ನವದೆಹಲಿ: ಭ್ರೂಣವು ಗಂಡೋ, ಹೆಣ್ಣೋ ಎಂಬುದನ್ನು ತೀರ್ಮಾನಿಸುವುದು ಪುರುಷನ ವರ್ಣತಂತುಗಳೇ ವಿನಾ ಮಹಿಳೆಗೂ ಅದಕ್ಕೂ ಸಂಬಂಧ ಇಲ್ಲ ಎಂಬುದನ್ನು ಅತ್ತೆ–ಮಾವಂದಿರಿಗೆ ತಿಳಿಹೇಳಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಂಶೋದ್ಧಾರಕನನ್ನು ಕೊಡಲಿಲ್ಲ ಎಂದು ಸೊಸೆಯಂದಿರಿಗೆ ಕಿರುಕುಳ ನೀಡುವವರಿಗೆ ಈ ವಿಚಾರವನ್ನು ತಿಳಿಸಬೇಕು ಎಂದು ಕಿವಿಮಾತು ಹೇಳಿದೆ.

ಮಹಿಳೆಯೊಬ್ಬಳು ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ಈ ಮಹಿಳೆ ಕಡಿಮೆ ವರದಕ್ಷಿಣೆ ತಂದಿದ್ದಕ್ಕಾಗಿ ಮಾತ್ರವಲ್ಲದೆ ಇಬ್ಬರು ಹೆಣ್ಣುಮಕ್ಕಳನ್ನು ಹೆತ್ತಿದ್ದಕ್ಕಾಗಿ ಅತ್ತೆ–ಮಾವನಿಂದ ಕಿರುಕುಳ ಅನುಭವಿಸಿದ್ದರು.

ಮದುವೆಯಾಗಿ ತಂದೆಯ ಮನೆ ತೊರೆದ ನಂತರದಲ್ಲಿ ಮಗಳು ಚೆನ್ನಾಗಿರಲಿ ಎಂದು ತಂದೆ–ತಾಯಿ ಬಯಸುತ್ತಾರೆ. ಆದರೆ, ಆ ಹೆಣ್ಣಿಗೆ ಪ್ರೀತಿ ಮತ್ತು ಬೆಂಬಲ ನೀಡುವ ಬದಲು ಆಕೆಯು ಅತ್ತೆ–ಮಾವ, ನಾದಿನಿ, ಮೈದುನರಿಂದ ಕಿರುಕುಳ ಅನುಭವಿಸಬೇಕಾಗುತ್ತದೆ. ಇದು ಮನಕಲಕುವ ಸಂಗತಿ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಮಹಿಳೆಯು ಇಬ್ಬರು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾನು ಜನ್ಮ ನೀಡಿದ ಮಕ್ಕಳನ್ನೇ ತೋರಿಸಿ ತನಗೆ ಕಿರುಕುಳ ನೀಡಿದಾಗ ಮನಸ್ಸಿಗೆ ಆಗುವ ಆಘಾತವು ಹೆಚ್ಚಿನದ್ದಾಗಿರುತ್ತದೆ ಎಂದು ಕೋರ್ಟ್ ಹೇಳಿದೆ. ‘ಇಲ್ಲಿ ವಿಜ್ಞಾನವನ್ನು ಉಪೇಕ್ಷಿಸಲಾಗುತ್ತಿದೆ. ವಿಜ್ಞಾನದ ಪ್ರಕಾರ, ಅಂಡಾಣು ಯಾವ ವರ್ಣತಂತು ಇರುವ ವೀರ್ಯಾಣುವಿನ ಜೊತೆ ಸೇರುತ್ತದೆ ಎಂಬುದು ಭ್ರೂಣದ ಲಿಂಗವನ್ನು ತೀರ್ಮಾನಿಸುತ್ತದೆ’ ಎಂದು ಹೇಳಿದೆ.

ಹೆಣ್ಣು ಮಗಳಿಗೆ ಜನ್ಮ ನೀಡಿದ್ದಕ್ಕಾಗಿ ಕಿರುಕುಳ ಅನುಭವಿಸಿದ ಹತ್ತು ಹಲವು ಪ್ರಕರಣಗಳನ್ನು ಕೋರ್ಟ್ ನೋಡಿದೆ. ವಂಶೋದ್ಧಾರಕನನ್ನು ನೀಡಲಿಲ್ಲ ಎಂದು ಮಹಿಳೆಯರು ತಮ್ಮ ಗಂಡನ ಮನೆಯವರಿಂದ ನಿರಂತರವಾಗಿ ಕಿರುಕುಳ ಅನುಭವಿಸಿದ್ದನ್ನು ಕಂಡಿದೆ ಎಂದು ನ್ಯಾಯಮೂರ್ತಿ ಶರ್ಮ ಹೇಳಿದ್ದಾರೆ.

ಇಂತಹ ಜನರಿಗೆ ಅರಿವು ನೀಡುವ ಅಗತ್ಯ ಇದೆ. ಭ್ರೂಣದ ಲಿಂಗ ಯಾವುದು ಎಂಬುದನ್ನು ತೀರ್ಮಾನಿಸುವುದು ತಮ್ಮ ಮಗನೇ ವಿನಾ ಸೊಸೆ ಅಲ್ಲ ಎಂಬುದನ್ನು ಇಂತಹ ಅತ್ತೆ–ಮಾವಂದಿರಿಗೆ ತಿಳಿಹೇಳಬೇಕಿದೆ ಎಂದು ಶರ್ಮ ಅವರು ಹೇಳಿದ್ದಾರೆ. ‘ಈ ಆದೇಶವು ಇಂಥದ್ದೊಂದು ಅರಿವು ಮೂಡಲು ಕಾರಣವಾದರೆ, ಇಂತಹ ಅಪರಾಧ ಎಸಗುವವರ ಮನಸ್ಸು ಪರಿವರ್ತಿಸುವಲ್ಲಿ ದೊಡ್ಡ ನೆರವಾದಂತೆ ಆಗುತ್ತದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

ವರದಕ್ಷಿಣೆ ಕಿರುಕುಳದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಪತಿಗೆ ಕೋರ್ಟ್ ಜಾಮೀನು ನಿರಾಕರಿಸಿದೆ. ತನ್ನ ಮಗಳಿಗೆ ಗಂಡನ ಮನೆಯವರಿಂದ ಹೆಚ್ಚುವರಿ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ಆಗುತ್ತಿತ್ತು, ಹೆಣ್ಣುಮಕ್ಕಳಿಗೆ ಜನ್ಮನೀಡಿದ್ದಕ್ಕಾಗಿ ಆಕೆಯನ್ನು ಕೆಟ್ಟದ್ದಾಗಿ ನಡೆಸಿಕೊಳ್ಳಲಾಗುತ್ತಿತ್ತು ಎಂದು ಮಹಿಳೆಯ ತಂದೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

ಯುವತಿಯ ಪೋಷಕರು ಪತಿ ಮತ್ತು ಅತ್ತೆ–ಮಾವಂದಿರಲ್ಲಿ ಇರುವ ವರದಕ್ಷಿಣೆ ನಿರೀಕ್ಷೆಯನ್ನು ಪೂರೈಸದಿದ್ದರೆ ಅದು ಮಹಿಳೆಯ ಮೌಲ್ಯವನ್ನು ಕುಗ್ಗಿಸುತ್ತದೆ ಎಂಬ ಕಲ್ಪನೆಯು ಮಹಿಳೆಯರ ವಿರುದ್ಧ ಆಳವಾಗಿ ಬೇರೂರಿರುವ ತಾರತಮ್ಯವನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಇಂತಹ ನಿರೀಕ್ಷೆಯು ಲಿಂಗ ಸಮಾನತೆಯ ತತ್ವಗಳನ್ನು ಉಲ್ಲಂಘಿಸುವುದಲ್ಲದೆ ಮಹಿಳೆಯರನ್ನು ಸರಕುಗಳನ್ನಾಗಿ ಪರಿಗಣಿಸಿ, ಮಹಿಳೆಯರನ್ನು ವಹಿವಾಟಿಗೆ ಉಪಯೋಗಿಸಿಕೊಳ್ಳಬಹುದು ಎಂಬ ಮಟ್ಟಕ್ಕೆ ಇಳಿಸುವಂತಹ ವಾತಾವರಣ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.