ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಪುಟ್ಟ ಊರು ತಿರುಮಣಿ. ಅಲ್ಲೀಗ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾದ ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಊರಿನಲ್ಲೀಗ ಬೃಹತ್ ಟ್ರಕ್ಕುಗಳು ದೂಳೆಬ್ಬಿಸುತ್ತ ಸಾಗುವ ದೃಶ್ಯಗಳು ಸಾಮಾನ್ಯ. ಕುಗ್ರಾಮದಂತಿರುವ ತಿರುಮಣಿಯ ರಸ್ತೆ ಇಕ್ಕೆಲಗಳಲ್ಲೂ ಐದಾರು ಢಾಬಾಗಳು, ಪಂಕ್ಚರ್ ಅಂಗಡಿಗಳು. ಸೋಲಾರ್ ಪಾರ್ಕ್‌ನ ಪ್ರಭಾವ ಗ್ರಾಮವನ್ನು ಪುಟ್ಟ ಪೇಟೆಯಂತೆ ಬದಲಿಸಿದೆ. ಪಾವಗಡದಿಂದ ಕೆಲಸಗಾರರನ್ನು ಕರೆದುಕೊಂಡು ಬರುವ ಮತ್ತು ಸರಕು ಸರಂಜಾಮುಗಳನ್ನು ತುಂಬಿಕೊಂಡು ಬರುವ ವಾಹನಗಳು ಊರಿಗೆ ಆಧುನಿಕತೆಯನ್ನು ಹೊತ್ತು ತರುವಂತಿವೆ. ₹ 18 ಸಾವಿರ ಕೋಟಿ ವೆಚ್ಚದಲ್ಲಿ 13 ಸಾವಿರ ಎಕರೆಯಲ್ಲಿ ಪಾರ್ಕ್ ಕಾಮಗಾರಿ ನಡೆಯುತ್ತಿದೆ.

ಪಾವಗಡದಿಂದ ತಿರುಮಣಿಯವರೆಗೆ ಅಲ್ಲಲ್ಲಿ ಹಸಿರು. ತಿರುಮಣಿಯಲ್ಲಿ ಎಡಕ್ಕೆ ತಿರುವು ಪಡೆಯುವಾಗ ನಾಲ್ಕಾರು ಊರುಗಳ ಹೆಸರಿನ ಪಟ್ಟಿಯಲ್ಲಿ ವೆಂಕಟಮ್ಮನಹಳ್ಳಿಯ ಹೆಸರು ಕಾಣಿಸುತ್ತದೆ. ಈ ಹಳ್ಳಿ ರಾಜ್ಯದ ನಕ್ಸಲ್ ಚರಿತ್ರೆಯೊಂದಿಗೆ ತಳಕು ಹಾಕಿಕೊಂಡಿದೆ. ನಕ್ಸಲ್ ನಾಯಕ ಸಾಕೇತ್ ರಾಜನ್ ಹತ್ಯೆಗೆ ಪ್ರತೀಕಾರವಾಗಿ, 2005ರ ಫೆಬ್ರುವರಿಯಲ್ಲಿ ಗ್ರಾಮದಲ್ಲಿದ್ದ ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲರಿಂದ ದಾಳಿ ನಡೆದಿತ್ತು. ಏಳು ಮಂದಿ ಪೊಲೀಸರು ಮತ್ತು ಒಬ್ಬ ನಾಗರಿಕ ಹತ್ಯೆಗೊಳಗಾಗಿದ್ದರು. ರಾತ್ರಿ ನಡೆದ ಈ ಪ್ರಕರಣ ಬೆಳಕು ಮೂಡಿದಾಗ ಹಳ್ಳಿಯನ್ನು ಕುಖ್ಯಾತಗೊಳಿಸಿತ್ತು.

ತಿರುಮಣಿ ನಂತರದ ವಳ್ಳೂರು ಗ್ರಾಮ ದಾಟಿದರೆ ಸುತ್ತಲೂ ಬೆಟ್ಟಗುಡ್ಡಗಳು. ಬೃಹತ್ ಬಂಡೆಗಳ ಸಾಲು. ಬಯಲೋ ಬಯಲು. ಕಣ್ಣು ಹಾಯಿಸಿದಲ್ಲೆಲ್ಲ ಆಳೆತ್ತರದ ಜಾಲಿ ಗಿಡಗಳು. ತೆಲುಗಿನ ‘ರಕ್ತಚರಿತ್ರ’ ಸಿನಿಮಾದ ಚಿತ್ರೀಕರಣ ಇಲ್ಲಿ ನಡೆದಿರಬೇಕು ಎನ್ನುವಂತಹ ಸ್ಥಳ. ವೆಂಕಟಮ್ಮನಹಳ್ಳಿಯು ವಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ.

‘ಇದೇ ಜಾಗದಲ್ಲಿ ಬಸ್ ಅಡ್ಡಗಟ್ಟಿ ಅದರಲ್ಲಿದ್ದ ಒಬ್ಬರನ್ನು ಕೆಳಕ್ಕೆ ಇಳಿಸಿ, ಕತ್ತರಿಸಿ ಹಾಕಿದ್ದರು’ ಎಂದು ಹಿಂದೆ ನಡೆದ ಪ್ರಕರಣವನ್ನು ಸ್ಥಳೀಯರೊಬ್ಬರು ನೆನಪಿಸಿಕೊಂಡರು. ಆಂಧ್ರ ಪೊಲೀಸರು ಕರ್ನಾಟಕ ಪೊಲೀಸರಿಗೆ ಒಬ್ಬ ನಕ್ಸಲ್‌ನನ್ನು ಹಸ್ತಾಂತರಿಸಿದರು. ಸೇತುವೆ ಕೆಳಗೆ ಇಟ್ಟಿದ್ದ ನಾಲ್ಕು ಸಜೀವ ಪೈಪ್ ಬಾಂಬ್‌ಗಳನ್ನು ಆತ ನೀಡಿದ ಮಾಹಿತಿ ಆಧರಿಸಿ ವಶಪಡಿಸಿಕೊಳ್ಳಲಾಯಿತು. ಆ ಸೇತುವೆ ದಾಟಿಯೇ ವೆಂಕಟಮ್ಮನಹಳ್ಳಿಗೆ ಹೋಗಬೇಕು. 2005ರಲ್ಲಿ ಇಟ್ಟಿದ್ದ ಆ ಬಾಂಬ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು 2009ರಲ್ಲಿ!

‘ಅಲ್ಲಿ ಕಾಣುತ್ತಿದೆಯಲ್ಲಾ.... ಅದೇ, ವೆಂಕಟಮ್ಮನಹಳ್ಳಿ’ ಎಂದರು ಜಯಸಿಂಹ. ‘ಗ್ರಾಮದ ಆರಂಭದಲ್ಲಿಯೇ ಶಾಲೆ. ಈ ಕೊಠಡಿಯಲ್ಲಿ ಪೊಲೀಸರ ಕ್ಯಾಂಪ್ ಇತ್ತು. ಗುಂಡಿನ ದಾಳಿ ನಡೆದಿತ್ತು...’ ಎಂದು ಹೇಳುತ್ತಿರುವಾಗಲೇ, ನಾಲ್ಕೈದು ಹುಡುಗರು, ಹಿರಿಯರು ಎದುರಾದರು. ‘ಯಾರು ನೀವು? ಏನಾಗಬೇಕಿತ್ತು’ ಪ್ರಶ್ನೆಗಳು ಎದುರಾದವು. ಅವರ ಮಖದಲ್ಲಿ ಕೊಂಚ ಗಾಬರಿ. ಅಷ್ಟರಲ್ಲಿ ರಾಮು, ರಾಜಗೋಪಾಲ್ ಮತ್ತು ಖಾಸಿಂ ಸಾಬ್ ಬಂದರು. ನಾವು ಬರುವುದು ರಾಮುವಿಗೆ ಮೊದಲೇ ತಿಳಿದಿತ್ತು.

‘ನಮಗೆ ಕನ್ನಡ ಅಷ್ಟಾಗಿ ಬರುವುದಿಲ್ಲ. ಅದಕ್ಕಾಗಿ ರಾಜಗೋಪಾಲ್ ಅವರನ್ನು ಕರೆದುಕೊಂಡು ಬಂದಿದ್ದೇವೆ’ ಎಂದರು ರಾಮು. ರಾಜಗೋಪಾಲ್ ಪಕ್ಕದ ನಾಗಲಮಡಿಕೆಯ ಶಾಲೆಯಲ್ಲಿ ಶಿಕ್ಷಕ. ಖಾಸಿಂ ಸಾಬ್ ‘ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ’ಯ ಅಧ್ಯಕ್ಷ.

ನಕ್ಸಲ್ ಪ್ಯಾಕೇಜ್‌ನಡಿ ಅಭಿವೃದ್ಧಿಗೆ ಅನುದಾನ ಎಷ್ಟು ಬಂದಿತು? ಸೋಲಾರ್ ಪಾರ್ಕ್ ಗ್ರಾಮಕ್ಕೆ ಹಿತ ತಂದಿದೆಯೇ ಎಂದು ಗ್ರಾಮಸ್ಥರನ್ನು ಮಾತಿಗೆ ಎಳೆದರೆ, ಬೇಸರ, ಹತಾಶೆಯ ಪ್ರತಿಕ್ರಿಯೆಗಳು ಎದುರಾದವು. ನೀರು, ಕೃಷಿ ಸೇರಿದಂತೆ ಸಮಸ್ಯೆಗಳ ಪಟ್ಟಿ ಬಿಚ್ಚಿಡುತ್ತಿದ್ದ ರಾಜಗೋಪಾಲ್ ಅವರ ಮಾತಿಗೆ ಒಬ್ಬೊಬ್ಬರಾಗಿಯೇ ದನಿಗೂಡಿಸುತ್ತಿದ್ದರು.

ನಕ್ಸಲ್ ದಾಳಿ ನಂತರದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲಾಧಿಕಾರಿ, ಶಾಸಕರು, ಪೊಲೀಸ್ ಅಧಿಕಾರಿಗಳು ಸರದಿಯಂತೆ ಬಂದರು. ‘ಇಲ್ಲಿ ಪೊಲೀಸ್ ತರಬೇತಿ ಕೇಂದ್ರ ಆರಂಭಿಸುತ್ತೇವೆ. ಹೈಸ್ಕೂಲ್ ಕೊಡುತ್ತೇವೆ. ಅಭಿವೃದ್ಧಿಗೆ ವಿಶೇಷ ಅನುದಾನ ನೀಡುತ್ತೇವೆ ಎಂದಿದ್ದರು. ಆದರೆ ಆ ಯಾವ ಭರವಸೆಗಳೂ ಈಡೇರಲೇ ಇಲ್ಲ’ ಎಂದರು ರಾಜಗೋಪಾಲ್.

‘ನಕ್ಸಲ್ ಪ್ಯಾಕೇಜ್‌ನಡಿ ಅಭಿವೃದ್ಧಿಗೆ ಸ್ವಲ್ಪವೂ ಹಣ ಬಂದಿಲ್ಲವೇ’ ಎಂದು ಮತ್ತೆ ಕೇಳಿದಾಗ, ನಾಲ್ಕೈದು ಯುವಕರ ಸಹನೆಯ ಕಟ್ಟೆಯೊಡೆಯಿತು. ‘ಬೇರೆ ಕಡೆ ನಕ್ಸಲ್ ಪ್ಯಾಕೇಜ್ ಎಂದು ಸಿಕ್ಕಾಪಟ್ಟೆ ಹಣ ಕೊಟ್ಟಿದ್ದಾರೆ. ನಕ್ಸಲ್ ಎನ್‌ಕೌಂಟರ್ ಆದ ಕಡೆಗಳಲ್ಲಿ ಒಳ್ಳೆಯ ಪ್ಯಾಕೇಜ್ ನೀಡಿದ್ದಾರೆ. ನಮ್ಮ ಊರಿಗೆ ನಕ್ಸಲ್ ಹಣೆಪಟ್ಟಿ ಅಂಟಿತೇ ಹೊರತು ಅಭಿವೃದ್ಧಿ ಮಾತ್ರ ಇಲ್ಲವೇ ಇಲ್ಲ. ನೀವು ಪತ್ರಿಕೆಯಲ್ಲಿ ಬರೆಯುತ್ತೀರೋ, ಬಿಡುತ್ತೀರೋ ಗೊತ್ತಿಲ್ಲ. ಏನು ಸಮಸ್ಯೆ ಇದೆ ಎಂದು ಕೇಳಿಯಾದರೂ ಕೇಳುತ್ತಿದ್ದೀರಿ. ಆದರೆ ಹೋಬಳಿ, ತಾಲ್ಲೂಕಿನ ಅಧಿಕಾರಿಗಳು ಒಮ್ಮೆಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ’ ಎಂದು ಒಂದೇ ಉಸಿರಲ್ಲಿ ಮಾತುಗಳನ್ನು ಸಿಡಿಸಿದರು.

ಹತ್ಯಾಕಾಂಡದ ನಂತರ ಇಲ್ಲಿಗೆ ಭೇಟಿ ನೀಡಿದ್ದ ಅಧಿಕಾರಿಗಳು ಜನರಲ್ಲಿ ಬಿತ್ತಿದ್ದ ಅಭಿವೃದ್ಧಿಯ ಆಶಾವಾದ 12 ವರ್ಷ ಕಳೆದರೂ ಇನ್ನೂ ಮೊಳಕೆಯೇ ಒಡೆದಿಲ್ಲ. ಗೋಡೆಗೆ ಬಿದ್ದ ಗುಂಡಿನ ಏಟಿನ ಗಾಯಗಳನ್ನು ಬಣ್ಣ ಬಳಿದು ಮಾಯವಾಗಿಸಲಾಗಿದೆ.

1,500 ಜನಸಂಖ್ಯೆಯ 400 ಮನೆಗಳ ಹಳ್ಳಿಯಲ್ಲಿ ಮುಖ್ಯವಾಗಿ ಕಮ್ಮ, ಪರಿಶಿಷ್ಟ ಜಾತಿ, ಭೋವಿ, ಉಪ್ಪಾರರು, ಗೊಲ್ಲರು, ಮುಸ್ಲಿಮರು ಇದ್ದಾರೆ. ಪ್ರಾಬಲ್ಯ ಕಮ್ಮ ಸಮುದಾಯದ್ದು. ಸರ್ಕಾರಿ ದಾಖಲೆಗಳಲ್ಲಿ ಮಾತ್ರವೇ ಇದು ವೆಂಕಟಮ್ಮನಹಳ್ಳಿ. ಜನರ ಬಾಯಲ್ಲಿ ಎಗುವಪಲ್ಲಿ. ಕೆಎಸ್‌ಆರ್‌ಟಿಸಿ ಬಸ್‌ಗಳ ಬೋರ್ಡ್‌ಗಳಲ್ಲಿಯೂ ಇದೇ ಹೆಸರು. ಎಗುವಪಲ್ಲಿಯಿಂದ ಓಣಿಯಂತಹ ಐವತ್ತು ಮೀಟರ್ ರಸ್ತೆ ದಾಟಿದರೆ ಕೊತ್ತಗೆರೆ. ಈ ಗ್ರಾಮ ಆಂಧ್ರಕ್ಕೆ ಸೇರುತ್ತದೆ. ರಾಮಗಿರಿ ಮಂಡಲ (ಗ್ರಾಮ ಪಂಚಾಯಿತಿ) ವ್ಯಾಪ್ತಿಗೆ ಒಳಪಡುತ್ತದೆ. ಮುಖ್ಯರಸ್ತೆ ಸಿಮೆಂಟಿನದ್ದು. ಗ್ರಾಮದ ಒಳಗಿನ ಎಲ್ಲವೂ ಕಚ್ಚಾ ರಸ್ತೆಗಳೇ. ಕೊಳಚೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಅಲ್ಲೊಂದು ಇಲ್ಲೊಂದು ಕಾಣುವ ಚರಂಡಿಗಳಲ್ಲಿ ಮುಕ್ಕಾಲು ಪಾಲು ಹೂಳು ತುಂಬಿದೆ.

‘ಏನು ಸಮಸ್ಯೆ ಇದೆ ಎನ್ನುವುದನ್ನು ಬರೆದುಕೊಂಡು ಹೋಗುವುದಕ್ಕೆ ಬಂದಿದ್ದಾರೆ’ ಎಂದ ಖಾಸಿಂ ಸಾಬ್ ಮಾತು ಕೇಳಿ ಬಂದ ಮಹಿಳೆ, ‘ಈ ಕೊಳಚೆ ನೀರು ತೆಗೆಸಿ ಸ್ವಾಮಿ. ಸೊಳ್ಳೆ ಕಾಟ ಜಾಸ್ತಿ ಆಗಿದೆ. ನಾವು ಮನೆಯಲ್ಲಿ ಇರುವುದಕ್ಕೆ ಆಗಲ್ಲ’ ಎಂದರು ತೆಲುಗಿನಲ್ಲಿ.

ಕಿಷ್ಕಿಂಧೆಯಂತಹ ಮನೆಗಳಲ್ಲಿ ಮುಕ್ಕಾಲು ಪಾಲು ಹಳೆಯವು. ಕೆಲವು ಮನೆಗಳ ಮಾಳಿಗೆಗಳು ಬೀಳುವ ಸ್ಥಿತಿಯಲ್ಲಿವೆ. ‘ಈಗಲೂ 50 ಗುಡಿಸಲುಗಳು ಇವೆ. ಗುಡಿಸಲುಮುಕ್ತ ಮಾಡಿ ಎಂದು ಮೂರು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದೆವು. ಗಮನ ಕೊಟ್ಟಿಲ್ಲ’ ಎನ್ನುತ್ತಾ ಗುಡಿಸಲುಗಳ ಬಳಿಗೆ ಕರೆದುಕೊಂಡು ಹೋದರು ಖಾಸಿಂ ಸಾಬ್. ಯಾವಾಗಲಾದರೂ ಬೀಳಬಹುದು ಎನ್ನುವ ಸ್ಥಿತಿಯಲ್ಲಿರುವ ಗುಡಿಸಲುಗಳಲ್ಲಿಯೂ ಜನರು ವಾಸಿಸುತ್ತಿದ್ದಾರೆ.

‘ನಾವು ಗುಡಿಸಲಿನಲ್ಲಿ ಇದ್ದೇವೆ. ನಮ್ಮ ಗುಡಿಸಲಿಗೆ ಬನ್ನಿ, ನೋಡಿ ನಮ್ಮ ಸ್ಥಿತಿ’ ಎಂದು ಕರೆದರು ಹಲವು ಹಿರಿಯರು. ನಾವು ಆಶ್ರಯ ಮನೆಗಳನ್ನು ಕೊಡುವವರು ಇರಬೇಕು ಎಂದುಕೊಂಡು ‘ನಮ್ಮ ಚಿತ್ರಗಳನ್ನು ತೆಗೆದುಕೊಳ್ಳಿ’ ಎಂದು ಗುಡಿಸಲ ಮುಂದೆ ನಿಂತರು. ‘ಅಭಿವೃದ್ಧಿಗೆ ಹಣ ಕೊಟ್ಟಿದ್ದರೆ ನಮ್ಮ ಊರಲ್ಲಿ ಗುಡಿಸಲುಗಳು ಏಕೆ ಇರುತ್ತಿದ್ದವು’ ಎಂದು ಆಕ್ರೋಶದಿಂದ ಪ್ರಶ್ನಿಸಿದ್ದ ರಾಜಗೋಪಾಲ್ ಮಾತುಗಳಿಗೆ ಪುಷ್ಟಿ ಸಿಕ್ಕಿತು.

ಪಾವಗಡ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಫ್ಲೋರೈಡ್ ಸಮಸ್ಯೆ ಹೆಚ್ಚಿದೆ. ವೆಂಕಟಮ್ಮನಹಳ್ಳಿಯೂ ಈ ಪಟ್ಟಿಯಲ್ಲಿದೆ. ಗ್ರಾಮದಲ್ಲಿರುವ ಖಾಸಗಿ ನೀರು ಶುದ್ಧೀಕರಣ ಘಟಕ ಕೆಟ್ಟು ನಾಲ್ಕು ತಿಂಗಳಾಗಿದೆ. ಆಂಧ್ರಪ್ರದೇಶದ ದುಬ್ಬಾರಲಹಳ್ಳಿಯಿಂದ ನಿತ್ಯ ಸಂಜೆ ಕುಡಿಯುವ ನೀರು ತೆಗೆದುಕೊಂಡು ಆಟೊ ಬರುತ್ತದೆ. ಒಂದು ಕ್ಯಾನ್ ನೀರಿಗೆ ₹ 10, 1 ಬಿಂದಿಗೆಗೆ ₹ 5 ಕೊಟ್ಟು ಖರೀದಿಸುತ್ತಿದ್ದಾರೆ.

ಕೊತ್ತಗೆರೆಯತ್ತ ಕೈ ತೋರಿಸಿದ ರಾಮು, ‘ನಮ್ಮನ್ನು ಆಂಧ್ರಕ್ಕಾದರೂ ಸೇರಿಸಿದ್ದರೆ ಚೆನ್ನಾಗಿರುತ್ತಿತ್ತು’ ಎಂದರು. ಕೊತ್ತಗೆರೆಯ ನೆತ್ತಿಯ ಮೇಲೆ ಆಂಧ್ರ ಸರ್ಕಾರದ ಪವನ ವಿದ್ಯುತ್ ಪ್ಯಾನ್‌ಗಳು ತಿರುಗುತ್ತಿದ್ದವು. ‘ಪಕ್ಕದ ಹಳ್ಳಿಯಲ್ಲಿ ಮಳೆ ಇಲ್ಲದೆ ಕಡಲೆಕಾಯಿ ಗಿಡಗಳು ಒಣಗಿದ್ದವು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂದರು. ಟ್ಯಾಂಕರ್‌ಗಳ ಮೂಲಕ ಉಚಿತವಾಗಿ ನೀರು ಕೊಟ್ಟರು. ರೈತರ ಬಳಿಯೇ ಹೋಗಿ ಸಮಸ್ಯೆ ಆಲಿಸಿದರು. ನಮ್ಮ ಸುತ್ತಲಿನ ಆಂಧ್ರದ ಹಳ್ಳಿಗಳಲ್ಲಿ ಸಮಸ್ಯೆ ಉದ್ಭವಿಸಿದರೆ ಜನಪ್ರತಿನಿಧಿಗಳು ತಕ್ಷಣವೇ ಬರುತ್ತಾರೆ. ಆದರೆ ಸೋಲಾರ್ ಪಾರ್ಕ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಾಗ ಮನವಿ ಸಲ್ಲಿಸಲೂ ನಮ್ಮನ್ನು ಬಿಡಲಿಲ್ಲ. ಆಂಧ್ರ ಗ್ರಾಮಗಳು ಅಭಿವೃದ್ಧಿಯಾದಷ್ಟು ನಮ್ಮ ಊರು ಅಭಿವೃದ್ಧಿಯಾಗಿಲ್ಲ’ ಎಂದರು. ವೆಂಕಟಮ್ಮನಹಳ್ಳಿಗೆ ಹೋಲಿಸಿದರೆ ಕೊತ್ತಗೆರೆಯ ಸ್ಥಿತಿ ಉತ್ತಮವಾಗಿದೆ.

ವೆಂಕಟಮ್ಮನಹಳ್ಳಿ ರೈತರ ಶೇ 70ರಷ್ಟು ಜಮೀನು ಆಂಧ್ರಪ್ರದೇಶದಲ್ಲಿ ಇದೆ. ಇತ್ತೀಚೆಗೆ ಆಂಧ್ರ ಸರ್ಕಾರ ಮೂರು ಕಂತುಗಳಲ್ಲಿ ₹ 1.5 ಲಕ್ಷ ಸಾಲ ಮನ್ನಾ ಮಾಡಿತು. ಆದರೆ ಈ ಯಾವ ಸೌಲಭ್ಯವೂ ವೆಂಕಟಮ್ಮನಹಳ್ಳಿ ರೈತರಿಗೆ ದೊರೆತಿಲ್ಲವಂತೆ. ಅದಕ್ಕೆ ಕಾರಣ ಪಡಿತರ ಚೀಟಿ, ಮತದಾರರ ಪಟ್ಟಿ ಹಾಗೂ ಆಧಾರ್ ಕಾರ್ಡ್ ವಿಳಾಸ ಕರ್ನಾಟಕದಲ್ಲಿ ಇರುವುದು.

ಪಾರ್ಕ್ ತರದ ಹಸಿರು: ದೀಪದ ಬುಡದಲ್ಲಿ ಕತ್ತಲು ಎನ್ನುವಂತಿದೆ ಜನರ ಬದುಕು. ತಿರುಮಣಿಯಿಂದ ಆರಂಭವಾದ ಸೋಲಾರ್ ಪಾರ್ಕ್, ವೆಂಕಟಮ್ಮನ ಹಳ್ಳಿಯವರೆಗೂ ಹಬ್ಬಿದೆ. ಗ್ರಾಮದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಕೆಲಸಗಳು ನಡೆಯುತ್ತಿವೆ. ಬೃಹತ್ ಟವರ್‌ಗಳು ಎಲೆ ಎತ್ತುತ್ತಿವೆ. ಮುಖ್ಯಮಂತ್ರಿ, ಇಂಧನ ಸಚಿವ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದಾರೆ.

‘ಪಾರ್ಕ್‌ನಿಂದ ನಮಗೆ ಇದುವರೆಗೂ ಕಿಂಚಿತ್ತೂ ಉಪಯೋಗವಾಗಿಲ್ಲ’ ಎನ್ನುವ ದೂರು ಗ್ರಾಮಸ್ಥರದ್ದು. ಪಾರ್ಕ್‌ಗಾಗಿ ಸರ್ಕಾರ ವಳ್ಳೂರು ಮತ್ತು ತಿರುಮಣಿ ಪಂಚಾಯಿತಿ ರೈತರಿಂದ ಪ್ರತಿ ಎಕರೆಗೆ ವಾರ್ಷಿಕ ₹ 21 ಸಾವಿರದಂತೆ ಭೂಮಿ ಗುತ್ತಿಗೆ ಪಡೆದಿದೆ. 25 ವರ್ಷ ಈ ಒಡಂಬಡಿಕೆ.

‘ಸಬ್‌ಸ್ಟೇಷನ್ ನಿರ್ಮಾಣಕ್ಕಾಗಿ ಗ್ರಾಮದ 100ರಿಂದ 150 ಎಕರೆ ಜಮೀನು ಖರೀದಿಸಿದ್ದಾರೆ. ಆದರೆ ಗುತ್ತಿಗೆ ಪಡೆಯುತ್ತಿಲ್ಲ. 800 ಎಕರೆ ಜಮೀನು ಗುತ್ತಿಗೆ ತೆಗೆದುಕೊಳ್ಳಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿ ಆರು ತಿಂಗಳಾಗಿದೆ. ಖರೀದಿಸುವ ಭರವಸೆ ನೀಡುತ್ತಿದ್ದಾರೆ ಅಷ್ಟೇ. ಯಾವ ಕಾರಣಕ್ಕೆ ನಮ್ಮ ಗ್ರಾಮದ ಜಮೀನು ಗುತ್ತಿಗೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ತಿಳಿಯುತ್ತಿಲ್ಲ’ ಎಂದರು ರಾಜಗೋಪಾಲ್.

‘ಭೂಮಿ ಗುತ್ತಿಗೆ ನೀಡಿದರೆ ನಿಮ್ಮ ಬದುಕು ಹೇಗೆ’ ಎಂದು ಪ್ರಶ್ನಿಸಿದಾಗ, ಮತ್ತೊಂದು ಬಗೆಯ ಸಮಸ್ಯೆ ಬಿಚ್ಚಿಟ್ಟರು ಖಾಸಿಂ ಸಾಬ್. ‘ಮಳೆ, ಬೆಳೆ ಇಲ್ಲದ ಮೇಲೆ ಜಮೀನು ಇಟ್ಟುಕೊಂಡು ಏನು ಮಾಡುವುದು? 10–15 ವರ್ಷ ಆಗಿದೆ ಒಳ್ಳೆಯ ಮಳೆ ಬಂದು. ಗ್ರಾಮಕ್ಕೆ ಒಂದು ಕೆರೆಯೂ ಇಲ್ಲ. ಈ ವರ್ಷ ಸ್ವಲ್ಪ ಮಳೆ ಬಂತು. ತೊಗರಿ ಬೆಳೆ ಇಟ್ಟಿದ್ದೇವೆ. ಮೋಡದ ವಾತಾವರಣದಿಂದ ಹೂ ಉದುರುತ್ತಿದೆ. ಹುಳಗಳ ಕಾಟ ಹೆಚ್ಚಿದೆ. ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಂದು ದಶಕಗಳೇ ಕಳೆದಿವೆ. ಎಲ್ಲ ವರದಿಗಳೂ ಕಚೇರಿಗಳಲ್ಲಿಯೇ ಸಿದ್ಧವಾಗುತ್ತವೆ. ಕೊನೇಪಕ್ಷ ಗುತ್ತಿಗೆ ನೀಡಿದರೆ ಆ ಹಣದಿಂದಲಾದರೂ ಬದುಕಬಹುದಲ್ಲವಾ’ ಎಂದು ಮರುಪ್ರಶ್ನೆ ಎಸೆದರು.

ಖಾಸಿಂ ಸಾಬ್ ಮಾತುಗಳನ್ನು ಮುಂದುವರಿಸಿದ ರಾಜಗೋಪಾಲ್, ‘ಬೆಳೆಗೆ ಬೀಳುವ ಹುಳುಗಳನ್ನು ಹಿಡಿದು ಕೃಷಿ ಇಲಾಖೆ ಕಚೇರಿಗೆ ತೆಗೆದುಕೊಂಡು ಹೋಗಿ ತೋರಿಸಬೇಕು. ಆಗಲೂ ಔಷಧಿ ಸಿಕ್ಕುತ್ತದೆ ಎನ್ನುವ ಭರವಸೆ ಇಲ್ಲ. ಇಂಡೆಂಟ್ ಹಾಕುತ್ತೇವೆ, ಕೊಡುತ್ತೇವೆ ಎಂದು ಹೇಳಿ ಸಾಗಹಾಕುತ್ತಾರೆ’ ಎಂದು ಕಹಿ ಅನುಭವಗಳನ್ನು ಬಿಡಿಸಿಟ್ಟರು.

‘ಜಮೀನನ್ನು ಸೋಲಾರ್ ಪಾರ್ಕ್‌ನವರು ಇನ್ನೂ ಗುತ್ತಿಗೆಗೆ ತೆಗೆದುಕೊಂಡಿಲ್ಲ. ಆದರೂ ಬ್ಯಾಂಕ್‌ನವರು ಸಾಲ ಕೊಡುವುದಿಲ್ಲ. ನಿಮ್ಮನ್ನು ಸೋಲಾರ್ ಪಾರ್ಕ್‌ಗೆ ಸೇರಿಸುತ್ತಾರೆ. ಸಾಲ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ನಮ್ಮ ಊರಿನ ಬಗ್ಗೆ ಅವರಿಗೆ ಭಯ, ಅಳುಕು ಇದ್ದರೆ ಅದನ್ನು ನೇರವಾಗಿಯೇ ಹೇಳಬಹುದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಮಾತುಗಳನ್ನು ಪುನರುಚ್ಚರಿಸಿದರು ವೆಂಕಟಮ್ಮನಹಳ್ಳಿಯವರೇ ಆದ ಮಾಜಿ ನಕ್ಸಲ್ ಪೆದ್ದಣ್ಣ. ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಿ 2008ರಲ್ಲಿ ಇವರನ್ನು ಆಂಧ್ರ ಪೊಲೀಸರು ಬಂಧಿಸಿ, ಕರ್ನಾಟಕ ಪೊಲೀಸರ ವಶಕ್ಕೆ ನೀಡಿದ್ದರು. ಎರಡೂ ರಾಜ್ಯಗಳಲ್ಲಿ 16 ಪ್ರಕರಣಗಳು ಇವರ ಮೇಲಿದ್ದವು. 2011ರಲ್ಲಿ ಜೈಲಿನಿಂದ ಬಿಡುಗಡೆಯಾದರು. ನಕ್ಸಲ್ ಚಟುವಟಿಕೆಯಿಂದ ಈಗ ಹೊರಬಂದಿದ್ದಾರೆ. ಅವರ ವಿರುದ್ಧದ ಪ್ರಕರಣಗಳು ಸಹ ಖುಲಾಸೆಯಾಗಿವೆ.

‘ವೆಂಕಟಮ್ಮನಹಳ್ಳಿ ಜೊತೆ ಬಳಸಮುದ್ರ, ವಳ್ಳೂರು, ಕ್ಯಾತಗಾನಚೆರ್ಲು, ಇಂಟೂರಾಯನಹಳ್ಳಿಗಳ ರೈತರಿಗೂ ಬ್ಯಾಂಕಿನವರು ಸಾಲ ಕೊಡುತ್ತಿಲ್ಲ. ಹೊಸ ಬದುಕು ಕಟ್ಟಿಕೊಳ್ಳಲು ನಮಗೆ ಇದೇ ದೊಡ್ಡ ಸಮಸ್ಯೆ. ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಮಂಜೂರು ಆಗುತ್ತದೆ. ಆದರೆ ಬ್ಯಾಂಕ್‌ನವರು ಸಾಲ ಕೊಡದೇ ಇರುವುದರಿಂದ ಅದನ್ನು ಬಳಸಲಾಗುತ್ತಿಲ್ಲ. ನಿಮ್ಮ ಊರ ಜನರು ಹಳೇ ಸಾಲವನ್ನೇ ಕಟ್ಟಿಲ್ಲ; ಈಗ ನಿಮಗೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಚಳವಳಿಯಲ್ಲಿದ್ದ ನಮಗೆ ರಾಜಕಾರಣಿಗಳ, ಅಧಿಕಾರಿಗಳ ಮುಂದೆ ಕೈ ಕಟ್ಟಿ ನಿಂತು ಗೋಗರೆಯಲು ಮನಸ್ಸು ಒಪ್ಪುವುದಿಲ್ಲ’ ಎಂದು ಕಡ್ಡಿಮುರಿದಂತೆ ಹೇಳಿದರು ಪೆದ್ದಣ್ಣ.

‘ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ನಕ್ಸಲ್ ಪ್ಯಾಕೇಜ್‌ನಡಿ ತಾಲ್ಲೂಕಿಗೆ ಅಪಾರ ಹಣ ಬಿಡುಗಡೆ ಆಯಿತು. ಅದು ಎಲ್ಲಿ ಹೋಯಿತು ಎನ್ನುವುದು ಇಲ್ಲಿಯವರೆಗೂ ತಿಳಿದೇ ಇಲ್ಲ. ನಮ್ಮ ಜತೆ ಈ ಹಿಂದೆ ಕೆಲಸ ಮಾಡಿದ ಪಕ್ಕದ ರಾಮಗಿರಿ ಮಂಡಲದ 40 ಮಾಜಿ ನಕ್ಸಲರಿಗೆ ಆಂಧ್ರ ಸರ್ಕಾರ ಅನಂತಪುರ ಜಿಲ್ಲಾ ಕೇಂದ್ರದಲ್ಲಿ ನಿವೇಶನ ಕೊಟ್ಟಿದೆ. ಆದರೆ ನಮ್ಮ ಹಳ್ಳಿಗಳಿಗೆ ಕರ್ನಾಟಕ ಸರ್ಕಾರ ಇದುವರೆಗೂ ಸೌಕರ್ಯವನ್ನೇ ಕೊಟ್ಟಿಲ್ಲ’ ಎಂದು ನುಡಿದರು.

‘ಸೋಲಾರ್ ಪಾರ್ಕ್ ಕೆಲಸಗಳು ಬಡವರಿಗೆ ಸಿಕ್ಕುತ್ತಿಲ್ಲ. ಪ್ರಬಲ ವರ್ಗದವರೇ ಅಲ್ಲಿ ವಾಹನಗಳನ್ನು ಗುತ್ತಿಗೆ ಆಧಾರದಲ್ಲಿ ಓಡಿಸುತ್ತಿದ್ದಾರೆ. ಈ ಕಾಮಗಾರಿಗಳಲ್ಲಿ ಹಣ ಮಾಡುತ್ತಿರುವವರೂ ಅವರೇ. ಅವರನ್ನು ಬೆಂಬಲಿಸುವ ಇತರ ಜಾತಿಯವರಿಗೆ ಸ್ವಲ್ಪ ಮಟ್ಟಿಗೆ ಅನುಕೂಲ ಆಗಿದೆ. ಬಡವರಿಗೆ ಯಾವ ಅನುಕೂಲ ಆಗಿದೆ ಎಂದು ಅಧಿಕಾರಿಗಳೇ ತಿಳಿಸಲಿ’ ಎಂದರು ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ಮಾಜಿ ನಕ್ಸಲ್.

‘ನಕ್ಸಲರು ಗ್ರಾಮಕ್ಕೆ ರಾತ್ರಿ ಬರುತ್ತಿದ್ದರು. ಇಲ್ಲಿಯೂ ಕೆಲವರು ಅವರ ಪರವಾಗಿ ಇದ್ದರು. ಆದರೆ ನಕ್ಸಲರಿಂದ ಯಾರಿಗೂ ತೊಂದರೆ ಆಗಿಲ್ಲ. ಅವರಷ್ಟಕ್ಕೆ ಬರುತ್ತಿದ್ದರು, ಬಡವರೊಂದಿಗೆ ಮಾತನಾಡುತ್ತಿದ್ದರು, ಹೋಗುತ್ತಿದ್ದರು. ಕಡಲೆಕಾಯಿ ಹೆಚ್ಚು ಬೆಳೆಯುತ್ತಿದ್ದ ಸಮಯದಲ್ಲಿ, ಬಡವರಿಗೆ ಒಂದಿಷ್ಟು ಕೊಡಿ ಎಂದು ಕೇಳುತ್ತಿದ್ದರು. ದೌರ್ಜನ್ಯ ಮಾಡಿಲ್ಲ. ಗಡಿಯಲ್ಲಿ ನಕ್ಸಲರು ಈ ಮಾರ್ಗವಾಗಿ ಓಡಾಡುತ್ತಿದ್ದಾರೆ ಎಂದು ಇಲ್ಲಿ ಪೊಲೀಸ್ ಕ್ಯಾಂಪ್ ಆರಂಭವಾಯಿತು. ಅಲ್ಲಿಂದಲೇ ರಗಳೆ ರಾಮಾಯಣ ಜಾಸ್ತಿ ಆಗಿದ್ದು’ ಎಂದು ಗ್ರಾಮದ ಕೆಲವರು ನೆನಪಿಸಿಕೊಂಡರು.

‘ಪೊಲೀಸರು ಬಂಧಿಸಿದವರಲ್ಲಿ ಯಾರೂ ಈ ಚಟುವಟಿಕೆಯಲ್ಲಿ ಪಾಲ್ಗೊಂಡಿರಲಿಲ್ಲ. ಹತ್ಯಾಕಾಂಡ ನಡೆಸಿದವರು ಆಂಧ್ರದ ಪೊಲೀಸರ ಎನ್‌ಕೌಂಟರ್‌ಗೆ ಈಗಾಗಲೇ ಬಲಿಯಾಗಿದ್ದಾರೆ. ಮತ್ತೊಂದಿಷ್ಟು ಜನರು ಪೊಲೀಸ್ ವಶದಲ್ಲಿ ಇದ್ದಾರೆ’ ಎಂದು ಹಳೆಯ ದಿನಗಳ ಬಗ್ಗೆ ಮಾತನಾಡಿದರು ಈ ಮಾಜಿ ನಕ್ಸಲ್.

‘ಆಂಧ್ರದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಮುಖ್ಯಮಂತ್ರಿ ಆದ ನಂತರ ನಕ್ಸಲರ ಪ್ರಭಾವ ಕಡಿಮೆ ಆಯಿತು. ಈಗ 10 ವರ್ಷದಿಂದ ಗ್ರಾಮಕ್ಕೆ ಯಾರೂ ಬಂದಿಲ್ಲ. ಗ್ರಾಮದ ಬಗ್ಗೆ ಇದ್ದ ಭಯ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತಿದೆ. ಹಾಗಿದ್ದರೂ ಹೊರಗಿನ ಜನರು ನಕ್ಸಲ್ ಪ್ರದೇಶ ಎನ್ನುವ ಭ್ರಮೆಯನ್ನು ತಲೆಯಲ್ಲಿ ತುಂಬಿಕೊಂಡಿದ್ದಾರೆ’ ಎಂದು ಅವರು ಹೇಳುತ್ತಿರುವಾಗಲೇ, ರಾಜಗೋಪಾಲ್ ನಡುವೆ ಪ್ರವೇಶಿಸಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮಕ್ಕೆ ಒಬ್ಬರು ಚುನಾವಣಾಧಿಕಾರಿ ಬಂದಿದ್ದರು. ಊರಿನ ಹೆಸರು ಕೇಳಿಯೇ ಹೆದರಿದ್ದರು. ಗ್ರಾಮಕ್ಕೆ ಬಂದಾಗ ನಡುಗುತ್ತಿದ್ದರು. ಅವರ ಸ್ಥಿತಿ ನೋಡಿ ನಾವೇ, ಬೆಳಿಗ್ಗೆ 6ಕ್ಕೆ ಬನ್ನಿ ಎಂದು ನಾಗಲಮಡಿಕೆಗೆ ವಾಪಸ್ ಕಳುಹಿಸಿದೆವು’ ಎಂದು ಪ್ರಸಂಗ ನೆನಪಿಸಿಕೊಂಡಾಗ ಎಲ್ಲರ ಮುಖದಲ್ಲಿ ನಗು. ನಗುವಿನೊಟ್ಟಿಗೆಯೇ ಬೇಸರದ ಘಟನೆಗಳನ್ನೂ ಪ್ರಸ್ತಾಪಿಸಿದರು. ‘ವಿದ್ಯಾಭ್ಯಾಸಕ್ಕೆ ಹೋಗಿದ್ದ ನಮ್ಮ ಹುಡುಗರಿಗೆ ತುಮಕೂರಿನಲ್ಲಿ ಬಾಡಿಗೆಗೆ ಕೊಠಡಿಗಳನ್ನು ಕೊಡುತ್ತಿರಲಿಲ್ಲ. ಪೊಲೀಸರ ಹತ್ಯೆ ಕಾರಣದಿಂದ ಊರಿಗೆ ಕಪ್ಪು ಚುಕ್ಕಿ ಉಳಿದಿದೆ’ ಎಂದು ಮೌನವಾದರು.

ಗ್ರಾಮ ಸುತ್ತುವಾಗ ಮನೆ ಅಂಗಳದಲ್ಲಿ ಮಲಗಿದ್ದ 40– 50 ವರ್ಷ ದಾಟಿದವರನ್ನು ತೋರಿಸಿ ‘ಇವರು ಆ ಕಾಲದಲ್ಲಿ ನಕ್ಸಲ್ ಬೆಂಬಲಿಗರು. ಈಗ ಯಾರೂ ಇಲ್ಲ’ ಎಂದು ಕೆಲವು ಯುವಕರು ಹೇಳಿದರು.

ವೆಂಕಟಮ್ಮನಹಳ್ಳಿ ದಾಳಿಯಲ್ಲಿ 300 ನಕ್ಸಲರು ಮತ್ತು ಬೆಂಬಲಿಗರು ಭಾಗಿಯಾಗಿದ್ದರು. ಇವರಲ್ಲಿ 81 ಜನರನ್ನು ಗುರುತಿಸಲಾಗಿದೆ. ಈ ಪೈಕಿ 20 ಜನರನ್ನು ಪೊಲೀಸರು ಬಂಧಿಸಿದರೆ, 11 ಜನ ವಿವಿಧ ಕಡೆಗಳಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತರಾದರು. ಮೂವರು ಮಾಫಿ ಸಾಕ್ಷಿಗಳಾಗಿ ಪರಿವರ್ತನೆ ಆದರು. ಇನ್ನೂ 47 ಜನರನ್ನು ಬಂಧಿಸಲು ಹಾಗೂ 219 ಜನರನ್ನು ಗುರುತಿಸಲು ಸಾಧ್ಯವಾಗಿಲ್ಲ.

‘ಈ ಪ್ರಕರಣದಲ್ಲಿನ ಬಂಧಿತರು 2012ರಲ್ಲಿ ತುಮಕೂರು ನ್ಯಾಯಾಲಯದಿಂದ ಖುಲಾಸೆಯಾದರು. ಆಗ ಅವರನ್ನು ವೆಂಕಟಮ್ಮನಹಳ್ಳಿಯಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಅಂದರೆ ಅಲ್ಲಿಯವರೆಗೂ ಗ್ರಾಮದಲ್ಲಿ ನಕ್ಸಲ್ ಪರ ವಾತಾವರಣ ಇತ್ತು’ ಎನ್ನುವುದು ಪೊಲೀಸರ ಅಭಿಪ್ರಾಯ.

ಪರಿಟಾಲ ಕುಟುಂಬದ ಪ್ರಭಾವ

ತೆಲುಗುದೇಶಂ ಪಕ್ಷದ (ಟಿಡಿಪಿ) ನಾಯಕ ದಿವಂಗತ ಪರಿಟಾಲ ರವಿ ಮತ್ತು ಅವರ ಕುಟುಂಬದ ಪ್ರಭಾವ ಗ್ರಾಮದ ಮೇಲೆ ದಟ್ಟವಾಗಿದೆ. ರವಿ ಅವರ ಪತ್ನಿ ಹಾಗೂ ಸಚಿವೆ ಸುನೀತಾ ಅವರು ಪ್ರತಿನಿಧಿಸುವ ರಾಪ್ತಾಡು ವಿಧಾನಸಭಾ ಕ್ಷೇತ್ರಕ್ಕೆ ಕೊತ್ತಗೆರೆ ಸೇರುತ್ತದೆ. ರವಿ ಅವರ ಸ್ವಗ್ರಾಮ ವೆಂಕಟಾಪುರ ಇಲ್ಲಿಂದ ಎರಡೇ ಕಿಲೋಮೀಟರ್. ಪರಿಟಾಲ ಕುಟುಂಬದ ದಾನ ಧರ್ಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಗ್ರಾಮಸ್ಥರು ಮಾತು ಮಾತಿಗೂ ಸ್ಮರಿಸುತ್ತಾರೆ.

‘ನಮ್ಮೂರಲ್ಲಿ ಬಹಳ ಜನರು ಸುನೀತಮ್ಮನ ಸಂಬಂಧಿಕರೇ ಇದ್ದಾರೆ. ಏನಾದರೂ ಕಾರ್ಯಕ್ರಮ ನಡೆದರೆ ಬರುತ್ತಾರೆ’ ಎನ್ನುವಾಗ ಅಭಿಮಾನ ಇಣುಕುತ್ತದೆ. ಗ್ರಾಮದ ನಡುವಿನ ಶ್ರೀರಾಮ ದೇವಾಲಯದ ಎದುರಿನ ಹೈಮಾಸ್ಟ್ ದೀಪವನ್ನು ಪರಿಟಾಲ ಶ್ರೀರಾಮ್ (ಸುನೀತಾ ಅವರ ಮಗ) ದಾನವಾಗಿ ನೀಡಿದ್ದಾರೆ.

ಪಾವಗಡದಲ್ಲಿ ನಕ್ಸಲ್ ಹೆಜ್ಜೆಗಳು

ತಾಲ್ಲೂಕಿನ 210 ಗ್ರಾಮಗಳಲ್ಲಿ 81 ಗ್ರಾಮಗಳು ನಕ್ಸಲ್‌ಪೀಡಿತ. 2015ರವರೆಗಿನ ಪೊಲೀಸ್ ದಾಖಲೆಗಳ ಪ್ರಕಾರ ತಾಲ್ಲೂಕಿನಲ್ಲಿ 71 ಮಾಜಿ ನಕ್ಸಲರು ಇದ್ದಾರೆ. ಇವರ ವಿರುದ್ಧ 114 ಪ್ರಕರಣಗಳು ದಾಖಲಾಗಿವೆ. 2013ರಲ್ಲಿ ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದಂತೆ ಒಂದು ಪ್ರಕರಣ ದಾಖಲಾಗಿತ್ತು. ನಂತರ ಯಾವುದೇ ಪ್ರಕರಣ ದಾಖಲಾಗಿಲ್ಲ. ತಾಲ್ಲೂಕಿನಲ್ಲಿ ನಕ್ಸಲ್ ಗುರುತುಗಳು 1969ರಿಂದ ಕಾಣಿಸುತ್ತವೆ.
ಆಂಧ್ರದ ಅನಂತಪುರದಲ್ಲಿ ಪರಿಟಾಲ ಶ್ರೀರಾಮುಲು ಮತ್ತು ವೆಟ್ಟಿ ಮುತ್ಯಾಲಪ್ಪ ಅವರು ಪೀಪಲ್ಸ್ ವಾರ್ ಗ್ರೂಪ್ ಮೂಲಕ ಭೂಮಾಲೀಕರ ವಿರುದ್ಧ ಹೋರಾಟ ಆರಂಭಿಸಿದ್ದರು. ಇದು ನೆರೆಯ ಪಾವಗಡಕ್ಕೂ ಹರಡಿತ್ತು. ಬೋಯ ಸಿದ್ಧಪ್ಪ, ಮಾರಣ್ಣ, ಮಾಲ ಹನುಮಂತ ಮತ್ತು ಸುಬ್ಬಣ್ಣ ಇಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡರು. ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1979ರ ಡಿಸೆಂಬರ್‌ನಲ್ಲಿ ಅಶ್ವತ್ಥನಾರಾಯಣ ಶೆಟ್ಟಿ ಮೇಲೆ ಶ್ರೀರಾಮುಲು ಗುಂಪು ದಾಳಿ ನಡೆಸಿತು. ಇದು ತಾಲ್ಲೂಕಿನಲ್ಲಿ ನಡೆದ ಮೊದಲು ನಕ್ಸಲ್ ದಾಳಿ.

1975ರಲ್ಲಿ ಕ್ಯಾತಗಾನಚೆರ್ಲು ಗ್ರಾಮದ ಬಳಿ ಪರಿಟಾಲ ಶ್ರೀರಾಮುಲು ಹತ್ಯೆಯಾಗುತ್ತದೆ. ಶ್ರೀರಾಮುಲು ನಂತರ ಅವರ ಹಿಂಬಾಲಕ ವೆಟ್ಟಿ ಮುತ್ಯಾಲಪ್ಪ ಮತ್ತು ಶ್ರೀರಾಮುಲು ಅವರ ಎರಡನೇ ಮಗ ಹರಿ ಚಟುವಟಿಕೆ ಮುಂದುವರಿಸಿದರು. ಶ್ರೀರಾಮುಲು ಹತ್ಯೆಗೆ ಪ್ರತೀಕಾರವಾಗಿ 1988ರಲ್ಲಿ ಪಾವಗಡ ಪಟ್ಟಣದಲ್ಲಿಯೇ ಬೋಯ ಸಿದ್ದಪ್ಪನ ಹತ್ಯೆಯಾಗಿತ್ತು.

ಪೊಲೀಸ್ ಎನ್‌ಕೌಂಟರ್‌ನಲ್ಲಿ ಪರಿಟಾಲ ಹರಿ ಮೃತಪಟ್ಟ ನಂತರ ಹರಿಯ ಅಣ್ಣ ಪರಿಟಾಲ ರವಿ ಪ್ರವೇಶವಾಯಿತು. ಇದೇ ವೇಳೆ ‘ವಿಮುಕ್ತಿ ಪಂಥ’ ಹೆಸರಿನಲ್ಲಿ ಮುತ್ಯಾಲಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಸಂಘಟಿಸಿದರು. ಪ್ರಜಾ ನ್ಯಾಯಾಲಯಗಳನ್ನು ಆರಂಭಿಸಿದರು. ರೆಡ್ಡಿ ಸಮುದಾಯದ ರಕ್ಷಣೆಗಾಗಿ ಮತ್ತೊಂದು ಕಡೆ ಮದ್ದೆಲಚೆರುವು ಸೂರ್ಯನಾರಾಯಣ ರೆಡ್ಡಿ ಪ್ರವೇಶಿಸಿದರು. ರವಿ ಮತ್ತು ಸೂರಿ ನಡುವಿನ ‘ರಕ್ತ ಚರಿತ್ರ’ ಮತ್ತೊಂದು ಆಯಾಮಕ್ಕೆ ಹೊರಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.