ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ | ಪಂಚಾಯಿತಿ ಮಟ್ಟಕ್ಕೆ ಬಂದು ಸಮಸ್ಯೆ ಆಲಿಸುವೆ: ಡಿ.ಕೆ. ಶಿವಕುಮಾರ್

Published : 20 ಜೂನ್ 2024, 6:43 IST
Last Updated : 20 ಜೂನ್ 2024, 6:43 IST
ಫಾಲೋ ಮಾಡಿ
Comments

ಚನ್ನಪಟ್ಟಣ: ‘ತಾಲ್ಲೂಕಿನಲ್ಲಿ ಹಲವು ಸಮಸ್ಯೆಗಳಿವೆ. ಜನರು ಎದುರಿಸುವ ಸಮಸ್ಯೆಗಳನ್ನು ಅವರಿಂದಲೇ ಆಲಿಸಿ ಪರಿಹರಿಸುವುದಕ್ಕಾಗಿ, ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿ ಮಟ್ಟಕ್ಕೆ ಭೇಟಿ ನೀಡುವೆ. ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ಕ್ಷೇತ್ರವನ್ನು ಪ್ರತಿನಿಧಿಸಿದ್ದವರು ತಾಲ್ಲೂಕಿನಲ್ಲಿ ಕೆಡಿಪಿ ಸಭೆಯನ್ನೇ ನಡೆಸಿಲ್ಲ. ಆಶ್ರಯ ಮನೆ ಯೋಜನೆ, ಬಗರ್‌ಹುಕುಂ ಸೇರಿದಂತೆ ವಿವಿಧ ಸಮಿತಿಗಳ ಸಭೆಯನ್ನೇ ಕರೆದಿಲ್ಲ. ಒಟ್ಟಿನಲ್ಲಿ ಕ್ಷೇತ್ರದಲ್ಲಿ ಯಾವುದೇ ಕೆಲಸಗಳಾಗಿಲ್ಲ. ಹಾಗಾಗಿ, ಮುಂದೆ ಪ್ರತಿ ದಿನ ಮೂರು ಪಂಚಾಯಿತಿಗಳಿಗೆ ಭೇಟಿ ನೀಡಿ, ಸ್ಥಳೀಯರ ಸಮಸ್ಯೆಗಳನ್ನು ಕೇಳಿ ಸ್ಥಳದಲ್ಲೇ ಪರಿಹಾರ ಸೂಚಿವೆ’ ಎಂದು ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಿವೇಶನ ಇಲ್ಲದವರಿಗೆ ಇದುವರೆ ಒಂದೇ ಒಂದು ನಿವೇಶನ ಹಂಚಿಲ್ಲ. ಹಾಗಾಗಿ, ವಸತಿ ರಹಿತರಿಗೆ ನಗರದ ಸಮೀಪ ನೂರು ಎಕರೆ ಜಾಗ ಗುರುತಿಸಿ ಬಡವರಿಗೆ ಹಂಚಲು ಯೋಜನೆ ರೂಪಿಸುತ್ತೇನೆ. ತಾಲ್ಲೂಕಿನ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು, ವಿಶೇಷ ಅನುದಾನ ತಂದು ಅಭಿವೃದ್ಧಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಕಾಲವೇ ಉತ್ತರ ನೀಡಲಿದೆ: ‘ಚನ್ನಪಟ್ಟಣದಲ್ಲಿ ನಾನು ಸ್ಪರ್ಧಿಸುವ ಕುರಿತು ಕಾಲವೇ ಉತ್ತರ ನೀಡಲಿದೆ. ಅದು ಜನರ ಮತ್ತು ದೇವರ ಇಚ್ಛೆ. ಕ್ಷೇತ್ರದಲ್ಲಿ ಇದುವರೆಗೆ ಅಭಿವೃದ್ಧಿಯಾಗಿಲ್ಲ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಶುರುವಾಗಲಿದೆ ಎಂದಷ್ಟೇ ಹೇಳಬಲ್ಲೇ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕೆಪಿಸಿಸಿ ಅಧ್ಯಕ್ಷನಾಗಿರುವ ನನ್ನ ಕಣ್ಣು ಕೇವಲ ಚನ್ನಪಟ್ಟಣದ ಮೇಲೆ ಮಾತ್ರ ಇಲ್ಲ. ಇಡೀ ರಾಜ್ಯದ ಮೇಲಿದೆ. ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ’ ಎಂದು ‘ಡಿ.ಕೆ. ಸಹೋದರರ ವಕ್ರದೃಷ್ಟಿ ಚನ್ನಪಟ್ಟಣದ ಮೇಲೆ ಬಿದ್ದಿದೆ’ ಎಂಬ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ‘ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಹಲವು ಸಲ ಇಂಧನ ದರ ಏರಿಸಿದೆ. ಅವರ ಅವಧಿಯಲ್ಲೇ ದರವು ಶತಕ ದಾಟಿದೆ. ಇದೀಗ ನಾವು ಕೇವಲ ₹3 ಮಾತ್ರ ಏರಿಸಿದ್ದೇವೆ. ಆಗ ಸುಮ್ಮನಿದ್ದವರು, ಈಗ ನಮ್ಮ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವುದರಲ್ಲಿ ಅರ್ಥವಿಲ್ಲ’ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT