ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆ ಹೊತ್ತಿನಲ್ಲಿ ಅತ್ಯಾಚಾರ ಅಪರಾಧಿ ಸ್ವತಂತ್ರ ಹಕ್ಕಿ!

Published : 16 ಆಗಸ್ಟ್ 2024, 16:32 IST
Last Updated : 16 ಆಗಸ್ಟ್ 2024, 16:32 IST
ಫಾಲೋ ಮಾಡಿ
Comments

ಚಂಡೀಗಢ: ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂ ಅವರು ಮತ್ತೆ 21 ದಿನಗಳ ಪೆರೋಲ್‌/ಫಲೋ (ತಾತ್ಕಾಲಿಕ ಅವಧಿಗೆ ಬಿಡುಗಡೆ) ಮೇಲೆ ಹರಿಯಾಣದ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. 

ಅತ್ಯಾಚಾರ ಆರೋಪ ಸಾಬೀತಾಗಿ 2017ರಲ್ಲಿ ಜೈಲು ಶಿಕ್ಷೆ ಅನುಭವಿಸಲು ಆರಂಭಿಸಿದ ನಂತರ ಅವರು ಪೆರೋಲ್‌ ಮೂಲಕ ಬಿಡುಗಡೆಯಾಗುತ್ತಿರುವುದು ಇದು 10ನೇ ಬಾರಿ.  ಈವರೆಗೆ, ಪೆರೋಲ್‌ ಅಡಿಯಲ್ಲಿ 235 ದಿನಗಳ ಕಾಲ ಅವರು ಕಾರಾಗೃಹದಿಂದ ಹೊರಗಿದ್ದರು. 

ಹರಿಯಾಣ ಚುನಾವಣೆ ಹತ್ತಿರದಲ್ಲಿ ಇರುವಾಗ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅಚ್ಚರಿ ಎಂದರೆ, ಹರಿಯಾಣ, ಪಂಜಾಬ್‌ ಅಥವಾ ರಾಜಸ್ಥಾನಗಳಲ್ಲಿ ನಡೆಯುವ ಒಂದಿಲ್ಲೊಂದು ಚುನಾವಣೆ ಸಂದರ್ಭದಲ್ಲೇ ರಹೀಂ ಜೈಲಿನಿಂದ ಹೊರಗಡೆ ಬರುತ್ತಿದ್ದಾರೆ. 10 ಬಾರಿಯ ಪೆರೋಲ್‌ಗಳಲ್ಲಿ, ಆರು ಬಾರಿ ಚುನಾವಣೆಯ ಸಂದರ್ಭಗಳಲ್ಲೇ ಸಿಕ್ಕಿದೆ! 

ಯಾವಾಗೆಲ್ಲ ಪೆರೋಲ್‌?: 2020ರ ಅ.24ರಂದು ಅನಾರೋಗ್ಯ ಪೀಡಿತ ತಾಯಿಯ ಭೇಟಿಗೆ ಒಂದು ದಿನದ ಪೆರೋಲ್‌ ರಹೀಂಗೆ ಸಿಕ್ಕಿತ್ತು. 2021ರ ಮೇ 21ರಂದು ಮತ್ತೆ ಇದೇ ಉದ್ದೇಶಕ್ಕೆ ಒಂದು ದಿನ ಮಟ್ಟಿಗೆ ಜೈಲಿನಿಂದ ಹೊರಬಂದಿದ್ದರು. 

2022ರ ಫೆಬ್ರುವರಿಯಲ್ಲಿ (ಫೆ.7ರಿಂದ ಫ.21) ಪಂಜಾಬ್‌ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ 21 ದಿನಗಳ ಕಾಲ ಜೈಲಿನಿಂದ ಬಿಡುಗಡೆಗೊಂಡಿದ್ದರು. 

ಅದೇ ವರ್ಷ ಜೂನ್‌ 17ರಿಂದ ಜುಲೈ 18ರವರೆಗೆ 30 ದಿನಗಳ ಪೆರೋಲ್‌ ಅವರಿಗೆ ಸಿಕ್ಕಿತ್ತು. ಆಗ ಹರಿಯಾಣ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರದಲ್ಲಿತ್ತು. 

2022ರಲ್ಲಿ ಅ.15ರಿಂದ ಮ.25ರವರೆಗೆ, ಅದಂಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಮುನ್ನ 40 ದಿನಗಳ ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದಿದ್ದರು. 

2023ರ ಜ.31ರಿಂದ ಮಾರ್ಚ್‌ 3ರವರೆಗೆ 40 ದಿನಗಳ ಪೆರೋಲ್‌ ಸಿಕ್ಕಿತ್ತು. 

ಅದೇ ವರ್ಷ ಜುಲೈ–ಆಗಸ್ಟ್‌ನಲ್ಲಿ ಹರಿಯಾಣ ಪಂಚಾಯಿತಿ ಚುನಾವಣೆಗೂ ಮುನ್ನ ತಿಂಗಳ ಕಾಲ ಜೈಲಿನಿಂದ ಬಿಡುಗಡೆಯಾಗಿದ್ದರು.

ಈ ವರ್ಷದ (2024) ಜನವರಿ 19ರಿಂದ ಮಾರ್ಚ್‌ 10ರವರೆಗೆ 50 ದಿನಗಳ ಪೆರೋಲ್‌ ಸಿಕ್ಕಿತ್ತು. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಮೂರು ದಿನಗಳ ಮೊದಲು ಜೈಲಿನಿಂದ ಹೊರಬಂದಿದ್ದರು.

ಆ ಬಳಿಕ, ಈಗ ಮತ್ತೆ 21 ದಿನಗಳ ಅವಧಿಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹತ್ತಿರದಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯೂ ಇದೆ. 

ಹರಿಯಾಣ, ಪಂಜಾಬ್‌, ರಾಜಸ್ಥಾನ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿರುವ ಗುರ್ಮೀತ್‌ ರಾಮ್‌ ರಹೀಂ ಅವರು ರಾಜಕೀಯವಾಗಿ ಪ್ರಭಾವಿಯಾಗಿದ್ದಾರೆ. ರಾಜಕೀಯ ಪಕ್ಷಗಳ ಮುಖಂಡರೊಂದಿಗೂ ಆತ್ಮೀಯ ಒಡನಾಟ ಹೊಂದಿರುವ ಅವರು, ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ಸೇರಿದಂತೆ ಹಲವು ಪಕ್ಷಗಳಿಗೆ ಈ ಹಿಂದೆ ಬೆಂಬಲವನ್ನೂ ನೀಡಿದ್ದರು. 

ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರ ಮಾಡಿದ್ದಕ್ಕಾಗಿ ರಹೀಂ ಅವರು 2017ರ ಆ.25ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. 

ಹೆಚ್ಚುವರಿಯಾಗಿ, ಪತ್ರಕರ್ತ ರಾಮ್‌ ಚಂದರ್‌ ಛತ್ರಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಮತ್ತು ಡೇರಾ ಸಚ್ಚಾ ಸೌದಾದ ಮಾಜಿ ಮ್ಯಾನೇಜರ್‌ ರಂಜಿತ್‌ ಹತ್ಯೆ ಪ್ರಕರಣದಲ್ಲಿ 2021ರ ಅಕ್ಟೋಬರ್‌ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. 

ಆದರೆ, ಎರಡನೇ ಪ್ರಕರಣದಲ್ಲಿ ಹೈಕೋರ್ಟ್‌ ರಹೀಂ ಹಾಗೂ ಇತರರನ್ನು ಖುಲಾಸೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT