ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿಲ್ಲ: ವಿ. ಸೋಮಣ್ಣ

Published 31 ಡಿಸೆಂಬರ್ 2023, 16:15 IST
Last Updated 31 ಡಿಸೆಂಬರ್ 2023, 16:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್ ಪಕ್ಷದ ನಾಯಕರನ್ನು ನಾನು ಭೇಟಿ ಮಾಡಿಲ್ಲ. ಲೋಕಸಭೆಗೆ ಟಿಕೆಟ್‌ ಕೇಳಿಲ್ಲ’ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.

ವಿಜಯನಗರದಲ್ಲಿರುವ ತಮ್ಮ ಕಾರ್ಯಾಲಯದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಮತ್ತು ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ, ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ದೊಡ್ಡವರ ಮಾತು ಕೇಳಿ ನೋವು ಮಾಡಿಕೊಂಡೆ. ನನ್ನ ಈ ಪರಿಸ್ಥಿತಿ ಕಾರಣರಾದವರ ಹತ್ತಿರ ವರಿಷ್ಠರು ಚರ್ಚೆ ಮಾಡಿ ಗೊಂದಲ ಬಗೆಹರಿಸಬೇಕು. ಕಾಂಗ್ರೆಸ್ ಪಕ್ಷದಿಂದ ನನಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ತಿಳಿಸಿದರು.

‘ರಾಜಕೀಯ ನಿಂತ ನೀರಲ್ಲ. ನಾನು ಮಾಡಿದ ತಪ್ಪಿಗೆ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ. ನಾನು ಮಾಡಿರುವ ಕೆಲಸಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿವೆ‘ ಎಂದರು.

‘ರಾಜಕೀಯದಲ್ಲಿ ಅನನುಕೂಲತೆ ಸಹಜ. ಬದ್ದತೆಯ ನಡವಳಿಕೆ ಜೀವನದಲ್ಲಿ ಬಹಳ ಮುಖ್ಯ. ಬದ್ದತೆಯಿಂದ ನಡೆದುಕೊಂಡಾಗ ನೋವು ಸಹಜ. ಆದರೆ ಅದರ ಮಾರ್ಗ ಬಿಡಬಾರದು’ ಎಂದು ಹೇಳಿದರು.

‘ರಾಮಜನ್ಮ ಭೂಮಿ ಆಗಬಾರದು ಎಂದು ಹೋರಾಟ ಮಾಡಿದ್ದ ವ್ಯಕ್ತಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಆಡಳಿತದಲ್ಲಿ ಭವ್ಯ ಭಾರತ ನಿರ್ಮಾಣವಾಗಲಿದೆ. ಅವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವರಾದ ಶಿವನಗೌಡ ನಾಯಕ್, ವಿಧಾನಪರಿಷತ್ ಸದಸ್ಯರಾದ ಅ. ದೇವೇಗೌಡ, ವಿ. ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ಕೋಶಾಧ್ಯಕ್ಷರಾದ ನವೀನ್ ಸೋಮಣ್ಣ, ಕನ್ನಡ ಪರ ಹೋರಾಟಗಾರ ಫಾಲನೇತ್ರ, ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದಾಸೇಗೌಡ, ರೂಪಲಿಂಗೇಶ್ವರ್, ಬಿಜೆಪಿ ಮುಖಂಡರಾದ ಕ್ರಾಂತಿ ರಾಜು, ಸಿ.ಎಂ. ರಾಜಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT