ಗುರುವಾರ, 26 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರೋಪಿಯನ್ನು ಜೈಲಿನಲ್ಲಿರಿಸಲು ಕಠಿಣ ಷರತ್ತು ಬಳಸಲು ಅವಕಾಶ ಇಲ್ಲ: ‘ಸುಪ್ರೀಂ’

Published : 26 ಸೆಪ್ಟೆಂಬರ್ 2024, 21:00 IST
Last Updated : 26 ಸೆಪ್ಟೆಂಬರ್ 2024, 21:00 IST
ಫಾಲೋ ಮಾಡಿ
Comments

ನವದೆಹಲಿ: ವಿಚಾರಣೆ ಇಲ್ಲದೆ ಆರೋಪಿಯೊಬ್ಬನನ್ನು ಸೆರೆವಾಸದಲ್ಲಿಯೇ ಇರಿಸುವುದಕ್ಕಾಗಿ ಜಾರಿ ನಿರ್ದೇಶನಾಲಯ(ಇ.ಡಿ) ಜಾಮೀನಿಗೆ ಸಂಬಂಧಿಸಿ ಕಠಿಣ ಷರತ್ತುಗಳನ್ನು ಒಂದು ತಂತ್ರವಾಗಿ ಬಳಸಿಕೊಳ್ಳುವುದಕ್ಕೆ ಸಾಂವಿಧಾನಿಕ ನ್ಯಾಯಾಲಯಗಳು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಸಚಿವ ಹಾಗೂ ಡಿಎಂಕೆ ನಾಯಕ ಸೆಂಥಿಲ್‌ ಬಾಲಾಜಿ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದ ವೇಳೆ ಸುಪ್ರೀಂ ಕೋರ್ಟ್‌ ಈ ಮಾತು ಹೇಳಿದೆ.

ಜಾಮೀನು ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್‌ ಅವರು ಇದ್ದ ನ್ಯಾಯಪೀಠ, ಸೆಂಥಿಲ್‌ ಬಾಲಾಜಿ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ.

₹25 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಇಬ್ಬರ ಶ್ಯೂರಿಟಿ ಒದಗಿಸಬೇಕು, ಸಂತ್ರಸ್ತರನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ಸಂಪರ್ಕಿಸಬಾರದು ಎಂಬ ಷರತ್ತು ವಿಧಿಸಿದೆ.

ನೌಕರಿಗಾಗಿ ಹಣ ಹಗರಣದ ಜೊತೆ ನಂಟಿನ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಸೆಂಥಿಲ್‌ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಕಳೆದ ವರ್ಷ ಜೂನ್‌ 14ರಂದು ಬಂಧಿಸಿತ್ತು.

‘ಸೆಂಥಿಲ್‌ ಬಾಲಾಜಿ ಅವರ ಸೆರೆವಾಸ ಮುಂದುವರಿದಲ್ಲಿ, ಅದು ಸಂವಿಧಾನದ 21ನೇ ವಿಧಿ ಅನ್ವಯ ಅವರು ಹೊಂದಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

‘ಇಂತಹ ಪ್ರಕರಣಗಳಲ್ಲಿ, ಸಾಂವಿಧಾನಿಕ ನ್ಯಾಯಾಲಯಗಳು ತಮ್ಮ ಅಧಿಕಾರವನ್ನು ಚಲಾಯಿಸಿದಿದ್ದಲ್ಲಿ, ಸಂವಿಧಾನದ 21ನೇ ವಿಧಿ ಅಡಿ ವಿಚಾರಣಾಧೀನ ಕೈದಿಗಳು ಹೊಂದಿರುವ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗುತ್ತದೆ’ ಎಂದೂ ಅಭಿಪ್ರಾಯಪಟ್ಟಿದೆ.

‘ಪ್ರಕರಣಕ್ಕೆ ಸಂಬಂಧಿಸಿ 2 ಸಾವಿರಕ್ಕೂ ಅಧಿಕ ಆರೋಪಿಗಳಿದ್ದು, 600ಕ್ಕೂ ಹೆಚ್ಚು ಜನ ಸಾಕ್ಷಿಗಳಿದ್ದಾರೆ. ಹೀಗಾಗಿ, ಪ್ರಕರಣದ ವಿಚಾರಣೆ ಪೂರ್ಣಗೊಳ್ಳಲು 3–4 ವರ್ಷಗಳು ಅಥವಾ ಇನ್ನೂ ಹೆಚ್ಚು ಸಮಯ ಬೇಕು. ಇನ್ನೊಂದೆಡೆ ಜಾಮೀನು ನಿರಾಕರಿಸುವುದಕ್ಕೂ ಒಂದು ಮಿತಿ ಇದೆ’ ಎಂದು ಪೀಠ ಹೇಳಿದೆ.

ಸ್ವಾಗತ: ಸೆಂಥಿಲ್‌ ಬಾಲಾಜಿ ಅವರಿಗೆ ಜಾಮೀನು ನೀಡಿರುವುದನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸ್ವಾಗತಿಸಿದ್ದಾರೆ.

‘ಬಾಲಾಜಿ ಅವರನ್ನು ಜೈಲಿನಲ್ಲಿಯೇ ಇರಿಸುವ ಮೂಲಕ ಅವರನ್ನು ತುಳಿಯುವ ಯತ್ನಗಳು ನಡೆದಿದ್ದವು. ಆದರೆ, ಈಗ ಅವರು ಹಿಂದಿಗಿಂತಲೂ ಹೆಚ್ಚು ಬಲಿಷ್ಠರಾಗಿ ಹೊರಹೊಮ್ಮಿದ್ದಾರೆ’ ಎಂದು ಹೇಳಿದ್ದಾರೆ.

‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಇಷ್ಟೊಂದು ದೀರ್ಘ ಅವಧಿಗೆ ಯಾರಿಗೂ ಸೆರೆವಾಸ ವಿಧಿಸಿರಲಿಲ್ಲ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT