ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಶಾಸಕನ ಕಾಲು ಹಿಡಿದ ದೆಹಲಿ ಸಚಿವ!

ಬಸ್‌ ಮಾರ್ಷಲ್‌ಗಳ ಮರು ನಿಯೋಜನೆ ಬಗೆಗಿನ ಸಚಿವ ಸಂಪುಟದ ನಿರ್ಣಯ ಸಲ್ಲಿಕೆ
Published : 5 ಅಕ್ಟೋಬರ್ 2024, 15:59 IST
Last Updated : 5 ಅಕ್ಟೋಬರ್ 2024, 15:59 IST
ಫಾಲೋ ಮಾಡಿ
Comments

ನವದೆಹಲಿ: ಬಸ್‌ ಮಾರ್ಷಲ್‌ಗಳ ಮರು ನಿಯೋಜನೆ ಬಗ್ಗೆ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯಕ್ಕೆ ಒಪ್ಪಿಗೆ ನೀಡುವಂತೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ ಸಕ್ಸೇನಾಗೆ ಮನವಿ ಮಾಡಲು ತಮ್ಮ ಜೊತೆ ಬರುವಂತೆ ದೆಹಲಿ ಸಚಿವ ಸೌರಭ್‌ ಭಾರಧ್ವಜ್‌ ಅವರು ಬಿಜೆಪಿ ಶಾಸಕ ವಿಜೇಂದರ್‌ ಗುಪ್ತಾ ಅವರ ಕಾಲು ಹಿಡಿದು ಮನವಿ ಮಾಡಿದರು.

ಇದಕ್ಕೆ ಅವರು ಸ್ಪಂದಿಸುತ್ತಿದಂತೆಯೇ, ಮುಖ್ಯಮಂತ್ರಿ ಆತಿಶಿ ಅವರು ತಮ್ಮ ಕಾರನ್ನು ಬಿಟ್ಟು ಬಿಜೆಪಿ ನಾಯಕರ ಕಾರಿನಲ್ಲಿ ಕುಳಿತು ಸಚಿವರು, ಶಾಸಕರೊಂದಿಗೆ ಸಕ್ಸೇನಾ ಅವರ ಮನೆಗೆ ತೆರಳಿದರು. ಆದರೆ, ಅಲ್ಲಿಂದ ಹೊರ ಬರುತ್ತಿದಂತೆಯೇ ಎಎಪಿ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಸಚಿವ ಸಂಪುಟದ ನಿರ್ಣಯಕ್ಕೆ ಸಹಿ ಮಾಡುವಂತೆ ಬಿಜೆಪಿಯು ಲೆಫ್ಟಿನೆಂಟ್‌ ಗವರ್ನರ್‌ ಅವರನ್ನು ಒತ್ತಾಯಿಸಿಲ್ಲ’ ಎಂದು ಆರೋಪಿಸಿದ ಎಎಪಿ ನಾಯಕರು, ಲೆ.ಗವರ್ನರ್‌ ಮನೆ ಮುಂದೆ ಪ್ರತಿಭಟನೆ ನಡೆಸಿದರು.

‘ಲೆ.ಗವರ್ನರ್‌ ಅವರನ್ನು ಭೇಟಿ ಮಾಡಲು ಬಿಜೆಪಿ ಶಾಸಕರು ತಯಾರಿರಲಿಲ್ಲ. ಆದರೆ ನಾವು ಅವರನ್ನು ಜೊತೆಗೆ ಕರೆದುಕೊಂಡು ಹೋದೆವು. ನಿರ್ಣಯಕ್ಕೆ ಸಹಿ ಮಾಡುವಂತೆ ಬಿಜೆಪಿ ಶಾಸಕರು ಲೆ.ಗವರ್ನರ್‌ ಅವರಿಗೆ ಮನವಿ ಮಾಡಲಿಲ್ಲ. ಬಿಜೆಪಿಯು ದ್ರೋಹ ಮಾಡಿದೆ’ ಎಂದು ಮುಖ್ಯಮಂತ್ರಿ ಆತಿಶಿ ಕಿಡಿಕಾರಿದರು.

‍ಪ್ರತಿಭಟನೆ ನಡೆಸಿದ ಎಎಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

‘ಸಚಿವ ಸಂಪುಟದ ನಿರ್ಣಯಕ್ಕೆ ಲೆ.ಗವರ್ನರ್‌ ಸಹಿ ಮಾಡಿಲ್ಲ. ಇದರಿಂದಾಗಿ 10 ಸಾವಿರ ಬಸ್‌ ಮಾರ್ಷಲ್‌ಗಳಿಗೆ ಕೋಪಕ್ಕೆ ಅವರು ತುತ್ತಾಗಲಿದ್ದಾರೆ’ ಎಂದು ಸಚಿವ ಭಾರಧ್ವಜ್‌ ಹೇಳಿದರು.

ನಾಗರಿಕ ಸೇನೆಯ 10 ಸಾವಿರ ಸ್ವಯಂಸೇವಕರನ್ನು ಬಸ್‌ಗಳಲ್ಲಿ ಮಾರ್ಷಲ್‌ಗಳಾಗಿ ನಿಯೋಜಿಸಿರುವ ಬಗ್ಗೆ ನಾಗರಿಕ ರಕ್ಷಣಾ ನಿರ್ದೇಶನಾಲಯವು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಕಳೆದ ವರ್ಷ ಅವರನ್ನು ವಜಾಗೊಳಿಸಲಾಗಿತ್ತು.

ಬಸ್‌ ಮಾರ್ಷಲ್‌ಗಳ ಮರುನಿಯೋಜನೆಯ ಬಗ್ಗೆ ಬಿಜೆಪಿ ಶಾಸಕರು ಶುಕ್ರವಾರ ಮುಖ್ಯಮಂತ್ರಿ ಆತಿಶಿ ಜೊತೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಸಚಿವ ಸಂಪುಟವು ನಿರ್ಣಯ ಕೈಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT