ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಲೈಂಗಿಕ ತೃಪ್ತಿಗೆ ಸಂಗಾತಿಯ ಬಳಿಯಲ್ಲದೆ ಇನ್ನೆಲ್ಲಿ ಹೋಗಬೇಕು?’

ವರದಕ್ಷಿಣೆ ಕಿರಕುಳದ ಆರೋಪ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್ ಪ್ರಶ್ನೆ
Published : 12 ಅಕ್ಟೋಬರ್ 2024, 15:23 IST
Last Updated : 12 ಅಕ್ಟೋಬರ್ 2024, 15:23 IST
ಫಾಲೋ ಮಾಡಿ
Comments

ಪ್ರಯಾಗರಾಜ್ (ಪಿಟಿಐ): ‘ನಾಗರಿಕ ಸಮಾಜದಲ್ಲಿ ವ್ಯಕ್ತಿಯು ತನ್ನ ದೈಹಿಕ ಹಾಗೂ ಲೈಂಗಿಕ ಬಯಕೆಗಳನ್ನು ಈಡೇರಿಸಿಕೊಳ್ಳಲು ಸಂಗಾತಿಯ ಬಳಿ ಅಲ್ಲದೆ ಇನ್ನೆಲ್ಲಿ ಹೋಗಬೇಕು’ ಎಂದು ಪುರುಷನೊಬ್ಬನ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳದ ಆರೋಪ ರದ್ದುಗೊಳಿಸುವ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ಪ್ರಶ್ನಿಸಿದೆ.

ಪ್ರಕರಣದಲ್ಲಿನ ಆರೋಪಗಳನ್ನು ವೈಯಕ್ತಿಕ ವ್ಯಾಜ್ಯದ ಕಾರಣಕ್ಕಾಗಿ ಹೊರಿಸಿರುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಎಫ್ಐಆರ್‌ ಜೊತೆ ನೀಡಿರುವ ಪುರಾವೆಗಳು, ಸಾಕ್ಷಿಗಳು ನೀಡಿರುವ ಹೇಳಿಕೆಗಳು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಹೇಳಿಕೆಗಳಿಗೆ ಪೂರಕವಾಗಿ ಒದಗಿಬಂದಿಲ್ಲ ಎಂದು ಹೇಳಿರುವ ನ್ಯಾಯಮೂರ್ತಿ ಅನೀಶ್ ಕುಮಾರ್ ಗುಪ್ತಾ ಅವರು, ಪ್ರಾಂಜಲ್ ಶುಕ್ಲಾ ಮತ್ತು ಇಬ್ಬರು ಇತರರ ವಿರುದ್ಧದ ಪ್ರಕರಣವನ್ನು ರದ್ದುಮಾಡಿದ್ದಾರೆ.

ಪ್ರಾಥಮಿಕ ಆರೋಪಗಳು ಪತಿ–ಪತ್ನಿಯ ಲೈಂಗಿಕ ಸಂಬಂಧದ ಸುತ್ತ ಹಾಗೂ ಕೆಲವು ಚಟುವಟಿಕೆಗಳಲ್ಲಿ ತೊಡಗಲು ಪತ್ನಿ ಒಪ್ಪಿಗೆ ನೀಡದಿರುವುದಕ್ಕೆ ಸಂಬಂಧಿಸಿವೆ. ಈ ಆರೋಪಗಳು ವರದಕ್ಷಿಣೆಗೆ ಬೇಡಿಕೆ ಇರಿಸಲಾಗಿತ್ತು ಎಂಬುದನ್ನು ಹೇಳುತ್ತಿಲ್ಲ. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಈ ಆರೋಪ ಮಾಡಿರುವಂತಿದೆ ಎಂದು ಕೋರ್ಟ್ ಹೇಳಿದೆ.

‘ಲೈಂಗಿಕತೆಯ ವಿಚಾರದಲ್ಲಿ ಪರಸ್ಪರರ ನಡುವೆ ಹೊಂದಾಣಿಕೆ ಇಲ್ಲದಿರುವುದು ತಕರಾರಿಗೆ ಕಾರಣ ಎಂದು ಅನ್ನಿಸುತ್ತಿದೆ. ಈ ತಕರಾರಿನ ಕಾರಣದಿಂದಾಗಿ, ವರದಕ್ಷಿಣೆಗೆ ಬೇಡಿಕೆ ಇಡಲಾಗಿತ್ತು ಎಂಬ ಸುಳ್ಳು ಆರೋಪವನ್ನು ಹೊರಿಸಿರುವಂತೆ ಕಾಣುತ್ತಿದೆ’ ಎಂದು ಕೋರ್ಟ್‌ ಉಲ್ಲೇಖಿಸಿದೆ.

‘ಲೈಂಗಿಕ ಬಯಕೆ ಈಡೇರಿಸುವಂತೆ ನಾಗರಿಕ ಸಮಾಜದಲ್ಲಿ ಪತಿಯು ತನ್ನ ಪತ್ನಿಯ ಬಳಿಯಲ್ಲದೆ, ಪತ್ನಿಯು ತನ್ನ ಪತಿಯ ಬಳಿಯಲ್ಲದೆ ಇನ್ಯಾರ ಬಳಿ ಕೇಳಬೇಕು’ ಎಂದು ಕೋರ್ಟ್ ಪ್ರಶ್ನಿಸಿದೆ.

ಶುಕ್ಲಾ ಅವರು ವರದಕ್ಷಿಣೆ ಕೊಡುವಂತೆ ಕಿರುಕುಳ ನೀಡುತ್ತಾರೆ, ನಿಂದಿಸುತ್ತಾರೆ, ನೀಲಿಚಿತ್ರಗಳನ್ನು ವೀಕ್ಷಿಸುವಂತೆ ಹಾಗೂ ಅಸಹಜವಾದ ಲೈಂಗಿಕ ಕ್ರಿಯೆಗಳಲ್ಲಿ ತೊಡಗುವಂತೆ ಒತ್ತಾಯಿಸುತ್ತಾರೆ ಎಂದು ಎಫ್ಐಆರ್‌ನಲ್ಲಿ ದೂರಲಾಗಿತ್ತು. ಆದರೆ ಈ ಆರೋಪಗಳಿಗೆ ಅಗತ್ಯ ಆಧಾರಗಳು ಇಲ್ಲ ಎಂದು ಕೋರ್ಟ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT