ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇನೆ ಆಧುನೀಕರಣಕ್ಕೆ ಆದ್ಯತೆ: ರಾಜನಾಥ್‌ ಸಿಂಗ್‌

Published 13 ಜೂನ್ 2024, 16:06 IST
Last Updated 13 ಜೂನ್ 2024, 16:06 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ಅವರ ನೇತೃತ್ವದ ಹೊಸ ಸರ್ಕಾರವು ಸಶಸ್ತ್ರ ಪಡೆಗಳನ್ನು ಆಧುನೀಕರಿಸುವ ಮತ್ತು ದೇಶೀಯ ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಹರಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಗುರುವಾರ ಇಲ್ಲಿ ಅಧಿಕಾರ ವಹಿಸಿಕೊಂಡು, ಮುಂದಿನ ಐದು ವರ್ಷಗಳ ತಮ್ಮ ಗುರಿ ಮತ್ತು ದೃಷ್ಟಿಕೋನದ ಬಗ್ಗೆ ಮಾತನಾಡಿದ ಅವರು, 2028–29ರ ವೇಳೆಗೆ ದೇಶದ ರಕ್ಷಣಾ ರಫ್ತುಗಳನ್ನು ಪ್ರಸ್ತುತ ₹21,083 ಕೋಟಿಯಿಂದ ₹ 50,000 ಕೋಟಿಗೆ ಹೆಚ್ಚಿಸಲು ಸರ್ಕಾರವು ಶ್ರದ್ಧೆಯಿಂದ ಕೆಲಸ ಮಾಡಲಿದೆ ಎಂದು ಹೇಳಿದರು.

ಸಶಸ್ತ್ರ ಪಡೆಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜುಗೊಂಡಿವೆ. ಯಾವುದೇ ಸವಾಲನ್ನು ಎದುರಿಸಲು ಪಡೆಗಳು ಸಿದ್ಧ ಎಂದು ಸತತ ಎರಡನೇ ಅವಧಿಗೆ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದರು.

ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ಗಡಿರೇಖೆಯ ದೀರ್ಘಕಾಲದ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ರಾಷ್ಟ್ರದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತ್ವವನ್ನು ಸೇನಾ ಸಿಬ್ಬಂದಿ ಶೌರ್ಯ ಮತ್ತು ಬದ್ಧತೆಯಿಂದ ರಕ್ಷಿಸಿದ್ದಾರೆ ಎಂದು ಸಿಂಗ್ ಶ್ಲಾಘಿಸಿದರು.

‘ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವತ್ತ ಗಮನಹರಿಸುವುದರೊಂದಿಗೆ ದೇಶದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದ್ದೇವೆ’ ಎಂದು ಅವರು ಹೇಳಿದರು.

‘ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ಕರ್ತವ್ಯನಿರತ ಹಾಗೂ ನಿವೃತ್ತ ಸೈನಿಕರ ಕಲ್ಯಾಣಕ್ಕೆ ನಮ್ಮ ಪ್ರಮುಖ ಆದ್ಯತೆ ಮುಂದುವರಿಯಲಿದೆ’ ಎಂದು ಸಿಂಗ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT