ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಯುದ್ಧೋಪಾದಿ ಕೆಲಸ: ಮೋದಿ

Published 2 ಜುಲೈ 2024, 16:32 IST
Last Updated 2 ಜುಲೈ 2024, 16:32 IST
ಅಕ್ಷರ ಗಾತ್ರ

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಲೋಕಸಭೆಗೆ ಮಂಗಳವಾರ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ‘ಯುವಕರ ಭವಿಷ್ಯದ ಜತೆಗೆ ಚೆಲ್ಲಾಟವಾಡುವವರನ್ನು ಬಿಡುವುದಿಲ್ಲ’ ಎಂದು ಕಟುವಾಗಿ ಹೇಳಿದರು.

ನೀಟ್‌ ಮತ್ತು ನೆಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಅಕ್ರಮಗಳ ಕುರಿತು ದೇಶದಾದ್ಯಂತ ಪ್ರತಿಭಟನೆಗಳು ಹಾಗೂ ಹೋರಾಟಗಳು ನಡೆದಿರುವ ಹೊತ್ತಿನಲ್ಲಿ ಪ್ರಧಾನಿ ಅವರು ಈ ಹೇಳಿಕೆ ನೀಡಿದ್ದಾರೆ. ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. 

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಎರಡು ದಿನಗಳ ಚರ್ಚೆಗೆ ಉತ್ತರ ನೀಡಿದ ಮೋದಿ, ‘ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ವಿಷಯಕ್ಕೆ ಸಂಬಂಧಿಸಿದಂತೆ ದೇಶಾದಾದ್ಯಂತ ಹಲವಾರು ಮಂದಿಯನ್ನು ಬಂಧಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೆಲಸ ಮಾಡಲು ಪ್ರತಿಯೊಬ್ಬ ನಾಯಕರಿಗೂ ಹೇಳುತ್ತೇನೆ’ ಎಂದರು. 

‘ನಾವು ಈಗಾಗಲೇ ಈ ಬಗ್ಗೆ ಕಠಿಣ ಕಾನೂನು ಜಾರಿಗೆ ತಂದಿದ್ದೇವೆ. ಪರೀಕ್ಷಾ ವ್ಯವಸ್ಥೆ ಬಲಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ಅವರು ಹೇಳಿದರು.

ಸುಳ್ಳೇ ಕೈ ಅಸ್ತ್ರ–ಮೋದಿ: ‘ಕಾಂಗ್ರೆಸ್ ಪಕ್ಷವು ಸುಳ್ಳನ್ನೇ ರಾಜಕೀಯದ ಅಸ್ತ್ರವನ್ನಾಗಿಸಿಕೊಂಡಿದೆ’ ಎಂದು ಅವರು ಆರೋಪಿಸಿದರು.

ಪ್ರತಿ ಮಹಿಳೆಗೆ ತಿಂಗಳಿಗೆ ₹8,500 ಆರ್ಥಿಕ ನೆರವು ನೀಡುವುದಾಗಿ ಕಾಂಗ್ರೆಸ್ ಪ್ರಚಾರದ ಭರವಸೆಗೆ ತಿರುಗೇಟು ನೀಡಿದ ಮೋದಿ, ‘ಇವಿಎಂ, ಸಂವಿಧಾನ, ಮೀಸಲಾತಿ, ರಫೇಲ್, ಎಚ್‌ಎಎಲ್, ಎಲ್‌ಐಸಿ ಮತ್ತು ಬ್ಯಾಂಕ್‌ಗಳ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳಿದೆ’ ಎಂದು ಕಿಡಿಕಾರಿದರು.

‘ಅಗ್ನಿವೀರರ ಬಗ್ಗೆ ಸದನಕ್ಕೆ ಸುಳ್ಳು ಹೇಳಲಾಗಿದೆ. ಎಂಎಸ್‌ಪಿಗಳ ಬಗ್ಗೆಯೂ ಅದೇ ಹೇಳಿದರು. ಸದನದ ಘನತೆಗೆ ಧಕ್ಕೆಯಾಗುತ್ತಿರುವುದು ಸದನದ ದುರಾದೃಷ್ಟ. ಇದು ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ’ ಎಂದು ಅವರು ವ್ಯಾಖ್ಯಾನಿಸಿದರು. 

ದೇಶವು ಅಭಿವೃದ್ಧಿಯ ಹಾದಿಯನ್ನು ಆರಿಸಿಕೊಂಡಿದ್ದರೂ ಕಾಂಗ್ರೆಸ್ ಗಲಭೆ ಹರಡಲು ಮುಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ದಕ್ಷಿಣದಲ್ಲಿ ಉತ್ತರದ ವಿರುದ್ಧ ಮತ್ತು ಉತ್ತರದಲ್ಲಿ ಪಶ್ಚಿಮದ ವಿರುದ್ಧ ಅವರು ಮಾತನಾಡುತ್ತಾರೆ. ಅವರು ಧರ್ಮದ ಆಧಾರದ ಮೇಲೆ ವಿಭಜನೆಗೆ ಪ್ರಯತ್ನಿಸಿದ್ದಾರೆ ಮತ್ತು ದೇಶ ವಿಭಜನೆಯನ್ನು ಪ್ರತಿಪಾದಿಸಿದವರಿಗೆ ಚುನಾವಣೆ ಟಿಕೆಟ್ ನೀಡಿದ್ದಾರೆ. ಅವರು ಜನರನ್ನು ಜಾತಿಯ ಮೇಲೆ ವಿಭಜಿಸಲು ವದಂತಿಗಳನ್ನು ಹರಡುತ್ತಿದ್ದಾರೆ. ಅವರು ಇಡೀ ದೇಶವನ್ನು ಆರ್ಥಿಕ ಬಿಕ್ಕಟ್ಟಿನತ್ತ ಕೊಂಡೊಯ್ಯುತ್ತಿದ್ದಾರೆ. ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸಲು ದೇಶದಲ್ಲಿ ಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸಿದರು’ ಎಂದು ಅವರು ಆರೋಪಿಸಿದರು.

‘ಕಾಂಗ್ರೆಸ್‌ ಪಕ್ಷವು ಮಿತ್ರಪಕ್ಷಗಳ ಬೆಂಬಲದಿಂದ 99 ಸ್ಥಾನಗಳನ್ನು ಗೆದ್ದಿದೆ. ಅವರು ಸೋಲನ್ನು ಒಪ್ಪಿಕೊಳ್ಳುವ ಬದಲು ದುರಹಂಕಾರದಿಂದ ವರ್ತಿಸುತ್ತಿದ್ದಾರೆ. ಅವರು ನಮ್ಮನ್ನು ಸೋಲಿಸಿದರು ಎಂಬ ಕಥನಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ನಕಲಿ ವಿಜಯೋತ್ಸವ ಬೇಡ’ ಎಂದು ಕಿವಿಮಾತು ಹೇಳಿದ ಅವರು, ’ಕಾಂಗ್ರೆಸ್‌ ಪಕ್ಷವು 2014ರ ನಂತರ ಪರಾವಲಂಬಿ ಪಕ್ಷವಾಗಿದೆ ಮತ್ತು ಅದರ ಮಿತ್ರಪಕ್ಷಗಳ ಮತಗಳನ್ನು ಅವಲಂಬಿಸಿದೆ’ ಎಂದು ವ್ಯಂಗ್ಯವಾಡಿದರು. 

‘ಲೋಕಸಭೆ ಚುನಾವಣೆ ಜತೆಗೆ ನಾಲ್ಕು ರಾಜ್ಯಗಳ ಚುನಾವಣೆಗಳು ನಡೆದಿವೆ. ನಾಲ್ಕು ರಾಜ್ಯಗಳಲ್ಲಿ ಎನ್‌ಡಿಎ ಅಭೂತಪೂರ್ವ ಯಶಸ್ಸು ಕಂಡಿದೆ. ಮಹಾಪ್ರಭು ಜಗನ್ನಾಥನ ನಾಡು ಒಡಿಶಾ ನಮಗೆ ಆಶೀರ್ವಾದ ಮಾಡಿದೆ. ಆಂಧ್ರಪ್ರದೇಶದಲ್ಲಿ ಎನ್‌ಡಿಎ ಕ್ಲೀನ್ ಸ್ವೀಪ್ ಆಗಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಗೆದ್ದಿದ್ದೇವೆ. ಕೇರಳದಲ್ಲಿ ಖಾತೆ ತೆರೆದಿದ್ದೇವೆ. ತಮಿಳುನಾಡು ಹಾಗೂ ಪಂಜಾಬ್‌ನಲ್ಲಿ ಮತ ಪ್ರಮಾಣ ಹಿಗ್ಗಿಸಿಕೊಂಡು ಉತ್ತಮ ಸಾಧನೆ ಮಾಡಿದ್ದೇವೆ’ ಎಂದು ಅವರು ಹೇಳಿದರು.

ಮೂರನೇ ಅವಧಿಗೆ ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಐತಿಹಾಸಿಕ ಸಾಧನೆ. ಸ್ವಾತಂತ್ರ್ಯದ ನಂತರ, ಇದು ಎರಡನೇ ಬಾರಿಗೆ ಹಾಗೂ 60 ವರ್ಷಗಳ ನಂತರ ಸಂಭವಿಸಿದೆ. ಜನರ ಆಶೀರ್ವಾದದಿಂದ ಈ ಸಾಧನೆ ಆಗಿದೆ. ಸ್ಥಿರತೆಗಾಗಿ ನಮಗೆ ಜನಾದೇಶ ಸಿಕ್ಕಿದೆ’ ಎಂದು ಅವರು ಬಣ್ಣಿಸಿದರು. 

ಪ್ರಧಾನಿ ಮೋದಿ ಹೇಳಿದ್ದೇನು?
  • ಭ್ರಷ್ಟಾಚಾರ ಪ್ರಕರಣದಲ್ಲಿ ರಾಹುಲ್ ಗಾಂಧಿ ಜಾಮೀನಿನ ಮೇಲೆ ಹೊರಗಿದ್ದಾರೆ. ಒಬಿಸಿ ಸಮುದಾಯವನ್ನು ಅವಮಾನಿಸಿದ ಆರೋಪದಲ್ಲಿ ಅವರು ದೋಷಿಯಾಗಿದ್ದಾರೆ. ಹಲವಾರು ಮಾನನಷ್ಟ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಮಹಾನ್‌ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ. 

  • ನಮ್ಮ ವೈಯಕ್ತಿಕ ರಾಜಕೀಯ ಹಿತಾಸಕ್ತಿಗಳಿಗಾಗಿ ದೇವರ ಚಿತ್ರಗಳನ್ನು ಬಳಸುವುದು ಸರಿಯಲ್ಲ. 

  • ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಕಾಂಗ್ರೆಸ್‌ಗೆ ಜನರು ಈ ಸಲ ಜನಾದೇಶ ನೀಡಿದ್ದಾರೆ. ಸತತ ಮೂರನೇ ಬಾರಿ 100ರ ಗಡಿ ದಾಟಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ.
    ಸತತ ಮೂರು ಬಾರಿ 100 ಸ್ಥಾನಗಳನ್ನು ದಾಟಲು ಸಾಧ್ಯವಾಗದೇ ಇರುವುದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು.

  • ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ ಕಿರಿಯ ಪಾಲುದಾರ ಪಕ್ಷವಾಗಿದೆ. ಮಿತ್ರಪಕ್ಷಗಳ ಊರುಗೋಲಿನಿಂದ ಕಾಂಗ್ರೆಸ್‌ಗೆ 99 ಸ್ಥಾನಗಳನ್ನು ಗೆದ್ದಿದೆ. 13 ರಾಜ್ಯಗಳಲ್ಲಿ ಕೈ ಪಾಳಯಕ್ಕೆ ಖಾತೆಯನ್ನೇ ತೆರೆಯಲು ಸಾಧ್ಯವಾಗಲಿಲ್ಲ.
    ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ, ಗುಜರಾತ್‌ ಹಾಗೂ ಛತ್ತೀಸಗಢದಲ್ಲಿ ಪಕ್ಷ ಗೆದ್ದಿರುವುದು 2 ಸೀಟುಗಳಷ್ಟೇ. ಅಂತಹವರು ಹೀರೋ ಆಗಲು ಸಾಧ್ಯವೇ? 

  • 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತುವ ನಮ್ಮ ದೊಡ್ಡ ಅಭಿಯಾನವು ಚುನಾವಣೆಯ ಸಮಯದಲ್ಲಿ ನಮಗೆ ಆಶೀರ್ವಾದ ನೀಡಿತು. 

  • ವಿಶ್ವದ ಅತಿದೊಡ್ಡ ಚುನಾವಣೆಯಲ್ಲಿ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಿರಂತರವಾಗಿ ಸುಳ್ಳುಗಳನ್ನು ಹರಡಿ ಕೆಟ್ಟದಾಗಿ ಸೋತವರ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.

  • ಭ್ರಷ್ಟಾಚಾರದ ವಿರುದ್ಧ ನಮ್ಮ ಶೂನ್ಯ ಸಹಿಷ್ಣುತೆಗೆ ಜನರ ಬೆಂಬಲ ಸಿಕ್ಕಿದೆ. 

  • 2014ರಲ್ಲಿ ದೇಶವು ಹತಾಶೆಯ ಸ್ಥಿತಿಯಲ್ಲಿತ್ತು. ಜನರು ನಮ್ಮನ್ನು ಆಯ್ಕೆ ಮಾಡಿದರು ಮತ್ತು ಪರಿವರ್ತನೆಯ ಯುಗ ಪ್ರಾರಂಭವಾಯಿತು. 

  • ವಿಕಸಿತ ಭಾರತಕ್ಕಾಗಿ ನಮ್ಮ ಸಂಕಲ್ಪ ಈಡೇರಿಸಲು ನಾವು ದಣಿವರಿಯದ, ಪ್ರಾಮಾಣಿಕ, ಬದ್ಧ ಪ್ರಯತ್ನಗಳನ್ನು ಮಾಡುತ್ತೇವೆ. 

  • ನಮ್ಮ ಮೂರನೇ ಅವಧಿಯಲ್ಲಿ, ನಾವು ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಮೂರನೇ ಅವಧಿಯಲ್ಲಿ ನಾವು ಮೂರು ಪಟ್ಟು ಫಲಿತಾಂಶವನ್ನು ಖಚಿತಪಡಿಸುತ್ತೇವೆ. 

ಪೀಠದ ಎದುರು ವಿಪಕ್ಷ ಧರಣಿ 
ಪ್ರಧಾನಿ ಉತ್ತರಕ್ಕೆ ಮೊದಲು ಮಣಿಪುರದ ಬಗ್ಗೆ ಮಾತನಾಡಲು ಅಲ್ಲಿನ ಸಂಸದರಿಗೆ ಅವಕಾಶ ನೀಡಬೇಕು ಎಂದು ಲೋಕಸಭಾಧ್ಯಕ್ಷ ಓಂಬಿರ್ಲಾ ಅವರನ್ನು ವಿಪಕ್ಷಗಳ ಸದಸ್ಯರು ಕೋರಿದರು. ಈಶಾನ್ಯ ರಾಜ್ಯದ ಸದಸ್ಯರು ಸೋಮವಾರವೇ ಸದನದಲ್ಲಿ ಮಾತನಾಡಿದ್ದಾರೆ ಎಂದು ಸಭಾಧ್ಯಕ್ಷರು ಸ್ಪಷ್ಟಪಡಿಸಿದರು. ಇದನ್ನು ಖಂಡಿಸಿ ವಿಪಕ್ಷ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿ ಘೋಷಣೆಗಳನ್ನು ಕೂಗಿದರು. ಪ್ರಧಾನಿ ಭಾಷಣ ಮುಗಿಸುವ ತನಕವೂ ಧರಣಿ ಮುಂದುವರಿಸಿದರು. ಲೋಕಸಭಾಧ್ಯಕ್ಷರು ಸದಸ್ಯರಿಗೆ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT