ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಖಿಂಪುರ ಪ್ರಕರಣ: ಆಶಿಶ್‌ ಮಿಶ್ರಾರನ್ನು ಎಷ್ಟು ದಿನ ಕಸ್ಟಡಿಯಲ್ಲಿ ಇರಿಸಲು ಸಾಧ್ಯ?

ಫಾಲೋ ಮಾಡಿ
Comments

ನವದೆಹಲಿ: ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ಅವರನ್ನು ಎಷ್ಟು ದಿನ ಕಸ್ಟಡಿಯಲ್ಲಿ ಇರಿಸಲು ಸಾಧ್ಯ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ.

ಲಖಿಂಪುರ ಖೀರಿ ಹಿಂಸಾಚಾರ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಬೇಕಾಗುವ ಕಾಲಾವಧಿಯನ್ನು ಸ್ಪಷ್ಟಪಡಿಸುವಂತೆಯೂ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಿಗೆ ಸೂಚಿಸಿದೆ.

‘ಆರೋಪಿಗಳು ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಇದೀಗ ಆರೋಪಪಟ್ಟಿಯೂ ಸಲ್ಲಿಕೆಯಾಗಿ, ನ್ಯಾಯಾಲಯವು ಅವರ ವಿರುದ್ಧ ದೋಷಾರೋಪವನ್ನೂ ಹೊರಿಸಿದೆ. ಈ ಪ್ರಕರಣದಲ್ಲಿ ಎಲ್ಲರ ಹಿತಾಸಕ್ತಿಯನ್ನೂ ನಾವು ಸಮತೋಲನಗೊಳಿಸಬೇಕಾಗಿದೆ’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ ಹೇಳಿದೆ.

ಹಿಂಸಾಚಾರದ ವೇಳೆ ವಾಹನದಲ್ಲಿದ್ದ ಮೂವರು ಸಾವಿಗೀಡಾಗಿರುವುದಕ್ಕೆ ಸಂಬಂಧಿಸಿ ದಾಖಲಾಗಿದ್ದ ಇನ್ನೊಂದು ಪ್ರಕರಣದ ಸ್ಥಿತಿಗತಿಗಳ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜನವರಿ 11ಕ್ಕೆ ನಿಗದಿಪಡಿಸಿದೆ. ಆಶಿಶ್‌ ಮಿಶ್ರಾ ಮತ್ತು ಇತರ 12 ಮಂದಿ ಆರೋಪಿಗಳ ವಿರುದ್ಧ ಡಿಸೆಂಬರ್‌ 6ರಂದು ವಿಚಾರಣಾ ನ್ಯಾಯಾಲಯವು ದೋಷಾರೋಪ ಹೊರಿಸಿತ್ತು.

ಆಶಿಶ್‌ ಮಿಶ್ರಾ ಮತ್ತು ಉಳಿದ ಆರೋಪಿಗಳ ವಿರುದ್ಧ 302 (ಕೊಲೆ), 120 ಬಿ (ಕ್ರಿಮಿನಲ್‌ ಪಿತೂರಿ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಆರೋಪ ಹೊರಿಸಲಾಗಿದೆ.

ಕೇಂದ್ರ ರೂಪಿಸಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ ವರ್ಷ ಅಕ್ಟೋಬರ್‌ನಲ್ಲಿ ರೈತರು ಲಖಿಂಪುರ–ಖೀರಿಯಲ್ಲಿ ಪ್ರತಿಭಟಿಸುವ ಸಂದರ್ಭದಲ್ಲಿ ವೇಗವಾಗಿ ವಾಹನ ಹರಿಸಿದ ಪರಿಣಾಮ ನಾಲ್ವರು ರೈತರು, ಸ್ಥಳೀಯ ಪತ್ರಕರ್ತ ಸೇರಿ ಎಂಟು ಮಂದಿ ಸಾವನ್ನಪ್ಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT