ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪೀಕರ್‌ ಪಟ್ಟ: ಬಿಗಿ ಪಟ್ಟು- ಬೆಳಿಗ್ಗೆ 11 ಗಂಟೆಗೆ ಚುನಾವಣೆ

ಇಂದು ಚುನಾವಣೆ *ಎನ್‌ಡಿಎಯ ಓಂ ಬಿರ್ಲಾ ಆಯ್ಕೆ ಖಚಿತ : ‘ಇಂಡಿಯಾ’ ಅಭ್ಯರ್ಥಿಯಾಗಿ ಕೆ. ಸುರೇಶ್‌
Published 25 ಜೂನ್ 2024, 20:34 IST
Last Updated 25 ಜೂನ್ 2024, 20:34 IST
ಅಕ್ಷರ ಗಾತ್ರ

ನವದೆಹಲಿ: ಸ್ಪೀಕರ್‌ ಮತ್ತು ಡೆಪ್ಯುಟಿ ಸ್ಪೀಕರ್‌ ಸ್ಥಾನಗಳ ವಿಷಯದಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಹಾಗೂ ವಿಪಕ್ಷ ‘ಇಂಡಿಯಾ’ ಮೈತ್ರಿಕೂಟ ಬಿಗಿ ಪಟ್ಟು ಹಿಡಿದಿದ್ದರಿಂದ ಸಂಧಾನ ಮುರಿದು ಬಿತ್ತು. ಸ್ಪೀಕರ್‌ ಸ್ಥಾನಕ್ಕೆ ಬುಧವಾರ ಬೆಳಿಗ್ಗೆ 11 ಗಂಟೆಗೆ ಚುನಾವಣೆ ನಡೆಯಲಿದೆ. 

17ನೇ ಲೋಕಸಭೆಯ ಸ್ಪೀಕರ್‌ ಆಗಿದ್ದ ಓಂ ಬಿರ್ಲಾ ಅವರನ್ನೇ ಎನ್‌ಡಿಎ ಮೈತ್ರಿಕೂಟ ಕಣಕ್ಕಿಳಿಸಿದೆ. ಸದನದ ಹಿರಿಯ ಸದಸ್ಯ ಕೋಡಿಕುನ್ನಿಲ್ ಸುರೇಶ್‌ ಅವರನ್ನು ‘ಇಂಡಿಯಾ’ ಮೈತ್ರಿಕೂಟ ಹುರಿಯಾಳುವನ್ನಾಗಿ ಮಾಡಿದೆ. ಇಬ್ಬರೂ ಮಂಗಳವಾರ ನಾಮಪತ್ರ ಸಲ್ಲಿಸಿದರು. 

ಸ್ಪೀಕರ್‌ ಸ್ಥಾನಕ್ಕೆ ‘ಅಪರೂ‍ಪ’ಕ್ಕೆ ಚುನಾವಣೆ ನಡೆಯುತ್ತಿದೆ. ಎನ್‌ಡಿಎ ಮೈತ್ರಿಕೂಟವು ಸದನದಲ್ಲಿ ಬಹುಮತ ಹೊಂದಿದ್ದು, ಓಂ ಬಿರ್ಲಾ ಸಭಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. 

ಆರಂಭದಲ್ಲಿ ಒಮ್ಮತ– ಮತ್ತೆ ಜಟಾಪಟಿ: ಸ್ಪೀಕರ್‌ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ವಿಷಯದಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳು ಆರಂಭದಲ್ಲಿ ಸಹಮತಕ್ಕೆ ಬಂದಿದ್ದವು. ಸಂಪ್ರದಾಯದ ‍ಪ್ರಕಾರ ಉಪಸಭಾಧ್ಯಕ್ಷ ಸ್ಥಾನವನ್ನು ವಿಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್‌ ನಾಯಕರು ಪಟ್ಟು ಹಿಡಿದರು. ಈ ವಿಷಯದಲ್ಲಿ ಈಗಲೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಹೇಳಿದರು. ಹೀಗಾಗಿ, ಮಾತುಕತೆ ಮುರಿದು ಬಿತ್ತು. 

ವಿಪಕ್ಷಗಳ ಜತೆಗೆ ಸಂಧಾನ ನಡೆಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರನ್ನು ನಿಯೋಜಿಸಿತು. ಸಿಂಗ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸೋಮವಾರ ರಾತ್ರಿ ದೂರವಾಣಿಯಲ್ಲಿ ಮಾತನಾಡಿ ಅವಿರೋಧ ಆಯ್ಕೆಗೆ ಸಹಕಾರ ನೀಡುವಂತೆ ಕೋರಿದರು. ರಾಜನಾಥ್ ಸಿಂಗ್ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌, ಡಿಎಂಕೆಯ ಟಿ.ಆರ್.ಬಾಲು ಮತ್ತಿತರ ನಾಯಕರು ಭಾಗಿಯಾದರು. ಸ್ಪೀಕರ್‌ ಸ್ಥಾನವನ್ನು ವಿಪಕ್ಷಕ್ಕೆ ನೀಡುವುದಾಗಿ ಕೂಡಲೇ ವಾಗ್ದಾನ ಮಾಡಬೇಕು ಎಂದು ವೇಣುಗೋಪಾಲ್‌ ಆಗ್ರಹಿಸಿದರು. ‘ಈ ಬಗ್ಗೆ ಈಗಲೇ ಭರವಸೆ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಡೆಪ್ಯುಟಿ ಸ್ಪೀಕರ್‌ ಸ್ಥಾನದ ಬಗ್ಗೆ ಚರ್ಚೆ ನಡೆಯಲಿದ್ದು, ಆಗ ಪ್ರತಿಪಕ್ಷ ಮುಖಂಡರ ಜತೆಗೆ ಸಮಾಲೋಚನೆ ನಡೆಸಲಾಗುತ್ತದೆ’ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದರು. ಇದಕ್ಕೆ ವೇಣುಗೋಪಾಲ್ ಒಪ್ಪಲಿಲ್ಲ. ಸಭೆಯಿಂದ ವೇಣುಗೋಪಾಲ್‌ ಹಾಗೂ ಟಿ.ಆರ್‌.ಬಾಲು ನಿರ್ಗಮಿಸಿದರು. ಇಂಡಿಯಾ ಮೈತ್ರಿಕೂಟದ ನಾಯಕರ ಸೂಚನೆಯ ಮೇರೆಗೆ ಸುರೇಶ್‌ ನಾಮಪತ್ರ ಸಲ್ಲಿಸಿದರು. 

ಎನ್‌ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರು ಓಂ ಬಿರ್ಲಾ ನಾಮನಿರ್ದೇಶನ ಪತ್ರಕ್ಕೆ ಸಹಿ ಹಾಕಿದ್ದಾರೆ. ಮತ್ತೊಂದೆಡೆ, ಟಿಎಂಸಿ ಹೊರತುಪಡಿಸಿ ಇಂಡಿಯಾ ಮೈತ್ರಿಕೂಟದ ಎಲ್ಲ ಪಕ್ಷಗಳು ಸುರೇಶ್‌ ನಾಮಪತ್ರಕ್ಕೆ ಸಹಿ ಹಾಕಿವೆ. ಸದನದಲ್ಲಿ ಪಕ್ಷದ ಸದಸ್ಯರು ಬುಧವಾರ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ವಿಪ್‌ ಜಾರಿ ಮಾಡಿವೆ. 

‘ಸುರೇಶ್ ಅವರನ್ನು ಕಣಕ್ಕಿಳಿಸುವ ಕುರಿತು ಟಿಎಂಸಿ ಜತೆಗೆ ಸಮಾಲೋಚನೆ ನಡೆಸಿಲ್ಲ. ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ನಿರ್ದೇಶನದಂತೆ ಮುಂದಿನ ಹೆಜ್ಜೆ ಇಡಲಾಗುವುದು’ ಎಂದು ಪಕ್ಷದ ನಾಯಕರು ಮಂಗಳವಾರ ಬೆಳಿಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಟಿಎಂಸಿಯ ಅಭಿಷೇಕ್‌ ಬ್ಯಾನರ್ಜಿ ಅವರು ಸದನ ನಡೆಯುತ್ತಿರುವಾಗಲೇ ಚರ್ಚೆ ನಡೆಸಿ ಒಮ್ಮತಕ್ಕೆ ಬಂದರು. ಸುರೇಶ್ ಅವರನ್ನು ಟಿಎಂಸಿ ಬೆಂಬಲಿಸಲಿದೆ ಎಂದು ಪಕ್ಷದ ನಾಯಕರು ಸುದ್ದಿಗಾರರಿಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT