ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧ್ಯಪ್ರದೇಶ | 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಸ್ಥಿತಿ ಗಂಭೀರ

ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆಟೊ ಚಾಲಕ ವಶಕ್ಕೆ, ಐವರು ಶಂಕಿತರ ವಿಚಾರಣೆ
Published 28 ಸೆಪ್ಟೆಂಬರ್ 2023, 14:21 IST
Last Updated 28 ಸೆಪ್ಟೆಂಬರ್ 2023, 14:21 IST
ಅಕ್ಷರ ಗಾತ್ರ

ಉಜ್ಜಯಿನಿ/ಇಂದೋರ್ : ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ  12 ವರ್ಷದ ಬಾಲಕಿ ಅತ್ಯಾಚಾರಕ್ಕೆ ಗುರಿಯಾಗಿ ಅರೆ ಬೆತ್ತಲಿನ ಸ್ಥಿತಿಯಲ್ಲಿ ರಸ್ತೆಗಳಲ್ಲಿ ರಕ್ಷಣೆಗಾಗಿ ಓಡಾಡಿದ್ದ ಅಮಾನವೀಯ ಕೃತ್ಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸಿವೆ.

ಅತ್ಯಾಚಾರಕ್ಕೆ ಗುರಿಯಾಗಿ 12 ವರ್ಷದ ಬಾಲಕಿ, ಅರೆ ಬೆತ್ತಲಿನ ಸ್ಥಿತಿಯಲ್ಲಿ ರಸ್ತೆಗಳಲ್ಲಿ ರಕ್ಷಣೆಗಾಗಿ ಓಡಾಡಿದ್ದ ಉಜ್ಜಯಿನಿಯಲ್ಲಿ ನಡೆದಿದ್ದ ಅಮಾನವೀಯ ಕೃತ್ಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬುಧವಾರ ನಡೆದಿದ್ದ ಈ ಕೃತ್ಯದ ‘ಸಂತ್ರಸ್ತೆಗೆ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿತ್ತು. ಆಕೆಯ ಸ್ಥಿತಿಯು ಇನ್ನೂ ಗಂಭೀರವಾಗಿಯೇ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

12 ವರ್ಷದ ಬಾಲಕಿ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆಟೊ ಚಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಐವರು ಶಂಕಿತನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

’ದಿಗ್ಭ್ರಮೆ ಮೂಡಿಸಿರುವ ಈ ಕೃತ್ಯದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ‘ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.

‘ಸಂತ್ರಸ್ತೆ ಅಪಾಯದಿಂದ ಪಾರಾಗಿದ್ದಾರೆ. ಆಕೆ ಉಜ್ಜಯಿನಿಯ ಹೊರಗಿನವರಿರಬಹುದು. ಕೃತ್ಯದ ಕುರಿತು ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಆಕೆ ಇಲ್ಲ. ತಜ್ಞರು, ಆಪ್ತ ಸಮಾಲೋಚಕರ ನೆರವು ಪಡೆದು ಆಕೆಯಿಂದ ಮಾಹಿತಿ ಪಡೆಯಲು ಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.

ಕೃತ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ಕಾರ್ಯವೈಖರಿಯನ್ನು ಕಾಂಗ್ರೆಸ್‌ ಪಕ್ಷ ಕಟುವಾಗಿ ಟೀಕಿಸಿದೆ ಎಂಬ ಕುರಿತು ಗಮನಸೆಳೆದಾಗ, ‘ನಿಮಗೆ ಕಾಂಗ್ರೆಸ್ ಪ್ರಮಾಣಪತ್ರ ಬೇಕೆ?’ ಎಂದು ಪ್ರತಿಕ್ರಿಯಿಸಿದರು.

ತೀವ್ರ ರಕ್ತಸ್ರಾವವಿದ್ದ ಬಾಲಕಿಯೊಬ್ಬಳು ನಿಶ್ಯಕ್ತ ಸ್ಥಿತಿಯಲ್ಲಿ ರಕ್ಷಣೆಗಾಗಿ ಉಜ್ಜಯಿನಿಯ ರಸ್ತೆಗಳಲ್ಲಿ ಅಲೆದಾಡುತ್ತಿದ್ದ ದೃಶ್ಯಗಳಿದ್ದ ವಿಡಿಯೊ ಜಾಲತಾಣದಲ್ಲಿ ಹರಿದಾಡಿ ಈ ಅಮಾನವೀಯ ಕೃತ್ಯ ಬಯಲಾಗಿತ್ತು.

‘ಮಹಾಕಾಳ್‌ ಪೊಲೀಸ್ ಠಾಣೆ ವ್ಯಾಪ್ತಿ ರಸ್ತೆಯೊಂದರಲ್ಲಿ ರಕ್ತದ ಮಡುವಿನಲ್ಲಿ ಬಾಲಕಿ ಬಿದ್ದಿದ್ದಳು. ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ’ ಎಂದು ಉಜ್ಜಯಿನಿ ಜಿಲ್ಲಾ ಪೊಲೀಸ್‌ ವರಿಷ್ಠರು ನಂತರ ಖಚಿತಪಡಿಸಿದ್ದರು.

’ಬಾಲಕಿಯು ಬಹುತೇಕ ಉತ್ತರ ಪ್ರದೇಶದವಳು. ಆಕೆಯ ಬಳಿ ಯಾವುದೇ ಗುರುತುಪತ್ರ ಇಲ್ಲ. ಹೆಸರು, ವಿಳಾಸವನ್ನು ಹೇಳುವ ಸ್ಥಿತಿಯಲ್ಲೂ ಆಕೆ ಇಲ್ಲ. ದುಷ್ಕರ್ಮಿಗಳ ಪತ್ತೆಗೆ ಪೂರಕವಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ‘ ಎಂದು ತಿಳಿಸಿದ್ದರು.

ಈ ಮಧ್ಯೆ, ಆಪ್ತ ಸಮಾಲೋಕಕರು ಸಂತ್ರಸ್ತೆ ಸಾತ್ನಾ ಜಿಲ್ಲೆಯವರು ಎಂದು ಗುರುತಿಸಿದ್ದಾರೆ. ಸಾತ್ನಾ ಜಿಲ್ಲೆಯ ಸೈತ್‌ವಾಡಾ ಠಾಣೆಯಲ್ಲಿ ಬಾಲಕಿ ನಾಪತ್ತೆ ಪ್ರಕರಣವೊಂದು ದಾಖಲಾಗಿದ್ದು, ಈಕೆ ಅದೇ ಬಾಲಕಿಯಾ ಎಂಬುದು ತಿಳಿಯಬೇಕಾಗಿದೆ ಸಾತ್ನಾ ಪೊಲೀಸರು ಹೇಳಿದ್ದಾರೆ.

****

ಮಧ್ಯಪ್ರದೇಶದಲ್ಲಿ ಬಿಜೆಪಿ 20 ವರ್ಷದಿಂದ ಅಧಿಕಾರದಲ್ಲಿದೆ. ಕೇಂದ್ರದಲ್ಲಿ 10 ವರ್ಷದಿಂದ ಆಡಳಿತದಲ್ಲಿದೆ. ಆದರೆ ದೇಶದಲ್ಲಿ ಮಹಿಳೆಯರ ವಿರುದ್ಧದ ಹೆಚ್ಚಿನ ದೌರ್ಜನ್ಯ ಪ್ರಕರಣಗಳು ಮಧ್ಯಪ್ರದೇಶದಲ್ಲಿಯೇ ದಾಖಲಾಗಿವೆ.

-ಅಖಿಲೇಶ್‌ ಯಾದವ್ ಸಮಾಜವಾದಿ ಪಕ್ಷದ ಅಧ್ಯಕ್ಷ  

****

ಪ್ರಧಾನಿ ಮೋದಿ ಭಾಷಣದಲ್ಲಿ ವಿಶೇಷವಾಗಿ ‘ನಾರಿ ಶಕ್ತಿ’ಯ ಉಲ್ಲೇಖ ಇರುತ್ತದೆ. ಆದರೆ ಮಹಿಳೆಯರ ವಿರುದ್ಧದ ದೌರ್ಜನ್ಯ ಹೆಚ್ಚುತ್ತಲೇ ಇವೆ. ಮಹಿಳೆಗೆ ರಕ್ಷಣೆ ನೀಡಲು ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್‌ ಅಸಮರ್ಥರಾಗಿದ್ದಾರೆ

-ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥೆ 

₹ 1 ಕೋಟಿ ಪರಿಹಾರ, ದುಷ್ಕರ್ಮಿಗಳಿಗೆ ಕಠಿಣ ಸಜೆ –ಕಾಂಗ್ರೆಸ್‌ ಆಗ್ರಹ

ಉಜ್ಜಯಿನಿ (ಪಿಟಿಐ): ಅತ್ಯಾಚಾರ ಕೃತ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ‘ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಕಾನೂನು ಸುವ್ಯವಸ್ಥೆ ಇಲ್ಲ’ ಎಂದು ತರಾಟೆಗೆ ತೆಗೆದುಕೊಂಡಿವೆ. ಮಧ್ಯಪ್ರದೇಶ ಕಾಂಗ್ರೆಸ್‌ ಘಟಕದ ಮುಖ್ಯಸ್ಥ ಕಮಲ್‌ನಾಥ್ ಅವರು ಸಂತ್ರಸ್ತೆಗೆ ₹ 1 ಕೋಟಿ ಪರಿಹಾರ ನೀಡಬೇಕು. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಪಡಿಸಿದ್ದಾರೆ. ‘ಚಿಕ್ಕ ಬಾಲಕಿ ಮೇಲಿನ ಕ್ರೂರ ಕೃತ್ಯ ಹೃದಯ ಕಲಕುತ್ತದೆ. ಆಕೆ ಅರೆ ಬೆತ್ತಲು ಸ್ಥಿತಿಯಲ್ಲಿ ರಕ್ಷಣೆಗಾಗಿ ಆಕೆಯ ಅಲೆದಾಟ ಪ್ರಜ್ಞೆತಪ್ಪಿ ರಸ್ತೆಯಲ್ಲಿ ಬಿದ್ದಿರುವುದು ಎಲ್ಲವೂ ಮನುಕುಲವನ್ನು ನಾಚಿಕೆಗೀಡು ಮಾಡುತ್ತದೆ’ ಎಂದು ಹೇಳಿದ್ದಾರೆ. ‘ಈ ಕೃತ್ಯ ದೇಶವೇ ನಾಚಿಕೆಪಡುವಂತಹದ್ದು. ರಾಜ್ಯದಲ್ಲಿ ನ್ಯಾಯ ಇಲ್ಲ ಕಾನೂನು ಸುವ್ಯವಸ್ಥೆ ಇಲ್ಲ ಹಕ್ಕುಗಳ ರಕ್ಷಣೆಯು ಇಲ್ಲ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ಗಾಂಧಿ ‘ಎಕ್ಸ್‌’ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿದ್ದಾರೆ.  ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜೆವಾಲಾ ‘ಈ ಕೃತ್ಯವು 2012ರಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣಕ್ಕಿಂತಲೂ ಕ್ರೂರವಾದುದು’ ಎಂದಿದ್ದಾರೆ. 

ಬಿಜೆಪಿ ದುರಾಡಳಿತದಲ್ಲಿ ಮಹಿಳೆ ಸುರಕ್ಷಿತಳಲ್ಲ –ಪ್ರಿಯಾಂಕಾ ಟೀಕೆ  

ನವದೆಹಲಿ: ‘ಬಿಜೆಪಿಯ ದುರಾಡಳಿತದಲ್ಲಿ ಮಹಿಳೆಯರು ಬಾಲಕಿಯರು ಬುಡಕಟ್ಟು ಜನರು ಮತ್ತು ದಲಿತರು ಸುರಕ್ಷಿತರಲ್ಲ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.  ‘ಎಕ್ಸ್’ ಜಾಲತಾಣದಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಅವರು ‘ಮಹಾಕಾಳಿ ದೇವಿಯ ನಗರದಲ್ಲಿ ಪುಟ್ಟ ಬಾಲಕಿಯ ಮೇಲೆ ಕ್ರೂರತೆ ಮೆರೆದಿದೆ. ರಾಜ್ಯದಲ್ಲಿ ಕಾನೂನು ಸ್ಥಿತಿ. ಬಾಲಕಿಯರಿಗೆ ರಕ್ಷಣೆ ನೀಡದೇ ‘ಲಾಡ್ಲಿ ಬೆಹನಾ’ ಯೋಜನೆ ಘೋಷಿಸಿದರೆ ಏನು ಪ್ರಯೋಜನೆ? ಸರ್ಕಾರ ಮಹಿಳೆಯ ಘನತೆ ರಕ್ಷಿಸಲು ಅಸಮರ್ಥವಾಗಿದೆ’ ಎಂದು ಟೀಕಿಸಿದ್ದಾರೆ.

‘ಚಿಕಿತ್ಸೆ ಬೇಕಿತ್ತು; ಜನ ಹಣ ಕೊಟ್ಟರು’

ಉಜ್ಜಯಿನಿ: ರಕ್ತಸ್ರಾವದಿಂದ ಬಳಲುತ್ತಿದ್ದ ಅತ್ಯಾಚಾರದ ಸಂತ್ರಸ್ತೆ ನಿಶ್ಯಕ್ತಿಯಿಂದ ಮನೆಯಿಂದ ಮನೆಗೆ ಅಲೆದಾಡುತ್ತಿದ್ದಾಗ ಆಕೆಗೆ ಆರೈಕೆ ಚಿಕಿತ್ಸೆಗೆ ನೆರವು ಬೇಕಿತ್ತು. ಆದರೆ ಜನರು ₹ 50 ₹ 100 ಕೊಟ್ಟರು. ‘ವಿಡಿಯೊ ಗಮನಿಸಿ ನಾವು ಆಕೆಯ ಗುರುತು ಪತ್ತೆ ಮಾಡಿದೆವು. ಆಗ ಬಾಲಕಿಯ ಬಳಿ ಜನರು ನೀಡಿದ್ದ ನೆರವಿನ ಹಣ ಒಟ್ಟು ₹ 120 ಇತ್ತು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು’ ಎಂದು ಎನ್‌ಡಿಟಿವಿ ವರದಿ ಮಾಡಿದೆ. ‘ಜನರು ಸಂತ್ರಸ್ತೆಗೆ ಅರೈಕೆ ಚಿಕಿತ್ಸೆ ನೆರವು ಒದಗಿಸಲಿಲ್ಲ. ಕೆಲವರು ಹಣ ನೀಡಿದ್ದಾರೆ. ಬಾಲಕಿಯು ಟೊಲ್ ಬೂತ್‌ ಬಳಿಗೆ ಬಂದಾಗ ಸಿಬ್ಬಂದಿ ಕೆಲ ಬಟ್ಟೆ ಹಣ ನೀಡಿದ್ದಾರೆ. ಕನಿಷ್ಠ 7–8 ಮಂದಿ ನೆರವಾಗಿದ್ದಾರೆ’ ಎಂದು ಹೇಳಿದ್ದಾರೆ.  ‘ಬಾಲಕಿಗೆ ಹಣವಲ್ಲ ಆರೈಕೆಗೆ ನೆರವು ಬೇಕಾಗಿತ್ತು ಎಂಬ ಪ್ರಶ್ನೆಗೆ ಪೊಲೀಸ್‌ ಅಧಿಕಾರಿ ಸಚಿನ್ ಶರ್ಮಾ ‘ಜನರಿಗೆ ಅವರದೇ ಆದ ಅತಂಕವಿರಬಹುದು. ಆದರೆ ಕೆಲವರು ಆದಷ್ಟು ನೆರವು ನೀಡಲು ಯತ್ನಿಸಿದ್ದಾರೆ’ ಎಂದರು. ‘ಬಾಲಕಿ ನಿರ್ದಿಷ್ಟವಾಗಿ ನೆರವು ಕೇಳಿಲ್ಲ. ‘ನಾನು ಅಪಾಯದಲ್ಲಿದ್ದೇನೆ. ಕೆಲವರು ನನ್ನ ಹಿಂಬಾಲಿಸುತ್ತಿದ್ದಾರೆ’ ಎಂದಷ್ಟೇ ಮತ್ತೆ ಮತ್ತೆ ಹೇಳಿದ್ದಾಳೆ. ಆಕೆಗೆ ಖಚಿತತೆ ಇರಲಿಲ್ಲ. ಪೂರಕವಾಗಿ ಜನರು ಸ್ಪಂದಿಸಿದ್ದಾರೆ‘ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT