ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟಾಚಾರ: 6,903 ಪ್ರಕರಣ ಬಾಕಿ; ಸಿಬಿಐ ತನಿಖೆ ಕುರಿತು ಸಿವಿಸಿ ವರದಿ

ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಗಳ ಕುರಿತ ಸಿವಿಸಿ ವರದಿ
Published : 2 ಸೆಪ್ಟೆಂಬರ್ 2024, 16:09 IST
Last Updated : 2 ಸೆಪ್ಟೆಂಬರ್ 2024, 16:09 IST
ಫಾಲೋ ಮಾಡಿ
Comments

ನವದೆಹಲಿ: ಸಿಬಿಐ ತನಿಖೆ ನಡೆಸುತ್ತಿರುವ 6,903 ಭ್ರಷ್ಟಾಚಾರ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದುಕೊಂಡಿವೆ ಎಂದು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ವಾರ್ಷಿಕ ವರದಿ ತಿಳಿಸಿದೆ.

‘2023ರ ಡಿಸೆಂಬರ್‌ 31ರ ವರೆಗಿನ ಅಂಕಿ–ಅಂಶದ ಪ್ರಕಾರ 361 ಪ್ರಕರಣಗಳು 20 ವರ್ಷಗಳಿಗಿಂತಲೂ ಹೆಚ್ಚಿನಿಂದ ಬಾಕಿಯಿವೆ. 6,903 ಪ್ರಕರಣಗಳಲ್ಲಿ ಒಟ್ಟು 2,461 ಪ್ರಕರಣಗಳು 10 ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಬಾಕಿಯಿರುವುದು ಕಳವಳಕಾರಿ ಸಂಗತಿ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಬಿಐ ಮುಂದೆ 658 ಪ್ರಕರಣಗಳು: 658 ಭ್ರಷ್ಟಾಚಾರ ಪ್ರಕರಣಗಳು ಇನ್ನೂ ಸಿಬಿಐ ಮುಂದೆ ತನಿಖೆಗೆ ಬಾಕಿಯಿವೆ. ಇವುಗಳಲ್ಲಿ 48 ಪ್ರಕರಣಗಳು ಐದು ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಉಳಿದುಕೊಂಡಿವೆ ಎಂದು ವರದಿ ಹೇಳಿದೆ.

‘ಒಂದು ವರ್ಷಕ್ಕಿಂತ ಕೆಳಗಿನ 286 ಪ್ರಕರಣಗಳು, 1ರಿಂದ 2 ವರ್ಷದೊಳಗಿನ 175 ಪ್ರಕರಣಗಳು, 2ರಿಂದ 3 ವರ್ಷದೊಳಗಿನ 75 ಪ್ರಕರಣಗಳು ಹಾಗೂ 3ರಿಂದ 5 ವರ್ಷದೊಳಗಿನ 74 ಪ್ರಕರಣಗಳು ಸಿಬಿಐ ಮುಂದೆ ತನಿಖೆಗೆ ಬಾಕಿಯಿವೆ’ ಎಂದಿದೆ.

‘ಪ್ರಕರಣ ದಾಖಲಾದ ಒಂದು ವರ್ಷದೊಳಗೆ ಸಿಬಿಐ ತನಿಖೆಯನ್ನು ಪೂರ್ಣಗೊಳಿಸುವ ನಿರೀಕ್ಷೆಯಿರುತ್ತದೆ. ಯಾವುದೇ ಪ್ರಕರಣದಲ್ಲಿ ತನಿಖೆ ನಡೆಸುವ ಅಗತ್ಯವಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು, ತನಿಖೆ ಪೂರ್ಣಗೊಳಿಸಿ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸುತ್ತದೆ. ಕೆಲವು ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸುವಲ್ಲಿ ವಿಳಂಬ ಉಂಟಾಗಿದೆ’ ಎಂದು ಹೇಳಿದೆ. 

‘ಅತಿಯಾದ ಕೆಲಸ, ಮಾನವಶಕ್ತಿಯ ಕೊರತೆ ಮತ್ತು ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡುವಲ್ಲಿನ ವಿಳಂಬವು ತನಿಖೆ ತಡವಾಗಲು ಕೆಲವು ಕಾರಣಗಳು’ ಎಂದಿದೆ.

1,610 ಖಾಲಿ ಹುದ್ದೆಗಳು: ಸಿಬಿಐಗೆ ಮಂಜೂರಾಗಿರುವ ಒಟ್ಟು 7,295 ಹುದ್ದೆಗಳಲ್ಲಿ 1,610 ಹುದ್ದೆಗಳು ಖಾಲಿಯಿವೆ. ಇವುಗಳಲ್ಲಿ ಎಕ್ಸಿಕ್ಯೂಟಿವ್‌ ಶ್ರೇಣಿಯ 1,040, ಕಾನೂನು ಅಧಿಕಾರಿಗಳ 84 ಹಾಗೂ ತಾಂತ್ರಿಕ ವಿಭಾಗದ ಅಧಿಕಾರಿಗಳ 53 ಹುದ್ದೆಗಳು ಸೇರಿವೆ ಎಂದು ವರದಿ ವಿವರಿಸಿದೆ.

Cut-off box - ವಿಚಾರಣೆಗೆ ಬಾಕಿಯಿರುವ ಪ್ರಕರಣಗಳು 361 20 ವರ್ಷಗಳಿಗಿಂತಲೂ ಹೆಚ್ಚಿನಿಂದ ಬಾಕಿಯಿರುವ ಪ್ರಕರಣಗಳು 2100 10 ರಿಂದ 20 ವರ್ಷಗಳವರೆಗೆ ಬಾಕಿ 2188 5ರಿಂದ 10 ವರ್ಷಗಳವರೆಗೆ ಬಾಕಿ 875 3ರಿಂದ 5 ವರ್ಷಗಳವರೆಗೆ ಬಾಕಿ 1379 3 ವರ್ಷಕ್ಕಿಂತ ಕಡಿಮೆ ಅವಧಿಯಿಂದ ಬಾಕಿ

Cut-off box - ಇಲಾಖಾ ತನಿಖೆ: 82 ಪ್ರಕರಣ ಬಾಕಿ ಸಿಬಿಐ ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆಗೆ ಸಂಬಂಧಿಸಿದಂತೆ 2023ರ ಡಿಸೆಂಬರ್‌ 31ರ ವರೆಗೆ ಒಟ್ಟು 82 ಪ್ರಕರಣಗಳು ಬಾಕಿಯಿವೆ ಎಂಬ ಅಂಶ ವರದಿಯಲ್ಲಿದೆ. ಸಿಬಿಐನ ‘ಗ್ರೂಪ್‌ ಎ’ ಅಧಿಕಾರಿಗಳ ವಿರುದ್ಧದ 54 ಹಾಗೂ ಗ್ರೂಪ್‌ ಬಿ ಮತ್ತು ಗ್ರೂಪ್ ಸಿ ಅಧಿಕಾರಿಗಳ ವಿರುದ್ಧದ 28 ಪ್ರಕರಣಗಳ ಇಲಾಖಾ ತನಿಖೆಯು ವಿವಿಧ ಹಂತಗಳಲ್ಲಿ ಬಾಕಿ ಉಳಿದುಕೊಂಡಿವೆ. ‘ಗ್ರೂಪ್‌ ಎ’ ಅಧಿಕಾರಿಗಳ ವಿರುದ್ಧದ 54 ಪ್ರಕರಣಗಳಲ್ಲಿ 25 ಪ್ರಕರಣಗಳು ನಾಲ್ಕು ವರ್ಷಗಳಿಗಿಂತ ಅಧಿಕ ಸಮಯದಿಂದಲೂ ಪೂರ್ಣಗೊಂಡಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT