ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಗರಣದ ಚರ್ಚೆ: ಕಾಂಗ್ರೆಸ್‌ಗೆ ‘ಯತ್ನಾಳ್‌ ಅಸ್ತ್ರ‘

Published 18 ಜುಲೈ 2024, 21:39 IST
Last Updated 18 ಜುಲೈ 2024, 21:39 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಗುರುವಾರವೂ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿತು.

ಬಿಜೆಪಿಯ ಎನ್‌.ರವಿಕುಮಾರ್ ಮಂಡಿಸಿದ ನಿಲುವಳಿ ಸೂಚನೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ಕೆ.ಎಸ್‌. ನವೀನ್, ಡಿ.ಎಸ್‌. ಅರುಣ್‌, ಭಾರತಿಶೆಟ್ಟಿ, ಹೇಮಲತಾ ನಾಯಕ್‌, ಕೆ.ಎ. ತಿಪ್ಪೇಸ್ವಾಮಿ, ಪಿ.ಎಚ್‌. ಪೂಜಾರ್, ಗೋವಿಂದರಾಜು, ಎಸ್‌.ವಿ. ಸಂಕನೂರ, ಪ್ರತಾಪಸಿಂಹ ನಾಯಕ್‌ ಅವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. 

ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತ್ಯುತ್ತರ ನೀಡಿದ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್, ಐವನ್ ಡಿಸೋಜ ಅವರು, ಬಿಜೆಪಿ ಭ್ರಷ್ಟಾಚಾರ ಕುರಿತು ಹಿಂದೆ ಹೇಳಿಕೆ ನೀಡಿದ್ದ ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿಕೆಗಳನ್ನು  ಅಸ್ತ್ರವಾಗಿ ಬಳಸಿಕೊಂಡರು. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ₹ 2,500 ಕೋಟಿ ನೀಡಬೇಕು ಎಂಬ ಯತ್ನಾಳ್‌ ಹೇಳಿಕೆಗಳ ಪತ್ರಿಕಾ ತುಣುಕುಗಳನ್ನು ಪ್ರದರ್ಶಿಸಿದರು.

ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ವಾಗ್ವಾದ ಮುಂದುವರಿದಿತ್ತು. ಸಭಾಪತಿ ಬಸವರಾಜ ಹೊರಟ್ಟಿ ಸದನದ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

ಅಧಿಕಾರಿ ಮೇಲೆ ಕ್ರಮ ಏಕಿಲ್ಲ:

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡುವಾಗ, ‘ಸರ್ಕಾರಕ್ಕೆ ಮುಜುಗರ ಅಗದಂತೆ ಕ್ರಮ ವಹಿಸಿ’ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ಆ ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಜೆಡಿಎಸ್‌ನ ಎಸ್‌.ಎಲ್. ಬೋಜೇಗೌಡ ಆಗ್ರಹಿಸಿದರು.

ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ‘ನಿಗಮದಲ್ಲಿ ಭ್ರಷ್ಟಾಚಾರ ನಡೆದೇ ಇಲ್ಲ ಎಂದು ಸರ್ಕಾರಕ್ಕೆ ತಾಕತ್ತಿದ್ದರೆ ಹೇಳಲಿ. ಸರ್ಕಾರ ಕಲ್ಲಿನಂತೆ ಕೂರಬಾರದು. ತಪ್ಪಾಗಿದ್ದರೆ ತಪ್ಪಾಗಿದೆ ಎಂದು ಹೇಳಲಿ. ಸರ್ಕಾರದ ಪರವಾಗಿ ವರದಿ ಕೊಡುವಂತೆ ಯಾವ ಅಧಿಕಾರಿ ಸೂಚಿಸಿದ್ದರು? ಅವರ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT