ಈ ತಿಂಗಳ ಮೊದಲ ವಾರ ಅಮೆರಿಕದ ಹಾಲಿವುಡ್‌ನಲ್ಲಿ ಸುದ್ದಿಸ್ಫೋಟವೊಂದು ಸಂಭವಿಸಿತು. ಅಕ್ಟೋಬರ್ ಐದನೆಯ ತಾರೀಖು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಹಾಲಿವುಡ್ ದಿಗ್ಗಜ ಹಾರ್ವಿ ವೈನ್‌ಸ್ಟಿನ್ ಮೇಲಿನ ಲೈಂಗಿಕ ಆರೋಪಗಳ ಕುರಿತು ವರದಿಯೊಂದನ್ನು ಪ್ರಕಟಿಸಿತ್ತು.

ಆ ವರದಿಯ ಬೆನ್ನಿನಲ್ಲೇ ಆಂಜಲಿನಾ ಜೋಲಿ, ಗ್ವೆನೆಥ್ ಪಾಲ್ಟ್ರೋ, ಆಶಲಿ ಜಡ್ ಮುಂತಾದ ಪ್ರಮುಖ ನಟಿಯರೂ ಸೇರಿದಂತೆ ನಲವತ್ತಕ್ಕಿಂಥ ಹೆಚ್ಚು ನಟಿಯರು ವೈನ್‌ಸ್ಟಿನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳ ದೂರು ದಾಖಲಿಸಿದ್ದಾರೆ.

ಈ ಹಾರ್ವಿ ವೈನ್‌ಸ್ಟಿನ್ ಸಾಮಾನ್ಯ ನಿರ್ಮಾಪಕನಲ್ಲ, ಈತ ನಿರ್ಮಿಸಿದ ಚಿತ್ರಗಳು ಈ ತನಕ ಎಂಬತ್ತೊಂದು ಬಾರಿ ಬೇರೆ ಬೇರೆ ವಿಭಾಗಗಳಲ್ಲಿ ಆಸ್ಕರ್ ಪುರಸ್ಕಾರ ಪಡೆದಿವೆ. 1999ರಲ್ಲಿ ’ಶೇಕ್ಸ್‌ಪಿಯರ್ ಇನ್ ಲವ್’ ಚಿತ್ರದ ನಿರ್ಮಾಣಕ್ಕಾಗಿ ಸ್ವತಃ ಈತನೇ ಆಸ್ಕರ್ ಪಡೆದಿದ್ದಾನೆ.

ಹೀಗಿರುವಾಗ ಅರವತ್ತೈದು ವರ್ಷ ವಯಸ್ಸಿನ ಈ ಕೋಟ್ಯಧಿಪತಿಯ ಪ್ರಭಾವಲಯ ಎಷ್ಟು ದೂರದವರೆಗೆ ಹಬ್ಬಿರಬಹುದೆಂಬುದನ್ನು ಊಹಿಸಬಹುದು. ಈ ಹಗರಣ ಬೆಳಕಿಗೆ ಬರುವ ಕೆಲವೇ ದಿನಗಳ ಹಿಂದೆ ಸಿನಿಮಾ ಕ್ಷೇತ್ರದ ಧುರಿಣರಷ್ಟೇ ಅಲ್ಲದೇ ಅಮೆರಿಕಾದ ರಾಜಕೀಯ ನೇತಾರರು, ಉದ್ಯಮಪತಿಗಳು ಕೂಡ ವೈನ್‌ಸ್ಟಿನ್ ಎದಿರು ತಲೆಬಾಗುತ್ತಿದ್ದರು.

ಈ ಆರೋಪಗಳ ಸರಮಾಲೆ ಬೆಳಕಿಗೆ ಬರುತ್ತಲೇ ಎಲ್ಲರೂ ಈತನ ಸ್ನೇಹವಲಯದಿಂದ ಅಂತರ ಕಾಯ್ದುಕೊಂಡು ಮೌನವಾಗಿದ್ದಾರೆ. ಒಬಾಮಾ, ಹಿಲರಿ ಕ್ಲಿಂಟನ್ ಮುಂತಾದವರು ಸಾರ್ವಜನಿಕವಾಗಿ ವಿರೋಧಿಸಿದ್ದಾರೆ. ನಟಿ ಎಲಿಸ್ಸಾ ಮಿಲಾನೋ ಆರಂಭಿಸಿದ ’ಮೀಟೂ’ ಅಂದರೆ ’ನಾನು ಕೂಡ’ ಎಂಬ ಹೆಸರಿನಡಿಯಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಹೆಣ್ಣುಮಕ್ಕಳು ತಾವು ಬೇರೆ ಬೇರೆ ಸಂದರ್ಭಗಳಲ್ಲಿ ಅನುಭವಿಸುವ ಲೈಂಗಿಕ ಕಿರುಕುಳದ ಕತೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ಕಛೇರಿಗಳಲ್ಲಿ, ಮನೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಅವರು ಅನುಭವಿಸಿದ ಪಾಡು ಬೆಚ್ಚಿ ಬೀಳಿಸುವಂತಿದೆ.

ನಟಿ ನಿರ್ದೇಶಕಿ ಬರಹಗಾರ್ತಿ ಸಾರಾ ಪಾಲಿ ತನ್ನ ಒಂದು ಅನುಭವವನ್ನು ಹೀಗೆ ಹಂಚಿಕೊಂಡಿದ್ದಾಳೆ. ಕೆಲ ವರ್ಷಗಳ ಹಿಂದೆ ಒಂದಿಷ್ಟು ಜನ ಮಹಿಳಾ ನಿರ್ದೇಶಕಿಯರು ಸೇರಿ ಇಂಗ್ಲಿಷಿನಲ್ಲಿ ಒಂದು ಚಿತ್ರ ನಿರ್ಮಿಸುವ ಆಸೆ ಪಟ್ಟಿದ್ದರಂತೆ. ಎಲ್ಲರೂ ಸೇರಿ ಕಥೆ–ಚಿತ್ರಕಥೆ ಬರೆದು ಒಟ್ಟಿಗೆ ನಿರ್ದೇಶಿಸಿ ನಿರ್ಮಿಸುವ ಮಹತ್ವಾಕಾಂಕ್ಷೆಯಿಂದ ಐದಾರು ನಿರ್ದೇಶಕಿಯರು ಒಂದೆಡೆ ಸೇರುತ್ತಾರೆ.

ಸಿನಿಮಾದ ವಿಷಯ ಏನಿರಬೇಕು ಎಂಬ ಮಾತು ಬಂದಾಗ ಸಿನಿಮಾ ಜಗತ್ತಿನಲ್ಲಿ ತಾವು ಕಂಡುಂಡ ತಮ್ಮ ಸ್ವಂತ ಅನುಭವಗಳನ್ನೇ ಚಿತ್ರಕಥೆಯ ವಸ್ತುವಾಗಿಸಿ ಒಂದು ಹಾಸ್ಯಭರಿತ ಚಿತ್ರಕಥೆಯನ್ನು ತಯಾರಿಸುವುದರಲ್ಲಿ ಉತ್ಸುಕರಾಗುತ್ತಾರೆ. ಆದರೆ ಒಬ್ಬೊಬ್ಬರೇ ತಮ್ಮ ನೆನಪಿನ ಪುಟಗಳಿಂದ ಅನುಭವಗಳನ್ನು ಹೇಳಲು ಶುರು ಮಾಡಿದಾಗ ಹೇಳುತ್ತ ಹೇಳುತ್ತ ಅವರೂ, ಕೇಳುತ್ತ ಕೇಳುತ್ತ ಉಳಿದವರೂ ಕಣ್ಣೀರಾಗುತ್ತಾರೆ.

ಆ ಕಥೆಗಳಲ್ಲಿ ಹಾಸ್ಯಕ್ಕೆ ಬೇಕಾಗುವ ಸರಕು ಒಂದಿಷ್ಟೂ ಕಾಣಸಿಗದೇ ಕಸಿವಿಸಿಗೊಳ್ಳುತ್ತಾರೆ. ಆದರೆ ಆ ಕತೆಗಳ ಮಹತ್ವವನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಲೇ ಅರಿತೆವು ಅಂತ ಸಾರಾ ಪಾಲಿ ತನ್ನ ಲೇಖನವೊಂದರಲ್ಲಿ ನೆನಪಿಸಿಕೊಂಡಿದ್ದಾಳೆ.

ಜೊತೆಗೆ ಈ ಕಥೆಗಳಿಗೆ ಪರ್ಯಾಯವಾಗಿ ಇನ್ನೊಂದು ಪ್ರಶ್ನೆಯೂ ನಾಗರಿಕ ಸಮಾಜದಲ್ಲಿ ತಲೆ ಎತ್ತಿದೆ. ಅದು ಈ ಹೆಣ್ಣುಮಕ್ಕಳು ಇಷ್ಟು ದಿನ ಏಕೆ ಮೌನವಾಗಿದ್ದರು ಎಂಬುದರ ಕುರಿತಾದುದು. ಇಷ್ಟು ದಿನ ಸುಮ್ಮನಿದ್ದು ಈಗ ಒಮ್ಮೆಲೇ ಸಾವಿರದ ಸಂಖ್ಯೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವ ಈ ಮಹಿಳೆಯರು ಪ್ರಚಾರಕ್ಕಾಗಿ ಹಾಗೆ ಮಾಡುತ್ತಿರಬಹುದೇ ಎಂಬ ವಾದವೂ ತಲೆ ಎತ್ತಿದೆ. ನೊಂದ ಹೆಣ್ಣುಗಳು ತಮ್ಮ ನೋವನ್ನು ಅನಾವರಣಗೊಳಿಸುವುದರ ಜೊತೆಗೆ ‘ನೀವು ಸ್ತ್ರೀವಾದಿಗಳಲ್ಲ, ಸ್ತ್ರೀನಾಝಿಗಳು’ ಎಂಬ ಮೂದಲಿಕೆಯನ್ನೂ ಕೇಳಬೇಕಾಗಿದೆ.

ಹಾಗಾದರೆ ಲೈಂಗಿಕ ಕಿರುಕುಳಕ್ಕೊಳಗಾದ ಹೆಣ್ಣು ಏಕೆ ತಕ್ಷಣ ಪ್ರತಿಭಟಿಸದೇ ಮೌನವಾಗಿರುತ್ತಾಳೆ? ಆಕೆಗೆ ಆ ಮೌನವನ್ನು ದಯಪಾಲಿಸಿದವರು ಯಾರು? ಇಲ್ಲಿಯ ತನಕ ಗಂಡು ಹೆಣ್ಣಿನ ನಡುವಿನ ಸಂಘರ್ಷದ ವಿಷಯವಾಗಿ ನಾವು ಕೇಳುತ್ತ ಬಂದ ಹುಲಿ-ಹುಲ್ಲೆ, ಬೆಂಕಿ-ಬೆಣ್ಣೆ, ಮುಳ್ಳು-ಸೆರಗು ಮುಂತಾದ ಕಟ್ಟುಕತೆಗಳ ಸೆರಗಿನಲ್ಲಿ ಈ ಮೌನ ಜನ್ಮ ತಾಳಿದೆ. ಆಕ್ರಮಿಸಿವವನು ಗಂಡು, ಸಹಿಸುವವಳು ಹೆಣ್ಣು – ಎಂಬ ಇನ್ನೊಂದು ಸುಳ್ಳಿನಲ್ಲಿ ಆ ಮೌನದ ಬೇರು ಅಡಕವಾಗಿದೆ. ಕಿರುಕುಳದ ವಿಷಯವಾಗಲಿ, ಲೈಂಗಿಕ ಸಂಗತಿಗಳ ಕುರಿತಾಗಲಿ ಮಾತನಾಡುವುದೇ ಅವಮಾನದ, ಲಜ್ಜೆಯ ವಿಷಯ ಎಂಬ ಮಿಥ್ಯೆಯಲ್ಲಿ ಆ ಮೌನ ಉಸಿರಾಡುತ್ತಿದೆ.

ಈ ಸುಳ್ಳುಗಳ ಭ್ರಾಂತಿಯಲ್ಲೇ ಬೆಳೆದ ಹೆಣ್ಣು ಯಾರೇ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡರೂ ಅದು ತನ್ನದೇ ತಪ್ಪು ಎಂಬಂತೆ ದೂರವಿರತೊಡಗುತ್ತಾಳೆ, ರಾಜಿಯಾಗುತ್ತಾಳೆ, ಖಿನ್ನತೆಗೆ ಜಾರುತ್ತಾಳೆ ಅಥವಾ ಆ ಕುರಿತು ಮಾತನಾಡುವುದೇ ಒಂದು ಅಪರಾಧವೆಂಬಂತೆ ಮೌನ ಧರಿಸುತ್ತಾಳೆ.

ಇತ್ತೀಚೆಗೆ ಹೆಣ್ಣುಮಕ್ಕಳು ತಮ್ಮ ಮೇಲೆ ನಡೆದ ಕಿರುಕುಳಗಳ ಕುರಿತು ಭಾರೀ ಸಂಖ್ಯೆಯಲ್ಲಿ ಮಾತನಾಡತೊಡಗಿದಂತೆ ಅದನ್ನು ಗಂಡು-ಹೆಣ್ಣುಗಳ ನಡುವೆ ನಡೆಯುತ್ತಿರುವ ಯುದ್ಧದಂತೆ ಬಿಂಬಿಸಲಾಗುತ್ತಿದೆ. ಆದರೆ ನೈಜದಲ್ಲಿ ಅದು ಗಂಡು-ಹೆಣ್ಣುಗಳಿಬ್ಬರನ್ನೂ ಸಮಾನವಾಗಿ ಕಾಣುವ ಮತ್ತು ಕಾಣಲಾರದ ಮನಃಸ್ಥಿತಿಗಳ ನಡುವಿನ ಸಮರ. ಇಲ್ಲಿ ಗಂಡು-ಹೆಣ್ಣುಗಳಿಬ್ಬರೂ ವಿರುದ್ಧ ದಿಕ್ಕಿನಲ್ಲಲ್ಲ, ಬದಲಾಗಿ ಒಂದೇ ಬದಿಗಿದ್ದಾರೆ; ಮತ್ತವರ ವಿರುದ್ಧವಾಗಿ ಹಿಂಸೆ-ಕ್ರೌರ್ಯಗಳನ್ನೇ ಮೈಗೂಡಿಸಿಕೊಂಡ ವಿಕೃತ ಮನಃಸ್ಥಿತಿಯಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಅದೇ ಕಾರಣಕ್ಕಾಗಿ ಈ ಅಂತರ್ಯುದ್ಧವನ್ನು ಗೆಲ್ಲಲು ಹೆಣ್ಣಿಗೆ ತನ್ನ ಆತ್ಮಸ್ಥೈರ್ಯದ ಜೊತೆಗೆ ಗಂಡಿನ ಸಹಕಾರವೂ ಬೇಕು. ಈ ಸಂಧಿಕಾಲದಲ್ಲಿ ಎಲ್ಲರೂ ಒಂದಾಗಿ ಲೈಂಗಿಕ ಕಿರುಕುಳದ ಬಗ್ಗೆ ಎಚ್ಚರ ಮೂಡಿಸಬೇಕಿದೆ. ಎಳವೆಯಿಂದಲೇ ಮಕ್ಕಳಿಗೂ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶ(ಗುಡ್ ಟಚ್- ಬ್ಯಾಡ್ ಟಚ್)ಗಳ ನಡುವಿನ ವ್ಯತ್ಯಾಸವನ್ನು ತಿಳಿಸಬೇಕಿದೆ.

ಪರಸ್ಪರ ಸಮ್ಮತಿಯಿಲ್ಲದೇ ಯಾವುದೇ ರೀತಿ ಲೈಂಗಿಕವಾಗಿ ಮುಂದುವರೆದರೂ, ಅದು ಗಂಡ-ಹೆಂಡತಿಯರ ನಡುವಾದರೂ ಸರಿ, ಕಿರುಕುಳವಾಗುತ್ತದೆ ಎಂಬ ಸರಳ ಸತ್ಯವನ್ನು ಚಿತ್ರ-ವಿಚಿತ್ರವಾಗಿ ತಿರುಚಿ ಸುಖ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ. ವಾದವೊಂದು ಶುರುವಾದಾಗ ಅದಕ್ಕೆ ಪ್ರತಿವಾದ ಹುಟ್ಟುವುದು ಸಹಜ.

ಪ್ರಜಾಪ್ರಭುತ್ವವನ್ನು ಗೌರವಿಸುವ ದೇಶದಲ್ಲಿ ಅದು ಸಮಂಜಸವೂ ಹೌದು. ಆದರೆ ಅದೇ ಮೊಂಡುವಾದವಾಗುವುದರಲ್ಲಿ ಅರ್ಥವಿಲ್ಲ. ಪ್ರತಿಯೊಬ್ಬ ಮನುಷ್ಯನೂ - ಗಂಡಾಗಲಿ, ಹೆಣ್ಣಾಗಲಿ, ತೃತೀಯಲಿಂಗಿಯಾಗಲಿ ಪರಸ್ಪರ ಗೌರವಕ್ಕೆ ಅರ್ಹರು ಎಂಬ ಭಾವನೆ ನಮ್ಮ ಸಾಮಾಜಿಕ ಪರಿಸರದಲ್ಲಿ, ಸಂಸ್ಕೃತಿಯಲ್ಲಿ ಬೆರೆತು ಹೋಗುವ ತನಕ ಈ ಸಂಕಟ ತಪ್ಪಿದ್ದಲ್ಲ.

ಹೀಗೆಂದು ಸಮಾಜದಲ್ಲಿ ಬದಲಾವಣೆ ದಿಢೀರನೆ ಬರಲು ಸಾಧ್ಯವಿಲ್ಲ ಎಂಬುದೂ ಅಷ್ಟೇ ಸತ್ಯ. ಬಿರುಗಾಳಿಯಂತೆ ಬಂದ ಬದಲಾವಣೆ ಅಷ್ಟೇ ಬೇಗ ಕರಗಿಹೋಗುವ ಭ್ರಮೆಯಂತೆಯೇ ಸರಿ. ಹಂತಹಂತವಾಗಿ, ನಿಧಾನವಾಗಿ ಮೂಡುವ ಬದಲಾವಣೆ ಬಹುಕಾಲ ನಿಲ್ಲುವಂಥದ್ದು. ಆದರದು ತನ್ನಿಂದ ತಾನೇ ನಿರ್ಮಾಣವಾಗದು. ಒಂದೊಂದೇ ಇಟ್ಟಿಗೆಯನ್ನಿಟ್ಟು ಮನೆಯ ಕಟ್ಟಿದಂತೆ ಒಂದೊಂದೇ ಸತ್ಯಕಥೆಯನ್ನು, ಒಂದೊಂದೇ ನೈಜ ಅನುಭವವನ್ನು ಮಾತಿನ ಮೂಲಕ, ಬರಹಗಳ ಮೂಲಕ ಹಂಚಿಕೊಳ್ಳುತ್ತ ಹೋದಾಗ ಮಾತ್ರ ಮುಂದಿನ ಪೀಳಿಗೆಗಾಗಿ ಸುರಕ್ಷಿತ ಪರಿಸರವ ನಿರ್ಮಿಸಬಲ್ಲೆವು.

‘ಈ ವಿಷಯವಾಗಿ ನಾವಲ್ಲದೇ ಮತ್ತ್ಯಾರು ಮಾತಾಡೋಕೆ ಸಾಧ್ಯ’ ಎಂಬ ಭಾವನೆ ಸಾಮಾಜಿಕವಾಗಿ ಅನುಕೂಲವುಳ್ಳವರಿಗೆ ಬರಬೇಕು. ಆಗ ಮಾತ್ರ ನಾವು ಧ್ವನಿಯಿಲ್ಲದವರಿಗೂ ಧ್ವನಿ ಎತ್ತಲು ಉತ್ತೇಜಿಸಬಲ್ಲೆವು. ಪ್ರತಿರೋಧದ ದನಿ ಅದು ಶುದ್ಧ ಸರಳ ಧಾರಾಳ ಸಂವಹನ. ಪ್ರತಿರೋಧದ ದನಿ ಖಂಡಿತ ಮೌನವಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.