ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ: ಬಸವರಾಜ ಬೊಮ್ಮಾಯಿ

Published 25 ಜೂನ್ 2024, 6:18 IST
Last Updated 25 ಜೂನ್ 2024, 6:18 IST
ಅಕ್ಷರ ಗಾತ್ರ

ನವದೆಹಲಿ: ‘ಕಳೆದ ಐವತ್ತು ವರ್ಷದಲ್ಲಿ ಪ್ರಜಾಪ್ರಭುತ್ವ ಬಹಳಷ್ಟು ಗಟ್ಟಿಯಾಗಿದೆ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ತಿರುಚಿ ಪ್ರಜಾಪಭುತ್ವದ ಕಗ್ಗೊಲೆ ಮಾಡಿದ್ದ ಕಾಂಗ್ರೆಸ್ ಸಂಸತ್ತಿನಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ ಮಾಡಿರುವುದು ವಿಪರ್ಯಾಸ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಐವತ್ತು ವರ್ಷದ ಹಿಂದೆ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಇದೊಂದು ಕರಾಳ ದಿನ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಪಧಾನ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಬಹಳ ಘೋರವಾಗಿ ನಡೆದುಕೊಂಡರು. ಆಗ ಸರ್ಕಾರದ ವಿರುದ್ಧ ಯಾರೂ ಮಾತನಾಡದಂತೆ ಮಾಡಿದರು. ಮಾನವ ಹಕ್ಕುಗಳು ಹಾಗೂ ರಾಜಕೀಯ ಸ್ವಾತಂತ್ರ್ಯ ಎರಡನ್ನೂ ಮೊಟಕುಗೊಳಿಸಲಾಗಿತ್ತು. ಪತ್ರಿಕಾ ಸ್ವಾತಂತ್ರ್ಯ ಸಂಪೂರ್ಣ ತೆಗೆದು ಹಾಕಲಾಗಿತ್ತು. ಪತ್ರಿಕೆಗಳ ಮೇಲೆ ಸಂಪೂರ್ಣ ನಿಬಂರ್ಧ ಹೇರಲಾಗಿತ್ತು. ಏನಾದರೂ ಸುದ್ದಿ ಪ್ರಟಿಸಬೇಕೆಂದರೆ ಸರ್ಕಾರದ ಅನುಮತಿ ಪಡೆದು ಪ್ರಕಟಿಸಬೇಕಿತ್ತು’ ಎಂದು ಹೇಳಿದರು.

‘ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಇಡೀ ಸಂವಿಧಾನವನ್ನು ತಿರುಚಿ ಹಕ್ಕುಗಳನ್ನು ಮೊಟಕುಗೊಳಿಸಿದ್ದಂತಹ ಕಾಂಗ್ರೆಸ್ ಲೋಕಸಭೆಯಲ್ಲಿ ಸಂವಿಧಾನದ ಉಳಿವಿನ ಬಗ್ಗೆ ಮಾತನಾಡಿರುವುದು ಹಾಸ್ಯಾಸ್ಪದ. ಅದೂ ಕೂಡ ಮೊಟಕುಗೊಳಿಸಿರುವ ಸಂವಿಧಾನ, ಸಂಪೂರ್ಣವಾದ ಸಂವಿಧಾನವಲ್ಲ. ಐವತ್ತು ವರ್ಷದ ಹಿಂದೆ ಇದೇ ಸಂವಿಧಾನವನ್ನು ನಾವು ತಿರುಚಿದ್ದೇವು. ಪ್ರಜಾಪ್ರಭುತ್ವದ ಕೊಲೆ ಮಾಡಿದ್ದೇವು ಎಂದು ಅವರು ನೆನಪು ಮಾಡಿಕೊಳ್ಳಬೇಕು. ಎಲ್ಲ ಹಕ್ಕುಗಳ ಹರಣ ಮಾಡಿದ್ದೇವೆ ಎಂದು ನೆನಪು ಮಾಡಿಕೊಳ್ಳದಿರುವುದು ಕಾಂಗ್ರೆಸ್ಸಿನ ಭಂಡತನ’ ಎಂದು ಹೇಳಿದರು.

‘ಐವತ್ತು ವರ್ಷದಲ್ಲಿ ಪ್ರಜಾಪಭುತ್ವ ಬಹಳಷ್ಟು ಗಟ್ಟಿಯಾಗಿವೆ. ಅದಕ್ಕೆ ಸುಪ್ರೀಂ ಕೋರ್ಟಿನ ತೀರ್ಪುಗಳು ಹಾಗೂ ಅಂದಿನ ಸಂಸತ್ತಿನಲ್ಲಿ ಇನ್ನು ಮುಂದೆ ಯಾರೂ ತುರ್ತು ಪರಿಸ್ಥಿತಿ ಹೇರಬಾರದು ಎಂದು ತಿದ್ದುಪಡಿ ಮಾಡಿದರು. ಅದರ ಪ್ರಕಾರ ಯಾರೂ ಕೂಡ ಮೂಲ ಸಂವಿಧಾನ ತಿರುಚುವುದು ಹಾಗೂ ಹಕ್ಕುಗಳನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎನ್ನುವುದು ಬಹಳ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷ ಇದನ್ನು ದೊಡ್ಡ ಬಂಡವಾಳ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ನಮ್ಮದು ಅತ್ಯಂತ ಶೇಷ್ಠವಾದ ಸಂವಿಧಾನ. ಹಲವಾರು ದೇಶಗಳಲ್ಲಿ ನೋಡಿದಾಗ ಇದು ಅತ್ಯಂತ ಸಂವೇದನಾಶೀಲ ಇರುವ ಸಂವಿಧಾನ. ಜನರ ಹಕ್ಕುಗಳ ರಕ್ಷಣೆ ಮಾಡುವ ಸಂವಿಧಾನ ಇರುವುದರಿಂದ ಕಾಂಗ್ರೆಸ್‌ನವರು ಭ್ರಮೆಯನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆ ಭ್ರಮೆ ಜನರಲ್ಲಿ ಇಲ್ಲ. ಹೀಗಾಗಿ ಜನರು ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದರು.

‘ಸಂವಿಧಾನ ವಿರೋಧಿಗಳೇ ಸಂಸತ್ತಿನಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ ಮಾಡುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿ’ ಎಂದರು.

ಕಳೆದ ಹತ್ತು ವರ್ಷದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ದೇಶದಲ್ಲಿ ಯಾವ ಹಕ್ಕು ಹರಣವಾಗಿದೆ. ವ್ಯಕ್ತಿ ಸ್ವಾತಂತ್ರ್ಯ ಹರಣವಾಗಿದೆಯಾ? ಪತ್ರಿಕಾ ಸ್ವಾತಂತ್ರ್ಯವಾಗಿದೆಯಾ? ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಪಜಾಪಭುತ್ವ ಇದೆ ಎಂದರ್ಥ. ಇದೊಂದು ನೆಪ ಅವರಿಗೆ ಮತ್ತ ಬ್ಯಾಂಕ್‌ಗಳನ್ನು ಸೃಷ್ಟಿಸಲು ಆಧಾರ ರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT