ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಲ್ಲದ ಬಿಜೆಪಿ ಒಳ ಜಗಳ: ಯತ್ನಾಳ– ವಿಜಯೇಂದ್ರ ಬಣ ಸೆಣಸಾಟ

ಫಲ ನೀಡದ ಆರ್‌ಎಸ್‌ಎಸ್‌ ಸಂಧಾನ
Published : 27 ಸೆಪ್ಟೆಂಬರ್ 2024, 21:00 IST
Last Updated : 27 ಸೆಪ್ಟೆಂಬರ್ 2024, 21:00 IST
ಫಾಲೋ ಮಾಡಿ
Comments

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಸೆಟೆದು ನಿಂತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಭಿನ್ನರ ಬಣದ ಸಂಖ್ಯೆ ಹಿಗ್ಗುತ್ತಿದ್ದು, ವಿಜಯೇಂದ್ರ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸುವುದಾಗಿ ಪಣತೊಟ್ಟಿದೆ.

ಇದನ್ನು ಸವಾಲಾಗಿ ಸ್ವೀಕರಿಸಿರುವ ವಿಜಯೇಂದ್ರ ಬಣ, ‘ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ. ಇಳಿಸಿದರೆ ಪರಿಣಾಮ ನೆಟ್ಟಗಿರದು’ ಎಂದು ಹೇಳಿದೆ.

ಇದೇ ಮೊದಲ ಬಾರಿಗೆ ವಿಜಯೇಂದ್ರ ಬಣದ ಪರವಾಗಿ ಬೆಂಗಳೂರಿನ ಸಭೆಯಲ್ಲಿ ಮಾತನಾಡಿರುವ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಯತ್ನಾಳ ಬಣಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಯತ್ನಾಳ ಅವರ ನೇತೃತ್ವದಲ್ಲಿ ಭಿನ್ನರ ಬಣ ಸಭೆ ಸೇರುವುದು ಮಾತ್ರವಲ್ಲದೇ, ಪಕ್ಷದ ಅಧಿಕೃತ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಮೂಲಕ ಮತ್ತು ವಿಜಯೇಂದ್ರ ಅವರಿಗೆ ಸವಾಲು ಎಸೆಯುತ್ತಿದೆ. ಸರ್ಕಾರದ ವಿರುದ್ಧದ ‘ಮೈಸೂರು ಚಲೋ’ ಪಾದಯಾತ್ರೆಯೂ ಸೇರಿ ಪಕ್ಷ ಹಮ್ಮಿಕೊಳ್ಳುತ್ತಿರುವ ಯಾವುದೇ ಪ್ರತಿಭಟನೆಯಲ್ಲೂ ಭಿನ್ನರ ಬಣ ಭಾಗವಹಿಸಿಲ್ಲ.

ಆರ್‌ಎಸ್‌ಎಸ್‌ ನಾಯಕರು ಇತ್ತೀಚೆಗೆ ಕರೆದಿದ್ದ ಸಭೆಗೆ ಮಾತ್ರ ಹಾಜರಾಗಿದ್ದ ಭಿನ್ನಮತೀಯರು ವಿಜಯೇಂದ್ರ ವಿರುದ್ಧ ತಮ್ಮ ಅಸಮಾಧಾನವನ್ನು ನೇರವಾಗಿ ತೋಡಿಕೊಂಡಿದ್ದರು. ಎಲ್ಲರೂ ಒಗ್ಗಟ್ಟಾಗಿ ನಡೆಯಬೇಕು ಎಂಬ ಆರ್‌ಎಸ್‌ಎಸ್‌ ಸೂಚನೆ ಮಾತ್ರ ಪಾಲನೆ ಆಗುತ್ತಿಲ್ಲ. ಎರಡೂ ಬಣಗಳನ್ನು ಒಗ್ಗೂಡಿಸುವ ಸಂಘದ ಪ್ರಯತ್ನ ಫಲ ನೀಡಿಲ್ಲ.

‘ತಮ್ಮ ತಂದೆಯಂತೆಯೇ ವಿಜಯೇಂದ್ರ ಪಕ್ಷದಲ್ಲಿ ಸರ್ವಾಧಿಕಾರ ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಹಿರಿಯರು ಮತ್ತು ಪಕ್ಷ ಕಟ್ಟಿದವರು ಎಂಬ ಕಾರಣಕ್ಕೆ ಸಹಿಸಿಕೊಂಡಿದ್ದರು. ಆದರೆ, ವಿಜಯೇಂದ್ರ ಅವರಿಗೆ ಅಂತಹ ಯಾವುದೇ ಹಿನ್ನೆಲೆ ಇಲ್ಲ. ಉಳಿದವರ ಮೇಲೆ ಸರ್ವಾಧಿಕಾರ ನಡೆಸಿದರೆ ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಸಭೆಯಲ್ಲಿ ಆರ್‌ಎಸ್‌ಎಸ್‌ ನಾಯಕರಿಗೆ ಪ್ರಶ್ನೆ ಹಾಕಿದ್ದರು’ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು. 

‘ಪಕ್ಷದಿಂದ ಉಚ್ಚಾಟನೆಗೊಂಡಿರುವ ಕೆ.ಎಸ್‌.ಈಶ್ವರಪ್ಪ ಅವರನ್ನು ಮರಳಿ ಪಕ್ಷಕ್ಕೆ ಕರೆದುಕೊಂಡು ಬಂದು,  ಮುಂದಿನ ಮುಖ್ಯಮಂತ್ರಿ ಮಾಡುತ್ತೇವೆ’ ಎಂದು ಬಾಗಲಕೋಟೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರು ನೀಡಿದ ಹೇಳಿಕೆ ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ. ಅಲ್ಲದೇ, ಆ ಸಭೆಯಲ್ಲೇ ‘ರಾಯಣ್ಣ– ಚನ್ನಮ್ಮ ಬ್ರಿಗೇಡ್’ ಸ್ಥಾಪನೆ ವಿಚಾರವೂ ಮುನ್ನೆಲೆಗೆ ಬಂದಿದೆ. ಆ ಬಳಿಕ ಈಶ್ವರಪ್ಪ, ಯತ್ನಾಳ ಮತ್ತು ರಮೇಶ ಜಾರಕಿಹೊಳಿಯವರು ಎರಡು ಬಾರಿ ಸಭೆ ಮಾಡಿದ್ದಾರೆ. 

ಯತ್ನಾಳ ಬಣದಲ್ಲಿ ರಮೇಶ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಪ್ರತಾಪಸಿಂಹ, ಸಿದ್ದೇಶ್ವರ್ ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ. ಈ ಗುಂಪಿಗೆ ಹೊಸದಾಗಿ, ಪಕ್ಷದ ಉಪಾಧ್ಯಕ್ಷ ರಾಜೂಗೌಡ ಸೇರಿಕೊಂಡಿದ್ದಾರೆ.

ವಿಜಯೇಂದ್ರ ನಡೆ ಏನು ?

ತಮಗೆ ಪಕ್ಷದ ವರಿಷ್ಠರ ಆಶೀರ್ವಾದ ಇದೆ ಎಂಬ ಗಟ್ಟಿ ನಂಬಿಕೆ ವಿಜಯೇಂದ್ರ ಅವರದು. ಒಂದು ವೇಳೆ ಬೇರೆಯವರು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಾದರೆ, ತಾವು ಹಿಂದೆ ಸರಿಯುವುದಾಗಿ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಒಂದು ವೇಳೆ ಅಧ್ಯಕ್ಷ ಸ್ಥಾನದಿಂದ ಇಳಿದರೆ, ಸುಮ್ಮನೇ ಕೂರದೇ ಲಿಂಗಾಯತ ಸಮುದಾಯವನ್ನು ಸಂಘಟಿಸುವ ಕುರಿತು ಆಲೋಚನೆ ಹೊಂದಿದ್ದಾರೆ. ಆ ಮೂಲಕ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿ ಹೊರ ಹೊಮ್ಮುವ ಕುರಿತು ಗಮನ ಕೇಂದ್ರೀಕರಿಸುವ ಆಲೋಚನೆ ಹೊಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಅಧ್ಯಕ್ಷ ಸ್ಥಾನದಿಂದ ಇಳಿಸಲು ರೆಡಿಮೇಡ್‌ ಫುಡ್ಡಾ: ರೇಣುಕಾಚಾರ್ಯ

‘ವಿಜಯೇಂದ್ರ ಅವರನ್ನು ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಆ ರೀತಿ ಇಳಿಸಲು ಅವರೇನು ರೆಡಿಮೇಡ್‌ ಫುಡ್ಡಾ’ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಶುಕ್ರವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಇಲ್ಲಿಯ ತನಕ ನಾವು ಮಾತನಾಡಬಾರದು ಎಂದು ಸುಮ್ಮನಿದ್ದೆವು. ಆದರೆ ಕೆಲವರು ಪಕ್ಷದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ವರಿಷ್ಠರು. ಭಿನ್ನಮತೀಯರ ಆಕ್ಷೇಪ ವರಿಷ್ಠರ ವಿರುದ್ಧವೇ’ ಎಂದು ಪ್ರಶ್ನಿಸಿದರು.

‘ಪಕ್ಷದ ಉಳಿವಿಗಾಗಿ ಮುಂದೆ ನಾವು ಸಭೆಗಳನ್ನು ಮಾಡುತ್ತೇವೆ. ಸಂಘಪರಿವಾರ, ಹೈಕಮಾಂಡ್‌ ಒಟ್ಟಾಗಿ ಹೋಗಿ ಎಂದು ಹೇಳಿದ್ದರೂ ಅವರು ಹೀಗೆ ಮಾಡುತ್ತಿದ್ದಾರೆ. ಮುಂದೆ ನಾವು ಹೈಕಮಾಂಡ್‌ ಬಳಿ ಹೋಗಬೇಕಾಗುತ್ತದೆ’ ಎಂದರು.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಉಚ್ಚಾಟನೆ ಮಾಡಬೇಕು. ಬಿಜೆಪಿ ಬಗ್ಗೆ ನಿಯತ್ತು ಇಲ್ಲದೆ ಜೆಡಿಎಸ್‌ಗೆ ಹೋಗಿದ್ದರು ಎಂದು ಯತ್ನಾಳ ವಿರುದ್ಧ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT