ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯಾಣ ಗದ್ದುಗೆ ಯಾರಿಗೆ: ಇಂದು ನಿರ್ಧಾರ

ಕಾಂಗ್ರೆಸ್‌–ಬಿಜೆಪಿ ಮಧ್ಯೆ ನೇರ ಹಣಾಹಣಿ; ಪ್ರಾದೇಶಿಕ ಪಕ್ಷಗಳೇ ನಿರ್ಣಾಯಕ
Published : 4 ಅಕ್ಟೋಬರ್ 2024, 21:51 IST
Last Updated : 4 ಅಕ್ಟೋಬರ್ 2024, 21:51 IST
ಫಾಲೋ ಮಾಡಿ
Comments

ನವದೆಹಲಿ: ಹರಿಯಾಣ ವಿಧಾನಸಭೆಗೆ ಶನಿವಾರ ಚುನಾವಣೆ ನಡೆಯಲಿದ್ದು, ಸುಮಾರು 2 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದೆಯೇ ಅಥವಾ 10 ವರ್ಷದ ಅಂತರದ ಬಳಿಕ ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಲಿದೆಯೇ ಎಂಬುದು ನಿರ್ಧಾರವಾಗಲಿದೆ. 

ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. 1,031 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 930 ಮಂದಿ ಪುರುಷರು ಮತ್ತು 101 ಮಂದಿ ಮಹಿಳೆಯರು. ರಾಜ್ಯದಾದ್ಯಂತ 20,629 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ಇದೆ. ಇತರ ಪಕ್ಷಗಳಾದ ಎಎಪಿ ಮತ್ತು ಐಎನ್‌ಎಲ್‌ಡಿ–ಬಿಎಸ್‌ಪಿ ಹಾಗೂ ಜೆಜೆಪಿ–ಎಎಸ್‌ಪಿ ಸುಮಾರು 20 ಕ್ಷೇತ್ರಗಳ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆ ಇದೆ. ಇದು ಫಲಿತಾಂಶದ ಮೇಲೆ ನಿರ್ಣಾಯಕ ಪರಿಣಾಮ ಬೀರಲಿದೆ. 90 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸುವುದಾಗಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ವಿಶ್ವಾಸ ವ್ಯಕ್ತಪಡಿಸಿವೆ.

2019ರ ಚುನಾವಣೆಯಲ್ಲಿ ಬಿಜೆಪಿ 40 ಕ್ಷೇತ್ರಗಳಲ್ಲಿ ಗೆದ್ದು, ಜೆಜೆಪಿ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಈ ಬಾರಿ ಲೋಕಸಭಾ ಚುನಾವಣೆಗೂ ಮೊದಲೇ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಮುರಿದಿದೆ.

ಶುಕ್ರವಾರ ವಿರೋಧ ಪಕ್ಷದ ನಾಯಕ ಭೂಪೇಂದ್ರ ಸಿಂಗ್‌ ಹೂಡಾ ಅವರು ರೋಹ್ಟಕ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾದರು. ಬಿಜೆಪಿ ನಾಯಕ, ಮಾಜಿ ಗೃಹ ಸಚಿವ ಅನಿಲ್‌ ವಿಜ್ ಅವರು ಅಂಬಾಲಾದ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ಇತ್ತ  ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರು ಪತ್ನಿಯೊಂದಿಗೆ ಪಂಚಕುಲಾದ ಮಾನಸ ದೇವಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಚುನಾವಣಾ ಅಧಿಕಾರಿಗಳು ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಪರಿಶೀಲಿಸಿದರು –ಪಿಟಿಐ ಚಿತ್ರ
ಚುನಾವಣಾ ಅಧಿಕಾರಿಗಳು ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಪರಿಶೀಲಿಸಿದರು –ಪಿಟಿಐ ಚಿತ್ರ
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಅವರ ಬಂಡವಾಳಶಾಹಿ ಪರ ನೀತಿಗಳನ್ನು ಒಳಗೊಂಡ ‘ಚಕ್ರವ್ಯೂಹ’ವನ್ನು  ರಾಜ್ಯದ ಜನರು ಶೀಘ್ರದಲ್ಲೇ  ಭೇದಿಸಲಿದ್ದಾರೆ
 ರಾಹುಲ್ ಗಾಂಧಿ ಕಾಂಗ್ರೆಸ್‌ ನಾಯಕ

ಬಿಜೆಪಿಯಿಂದ ‘ನಿರುದ್ಯೋಗ ರೋಗ’ ಸೃಷ್ಟಿ: ರಾಹುಲ್‌

ಬಿಜೆಪಿಯು ಹರಡಿರುವ ‘ನಿರುದ್ಯೋಗ ರೋಗ’ವು ಹರಿಯಾಣ ರಾಜ್ಯದ ಭದ್ರತೆ ಮತ್ತು ಯುವಜನತೆಯ ಭವಿಷ್ಯವನ್ನು ಅಪಾಯಕ್ಕೆ ತಳ್ಳಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ರಚನೆಯಾದಲ್ಲಿ ಉದ್ಯೋಗವನ್ನು ಮರಳಿ ನೀಡುತ್ತೇವೆ ಮತ್ತು ಪ್ರತಿ ಕುಟುಂಬದಲ್ಲಿ ಸಮೃದ್ಧಿ ತರುತ್ತೇವೆ ಎಂದು ಹೇಳಿದ್ದಾರೆ. ‘ವಿಜಯ ಸಂಕಲ್ಪ ಯಾತ್ರೆ’ ಸಂದರ್ಭದಲ್ಲಿ ಮಹಿಳೆಯರೊಂದಿಗೆ ಮಾತುಕತೆ ನಡೆಸಿದ ವಿಡಿಯೊವನ್ನು ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದೊಂದಿಗೆ ‘ಯಾತ್ರೆ ಸಂದರ್ಭದಲ್ಲಿ ರಾಜ್ಯದ ಕೆಲ ಹೆಣ್ಣುಮಕ್ಕಳು ಆಶ್ರಯ ನೀಡಿದ್ದರು. ಮನೆಯಲ್ಲಿಯೇ ಮಾಡಿದ ರೊಟ್ಟಿಯನ್ನು ಪ್ರೀತಿಯಿಂದ ನೀಡಿದ್ದರು. ರಾಜ್ಯದ ಸಂಕೀರ್ಣ ಸಮಸ್ಯೆಗಳನ್ನು ಹಂಚಿಕೊಂಡಿದ್ದರು. ಆದರೆ ಇಂದು ಹರಿಯಾಣದಲ್ಲಿ ಹೆಚ್ಚು ಪ್ರಮಾಣದ ನಿರುದ್ಯೋಗ ಇದೆ. ಇದಕ್ಕೆ ಕಾರಣ ಬಿಜೆಪಿ. ಕಳೆದ ಒಂದು ದಶಕದಿಂದ ಇದು ಯುವಜನತೆಗೆ ಉದ್ಯೋಗ ನೀಡುವ ಪ್ರತಿಯೊಂದು ವ್ಯವಸ್ಥೆಯ ಬೆನ್ನೆಲುಬನ್ನೇ ಮುರಿಯುತ್ತಿದೆ’ ಎಂದು ಕಿಡಿಕಾರಿದ್ದಾರೆ. ಸೇನೆ ಸೇರುವ ಮಹತ್ವಾಕಾಂಕ್ಷೆ ಹೊಂದಿದ್ದ ಯುವಜನರ ಉತ್ಸಾಹವನ್ನು ‘ಅಗ್ನೀವೀರ’ ಯೋಜನೆ ಮೂಲಕ ಕುಗ್ಗಿಸಿದೆ. ರೈತ ವಿರೋಧಿ ಕಾನೂನುಗಳ ಮೂಲಕ ಕೃಷಿಕರ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ ಪ್ರೋತ್ಸಾಹ ನೀಡದೆ ಕ್ರೀಡಾಪಟುಗಳ ಕನಸುಗಳನ್ನು ನುಚ್ಚುನೂರು ಮಾಡಿದೆ ಎಂದು ಆರೋಪಿಸಿದ್ದಾರೆ. ‘ಇದೆಲ್ಲದರ ಪರಿಣಾಮವಾಗಿ ಯುವಜನತೆಯ ಪ್ರತಿಭೆಯು ಮಾದಕವಸ್ತು ಜಾಲದಲ್ಲಿ ಸಿಲುಕಿ ವ್ಯರ್ಥವಾಗುತ್ತಿದೆ. ನೊಂದ ಯುವಜನತೆಯ ಅಪರಾಧದ ದಾರಿ ಹಿಡಿಯುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ 2 ಲಕ್ಷ ಕಾಯಂ ಹುದ್ದೆಗಳಿಗೆ ನೇಮಕಾತಿ ನಡೆಸುತ್ತೇವೆ ಮತ್ತು ಹರಿಯಾಣವನ್ನು ಮಾದಕವಸ್ತು ಮುಕ್ತ ರಾಜ್ಯವನ್ನಾಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಎನ್‌ಸಿ‍ಪಿ ಸೇರಲು ಹರ್ಷವರ್ಧನ್ ನಿರ್ಧಾರ

ಮಹಾರಾಷ್ಟ್ರ ಬಿಜೆಪಿ ನಾಯಕ ಹರ್ಷವರ್ಧನ್ ಪಾಟಿಲ್‌ ಅವರು ಬೆಂಬಲಿಗರೊಂದಿಗೆ ಎನ್‌ಸಿಪಿ(ಶರದ್‌ಪವಾರ್ ಬಣ) ಸೇರ್ಪಡೆಯಾಗುವುದಾಗಿ ಶುಕ್ರವಾರ ಘೋಷಿಸಿದರು.  ಗುರುವಾರವಷ್ಟೆ ಅವರು ಪವಾರ್‌ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದರು. ಇಂದಾಪುರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದ ಪಾಟೀಲ್ ಈ ಬಾರಿಯೂ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಆದರೆ ಬಿಜೆಪಿ ಮಿತ್ರ ಪಕ್ಷ ಎನ್‌ಸಿಪಿ (ಅಜಿತ್‌ ಪವಾರ್ ಬಣ) ಹಾಲಿ ಶಾಸಕ ದತ್ತಾತ್ರೇಯ ಭಾರ್ನೆ ಅವರಿಗೆ ಈ ಬಾರಿಯೂ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್ ‘ಉಪ ಮುಖ್ಯಮಂತ್ರಿ ದೇವೆಂದ್ರ ಫಡಣವೀಸ್‌ ಅವರನ್ನು ಭೇಟಿಯಾಗಿ ನನ್ನ ನಿರ್ಧಾರ ತಿಳಿಸಿದೆ. ಇಂದಾಪುರ ಬದಲಾಗಿ ಬೇರೆ ಕ್ಷೇತ್ರ ನೀಡುವುದಾಗಿ ತಿಳಿಸಿದರು. ಆದರೆ ಇದಕ್ಕೆ ಬೆಂಬಲಿಗರು ಮತ್ತು ನನ್ನ ಕ್ಷೇತ್ರದ ಜನತೆ ಒಪ್ಪಿಗೆ ನೀಡುವುದಿಲ್ಲ’ ಎಂದು ಹೇಳಿದರು. ಹೀಗಾಗಿ ಬೆಂಬಲಿಗರೊಂದಿಗೆ ಸಭೆ ನಡೆಸಿ ಎನ್‌ಸಿಪಿ (ಶರದ್‌ ಪವಾರ್‌) ಬಣ ಸೇರಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ಮುಂದಿನ ತಿಂಗಳು ನಡೆಯುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಗೆಲ್ಲಿಸಿ: ಅಶೋಕ್‌ ತಂವರ್‌

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಅಂತರದ ಗೆಲುವು ತಂದುಕೊಡಬೇಕು ಎಂದು ಎಲ್ಲ ವರ್ಗದವರಲ್ಲಿ ಅದರಲ್ಲೂ ವಿಶೇಷವಾಗಿ ದಲಿತರು ಮತ್ತು ಹಿಂದುಳಿದ ವರ್ಗದವರಲ್ಲಿ ಮಾಜಿ ಸಂಸದ ಅಶೋಕ್‌ ತಂವರ್‌ ಅವರು ಶುಕ್ರವಾರ ಮನವಿ ಮಾಡಿದರು. ತಂವರ್‌ ಅವರು ಗುರುವಾರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್‌ನಿಂದ ಆರಂಭಿಸಿದೆ. ಕಳೆದ ಕೆಲ ತಿಂಗಳು ಬಿಜೆಪಿಯಲ್ಲಿ ಇದ್ದೆ. ಅಲ್ಲಿ ಕೆಲ ವಿಚಾರಗಳು ನನಗೆ ನೋವುಂಟು ಮಾಡಿದವು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ಸಂವಿಧಾನದ ಮೇಲೆ ಇರಬೇಕಾದ ಶ್ರದ್ಧೆ ಅಲ್ಲಿ ಇಲ್ಲ’ ಎಂದು ಹೇಳಿದರು. ‘ಸಂವಿಧಾನವನ್ನು ಎತ್ತಿಹಿಡಿಯಲು ಮತ್ತು ಈ ದೇಶದ ಏಕತೆಗಾಗಿ ರಾಹುಲ್‌ ಗಾಂಧಿ ಅವರು ಶ್ರಮಿಸುತ್ತಿದ್ದಾರೆ. ಹರಿಯಾಣವನ್ನು ನಂ.1 ರಾಜ್ಯವನ್ನಾಗಿ ಮಾಡಲು ರಾಜ್ಯದ ಜನರಿಗೆ ಅವರ ಹಕ್ಕುಗಳನ್ನು ಖಚಿತಪಡಿಸಲು ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ನೀಡಿ’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT