ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೈಮುಗಿಯುತ್ತಿರುವ ಫೋಟೊ ಮರುಸಂಗ್ರಹ?

ದರ್ಶನ್‌ ವಿರುದ್ಧ ಪ್ರಬಲ ಸಾಕ್ಷ್ಯ ಲಭ್ಯ: ಮೊದಲ ಆರೋಪಿಯಾಗಿಸುವ ಸಾಧ್ಯತೆ
Published : 22 ಆಗಸ್ಟ್ 2024, 0:20 IST
Last Updated : 22 ಆಗಸ್ಟ್ 2024, 0:20 IST
ಫಾಲೋ ಮಾಡಿ
Comments

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಅವರು ಕೊಲೆಗೀಡಾಗುವ ಮುನ್ನ, ಹಲ್ಲೆಕೋರರದ ಎದುರು ಕೈಮುಗಿದು ಕಣ್ಣೀರಿಡುತ್ತಿರುವ ಫೋಟೊ, ನಾಲ್ಕು ಮತ್ತು ಎಂಟು ಸೆಕೆಂಡಿನ ಎರಡು ವಿಡಿಯೊಗಳನ್ನು ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್‌) ತಜ್ಞರು ಮರು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿದಂತೆ 17 ಆರೋಪಿಗಳಿಂದ ಜಪ್ತಿ ಮಾಡಲಾಗಿದ್ದ ಮೊಬೈಲ್‌ನಲ್ಲಿದ್ದ ದತ್ತಾಂಶ ಮರು ಸಂಗ್ರಹಕ್ಕೆ ಹೈದರಾಬಾದ್‌ ಹಾಗೂ ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು. ಪ್ರದೂಷ್‌ ಸೇರಿದಂತೆ ಇಬ್ಬರು ಆರೋಪಿಗಳ ಐ–ಫೋನ್‌ನಲ್ಲಿದ್ದ ದತ್ತಾಂಶವನ್ನು ಎಫ್ಎಸ್‌ಎಲ್‌ ತಜ್ಞರು ಮರುಸಂಗ್ರಹಿಸಲು ಯಶಸ್ವಿ ಆಗಿದ್ದಾರೆ.

ಆರೋಪಿ ದರ್ಶನ್‌, ಪವಿತ್ರಾಗೌಡ ಅವರ ಮೊಬೈಲ್‌ನಲ್ಲಿ ದತ್ತಾಂಶ ಮರುಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಜೂನ್‌ 8ರ ಮಧ್ಯಾಹ್ನ ಚಿತ್ರದುರ್ಗದಿಂದ ರೇಣುಕಸ್ವಾಮಿ ಅವರನ್ನು ಅಪಹರಿಸಿ ನಗರದ ಪಟ್ಟಣಗೆರೆಯ ಶೆಡ್‌ಗೆ ಕರೆತಂದಿದ್ದ ಆರೋಪಿಗಳು, ಬ್ಯಾಟ್‌ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಎಲೆಕ್ಟ್ರಿಕ್‌ ಶಾಕ್‌ ನೀಡಿ ಹತ್ಯೆ ಮಾಡಿದ್ದರು. ನಂತರ, ರಾಜಕಾಲುವೆಗೆ ಮೃತದೇಹ ಎಸೆದಿದ್ದರು. ಶೆಡ್‌ನಲ್ಲಿ ಹಲ್ಲೆ ನಡೆಸುವಾಗ ಕೆಲವು ಆರೋಪಿಗಳು ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಂಡಿದ್ದರು. ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ರೇಣುಕಸ್ವಾಮಿ ಮೃತಪಟ್ಟ ಮೇಲೆ ಮೊಬೈಲ್‌ ಶಾಪ್‌ಗೆ ತೆರಳಿ ಎಲ್ಲ ಫೋಟೊ ಹಾಗೂ ವಿಡಿಯೊ ಡಿಲಿಟ್‌ ಮಾಡಿಸಿದ್ದರು.

ದರ್ಶನ್‌ ವಿರುದ್ಧ ಪ್ರಬಲ ಸಾಕ್ಷ್ಯ?

ಕೊಲೆ ಪ್ರಕರಣದಲ್ಲಿ ತನಿಖೆ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರಿಗೆ ನಟ ದರ್ಶನ್‌ ಅವರ ವಿರುದ್ಧ ಪ್ರಬಲವಾದ ಸಾಕ್ಷ್ಯಗಳು ಲಭಿಸಿವೆ ಎನ್ನಲಾಗಿದೆ. ತಾಂತ್ರಿಕ ಸಾಕ್ಷ್ಯಧಾರ, ಎಫ್‌ಎಸ್ಎಲ್‌ ವರದಿ ಸಹಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.

‘ಕೊಲೆ ಪ್ರಕರಣದ ಆರಂಭಿಕ ತನಿಖೆಯಲ್ಲಿ ಲಭಿಸಿದ ಸಾಕ್ಷ್ಯಾಧಾರದಂತೆ ಪವಿತ್ರಾಗೌಡ ಅವರನ್ನು ಮೊದಲನೇ ಆರೋಪಿ, ದರ್ಶನ್‌ ಅವರನ್ನು ಎರಡನೇ ಆರೋಪಿ ಮಾಡಿ ನ್ಯಾಯಾಲಯಕ್ಕೆ ರಿಮ್ಯಾಂಡ್‌ ಅರ್ಜಿ ಸಲ್ಲಿಸಲಾಗಿತ್ತು. ಪ್ರದೂಷ್‌ ಐ–ಫೋನ್‌ನಲ್ಲಿ ಎರಡು ವಿಡಿಯೊಗಳು ಮರುಸಂಗ್ರಹವಾಗಿದ್ದು, ಇವು ದರ್ಶನ್‌ ಪಾತ್ರದ ಬಗ್ಗೆ ಪ್ರಬಲ ಸಾಕ್ಷ್ಯವಾಗಿವೆ. ಈಗ ದರ್ಶನ್‌ ಅವರನ್ನೇ ಮೊದಲ ಆರೋಪಿಯಾಗಿಸಿ ಆರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ’ ಎಂದು ಮೂಲಗಳು ತಿಳಿಸಿವೆ.

ಕೊಲೆ ಪ್ರಕರಣದ ತನಿಖೆಯು ಅಂತಿಮ ಹಂತಕ್ಕೆ ಬಂದಿದ್ದು, ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಸೆಪ್ಟೆಂಬರ್‌ ಮೊದಲ ವಾರದಲ್ಲಿ 24ನೇ ಎಸಿಸಿಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಸಿದ್ದತೆ ನಡೆಸಿದ್ದಾರೆ.

ಬೆಂಗಳೂರು ಹಾಗೂ ಹೈದರಾಬಾದ್‌ನ ಎಫ್ಎಸ್‌ಎಲ್‌ನಿಂದ ಶೇ 70ರಷ್ಟು ವರದಿಗಳು ತನಿಖಾಧಿಕಾರಿಗಳ ಕೈಸೇರಿವೆ. ಉಳಿದ ವರದಿಗಳು ಬಂದ ಕೂಡಲೇ ಅಂತಿಮ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ತನಿಖಾ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT