ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಪಕ್ಷವನ್ನು ‘ನಗರ ನಕ್ಸಲರು’ ಮುನ್ನಡೆಸುತ್ತಿದ್ದಾರೆ: ಮೋದಿ ಆರೋಪ

Published : 5 ಅಕ್ಟೋಬರ್ 2024, 12:18 IST
Last Updated : 5 ಅಕ್ಟೋಬರ್ 2024, 12:18 IST
ಫಾಲೋ ಮಾಡಿ
Comments

ವಾಶಿಂ, ಮಹಾರಾಷ್ಟ್ರ: ಕಾಂಗ್ರೆಸ್‌ ಅನ್ನು ‘ನಗರ ನಕ್ಸಲರ ಗ್ಯಾಂಗ್’ ಮುನ್ನಡೆಸುತ್ತಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಆ ಪಕ್ಷದ ‘ಅಪಾಯಕಾರಿ ಸಿದ್ಧಾಂತ’ವನ್ನು ಸೋಲಿಸಲು ಜನರು ಒಟ್ಟಾಗಬೇಕು ಎಂದು ಕರೆ ನೀಡಿದರು.

‘ದೇಶವನ್ನು ವಿಭಜಿಸುವ ಅವರ ಕಾರ್ಯಸೂಚಿಯು ನಾವೆಲ್ಲರೂ ಒಗ್ಗೂಡಿದರೆ ವಿಫಲಗೊಳ್ಳುತ್ತದೆ’ ಎಂದು ಮಹಾರಾಷ್ಟ್ರದ ವಾಶಿಂ ಜಿಲ್ಲೆಯಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ನಂತರ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

‘ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಬಡವರನ್ನು ಲೂಟಿ ಮಾಡಿ ಅವರನ್ನು ಬಡವರಾಗಿಯೇ ಉಳಿಸುವುದು ಮಾತ್ರ ಕಾಂಗ್ರೆಸ್‌ಗೆ ಗೊತ್ತು. ಸಮಾಜವನ್ನು ಒಡೆಯುವುದಷ್ಟೆ ಆ ಪಕ್ಷದ ಕೆಲಸ. ನಾವು ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ ಇರಬೇಕು’ ಎಂದರು.

‘ಈಚೆಗೆ ದೆಹಲಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಕಾಂಗ್ರೆಸ್‌ನ ಮುಖಂಡರೊಬ್ಬರು ಅದರ ಕಿಂಗ್‌ಪಿನ್‌ ಆಗಿರುವ ಶಂಕೆ ವ್ಯಕ್ತವಾಗಿದೆ. ಯುವಕರಿಗೆ ಮಾದಕ ವಸ್ತುಗಳನ್ನು ಪೂರೈಸಿ, ಅದರಿಂದ ಬರುವ ಹಣದಿಂದ ಚುನಾವಣೆ ಎದುರಿಸಲು ಕಾಂಗ್ರೆಸ್ ಬಯಸಿದೆ’ ಎಂದು ಆರೋಪಿಸಿದರು.

‘ಬ್ರಿಟಿಷರಂತೆ ಈ ಕಾಂಗ್ರೆಸ್‌ನ ಕುಟುಂಬ ಕೂಡಾ ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯದವರು ತಮಗೆ ಸಮಾನರು ಎಂದು ಪರಿಗಣಿಸುವುದಿಲ್ಲ. ಭಾರತವನ್ನು ಒಂದೇ ಕುಟುಂಬ ಆಳಬೇಕು ಎಂದು ಬಯಸುವರು. ಆದ್ದರಿಂದಲೇ ಅವರು ಯಾವಾಗಲೂ ಬಂಜಾರ ಸಮುದಾಯದವರ ಬಗ್ಗೆ ತಿರಸ್ಕಾರ ಮನೋಭಾವ ಹೊಂದಿದ್ದಾರೆ’ ಎಂದರು. 

‘ಬಂಜಾರ ಸಮುದಾಯದ ಸಂತರು ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯನ್ನು ಪ್ರೇರೇಪಿಸಿದರು. ಬ್ರಿಟಿಷರು ಬಂಜಾರ ಸಮುದಾಯಕ್ಕೆ ಕಿರುಕುಳ ನೀಡಿದ್ದರು. ಅವರು ದೇಶ ಬಿಟ್ಟು ತೊಲಗಿದ ನಂತರ, ಕಾಂಗ್ರೆಸ್ ಸರ್ಕಾರಗಳು ಈ ಪ್ರವೃತ್ತಿಯನ್ನು ಮುಂದುವರಿಸಿತಲ್ಲದೆ, ಸಮುದಾಯವು ಮುಖ್ಯವಾಹಿನಿಗೆ ಬರುವುದಕ್ಕೆ ತಡೆಯೊಡ್ಡಿತು’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT