ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಭಿನ್ನರ ಮುನಿಸಿಗೆ ‘ಸಂಘ’ದ ಮುಲಾಮು

ನಾಯಕತ್ವದ ಬಗ್ಗೆ ಕಿಡಿ –ಒಗ್ಗಟ್ಟಿನ ಜಪ | ಅಶಿಸ್ತಿನಿಂದ ವರ್ತಿಸಿದರೆ ಕ್ರಮದ ಎಚ್ಚರಿಕೆ
Published : 12 ಸೆಪ್ಟೆಂಬರ್ 2024, 21:26 IST
Last Updated : 12 ಸೆಪ್ಟೆಂಬರ್ 2024, 21:26 IST
ಫಾಲೋ ಮಾಡಿ
Comments

ಬೆಂಗಳೂರು: ಬಿಜೆಪಿಯಲ್ಲಿನ ‘ಭಿನ್ನ’ ಬಣಗಳ ಮುನಿಸು ಮತ್ತು ಅಸಮಾಧಾನವನ್ನು ಸದ್ಯದ ಮಟ್ಟಿಗೆ ಶಮನಗೊಳಿಸುವಲ್ಲಿ ಆರ್‌ಎಸ್‌ಎಸ್‌ ಮುಖಂಡರು ಯಶಸ್ವಿಯಾಗಿದ್ದಾರೆ.

ಇದೇ ವೇಳೆ ಬಿಜೆಪಿ ಕೆಲವು ‘ರೆಬೆಲ್‌’ ನಾಯಕರು ಪಕ್ಷದೊಳಗಿನ ವಿದ್ಯಮಾನಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ‘ವೈಮನಸ್ಸು ಬಿಟ್ಟು, ಒಂದಾಗಿ ಹೋಗದೆ ಇದ್ದರೆ ಮುಂದೆ ಕಷ್ಟವಾಗಬಹುದು. ಕಠಿಣ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಎಚ್ಚರಿಕೆಯನ್ನೂ ಸಂಘದ ನಾಯಕರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಬಿ.ವೈ.ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪ್ರಮುಖರ ಸಮ್ಮುಖದಲ್ಲಿ ನಡೆದ ಮೊದಲ ದೊಡ್ಡ ಮಟ್ಟದ ಸಮನ್ವಯ ಸಭೆ ಸದಾಶಿವನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಗುರುವಾರ ನಡೆಯಿತು. ಎರಡೂ ಬಣಗಳ ಎಲ್ಲ ಪ್ರಮುಖ ನಾಯಕರು ಭಾಗಿಯಾಗಿದ್ದರು. 

‘ಆರಂಭದಲ್ಲಿ ಬಿಜೆಪಿ ನಾಯಕರಿಗೆ ಅವರ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಅವಕಾಶ ನೀಡಲಾಯಿತು. ಬಳಿಕ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಮುಕುಂದ ಮಾತನಾಡಿದರು. ಕೆಲವು ನಾಯಕರು ಬಿ.ವೈ.ವಿಜಯೇಂದ್ರ ಅವರ ಕಾರ್ಯವೈಖರಿಯ ಕುರಿತು ವಾಗ್ದಾಳಿ ನಡೆಸಿದರು. ಇದಕ್ಕೆ ವಿಜಯೇಂದ್ರ ಸಮಜಾಯಿಷಿಯನ್ನೂ ನೀಡಿದರು’ ಎಂದು ಮೂಲಗಳು ತಿಳಿಸಿವೆ.

ಆರ್‌ಎಸ್‌ಎಸ್‌ ನಾಯಕರ ಎಚ್ಚರಿಕೆ

* ರಾಜ್ಯದಲ್ಲಿ ಬಿಜೆಪಿಯ ಭಾರಿ ಹಿನ್ನಡೆಗೆ ಪಕ್ಷದ ನಾಯಕರೇ ಕಾರಣ. ಆಡಳಿತ ಪಕ್ಷದ ವೈಫಲ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಬಿಟ್ಟು, ಪರಸ್ಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೀರಿ. ಇನ್ನು ಮುಂದೆ ವೈಮನಸ್ಸು ಬಿಟ್ಟು ಒಟ್ಟಾಗಿ ಹೋಗಬೇಕು

* ಪಕ್ಷದ ವಿಷಯಕ್ಕೆ ಮಾಧ್ಯಮಗಳ ಮುಂದೆ ಏಕೆ ಹೋಗಬೇಕು? ನಿಮ್ಮ ಸಮಸ್ಯೆ, ಏನೇ ಇದ್ದರೂ ಪಕ್ಷದ ಒಳಗೇ ಇದ್ದು ಬಗೆಹರಿಸಿಕೊಳ್ಳಬೇಕು. ಶಿಸ್ತು ಉಲ್ಲಂಘಿಸುವವರು ಎಷ್ಟೇ ದೊಡ್ಡವರಾಗಿದ್ದರೂ ಪಕ್ಷ ಕ್ರಮ ತೆಗೆದುಕೊಳ್ಳುತ್ತದೆ

* ಭಿನ್ನಾಭಿಪ್ರಾಯ, ಅಸಮಾಧಾನಕ್ಕೆ ಕೊನೆ ಹಾಡಬೇಕಾಗಿದೆ. ಎಲ್ಲರೂ ತಪ್ಪುಗಳನ್ನು ಸರಿಪಡಿಸಿಕೊಂಡು, ಪಕ್ಷದ ಚೌಕಟ್ಟಿನಲ್ಲೇ ಮುನ್ನಡೆಯಬೇಕು. ಅಧಿಕಾರ ಕೆಲವರಿಗೆ ಸಿಗದೇ ಇರಬಹುದು, ಮುಂದೆ ಸಿಕ್ಕೇ ಸಿಗುತ್ತದೆ

* ನೀವು ಕಾಂಗ್ರೆಸ್‌ನವರ ರೀತಿ ವರ್ತಿಸಿದರೆ ಸಂಘ ಏಕೆ ಮಧ್ಯ ಪ್ರವೇಶಿಸಬೇಕು? ಜನ ಸಂಘ ಮತ್ತು ಬಿಜೆಪಿ ಮೇಲೆ ಅಪಾರ ನಿರೀಕ್ಷೆಯಿದೆ. ಅವರ ನಿರೀಕ್ಷೆಗೆ ಧಕ್ಕೆ ಆಗಬಾರದು. ದೇಶ, ಹಿಂದುತ್ವ, ಹಿಂದೂಗಳ ರಕ್ಷಣೆ, ಅಭಿವೃದ್ಧಿ ಆದ್ಯತೆ ಆಗಿರಬೇಕು

*ವಾಲ್ಮೀಕಿ ಹಗರಣ ಖಂಡಿಸಿ ಬಳ್ಳಾರಿಗೆ ಪಾದಯಾತ್ರೆಯನ್ನು ಒಗ್ಗಟ್ಟಿನಿಂದ ಮಾಡಬೇಕು. ಈ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುವುದು ಸರಿಯಲ್ಲ

ಸಭೆಯಲ್ಲಿದ್ದ ಮುಖಂಡರು
ಆರ್‌ಎಸ್‌ಎಸ್‌ ಮುಖಂಡರಾದ ಮುಕುಂದ, ಸುಧೀರ್‌ ಕುಮಾರ್, ತಿಪ್ಪೇಸ್ವಾಮಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್, ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರ್‌ವಾಲ್, ಕೇಂದ್ರ ಸಚಿವರಾದ  ಪ್ರಲ್ಹಾದ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ವಿರೋಧಪಕ್ಷದ ನಾಯಕರಾದ ಆರ್‌.ಅಶೋಕ, ಛಲವಾದಿ ನಾರಾಯಣಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಸಿ.ಎನ್‌.ಅಶ್ವತ್ಥನಾರಾಯಣ, ಪ್ರತಾಪಸಿಂಹ, ಸಿ.ಟಿ.ರವಿ, ರಮೇಶ ಜಾರಕಿಹೊಳಿ ಸೇರಿ 40 ನಾಯಕರು ಭಾಗವಹಿಸಿದ್ದರು.

‘ಈಗಿನ ನಾಯಕತ್ವದಲ್ಲಿ ಸಂಘಟನೆ ಕಷ್ಟ’

‘ಪ್ರಬುದ್ಧತೆ ಇರುವವರರಿಗೆ ಪಕ್ಷದ ಹೊಣೆಗಾರಿಕೆ ನೀಡಬೇಕಿತ್ತು. ಈಗಿನ ನಾಯಕತ್ವದಲ್ಲಿ ಸಂಘಟನೆ ಕಷ್ಟ. ಅನುಭವಿಗಳಿಗೆ ಆದ್ಯತೆ ನೀಡಬೇಕು’ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅಸಮಾಧಾನ ಹೊರಹಾಕಿದ್ದಾಗಿ ಮೂಲಗಳು ತಿಳಿಸಿವೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಪಕ್ಷವು ಕುಟುಂಬ ರಾಜಕಾರಣ, ಭ್ರಷ್ಟಾಚಾರ ವಿರೋಧಿಸಿಕೊಂಡು ಬಂದಿದೆ. ಆದರೆ, ಅಂತಹದ್ದೇ ಹಿನ್ನೆಲೆಯವರಿಗೆ ನಾಯಕತ್ವ ನೀಡಲಾಗಿದೆ‘ ಎಂದು ಹೇಳಿದ್ದಾಗಿ ತಿಳಿಸಿವೆ.

‘ನನ್ನ ಮೇಲೂ ಆರೋಪ ಮಾಡುತ್ತಿದ್ದಾರೆ. ಹಾಗೆಂದು ನಾನು ಪಕ್ಷ, ಸಂಘಟನೆ ಕಾರ್ಯದಿಂದ ವಿಮುಖನಾಗಿದ್ದೇನಾ?‘ ಎಂದು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿದರು ಎಂದು ತಿಳಿಸಿವೆ.

ಬಿ.ವೈ.ವಿಜಯೇಂದ್ರ ಅವರು, ‘ನಾನು ಉದ್ದೇಶಪೂರ್ವಕವಾಗಿ ಯಾರನ್ನೂ ನೋಯಿಸುವ ಕೆಲಸ ಮಾಡಿಲ್ಲ. ವರಿಷ್ಠರು ಒಪ್ಪಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಸಮಜಾಯಿಷಿ ನೀಡಿದರು’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT