ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ‘ಭಸ್ಮಾಸುರ’: ಅಖಿಲೇಶ್‌ ಯಾದವ್‌ಗೆ ಬಿಜೆಪಿ ಎಚ್ಚರಿಕೆ

Published 14 ಜುಲೈ 2024, 15:43 IST
Last Updated 14 ಜುಲೈ 2024, 15:43 IST
ಅಕ್ಷರ ಗಾತ್ರ

ಲಖನೌ: ಕಾಂಗ್ರೆಸ್‌ ಜತೆಗಿನ ಮೈತ್ರಿ ಮುಂದುವರಿಸಿದರೆ ಸಮಾಜವಾದಿ ಪಕ್ಷವು ಶೀಘ್ರದಲ್ಲೇ ನಿರ್ನಾಮವಾಗಲಿದೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರಿಗೆ ಬಿಜೆಪಿ ಎಚ್ಚರಿಕೆ ನೀಡಿದೆ.

ಭಾನುವಾರ ಇಲ್ಲಿ ಆರಂಭವಾದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಭೂಪೇಂದ್ರ ಚೌಧರಿ, ‘ಕಾಂಗ್ರೆಸ್‌ ಪಕ್ಷವು ಭಸ್ಮಾಸುರನಂತೆ ಇದ್ದು, ಶೀಘ್ರದಲ್ಲೇ ಅಖಿಲೇಶ್‌ ಅವರ ಪಕ್ಷಕ್ಕೆ (ಎಸ್‌ಪಿ) ಅಂತ್ಯ ಕಾಣಿಸಲಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷವು ಉತ್ತರ ಪ್ರದೇಶದಲ್ಲಿ ಎಸ್‌ಪಿಯ ಮುಸ್ಲಿಂ ಓಟ್‌ ಬ್ಯಾಂಕ್‌ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್‌ನವರು ಚುನಾವಣೆಯನ್ನು ಗೆಲ್ಲಲು ಯಾವಾಗಲೂ ಸಣ್ಣ ಪಕ್ಷಗಳನ್ನು ಬಳಸಿಕೊಳ್ಳುತ್ತಾರೆ. ಈ ಬಗ್ಗೆ ಎಚ್ಚರಿಕೆ ಇರಲಿ’ ಎಂದು ಚೌಧರಿ ಹೇಳಿದರು.

‘ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 13 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನ ಸಿಗದಿದ್ದರೂ ಚುನಾವಣೆಯಲ್ಲಿ ಗೆದ್ದಂತೆ ವರ್ತಿಸುತ್ತಿದೆ’ ಎಂದು ಲೇವಡಿ ಮಾಡಿದರು.

‘ಲೋಕಸಭೆ ಚುನಾವಣೆಯಲ್ಲಿ ಎದುರಾದ ಹಿನ್ನಡೆಯಿಂದ ಎದೆಗುಂದಬೇಕಿಲ್ಲ. ಏಕೆಂದರೆ ನಮ್ಮ ಮತ ಪ್ರಮಾಣ ಕಡಿಮೆಯಾಗಿಲ್ಲ. 2027ರಲ್ಲಿ ನಾವು ಮತ್ತೊಮ್ಮೆ ಅಧಿಕಾರಕ್ಕೇರಲಿದ್ದೇವೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಶಾಸಕರು ಮತ್ತು ಸಂಸದರು ಸೇರಿದಂತೆ ಪಕ್ಷದ ಮೂರು ಸಾವಿರಕ್ಕೂ ಅಧಿಕ ನಾಯಕರು ಮತ್ತು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ 62 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ 33 ಸ್ಥಾನಗಳನ್ನಷ್ಟೇ ಜಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT