ ಸ್ಥಿತಿಗೆ ಬರಲು ವರ್ಷಗಳೇ ಬೇಕು. ಆದರೆ, ಷೇರು ಖರೀದಿ ಮಾಡುವವರು ಮಾತ್ರ ಇವತ್ತು ಖರೀದಿ ಮಾಡಿದ ಷೇರು ನಾಳೆಯೇ ಹೆಚ್ಚು ಲಾಭ ಕೊಡಬೇಕು ಎಂದು ಬಯಸುತ್ತಾರೆ. ದಿಢೀರ್ ಲಾಭ ಸಿಗದಿದ್ದಾಗ ಆ ಷೇರುಗಳನ್ನು ಕೊಂಡ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುತ್ತಾರೆ. ಶೇ 90ರಷ್ಟು ರಿಟೇಲ್ ಹೂಡಿಕೆದಾರರು ಷೇರು ಹೂಡಿಕೆಯಲ್ಲಿ ನಷ್ಟ ಮಾಡಿಕೊಳ್ಳುವುದು ಹೀಗೆಯೇ.‌

* ಹಿಂದಿನ ಗಳಿಕೆ ಆಧಾರದಲ್ಲಿ ಭವಿಷ್ಯದ ಅಂದಾಜು:

‘ಇವತ್ತು ಹೂಡಿಕೆ ಮಾಡಿದವನು ನಿನ್ನೆ ಷೇರುಪೇಟೆಯಲ್ಲಿ ಉಂಟಾದ ಪ್ರಗತಿಯಿಂದ ಲಾಭ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ವಾರನ್ ಬಫೆಟ್ ಹೇಳುತ್ತಾರೆ. ಹೌದು
ಕಳೆದ 10 ವರ್ಷಗಳಲ್ಲಿ ಆ ಕಂಪನಿ ಇಷ್ಟು ಲಾಭಾಂಶ ಕೊಟ್ಟಿದೆ. ಮುಂದಿನ ಕೆಲ ವರ್ಷಗಳಲ್ಲಿ ಇಷ್ಟು ಲಾಭ ಸಿಗಬಹುದು ಎಂದು ನಾವು ಹಲವು ರೀತಿಯಲ್ಲಿ ಲೆಕ್ಕಾಚಾರ ಮಾಡಬಹುದು.

ಆದರೆ, ಈ ಹಿಂದೆ ಲಾಭ ಗಳಿಸಿರುವ ಕಂಪನಿ ಮುಂದೆ ಹೆಚ್ಚು ಲಾಭ ಗಳಿಸದೇ ಇರಬಹುದು. ಈವರೆಗೆ ಹೆಚ್ಚು ಲಾಭ ಕೊಡದ ಕಂಪನಿ ಮುಂದೆ ಉತ್ತಮ ಲಾಭಾಂಶ ನೀಡಬಹುದು. ಲಾಭದ ಲೆಕ್ಕಾಚಾರ ಕಂಪನಿಯ ಪ್ರಸ್ತುತ ಬೆಳವಣಿಗೆ ಮತ್ತು ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲು ಕಂಪನಿಯ ಬ್ಯಾಲೆನ್ಸ್ ಶೀಟ್ ನೋಡುವುದು ಮುಖ್ಯವಾಗುತ್ತದೆ. 

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಆರನೇ ವಾರವೂ ಗೂಳಿ ಓಟ

ಷೇರುಪೇಟೆಯಲ್ಲಿ ಗೂಳಿ ಆರ್ಭಟ ಜೋರಾಗಿದ್ದು ಸತತ ಆರು ವಾರಗಳಿಂದ ಸೂಚ್ಯಂಕಗಳು ಗಳಿಕೆಯ ಹಾದಿಯಲ್ಲಿವೆ. ಜುಲೈ 12ಕ್ಕೆ ಕೊನೆಗೊಂಡ ವಾರದಲ್ಲಿ ಷೇರು ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 80519 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.65ರಷ್ಟು ಗಳಿಸಿಕೊಂಡಿದೆ. 24502 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.73ರಷ್ಟು ಜಿಗಿದಿದೆ. ಬಜೆಟ್ ಮೇಲಿನ ನಿರೀಕ್ಷೆ ಅಮೆರಿಕದಲ್ಲಿ ಹಣದುಬ್ಬರ ಪ್ರಮಾಣ ಕುಂಠಿತ ಅಮೆರಿಕ ಫೆಡರಲ್ ರಿಸರ್ವ್‌ ಬ್ಯಾಂಕ್ ಮುಂಬರುವ ದಿನಗಳಲ್ಲಿ ಬಡ್ಡಿ ದರ ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಮಾಹಿತಿ ತಂತ್ರಜ್ಞಾನ ಕಂಪನಿಗಳ ತ್ರೈಮಾಸಿಕ ವರದಿಯಲ್ಲಿ ಸಕಾರಾತ್ಮಕತೆ ಸೇರಿ ಹಲವು ಅಂಶಗಳು ಮಾರುಕಟ್ಟೆಯ ಸಕಾರಾತ್ಮಕ ವಹಿವಾಟಿಗೆ ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ವಲಯ ಶೇ 2.63 ರಿಯಲ್ ಎಸ್ಟೇಟ್ ಶೇ 2.32 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.09 ವಾಹನ ಉತ್ಪಾದನೆ ಶೇ 1 ನಿಫ್ಟಿ ಬ್ಯಾಂಕ್ ಶೇ 0.72 ಮತ್ತು ನಿಫ್ಟಿ ಫೈನಾನ್ಸ್ ಶೇ 0.16 ರಷ್ಟು ಕುಸಿದಿವೆ.

ನಿಫ್ಟಿ ಎಫ್‌ಎಂಸಿಜಿ ಶೇ 3.56 ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 3.45 ಅನಿಲ ಮತ್ತು ತೈಲ ಶೇ 2.46 ಮಾಧ್ಯಮ ಶೇ 1.3 ಫಾರ್ಮಾ ಶೇ 0.78 ಎನರ್ಜಿ ಶೇ 0.76ರಷ್ಟು ಜಿಗಿತ ಕಂಡಿವೆ. ವಾರದ ಏರಿಕೆ–ಇಳಿಕೆ: ಒಎನ್‌ಜಿಸಿ ಶೇ 6.51 ಐಟಿಸಿ ಶೇ 5.85 ವಿಪ್ರೊ ಶೇ 4.68 ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಶೇ 4.61 ಬ್ರಿಟಾನಿಯಾ ಶೇ 4.44 ಟಿಸಿಎಸ್ ಶೇ 4.3 ಮಾರುತಿ ಸುಜುಕಿ ಶೇ 3.36 ಇನ್ಫೊಸಿಸ್ ಶೇ 3.93 ಗ್ರಾಸಿಮ್ ಇಂಡಸ್ಟ್ರೀಸ್ ಶೇ 3.37 ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 3.05 ಟೆಕ್ ಮಹೀಂದ್ರ ಶೇ 3.03 ಮತ್ತು ಹಿಂದುಸ್ತಾನ್‌ ಯೂನಿಲಿವರ್ ಶೇ 2.95‌ರಷ್ಟು ಗಳಿಸಿಕೊಂಡಿವೆ. ಮಹೀಂದ್ರ ಆ್ಯಂಡ್‌ ಮಹೀಂದ್ರ ಶೇ 6.19 ಟಾಟಾ ಸ್ಟೀಲ್ ಶೇ 3.46 ಅದಾನಿ ಎಂಟರ್‌ಪ್ರೈಸಸ್ ಶೇ 2.66 ಶ್ರೀರಾಮ್ ಫೈನಾನ್ಸ್ ಶೇ 2.6 ಬಜಾಜ್ ಆಟೊ ಶೇ 2.16 ಜೆಎಸ್‌ಡಬ್ಲ್ಯು ಸ್ಟೀಲ್ ಶೇ 2.07 ಮತ್ತು ಬಜಾಜ್ ಫೈನಾನ್ಸ್ ಶೇ 1.86ರಷ್ಟು ಕುಸಿದಿವೆ. ಮುನ್ನೋಟ: ಈ ವಾರ ಜಿಯೊ ಫೈನಾನ್ಶಿಯಲ್ ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್‌ ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಏಂಜಲ್ ಒನ್ ಬಜಾಜ್ ಆಟೊ ಕ್ರಿಸಿಲ್ ಏಷ್ಯನ್‌ ಪೇಂಟ್ಸ್ ಇನ್ಫೊಸಿಸ್‌ ಹ್ಯಾವೆಲ್ಸ್ ಇಂಡಿಯಾ ಪಾಲಿಕ್ಯಾಬ್ ಇಂಡಿಯಾ ಸಿಯೆಟ್ ವಿಪ್ರೊ ಕೋಟಕ್ ಮಹೀಂದ್ರ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ತ್ರೈಮಾಸಿಕ ಫಲಿತಾಂಶಗಳು ಜಾಗತಿಕ ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT