ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಪ್ರೀಂ ಕೋರ್ಟ್‌ ಗಮನ ಸೆಳೆಯಲು ನಾರಿಮನ್‌ ಸಲಹೆ

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ಕೊಳ್ಳದ ನಿರ್ವಹಣೆಗೆ ಪರಿಣತರ ತಂಡ ರಚಿಸುವ ಪ್ರಸ್ತಾವನೆ ಮುಂದುರಿಸಿರುವ ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವುದಲ್ಲದೆ, ಅಗತ್ಯ ಬಿದ್ದರೆ ಈ ಕುರಿತು ಸುಪ್ರೀಂ ಕೋರ್ಟ್‌ ಗಮನ ಸೆಳೆಯಬಹುದು ಎಂದು ಹಿರಿಯ ವಕೀಲ ಫಾಲಿ ಎಸ್‌.ನಾರಿಮನ್‌ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕಾನೂನು ಸಚಿವ ಟಿ.ಬಿ. ಜಯಚಂದ್ರ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಶುಕ್ರವಾರ ಚರ್ಚಿಸಿದ ಅವರು, ಕೇಂದ್ರದ ಜಲಸಂಪನ್ಮೂಲ ಸಚಿವಾಲಯವು ಕಾವೇರಿ ನದಿ ನಿರ್ವಹಣೆಗೆ ಪರಿಣತರ ತಂಡವನ್ನು ರಚಿಸಲು ಮುಂದಾಗಿದ್ದರಲ್ಲಿ ಅರ್ಥವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾಗಿ ತಿಳಿದುಬಂದಿದೆ.

ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಕಾವೇರಿ ಕೊಳ್ಳ ವ್ಯಾಪ್ತಿಯ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವಿಶೇಷ ಮೇಲ್ಮನವಿಗಳಲ್ಲಿನ ಪ್ರಮುಖ ಅಂಶಗಳನ್ನು ಇದೇ ಸಂದರ್ಭ ಅವಲೋಕಿಸಿದ ಅವರು, ಜುಲೈನಲ್ಲಿ ಸುಪ್ರೀಂ ಕೋರ್ಟ್‌ ಮೇಲ್ಮನವಿಗಳ ವಿಚಾರಣೆ ಆರಂಭಿಸಿದ ನಂತರ ಮಧ್ಯಂತರ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ನಾರಿಮನ್‌ ಅವರ ಸಲಹೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು. ಕೇಂದ್ರದ ಜಲಸಂಪನ್ಮೂಲ ಸಚಿವಾಲಯಕ್ಕೆ ರಾಜ್ಯ ಸರ್ಕಾರದ ನಿಲುವನ್ನು ಒಳಗೊಂಡ ಪ್ರತಿಕ್ರಿಯೆ ನೀಡಲಾಗುವುದು ಎಂದು ಸಚಿವ ಪಾಟೀಲ ಸಭೆಯ ನಂತರ ತಿಳಿಸಿದರು.

**

ತಜ್ಞರ ಸಮಿತಿ ರಚನೆ ಪ್ರಸ್ತಾವ ತಿರಸ್ಕರಿಸಲು ದೇವೇಗೌಡ ಒತ್ತಾಯ

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸಬೇಕು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಬೇಕು ಎಂದು ಜನತಾ ದಳ(ಜಾತ್ಯತೀತ) ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ  ಸಿದ್ದರಾಮಯ್ಯಗೆ ಪತ್ರ ಬರೆದಿರುವುದಾಗಿ ಶುಕ್ರವಾರ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿರುವ ವಿಶೇಷ ಅರ್ಜಿ ಇತ್ಯರ್ಥ ಆಗುವ ತನಕ ಕೇಂದ್ರ ಸರ್ಕಾರ ಕಾಯಬೇಕು ಎಂದೂ ಅವರು ಆಗ್ರಹಿಸಿದರು.

ಜುಲೈ 11 ರಂದು ಸುಪ್ರೀಂಕೋರ್ಟ್‌ ಅಂತಿಮ ತೀರ್ಪು ನೀಡಲಿದೆ. ಈ ಹಂತದಲ್ಲಿ ತಜ್ಞರ ಸಮಿತಿ ನೇಮಿಸಬೇಕು ಎಂದು ಜಲಸಂಪನ್ಮೂಲ ಇಲಾಖೆ ಸಿದ್ಧಪಡಿಸಿರುವ ರಾಷ್ಟ್ರೀಯ ಜಲ ಚೌಕಟ್ಟು  ಮಸೂದೆಯಲ್ಲಿ (ಕರಡು) ಪ್ರಸ್ತಾಪಿಸಿರುವುದು ಕರ್ನಾಟಕದ ಹಿತಕ್ಕೆ ಮಾರಕ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT