ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್‌ ಗಾಂಧಿ ನ್ಯಾಯಯಾತ್ರೆಗೆ ತಡೆ: ಆಕ್ರೋಶ

Published : 23 ಜನವರಿ 2024, 14:22 IST
Last Updated : 23 ಜನವರಿ 2024, 14:22 IST
ಫಾಲೋ ಮಾಡಿ
Comments

ಕಲಬುರಗಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಕೈಗೊಂಡಿರುವ 67 ದಿನಗಳ ‘ಭಾರತ್‌ ಜೋಡೊ ನ್ಯಾಯಯಾತ್ರೆ’ಯನ್ನು ಅಸ್ಸಾಂನಲ್ಲಿ ತಡೆಹಿಡಿದಿದ್ದನ್ನು ಖಂಡಿಸಿ ಪಕ್ಷದ ಜಿಲ್ಲಾ ಸಮಿತಿ ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ಆರಂಭವಾದ ಮೆರವಣಿಗೆ ಅನ್ನಪೂರ್ಣ ಕ್ರಾಸ್‌ ತಲುಪಿತು. ಅಲ್ಲಿ ಕೆಲಕಾಲ ರಸ್ತೆ ಮಧ್ಯೆ ಕುಳಿತು ಧರಣಿ ನಡೆಸಿದರು. ಕೇಂದ್ರ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಘೋಷಣೆ ಕೂಗಿದರು.

ಕೆವೈಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮಶೇಖರ ಗೋನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಮಹಾಂತಪ್ಪ ಸಂಗಾವಿ ಇತರರು ಮಾತನಾಡಿ ಅಸ್ಸಾಂ ರಾಜ್ಯದಲ್ಲಿ ನಡೆದ ಘಟನೆಯನ್ನು ಖಂಡಿಸಿದರು.

‘ಅಸ್ಸಾಂ ನಾಗಾಂವ್‌ ಜಿಲ್ಲೆಯ ವೈಷ್ಣವ ವಿರಕ್ತ ಸ್ಥಳ ‘ಬಟದ್ರವ ತಾಣ’ವನ್ನು ಪ್ರವೇಶಿಸದಂತೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ತಡೆಯಲಾಗಿದೆ. ಬಟದ್ರವ ತಾಣ ಭೇಟಿಗೆ ನೀಡಿದ್ದ ಅನುಮತಿಯನ್ನು ಅಧಿಕಾರಿಗಳು ರದ್ದುಪಡಿಸಿದ್ದಾರೆ. ಇದಕ್ಕೆ ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರ ಒತ್ತಡವೇ ಕಾರಣ. ಅಲ್ಲದೇ, ಬಿಜೆಪಿ ಕಾರ್ಯಕರ್ತರು ರಾಹುಲ್‌ ಗಾಂಧಿ ಅವರ ಬಸ್‌ ಅಡ್ಡಗಟ್ಟಿ ದುಂಡಾವರ್ತನೆ ಮಾಡಿದ್ದಾರೆ. ಹಲ್ಲೆಗೆ ಯತ್ನಿಸಿದ್ದಾರೆ’ ಎಂದು ಆರೋಪಿಸಿದರು.

ಪಕ್ಷದ ಮುಖಂಡರಾದ ಶಿವಾನಂದ ಹೊನಗುಂಟಿ, ಲತಾ ರವಿ ರಾಠೋಡ, ವಾಣಿಶ್ರೀ ಸಗರಕರ್‌, ಮಹಾಂತೇಶ ಕೌಲಗಿ ಇತರರು ಪಾಲ್ಗೊಂಡಿದ್ದರು.

ವಾಹನಗಳ ಸಂಚಾರಕ್ಕೆ ತೊಂದರೆ: ರಸ್ತೆ ಮಧ್ಯೆ ಧರಣಿಯಿಂದ ವಾಹನಗಳ ಸುಗಮ ಸಂಚಾರಕ್ಕೆ ಕೆಲಕಾಲ ತೊಂದರೆ ಉಂಟಾಯಿತು. ಪಿಐ ಸೋಮಲಿಂಗ ಕಿರದಳ್ಳಿ, ಪಿಎಸ್‌ಐ ಯಶೋಧಾ ಕಟಕೆ, ಎಎಸ್‌ಐ ಮಹಿಬೂಬ್‌, ಅಶೋಕ ಹಳಗೋದಿ ಸೇರಿದಂತೆ ಬ್ರಹ್ಮಪುರ ಪೊಲೀಸ್‌ ಠಾಣೆ ಸಿಬ್ಬಂದಿ ಮುಖಂಡರ ಮನವೊಲಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನೇತಾಜಿ ಜಯಂತಿ: ಪ್ರತಿಭಟನೆಗೂ ಮುನ್ನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮದಿನವನ್ನು ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT