ಇಲ್ಲಿ ಕಣ್ಣೆತ್ತಿ ನೋಡಿದಲ್ಲೆಲ್ಲಾ ಬೆಟ್ಟಗಳ ಸಾಲು. ಹಸಿರು ಹೊದ್ದ ಕಣಿವೆಗಳನ್ನು ಬಂದಪ್ಪಿ ಮುಂದಕ್ಕೋಡುವ ಹತ್ತಿ ಉಂಡೆಯಂತಹ ಬಿಳಿ ಮೋಡಗಳ ಹಿಂಡು.. ಆದರೆ, ಇಂತಹ ಸೌಂದರ್ಯವೇ ಘನೀರ್ಭವಿಸಿದ ಪ್ರದೇಶದ ಕೆಳಗೆ ನೋಟ ಹರಿಸಿದರೆ, ಕಾಣುವುದು ಹಲವಾರು ಜನರನ್ನು ಬಲಿತೆಗೆದುಕೊಂಡ ಮೇಘಸ್ಫೋಟದ ಅಳಿದುಳಿದ ಅವಶೇಷಗಳು, ಮನಕಲಕುವ ರಸ್ತೆಗಳ ನಾಮಾವಶೇಷವೇ ಇಲ್ಲದ ದಾರಿಗಳು.

ಇದು ಉತ್ತರ ಭಾರತದ ಪ್ರವಾಸಿ ತಾಣಗಳಲ್ಲೇ ‘ಹನಿಮೂನ್ ಸ್ಪಾಟ್’ ಎಂದು ಗುರುತಿಸಿಕೊಂಡಿರುವ ಮನಾಲಿ. ತನ್ನ ಪ್ರಕೃತಿ ಸೌಂದರ್ಯ, ಚಳಿಗಾಲದ ಹಿಮಾವೃತ ಪ್ರದೇಶ ಮತ್ತು ಸಾಹಸಮಯ ಕ್ರೀಡೆಗಳಿಗೆ ಹೆಸರುವಾಸಿಯಾಗಿರುವ ‘ಕಣಿವೆಗಳ ರಾಣಿ’ ಮನಾಲಿ ಈಗ ದುರಂತಮಯ ನಾಡಾಗಿ ಬದಲಾಗಿದೆ.

ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ದುಪ್ಪಟ್ಟಾಗುತ್ತದೆ. ಹಸಿರು ಮೈತಳೆದು ಕಂಗೊಳಿಸುತ್ತದೆ. ಇಂತಹ ಸೌಂದರ್ಯದ ವರದಾನದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದ ಮನಾಲಿ, ಇತ್ತೀಚಿನ ಮೇಘಸ್ಫೋಟ ಹಾಗೂ ಮಳೆಯ ರುದ್ರನರ್ತನದಿಂದ ಪ್ರಕೃತಿಯ ಮುನಿಸಿಗೆ ಸಾಕ್ಷಿಯಾಗಿದೆ.

ದೆಹಲಿಯಂತಹ ವಿಪರೀತ ಹವಾಮಾನಗಳ ಪ್ರದೇಶದಲ್ಲಿರುವ ನಾವು ಮಳೆಗಾಲದ ಸವಿಯನ್ನು ಸವಿಯುವ ಹಾಗೂ ಪ್ರಕೃತಿ ಮಡಿಲಿನಲ್ಲಿ ಸಂಭ್ರಮಿಸುವ ಉದ್ದೇಶದಿಂದ ಆಗಸ್ಟ್ ತಿಂಗಳಲ್ಲಿ ಮನಾಲಿಯತ್ತ ಪ್ರಯಾಣ ಬೆಳೆಸಿದ್ದೆವು. ಆದರೆ, ನಮ್ಮನ್ನು ಸ್ವಾಗತಿಸಿದ್ದು, ಮೇಘಸ್ಫೋಟಗಳಿಂದ ತತ್ತರಿಸಿ, ಅಸ್ತವ್ಯಸ್ತ ಸ್ಥಿತಿಯಲ್ಲಿದ್ದ ಮನಾಲಿ.

ಚಂಡೀಗಢದಿಂದ ರಸ್ತೆ ಮಾರ್ಗದಲ್ಲಿ ಮನಾಲಿ ತಲುಪಲು 280 ಕಿ.ಮೀ. ಕ್ರಮಿಸಬೇಕಾಗುತ್ತದೆ. ಕಣಿವೆ ರಸ್ತೆಯಾದ ಕಾರಣ ಈ ದೂರ ಕ್ರಮಿಸಲು 9 ರಿಂದ 10 ಗಂಟೆ ಹಿಡಿಯುತ್ತದೆ. ಆದರೆ, ಮಳೆಯ ಕಾರಣದಿಂದ ಗುಡ್ಡ ಕುಸಿದು ಅಲ್ಲಲ್ಲಿ ರಸ್ತೆಗಳು ಮುಚ್ಚಿದ್ದರಿಂದ ನಮಗೆ ಹೆಚ್ಚೇ ಸಮಯ ಹಿಡಿಯಿತು. ಮಳೆಯ ಹನಿಗಳು ಕಣಿವೆಯ ಹಸಿರಿಗೆ ಇನ್ನಷ್ಟು ಮೆರುಗು ನೀಡಿದ್ದರಿಂದ, ದಾರಿಯುದ್ದಕ್ಕೂ ನೈಸರ್ಗಿಕ ಸೌಂದರ್ಯದ ಉಣಬಡಿಸುವಿಕೆ ನಡೆದೇ ಇತ್ತು.

ಮರುದಿನ ಮುಂಜಾನೆ ನಮ್ಮನ್ನು ಸಾಲು ಸಾಲು ಬೆಟ್ಟಗಳು, ಅದನ್ನು ಕ್ಷಣಕಾಲ ಮುಚ್ಚಿ ಮುಂದೆ ಓಡುವ ಮೋಡಗಳ ಹಿಂಡು ಸ್ವಾಗತಿಸಿದವು. ಮೊದಲನೇ ದಿನ ಇಲ್ಲಿನ ಪ್ರಸಿದ್ಧ ಹಿಡಿಂಬಾ ದೇಗುಲಕ್ಕೆ ಭೇಟಿ ನೀಡಿದೆವು. ಇಲ್ಲಿ ಕೂಡ ಪ್ರವಾಸಿಗರ ಸಂಖ್ಯೆ ಬೆರಳಣಿಕೆಯಷ್ಟಿತ್ತು. ಇದು ಭೀಮನ ಪತ್ನಿ ಹಿಡಿಂಬಿಯ ದೇಗುಲವಾಗಿದ್ದು, 16ನೇ ಶತಮಾನದ ದೇವಸ್ಥಾನ ಎಂದು ಹೇಳಲಾಗುತ್ತದೆ. ಚಳಿಗಾಲದಲ್ಲಿ ಇದು ಹಿಮಾವೃತಗೊಳ್ಳುವುದರಿಂದ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಡಿಸೆಂಬರ್-ಜನವರಿಯನ್ನು ಹೊರತುಪಡಿಸಿ ವರ್ಷದ ಉಳಿದ ಸಮಯದಲ್ಲಿ ಇಲ್ಲಿ ವ್ಯೂ ಪಾಯಿಂಟ್ ಹಾಗೂ ಸ್ನೋ ಪಾಯಿಂಟ್ ಎಂಬ ಎರಡು ವರ್ಗೀಕರಣ ಕಾಣುತ್ತದೆ. ಇತರ ಸಮಯದಲ್ಲಿ ಇಲ್ಲಿನ ರೋಹತಾಂಗ್ ಪಾಸ್ನಲ್ಲಿ ಮಂಜಿನಲ್ಲಿ ಆಟವಾಡಬಹುದು. ಆದರೆ, ಇದಕ್ಕೆ ಸೇನೆಯಿಂದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ. ಉಳಿದಂತೆ ಸೊಲಾಂಗ್ ವ್ಯಾಲಿ ಇಲ್ಲಿನ ವ್ಯೂ ಪಾಯಿಂಟ್ ಆಗಿದ್ದು, ಅಲ್ಲಿಂದ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಜೊತೆಗೆ ಇಲ್ಲಿ ನೀವು ಟ್ರೆಕಿಂಗ್ ಅನುಭವವನ್ನು ಕೂಡ ಪಡೆಯಬಹುದು. ಸುಮಾರು 45 ನಿಮಿಷಗಳ ಈ ಟ್ರೆಕಿಂಗ್ ಸ್ವಲ್ಪ ಕಷ್ಟವೆನಿಸಿದರೂ, ಮೇಲ್ಭಾಗದ ನೋಟ ಎಲ್ಲಾ ಆಯಾಸ ಮರೆಸುತ್ತದೆ.

ಇದರ ಜೊತೆಗೆ, ಮಾಲ್ ರೋಡ್ನಲ್ಲಿ ಮನಾಲಿಯ ಶಾಲು, ಟೋಪಿ ಮತ್ತಿತರರ ವಸ್ತುಗಳ ಶಾಪಿಂಗ್ ಮಾಡಬಹುದು. ಇಲ್ಲಿನ ಟಿಬೆಟಿಯನ್ ಮಾರುಕಟ್ಟೆಯ ಬಗಲಲ್ಲೇ ಒಂದು ಟಿಬೆಟಿಯನ್ ಮಾನೆಸ್ಟ್ರೀ ಇದೆ. ಇದು ಟಿಬೆಟಿಯನ್ನರ ದೇಗುಲ. ಧ್ಯಾನಕ್ಕೆ ಇದು ಸೂಕ್ತ ಸ್ಥಳ.

ಮೇಘಸ್ಫೋಟಕ್ಕೆ ಜರ್ಜರಿತ ಮನಾಲಿ

ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ವಿಪರೀತ ಮಳೆ ಹಾಗೂ ಗುಡ್ಡ ಕುಸಿತದಿಂದ ಹಿಮಾಚಲ ಪ್ರದೇಶದ ಹಲವೆಡೆ ರಸ್ತೆಗಳು ಪ್ರಯಾಣಕ್ಕೆ ಸ್ಥಗಿತಗೊಳ್ಳುವುದು ಸಾಮಾನ್ಯ. ಆದರೆ, ಈ ಬಾರಿ ಮನಾಲಿಯಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದ ಪರಿಣಾಮ, ಇಡೀ ನಗರವೇ ತತ್ತರಿಸಿದೆ. ಮೋಡಗಳು ಸ್ಫೋಟಗೊಂಡ ಸ್ಥಳದಲ್ಲಿ ಇದ್ದ ಬಸ್ ನಿಲ್ದಾಣ, ಸರ್ವಿಸ್ ಸ್ಟೇಷನ್, ಪಾರ್ಕ್ನಂತಹ ಸ್ಥಳಗಳ ಅವಶೇಷವೂ ಈಗ ಉಳಿದಿಲ್ಲ. ದುರಂತವೆಂದರೆ, ಮನಾಲಿಗೆ ಪ್ರಯಾಣಿಕರನ್ನು ಕರೆತಂದ ಅನೇಕ ಪ್ರವಾಸಿ ಕಾರುಗಳನ್ನು ಇದೇ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ರಾತ್ರಿ ವೇಳೆ ಸಂಭವಿಸಿದ ಮೇಘಸ್ಫೋಟ ಬೆಳಕು ಹರಿಯುವಷ್ಟರಲ್ಲಿ, ಅಲ್ಲಿದ್ದ ಎಲ್ಲಾ ವಾಹನಗಳನ್ನು ನೀರುಪಾಲಾಗಿಸಿತ್ತು. ಅವುಗಳಲ್ಲಿ ಮಲಗಿದ್ದ ಚಾಲಕರಲ್ಲಿ ಕೆಲವರು ಇದುವರೆಗೂ ಪತ್ತೆಯಾಗಿಲ್ಲ. ಹಲವು ವಾಹನಗಳ ನಾಮಫಲಕಗಳು ಮಾತ್ರ ನದಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆಯಂತೆ. ಆ ಘಟನೆಯ ನಂತರ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪದೇ ಪದೇ ಮೇಘಸ್ಫೋಟ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅನೇಕ ಪ್ರವಾಸಿ ವಾಹನಗಳನ್ನು ಇಂದಿಗೂ ಮನಾಲಿಯಲ್ಲಿಯೇ ನಿಲ್ಲಿಸಲಾಗಿದೆ. ಇಲ್ಲಿನ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ನಗರದ ಒಳಗೆ ಕೂಡ ಕಡಿದಾದ ರಸ್ತೆಗಳಲ್ಲಿ ಬಹುಕಷ್ಟದಿಂದ ಸಂಚರಿಸುವಂತಾಗಿದೆ. ಜೊತೆಗೆ, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳ ರಿಪೇರಿ ಕೆಲಸ ಕೂಡ ಕೈಗೊಳ್ಳುವಂತಿಲ್ಲ. ಆದ್ದರಿಂದ ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಮನಾಲಿ ಈಗ ಪ್ರಕೃತಿ ವಿಕೋಪಕ್ಕೆ ಸಿಲುಕಿ ಅಕ್ಷರಶಃ ಜರ್ಜರಿತವಾಗಿದೆ.

ಪ್ರವಾಸಿಗರ ಸಂಖ್ಯೆ ಇಳಿಕೆ

ಸ್ಥಳೀಯರ ಪ್ರಕಾರ, ವಿಪರೀತ ಮಳೆಯ ಕಾರಣದಿಂದ ಉಂಟಾದ ಸಾವು-ನೋವು, ಆಸ್ತಿ-ಪಾಸ್ತಿ ನಾಶದ ಪ್ರಮಾಣ ದೊಡ್ಡದಾಗಿದೆ. ಆದರೆ, ಅದು ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳುವ ಆತಂಕದಿಂದ ಸರ್ಕಾರ ನೈಜ ಅಂಕಿಅಂಶಗಳನ್ನು ಜಗತ್ತಿನಿಂದ ಮುಚ್ಚಿಟ್ಟಿದೆ. ಕಾರಣವೇನೆಂದರೆ, ಮನಾಲಿಯ ಮುಖ್ಯ ಆದಾಯವಿರುವುದೇ ಅದರ ಪ್ರವಾಸೋದ್ಯಮದಲ್ಲಿ. ಸಾಮಾನ್ಯವಾಗಿ ಡಿಸೆಂಬರ್-ಜನವರಿಯಲ್ಲಿ ಇಲ್ಲಿ ಮಂಜು ಬೀಳುವುದರಿಂದ ಈ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಉಳಿದಂತೆ, ಲೇಹ್-ಲಡಾಕ್ ಮತ್ತು ಹಿಮಾಲಯ ಸುತ್ತಮುತ್ತಲಿನ ಪ್ರದೇಶಗಳಿಗೆ ಬೈಕ್ ಟ್ರಿಪ್ ಹೋಗುವವರು ಅಥವಾ ಇತರ ಪ್ರವಾಸಿಗರು ನಿರಂತರವಾಗಿ ಮನಾಲಿಗೆ ಭೇಟಿ ನೀಡುವುದರಿಂದ ಇಲ್ಲಿ ವರ್ಷವಿಡೀ ಪ್ರವಾಸಿಗರು ಕಂಡು ಬರುತ್ತಾರೆ. ಆದರೆ, ಈ ಪ್ರಕೃತಿ ವಿಕೋಪದಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಇಲ್ಲಿನ ಜನನಿಬಿಡ ಪ್ರದೇಶವಾದ ಮಾಲ್ ರೋಡ್ ಕೂಡ ಭಣಗುಟ್ಟುತ್ತಿದೆ. ಇಲ್ಲಿನ ಹಲವು ಅಂಗಡಿಗಳು ಮುಚ್ಚಬೇಕಾದ ಪರಿಸ್ಥಿತಿಗೆ ಬಂದಿವೆ. ಇಲ್ಲಿನ ಬಹುತೇಕ ಮೂಲಸೌಕರ್ಯಗಳು ಹಾಳಾಗಿದ್ದು, ಅದರ ದುರಸ್ತಿ ಕಾರ್ಯ ನಿಧಾನವಾಗಿ ಆರಂಭಗೊಂಡಿದ್ದು, ಮತ್ತೊಮ್ಮೆ ಪ್ರವಾಸೋದ್ಯಮ ಚಿಗಿತುಕೊಳ್ಳುವ ಮುನ್ನ ಮನಾಲಿಯನ್ನು ಮೊದಲಿನಂತೆ ಮಾಡುವ ಎಲ್ಲಾ ಪ್ರಯತ್ನ ಆರಂಭಗೊಂಡಿದೆ. ಮೇಘಸ್ಫೋಟದಿಂದ ನಿರ್ನಾಮವಾಗಿರುವ ಬಸ್ ನಿಲ್ದಾಣದ ನಿರ್ಮಾಣ ಕಾರ್ಯ ಕೂಡ ಆರಂಭಗೊಂಡಿದೆ. ಆದರೆ, ಮನಾಲಿಯಿಂದ ಚಂಡೀಗಢವನ್ನು ಸಂಪರ್ಕಿಸುವ ರಸ್ತೆಯ ನಡುವಿನ ಮಂಡಿ ಜಿಲ್ಲೆಯಲ್ಲಿ ಕೂಡ ಮೇಘಸ್ಫೋಟ ಸಂಭವಿಸಿರುವುದರಿಂದ ರಸ್ತೆಗಳು ಉತ್ತಮ ಸ್ಥಿತಿಯಲ್ಲಿಲ್ಲ. ಈಗಲೂ ಮನಾಲಿಯಿಂದ ಚಂಡೀಗಢ ತಲುಪುವ ರಸ್ತೆಯಲ್ಲಿ ದೊಡ್ಡ ವಾಹನಗಳಿಗೆ ಅನುವು ಮಾಡಿಕೊಡುತ್ತಿಲ್ಲ. ಕೇವಲ ಸಣ್ಣ ವಾಹನಗಳು ಮಾತ್ರ ಸಂಚರಿಸುತ್ತಿವೆ.

ತಲುಪುವುದು ಹೇಗೆ?

ಕುಲು ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಮನಾಲಿಗೆ ಪ್ರಯಾಣ ಬೆಳೆಸಬಹುದು. ಇಲ್ಲಿಗೆ ನೇರ ರೈಲು ಮಾರ್ಗ ಇಲ್ಲ. ಕಲ್ಕಿ ಅಥವಾ ಚಂಡೀಗಢಕ್ಕೆ ರೈಲಿನಲ್ಲಿ ಹೋಗಿ ಅಲ್ಲಿಂದ ರಸ್ತೆ ಮಾರ್ಗದಲ್ಲಿ ಚಲಿಸಬಹುದು. ಪ್ಯಾಕೇಜ್ ಪ್ರವಾಸದಲ್ಲಿ ದೆಹಲಿಯಿಂದಲೇ ಮನಾಲಿಗೆ ವಾಹನ ವ್ಯವಸ್ಥೆಯೂ ಮಾಡಲಾಗುತ್ತದೆ. ಇದು ಚಂಡೀಗಢದ ಮೂಲಕವೇ ಸಾಗುತ್ತದೆ.

ಪ್ರಮುಖ ಸ್ಥಳಗಳು

ಹಿಡಿಂಬಾ ದೇಗುಲ

ರೋಹತಾಂಗ್ ಪಾಸ್

ಸೋಲಂಗ್ ವ್ಯಾಲಿ

ಟಿಬೆಟಿಯನ್ ಮಾನೆಸ್ಟ್ರೀ

ವಸಿಷ್ಠ ದೇಗುಲ

ಮಾಲ್ ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.