ಮುಂಬೈ ಮೂಲದ ಟೆಕ್ಕಿ ಜಸ್ಮೀತ್ ಗಾಂಧಿ ಬರೋಬ್ಬರಿ ಒಂದು ಸಾವಿರ ಕಿಲೋ ಮೀಟರ್ ಪೆಡಲ್ ತುಳಿದು ಸುಸ್ತಾಗಿ ಬೆಂಗಳೂರಿಗೆ ಬಂದಿಳಿದರು. ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಉಚಿತ ಚಿಕಿತ್ಸೆಗೆ ದಾಖಲಾದ ಮುಗ್ಧ ಬಡ ಮಕ್ಕಳ ಮುಖ ನೋಡುತ್ತಿದ್ದಂತೆ ಅವರಿಗೆ ತಾವು ತುಳಿದ ಸಾವಿರ ಕಿ.ಮೀ. ಆಯಾಸವೆಲ್ಲ ಕರಗಿ ಹೋಗಿತ್ತು.

‘ರೆಟಿನೊಬ್ಲಾಸ್ಟೊಮಾ’ ಎನ್ನುವ ಮಕ್ಕಳ ಕಣ್ಣಿನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನವೆಂಬರ್ 14ರಂದು ಮುಂಬೈಯಿಂದ ಆರಂಭವಾಗಿದ್ದ ಜಸ್ಮೀತ್ ಅವರ ‘ಉಮೀದ್–1000’ ಪ್ರಯಾಣ ನ. 23ಕ್ಕೆ ಬೆಂಗಳೂರು ತಲುಪಿತ್ತು.
ಕಣ್ಣಿನ ಕ್ಯಾನ್ಸರ್ನಿಂದ ನರಳುತ್ತಿರುವ ಬಡ ಮಕ್ಕಳ ಶಸ್ತ್ರಚಿಕಿತ್ಸೆಗಾಗಿ ನಿಧಿ ಸಂಗ್ರಹಿಸುವ ಅರ್ಥಪೂರ್ಣ ಸಂದೇಶ ಹೊತ್ತ ಸೈಕಲ್ ಪಯಣಕ್ಕೆ ದಾರಿಯುದ್ದಕ್ಕೂ ಸ್ನೇಹಿತರ ತಂಡ, ವಿವಿಧ ಸಂಘ–ಸಂಸ್ಥೆಗಳು, ಕಾರ್ಪೋರೇಟ್ ಹೌಸ್ಗಳು ನೆರವಿನ ಹಸ್ತ ಚಾಚಿ ನಿಂತಿದ್ದವು.

‘ಈ ಸೈಕಲ್ ಸವಾರಿ ಸ್ವತಃ ನನಗೂ ಒಂದು ವಿನೂತನವಾದ, ಮನ ಮಿಡಿಯುವ ಅನುಭವ ಕಟ್ಟಿಕೊಟ್ಟಿದೆ. ಪ್ರತಿ ಕಿ.ಮೀ.ಗೆ ₨ 500ರಂತೆ ಒಂದು ಸಾವಿರ ಕಿ.ಮೀ. ಸೈಕಲ್ ತುಳಿದು ಕನಿಷ್ಠ ₨ 10 ಲಕ್ಷ ಸಂಗ್ರಹಿಸಿ ಬಡ ಮಕ್ಕಳ ಕಣ್ಣಿನ ಶಸ್ತ್ರಚಿಕಿತ್ಸೆಗೆ ನೀಡಬೇಕು ಎನ್ನುವ ಗುರಿಯೊಂದಿಗೆ ಆರಂಭವಾದ ಪಯಣ ಹೆಜ್ಜೆ ಹೆಜ್ಜೆಗೂ ಹೊಸ ಅವಕಾಶಗಳನ್ನು ಹರವುತ್ತ ಸಾಗಿತ್ತು’ ಎನ್ನುತ್ತಾರೆ ಜಸ್ಮೀತ್.

‘ನನ್ನ ಗುರಿ ಮತ್ತು ಉದ್ದೇಶವನ್ನು ಜನರಿಗೆ ತಲುಪಿಸಲು ಸಾಮಾಜಿಕ ಜಾಲತಾಣಗಳು ಹಾಗೂ ರೇಡಿಯೊ ಮಾಧ್ಯಮದ ಸಹಾಯ ಪಡೆದೆ. ಬೆಂಗಳೂರಿಗೆ ಬಂದು ತಲುಪಿದಾಗ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಂಗಳೂರಿನ ಈ ಹುಮ್ಮಸ್ಸು, ಜೀವನಪ್ರೀತಿ ನನ್ನ ಬದುಕಿಗೆ ಹೊಸ ಅರ್ಥವನ್ನೇ ಕೊಟ್ಟಿದೆ. ನನ್ನ ಮುಂದಿನ ಪಯಣ ಇನ್ನೂ ಅರ್ಥವತ್ತಾಗಿ ಮುಂದುವರಿಯಲಿದೆ’ ಎನ್ನುವುದು ಅವರ ಉತ್ಸಾಹದ ನಿಲುವು.

ಕಾಫಿ ಮತ್ತು ಕಳಕಳಿ
ಇಕ್ಷಾ ಫೌಂಡೇಶನ್ನ ಸ್ನೇಹಿತೆ ತನ್ಮಯಾ ಬೆಕ್ಕಾಲಲೆ ಅವರೊಂದಿಗೆ ಒಂದು ಕಪ್ ಕಾಫಿ ಕುಡಿಯುವ ಹೊತ್ತು ವ್ಯಕ್ತವಾದ ಸಣ್ಣದೊಂದು ಕಳಕಳಿ ಇದು. ಕಣ್ಣಿನ ಕ್ಯಾನ್ಸರ್ ಬಗ್ಗೆ ಪ್ರಾಥಮಿಕ ಮಾಹಿತಿ ಇಲ್ಲದೆ ಸಾವಿರಾರು ಮಕ್ಕಳು ‘ರೆಟಿನೊಬ್ಲಾಸ್ಟೊಮಾ’ ಕ್ಯಾನ್ಸರ್ಗೆ ಗುರಿಯಾಗುತ್ತಾರೆ. ಪ್ರಾಥಮಿಕ ಹಂತದಲ್ಲಿ ಅದನ್ನು ಗುರುತಿಸಿ ಚಿಕಿತ್ಸೆಗೆ ಮುಂದಾಗದ ಕಾರಣ ಅವರಲ್ಲಿ ಶೇ 50ರಷ್ಟು ಮಕ್ಕಳಿಗೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಾಗುವುದಿಲ್ಲ ಎನ್ನುವ ಸಂಗತಿ ಗೊತ್ತಾಯಿತು. ಅಂತಹ ಮಕ್ಕಳಿಗಾಗಿ ಏನಾದರೂ ಮಾಡಬೇಕು ಎನ್ನುವ ತುಡಿತದ ಫಲವೇ ಈ ಸೈಕಲ್ ಯಾನ ಎಂದು ವಿವರಿಸುತ್ತಾರೆ ಜಸ್ಮೀತ್.

ಹೀಗಿತ್ತು 10 ದಿನಗಳ ಪಯಣ
‘ಪ್ರತಿದಿನ 110 ಕಿ.ಮೀ, ಅಂದರೆ 5ರಿಂದ 6 ಗಂಟೆ ಮಾತ್ರ ಸೈಕಲ್ ತುಳಿಯಬಹುದಾಗಿತ್ತು. ಕತ್ತಲಾದ ನಂತರ ಸೈಕಲ್ ತುಳಿಯುವುದು ಅಪಾಯ. ಆದ್ದರಿಂದ ಸೂರ್ಯ ಮುಳುಗುವ ಮೊದಲು ನನ್ನ ಸೈಕಲ್ ಪೆಡಲ್ಗಳಿಗೆ ವಿರಾಮ ನೀಡಬೇಕಿತ್ತು’ ಎನ್ನುತ್ತಾರೆ.

ಸಂಗ್ರಹವಾದ ನಿಧಿ
ಹತ್ತು ಲಕ್ಷ ರೂಪಾಯಿ ಸಂಗ್ರಹಿಸುವ ಗುರಿಯೊಂದಿಗೆ ಸೈಕಲ್ ಹತ್ತಿದ್ದೆ. ಪುಣೆ, ಸತಾರಾ, ಕೊಲ್ಲಾಪುರ, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪಿದಾಗ ಕೈ ಸೇರಿದ್ದು ಬರೋಬ್ಬರಿ 23 ಲಕ್ಷ ರೂಪಾಯಿ! ನನಗೇ ನಂಬಲಾಗದಷ್ಟು ಆಶ್ಚರ್ಯ. ನಿಸ್ವಾರ್ಥ ಸೇವೆಗಳಿಗೆ ಬೆಂಬಲಿಸುವ ಮನಸ್ಸಿದೆ ಜನರಿಗೆ ಎನ್ನುವ ವಿಚಾರ ಆತ್ಮವಿಶ್ವಾಸವನ್ನೂ ತುಂಬಿದೆ.

ವೈಟ್ ಪ್ಯೂಪಿಲ್: ಎಚ್ಚರವಿರಲಿ
‘ರೆಟಿನೊಬ್ಲಾಸ್ಟೊಮಾ’ ಎರಡು ತಿಂಗಳಿಂದ ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡುಬರುವ ಒಂದು ಪ್ರಕಾರದ ಕ್ಯಾನ್ಸರ್. ಪ್ರಾಥಮಿಕ ಹಂತದಲ್ಲಿಯೇ ಇದನ್ನು ಗುರುತಿಸಿದರೆ ಶೇ 95ರಷ್ಟು ಗುಣಮುಖರಾಗುವ ಸಾಧ್ಯತೆ ಇರುತ್ತದೆ. ಆದರೆ ವಿಳಂಬವಾಗುತ್ತ ಹೋದಂತೆ ಅಪಾಯ ಹೆಚ್ಚುತ್ತಾ ಹೋಗುತ್ತದೆ.

ತಂದೆ–ತಾಯಿ ಅಥವಾ ಹತ್ತಿರದ ಸಂಬಂಧಿಕರಲ್ಲಿ ಈ ಕ್ಯಾನ್ಸರ್ ಕಂಡುಬಂದಿದ್ದರೆ ಅಥವಾ ಮೊದಲ ಮಗುವಿನಲ್ಲಿ ಈ ಕ್ಯಾನ್ಸರ್ ಪತ್ತೆಯಾಗಿದ್ದರೆ ಅಂಥವರ ಮಕ್ಕಳ ಮೇಲೆ ವಿಶೇಷ ನಿಗಾ ಇಡುವ ಅಗತ್ಯವಿರುತ್ತದೆ. ಇಕ್ಷಾ ಫೌಂಡೇಷನ್ನ ನೆರವಿನಿಂದ ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ನಾರಾಯಣ ನೇತ್ರಾಲಯ ಉಚಿತ ಶಸ್ತ್ರಚಿಕಿತ್ಸೆ ನಡೆಸುತ್ತ ಬಂದಿದೆ. ಜನರು ಇದರ ಪ್ರಯೋಜನ ಪಡೆಯಬೇಕು.
–ಡಾ. ಕೆ. ಭುಜಂಗ ಶೆಟ್ಟಿ, ನಾರಾಯಣ ನೇತ್ರಾಲಯದ ಅಧ್ಯಕ್ಷ

ಲಕ್ಷಣ ಗುರುತಿಸಿ
ರೆಟಿನೊಬ್ಲಾಸ್ಟೊಮಾ ಮಕ್ಕಳಲ್ಲಿ ಉಂಟಾಗುವ ಮೂರನೆಯ ಅತಿ ಸಾಮಾನ್ಯ ಕ್ಯಾನ್ಸರ್ ಆಗಿದ್ದು, ಹುಟ್ಟುವ ಪ್ರತಿ ೨೦,೦೦೦ ಮಕ್ಕಳ ಪೈಕಿ ಒಬ್ಬರು ಇದಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಕಣ್ಣುಗುಡ್ಡೆಯ (ಅಕ್ಷಿಪಟ) ಒಳಗೆ ಒಂದು ಚಿಕ್ಕ ಬಿಳಿ ಪಾಪೆ (ವೈಟ್ ಪ್ಯೂಪಿಲ್) ಕಂಡು ಬಂದರೆ ಅದು ರೆಟಿನೊಬ್ಲಾಸ್ಟೊಮಾ ಆಗಿರಬಹುದು ಎನ್ನುವುದು ಗಮನಿಸಿ. ಈ ಬಿಳಿ ಬಣ್ಣ ಕೆಲವೊಮ್ಮೆ ಮಗುವಿನ ಚಿತ್ರಗಳನ್ನು ತೆಗೆಯುವಾಗ ಫ್ಲಾಶ್ ಬೆಳಕಿನಲ್ಲಿ ಗೊತ್ತಾಗುತ್ತದೆ. ವಾರೆಗಣ್ಣು, ಕಡಿಮೆ ದೃಷ್ಟಿ, ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟಿದಂತಹ ಕುರುಹು, ನೋವು ಅಥವಾ ಊತ ಇದರ ಇತರೆ ಲಕ್ಷಣಗಳು.

–ಡಾ. ಅಶ್ವಿನ್ ಮಲ್ಲಿಪಟ್ನ, ನಾರಾಯಣ ನೇತ್ರಾಲಯದ ರೆಟಿನೊಬ್ಲಾಸ್ಟೊಮಾ ಘಟಕದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.