ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಕ್ಫ್ ತಿದ್ದುಪಡಿ ಮಸೂದೆ: ಆಡಳಿತ, ವಿರೋಧ ಪಕ್ಷಗಳ ವಾಕ್ ಸಮರ

Published : 8 ಆಗಸ್ಟ್ 2024, 14:48 IST
Last Updated : 8 ಆಗಸ್ಟ್ 2024, 14:48 IST
ಫಾಲೋ ಮಾಡಿ
Comments

ನವದೆಹಲಿ: ಲೋಕಸಭೆಯಲ್ಲಿ ಮಂಡಣೆಯಾದ ವಕ್ಫ್‌ ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷಗಳ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಮರು ಪರಿಶೀಲನೆಗಾಗಿ ಜಂಟಿ ಸದನ ಸಮಿತಿಗೆ ಕೇಂದ್ರ ಶಿಫಾರಸು ಮಾಡಿದೆ. ಆದರೆ ಕಾಂಗ್ರೆಸ್‌ ಸೇರಿದಂತೆ ಇತರ ವಿರೋಧ ಪಕ್ಷಗಳು ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿವೆ.

ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನವನ್ನು ಕೇಂದ್ರ ನಡೆಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ ಎಂದು ಆರೋಪಿಸಿವೆ.

ಕೇಂದ್ರ ಅಲ್ಪಸಂಖ್ಯಾತ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯೊಂದಿಗೆ ಮುಸಲ್ಮಾನ್ ವಕ್ಫ್ ರದ್ದು ಮಸೂದೆ 2024 ಅನ್ನೂ ಅವರು ಮಂಡಿಸಿದರು. 1955ರ ತಿದ್ದುಪಡಿ ಮಸೂದೆ ಜಾರಿಗೆ ಬರುವುದರಿಂದ 1923ರ ಮುಸಲ್ಮಾನ್ ವಕ್ಫ್ ಕಾಯ್ದೆ ರದ್ದು ಮಾಡುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಕಾಂಗ್ರೆಸ್‌ನ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಮಸೂದೆ ವಿರೋಧಿಸಿ ತನ್ನ ಪ್ರತಿಭಟನೆ ದಾಖಲಿಸಿದರು. ಈ ಕಠಿಣ ಕಾನೂನು ಸಂವಿಧಾನದ ಮೇಲಿನ ನೇರ ದಾಳಿಯಾಗಿದೆ ಎಂದು ಆರೋಪಿಸಿದರು.

ಸಮಾಜವನ್ನು ಒಡೆದು ಆಳುವ ಇಂಥ ಕ್ರಮದಿಂದಲೇ ಬಿಜೆಪಿ ಕಳೆದ ಚುನಾವಣೆಯಲ್ಲಿ ಮತದಾರರ ನಿರ್ಲಕ್ಷ್ಯಕ್ಕೆ ಒಳಗಾಗಿ, ಅಲ್ಪ ಸೀಟುಗಳನ್ನು ಪಡೆಯಿತು. ಆದರೆ ಈಗಲೂ ತನ್ನ ಅದೇ ಚಾಳಿಯನ್ನು ಮುಂದುವರಿಸಿದೆ. ಮಹಾರಾಷ್ಟ್ರ ಚುನಾವಣೆಯನ್ನು ಗಮದಲ್ಲಿಟ್ಟುಕೊಂಡು ಈ ಮಸೂದೆ ಜಾರಿಗೆ ತರಲಾಗಿದೆ. ಈಗ ಇದು ಮುಸ್ಲಿಮರಿಂದ ಆರಂಭಗೊಂಡು ನಂತರ ಕ್ರೈಸ್ತ, ಜೈನರವರೆಗೂ ಮುಂದುವರಿಯಲಿದೆ’ ಎಂದು ಆರೋಪಿಸಿದರು.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರೂ ಮಸೂದೆ ಮಂಡಣೆಯನ್ನು ವಿರೋಧಿಸಿದರು. ‘ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರನ್ನು ನೇಮಿಸುವ ಅಗತ್ಯವಾದರೂ ಏನಿದೆ. ಹಾಗಿದ್ದರೆ ಇಂಥದ್ದೇ ಕ್ರಮ ಇತರ ಧರ್ಮಗಳ ಸಮಿತಿಗಳಲ್ಲೂ ರಚಿಸಲಾಗಿದೆಯೇ?’ ಎಂದರು.

ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಮಾತನಾಡಿ, ‘ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿ ಮಸೂದೆ ಜಾರಿಗೆ ತರುತ್ತಿರುವುದನ್ನು ನಮ್ಮ ಪಕ್ಷ ವಿರೋಧಿಸುತ್ತದೆ. ಬಾಂಗ್ಲಾದೇಶದಲ್ಲಿ ಏನಾಗಿದೆ ಎಂಬುದನ್ನು ಒಮ್ಮೆ ಗಮನಿಸಿ. ಅಲ್ಪಸಂಖ್ಯಾತರನ್ನು ರಕ್ಷಿಸುವುದು ದೇಶದ ನೈತಿಕ ಕರ್ತವ್ಯವಾಗಿದೆ’ ಎಂದರು.

ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಪ್ರತಿಕ್ರಿಯಿಸಿ, ‘ಮಸೂದಗೆ ತಿದ್ದುಪಡಿ ತರುವ ಸಾಮರ್ಥ್ಯ ಈ ಸದನಕ್ಕಿಲ್ಲ. ಸಂವಿಧಾನದ ಮೂಲ ಆಶಯಕ್ಕೇ ಇದು ದೊಡ್ಡ ಧಕ್ಕೆಯಾಗಿದೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ನೀವು ಮುಸ್ಲಿಂ ವಿರೋಧಿಯಾಗಿದ್ದು, ಈ ಮಸೂದೆ ಅದಕ್ಕೆ ಸಾಕ್ಷಿ ಎಂಬಂತಿದೆ’ ಎಂದು ಟೀಕಿಸಿದರು.

ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಕಿರಣ್ ರಿಜಿಜು, ‘1995ರ ವಕ್ಫ್‌ ಕಾಯ್ದೆಯು ಯಾವುದೇ ಉದ್ದೇಶದಿಂದ ಸಮುದಾಯದ ಯಾವುದೇ ಉದ್ದೇಶ ಈಡೇರಿಲಿಲ್ಲ. ಕಾಂಗ್ರೆಸ್ ಅದರಲ್ಲಿ ವಿಫಲವಾಗಿದೆ. ವಕ್ಫ್ ಮಂಡಳಿಯನ್ನು ಕೆಲವಷ್ಟೇ ಜನರು ತಮ್ಮ ಭಿಗಿಮುಷ್ಠಿಯಲ್ಲಿ ಹಿಡಿದುಕೊಂಡಿದ್ದಾರೆ. ಹೀಗಾಗಿ ಈ ತಿದ್ದುಪಡಿ ಮಸೂದೆ ಮೂಲಕ ಸಾಮಾನ್ಯ ಮುಸ್ಲಿಮರಿಗೆ ನ್ಯಾಯ ದೊರಕಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT