ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಐಪಿಗಳಿಗಾದರೆ ಫುಟ್‌ಪಾತ್‌ ಸ್ವಚ್ಛ; ಜನರಿಗೆ ಏಕೆ ಇಲ್ಲ: ಹೈಕೋರ್ಟ್‌ ಪ್ರಶ್ನೆ

Published 24 ಜೂನ್ 2024, 13:41 IST
Last Updated 24 ಜೂನ್ 2024, 13:41 IST
ಅಕ್ಷರ ಗಾತ್ರ

ಮುಂಬೈ: ‘ಪ್ರಧಾನಿ ಅಥವಾ ಇತರೆ ಪ್ರಮುಖರ ಭೇಟಿಗಾಗಿ ಒಂದು ದಿನಕ್ಕಾಗಿ ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿಡುವುದು ಸಾಧ್ಯವಾಗುವುದಾದರೆ, ಅದೇ ಕೆಲಸವನ್ನು ಜನಸಾಮಾನ್ಯರಿಗಾಗಿ ದಿನವೂ ಏಕೆ ಮಾಡಬಾರದು’ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಪ್ರಶ್ನಿಸಿದೆ. 

ಮುಕ್ತ ಮತ್ತು ಬಳಕೆಗೆ ಸುರಕ್ಷಿತವಾಗಿರುವ ಪಾದಚಾರಿ ಮಾರ್ಗವು ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದನ್ನು ಒದಗಿಸಲು ಆಡಳಿತ ವ್ಯವಸ್ಥೆಯು ಬದ್ಧವಾಗಿರಬೇಕು ಎಂದೂ ಹೈಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಎಸ್‌.ಸೊನಾಕ್‌, ಕಮಲ್‌ ಖಾತಾ ಅವರಿದ್ದ ವಿಭಾಗೀಯ ಪೀಠವು, ಈ ಸಮಸ್ಯೆ ಬಗೆಹರಿಸಲು ಏನಾದರೂ ಮಾಡಬೇಕು ಎಂದು ಸಲಹೆ ನೀಡಿದೆ.

ನಗರದಲ್ಲಿ ಪಾದಚಾರಿ ಮಾರ್ಗಗಳನ್ನು ಕೆಲವು ವ್ಯಾಪಾರಿಗಳು ಅತಿಕ್ರಮಿಸಿರುವ ಪರಿಣಾಮದಿಂದಾಗಿ ಉಂಟಾಗಿರುವ ಸಮಸ್ಯೆ ಕುರಿತು ಹೈಕೋರ್ಟ್ ಕಳೆದ ವರ್ಷ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.

‘ಪ್ರಧಾನಿ ಅಥವಾ ಪ್ರಮುಖರೊಬ್ಬರು ಬಂದಾಗ ರಸ್ತೆ, ಪಾದಚಾರಿ ಮಾರ್ಗಗಳು ತಕ್ಷಣ ಮುಕ್ತವಾಗಲಿವೆ. ಅದು ಹೇಗೆ ಸಾಧ್ಯ; ಇದನ್ನೇ ಜನರಿಗಾಗಿ ಏಕೆ ಮಾಡಲಾಗದು’ ಎಂದು ಪೀಠವು ಪ್ರಶ್ನಿಸಿತು.

ಬೃಹತ್ ಮುಂಬೈ ನಗರಪಾಲಿಕೆ (ಬಿಎಂಸಿ) ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್.ಯು.ಕಾಮ್ದಾರ್, ‘ಇಂತಹ ವ್ಯಾಪಾರಿಗಳ ವಿರುದ್ಧ ಆಗಾಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಮತ್ತೆ ಬರುತ್ತಾರೆ’ ಎಂದರು.

ಸಮಸ್ಯೆ ಬಗೆಹರಿಸಲು ನೆಲಮಾಳಿಗೆಯಲ್ಲಿ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತರಲು ಬಿಎಂಸಿ ಚಿಂತನೆ ನಡೆಸುತ್ತಿದೆ ಎಂದು ವಕೀಲರು ಹೇಳಿದರು. ಇದಕ್ಕೆ ಪೀಠವು, ‘ನಗರಪಾಲಿಕೆಯು ಇಂಥ ಮಾತುಗಳ ಮೂಲಕ ಅಕ್ಷರಶಃ ಸಮಸ್ಯೆಯನ್ನು ಹೂತುಹಾಕುತ್ತಿದೆ’ ಎಂದು ಪ್ರತಿಕ್ರಿಯಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT