ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಬೈಲ್ ಬಳಸದೆ, 2BHK ಮನೆಯಲ್ಲಿ ಸಾಮಾನ್ಯರಂತೆ ಬದುಕುತ್ತಿರುವ ರತನ್ ಟಾಟಾ ಸಹೋದರ!

Published : 10 ಅಕ್ಟೋಬರ್ 2024, 5:59 IST
Last Updated : 10 ಅಕ್ಟೋಬರ್ 2024, 5:59 IST
ಫಾಲೋ ಮಾಡಿ
Comments

ಉದ್ಯಮಿ ರತನ್‌ ಟಾಟಾ ಅವರು ಕೈಗಾರಿಕೋದ್ಯಮ, ಆವಿಷ್ಕಾರ, ತಂತ್ರಜ್ಞಾನ, ಸಮಾಜಸೇವೆ, ದಾನ–ಧರ್ಮಕ್ಕೆ ಹೆಸರುವಾಸಿ. ದೇಶದ ಕೈಗಾರಿಕೋದ್ಯಮನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಖ್ಯಾತಿಯೂ ಅವರದ್ದು. ಎಲ್ಲರಿಗೂ ಚಿರಪರಿಚಿತವಾಗಿರುವ ಇಂತಹ ರನತ್‌ ಅವರ ಕಿರಿಯ ಸಹೋದರ ಜಿಮ್ಮಿ ಅವರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.

ಜನಜಂಗುಳುಯಿಂದ ದೂರವೇ ಸಾಮಾನ್ಯರಂತೆ ಬದುಕುತ್ತಿರುವ ಜಿಮ್ಮಿ ರತನ್‌ರಂತಲ್ಲ. ಅವರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಟಾಟಾ ಸಮೂಹದ ಅಪಾರ ಆಸ್ತಿಯ ಒಡೆಯನಾಗಿದ್ದರೂ, ಉದ್ಯಮಯದಲ್ಲಿ ತೊಡಗಿಕೊಳ್ಳದ ಜಿಮ್ಮಿ ಸಾಧಾರಣರಂತೆ ಬದುಕುತ್ತಿರುವುದು ಏಕೆ ಎಂಬುದು ಅವರ ಬಗ್ಗೆ ತಿಳಿದಿರುವವರನ್ನು ಕಾಡುವ ಪ್ರಶ್ನೆಯಾಗಿದೆ.

ರತನ್‌ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಜಿಮ್ಮಿ ಅವರೊಂದಿಗಿನ ಕಪ್ಪು–ಬಿಳುಪಿನ ಚಿತ್ರವೊಂದನ್ನು ಹಂಚಿಕೊಂಡಿದ್ದರು. 1945ರಲ್ಲಿ ತೆಗೆದ ಆ ಚಿತ್ರದೊಂದಿಗೆ ರತನ್‌ ಒಕ್ಕಣಿಸಿದ್ದ 'ಅವು ಸಂತೋಷದ ದಿನಗಳು. ನಮ್ಮ ನಡುವೆ ಏನೂ ನುಸುಳಿರಲಿಲ್ಲ' ಎಂಬ ಸಾಲು ಸಾಕಷ್ಟು ಜನರ ಕುತೂಹಲದ ಕಟ್ಟೆಯೊಡೆಯುವಂತೆ ಮಾಡಿತ್ತು.

ಜಿಮ್ಮಿ ಅವರ ಜೀವನಶೈಲಿಯ ಬಗ್ಗೆ ಟಾಟಾ ಸಮೂಹದ ಮುಖ್ಯಸ್ಥ ಹರ್ಷ್‌ ಗೋಯೆಂಕಾ ಅವರು ಇತ್ತೀಚೆಗೆ ಎಕ್ಸ್‌/ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಮುಂಬೈನ ಕೊಲಬಾದಲ್ಲಿರುವ ಹ್ಯಾಂಪ್ಟನ್‌ ಕೋರ್ಟ್‌ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಲ್ಲಿರುವ ಎರಡು ಬೆಡ್‌ರೂಂವುಳ್ಳ ಫ್ಲಾಟ್‌ನಲ್ಲಿ ಜಿಮ್ಮಿ ವಾಸವಾಗಿದ್ದಾರೆ. ಅವರು ಅತ್ಯುತ್ತಮ squash ಆಟಗಾರನೂ ಹೌದು ಎಂದು ತಿಳಿಸಿದ್ದರು.

ಮೊಬೈಲ್‌ ಫೋನ್‌ ಸಹ ಬಳಸದ ಜಿಮ್ಮಿ, ಆಧುನಿಕ ತಂತ್ರಜ್ಞಾನದಿಂದ ದೂರವೇ ಉಳಿದಿದ್ದಾರೆ. ದಿನಪತ್ರಿಕೆಗಳು, ಪುಸ್ತಕಗಳ ಮೂಲಕ ಮಾಹಿತಿ ತಿಳಿಯಬಯಸುತ್ತಾರೆ. ಮನೆಯಿಂದ ಹೊರಗೆ ಬರುವುದೇ ಅಪರೂಪ ಎನ್ನಲಾಗುತ್ತದೆ.

ಹೀಗೆ ತೀರಾ ಸಾಮಾನ್ಯರಂತೆ ಬದುಕುತ್ತಿದ್ದರೂ, ಜಿಮ್ಮಿ ಅವರ ಹೆಸರಿನಲ್ಲಿ ಅಪಾರ ಪ್ರಮಾಣದ ಸಂಪತ್ತು ಇದೆ. ಟಾಟಾ ಸಮೂಹದ ಟಾಟಾ ಮೋಟಾರ್ಸ್‌, ಟಾಟಾ ಸ್ಟೀಲ್‌, ಟಾಟಾ ಸನ್ಸ್‌, ಟಾಟಾ ಕನ್ಸಲ್ಟನ್ಸಿ ಸರ್ವೀಸ್‌, ಟಾಟಾ ಪವರ್‌, ಇಂಡಿಯನ್‌ ಹೋಟೆಲ್ಸ್‌ ಮತ್ತು ಟಾಟಾ ಕೆಮಿಕಲ್ಸ್‌ನಲ್ಲಿ ಗಣನೀಯ ಪ್ರಮಾಣದ ಪಾಲನ್ನು ಹೊಂದಿದ್ದಾರೆ.

1989ರಲ್ಲಿ ತಂದೆ ನವಲ್‌ ಅವರ ನಿಧನರಾದ ಬಳಿಕ ವಾರಸುದಾರಿಕೆಯಾಗಿ 'ಶ್ರೀ ರತನ್‌ ಟಾಟಾ ಟ್ರಸ್ಟ್‌'ನ ಟ್ರಸ್ಟಿಯೂ ಆಗಿದ್ದಾರೆ.

ರತನ್‌ ಹಾಗೂ ಜಿಮ್ಮಿ – ನವಲ್‌ ಟಾಟಾ ಹಾಗೂ ಸೂನಿ ಟಾಟಾ ದಂಪತಿಯ ಮಕ್ಕಳು.

1948ರಲ್ಲಿ ಸೂನಿ ಅವರಿಂದ ಬೇರೆಯಾದ ನವಲ್‌, ಸ್ವಿಟ್ಜರ್‌ಲೆಂಡ್‌ ಮೂಲದ ಸಿಮೋನ್‌ ಅವರನ್ನು 1955ರಲ್ಲಿ ಮದುವೆಯಾದರು. ನಂತರ ಜನಿಸಿದವರು ನೋಯೆಲ್ ಟಾಟಾ.

ಜಿಮ್ಮಿ ಅವರಿಗೆ ಕುಟುಂಬದ ವ್ಯವಹಾರದಲ್ಲಿ ಅಷ್ಟೇನೂ ಆಸಕ್ತಿ ಇಲ್ಲದ ಕಾರಣ, ಟಾಟಾ ಸಮೂಹವನ್ನು ಮುನ್ನಡೆಸುವ ಹೊಣೆ ನೋಯೆಲ್ ಅವರ ಮಕ್ಕಳಾದ ಲೇಹ್‌, ಮಾಯಾ ಮತ್ತು ನೆವಿಲ್ಲೆ ಅವರ ಮುಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT