ನ್ಯಾಯದಾನ ವಿಳಂಬ
ದೇಶದ ಎಲ್ಲೆಡೆ ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯದಾನವು ತೀರಾ ವಿಳಂಬವಾಗುತ್ತಿದೆ ಎಂಬುದನ್ನು ದತ್ತಾಂಶಗಳು ಹೇಳುತ್ತವೆ. ಅತ್ಯಾಚಾರ ಪ್ರಕರಣಗಳನ್ನು ಸಾಮಾನ್ಯ ನ್ಯಾಯಾಲಯಗಳು ನಿರ್ವಹಣೆ ಮಾಡುತ್ತಿದ್ದು, ಪೋಕ್ಸೊ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಗಳು ನಿರ್ವಹಣೆ ಮಾಡುತ್ತಿವೆ. ಹೀಗಿದ್ದೂ, ಅತ್ಯಾಚಾರ ಪ್ರಕರಣಗಳು ತ್ವರಿತವಾಗಿ ವಿಲೇವಾರಿಯಾಗುತ್ತಿಲ್ಲ. ಇದರಿಂದ ಅತ್ಯಾಚಾರ ಸಂತ್ರಸ್ತೆಯರಿಗೆ ಮತ್ತು ಬಂಧನದಲ್ಲಿರುವ ಆರೋಪಿಗಳಿಗೆ ತ್ವರಿತವಾಗಿ ನ್ಯಾಯ ದೊರೆಯುತ್ತಿಲ್ಲ ಎಂಬುದನ್ನು ಈ ದತ್ತಾಂಶಗಳು ವಿವರಿಸುತ್ತವೆ.
2022ರ ಡಿಸೆಂಬರ್ ಅಂತ್ಯಕ್ಕೆ ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಉಳಿದಿರುವ ಪ್ರಕರಣಗಳ ಸಂಖ್ಯೆ 21.84 ಲಕ್ಷ. 2022ರಲ್ಲಿ ಎಲ್ಲಾ ನ್ಯಾಯಾಲಯಗಳು 1.81 ಲಕ್ಷದಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡಿದ್ದರೂ, ಇಷ್ಟೊಂದು ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿಯೇ ಉಳಿದಿವೆ. ಹತ್ತಾರು ವರ್ಷಗಳಿಂದ ಪ್ರಕರಣಗಳು ತ್ವರಿತವಾಗಿ ವಿಲೇವಾರಿಯಾಗದೇ ಉಳಿದಿರುವುದರಿಂದ, ಇಷ್ಟೆಲ್ಲಾ ಪ್ರಕರಣಗಳಲ್ಲಿ ನ್ಯಾಯದಾನ ವಿಳಂಬವಾಗಿದೆ. ಕರ್ನಾಟಕದಲ್ಲೂ 2022ರ ಡಿಸೆಂಬರ್ ಅಂತ್ಯಕ್ಕೆ 72,455 ಅತ್ಯಾಚಾರ ಪ್ರಕರಣಗಳು ವಿಚಾರಣೆ ಹಂತದಲ್ಲೇ ಉಳಿದಿವೆ.
2022ರ ಡಿಸೆಂಬರ್ ಅಂತ್ಯಕ್ಕೆ ವಿಚಾರಣೆ ಹಂತದಲ್ಲೇ ಉಳಿದ ಅತಿಹೆಚ್ಚು ಪ್ರಕರಣಗಳು ಇದ್ದದ್ದು ಪಶ್ಚಿಮ ಬಂಗಾಳದಲ್ಲಿ. ಅಲ್ಲಿ ಅಂತಹ 3.56 ಲಕ್ಷ ಪ್ರಕರಣಗಳು ಇದ್ದವು. ನಂತರದಲ್ಲಿ ಅತಿಹೆಚ್ಚು ಪ್ರಕರಣಗಳು ವಿಚಾರಣೆ ಹಂತದಲ್ಲೇ ಉಳಿದದ್ದು ಉತ್ತರ ಪ್ರದೇಶ (2.72 ಲಕ್ಷ), ಮಹಾರಾಷ್ಟ್ರ (2.71 ಲಕ್ಷ), ಒಡಿಶಾ (1.69 ಲಕ್ಷ) ಮತ್ತು ಮಧ್ಯಪ್ರದೇಶದಲ್ಲಿ (1.21 ಲಕ್ಷ). ಪ್ರತಿ ವರ್ಷ ಅತಿಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುವ ರಾಜಸ್ಥಾನದಲ್ಲಿ ವಿಚಾರಣೆ ಹಂತದಲ್ಲೇ ಉಳಿದ ಒಟ್ಟು ಪ್ರಕರಣಗಳ ಸಂಖ್ಯೆ 1.16 ಲಕ್ಷದಷ್ಟು.