ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡಿಗೆ ನೀರು: ಮೇಲ್ಮನವಿಗೆ ರಾಜ್ಯ ಸರ್ಕಾರ ನಿರ್ಧಾರ

Published 14 ಜುಲೈ 2024, 15:41 IST
Last Updated 14 ಜುಲೈ 2024, 15:41 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿಗೆ ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಬಿಡಲು ಮತ್ತು ಜುಲೈ 12ರಿಂದ ಈ ತಿಂಗಳ ಕೊನೆಯವರೆಗೆ ಸುಮಾರು 20 ದಿನ ನಿತ್ಯ ಒಂದು ಟಿಎಂಸಿ ಅಡಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ವಿರೋಧಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕಾವೇರಿ ನೀರು ಹರಿಸುವ ಕುರಿತು ಕಾವೇರಿ ನೀರು ನಿಯಂತ್ರಣ ಸಮಿತಿ ಹೊರಡಿಸಿರುವ ಸೂಚನೆಯ ಕುರಿತು ಚರ್ಚಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದರು. 

‘ಹೆಚ್ಚು ಮಳೆ ಬಿದ್ದರೆ ಮಾತ್ರ, ಮಳೆ ಪ್ರಮಾಣಕ್ಕೆ ತಕ್ಕಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಕ್ಕೆ ಅನುಗುಣವಾಗಿ ತಮಿಳುನಾಡಿಗೆ ನೀರು ಹರಿಸಬಹುದು. ಇಲ್ಲದಿದ್ದರೆ ಕೇವಲ 8 ಸಾವಿರ ಕ್ಯುಸೆಕ್‌ ನೀರು ಹರಿಸಬೇಕಾಗುತ್ತದೆ.‌ ಜೊತೆಗೆ, ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸೋಣ. ನೀರು ಬಿಡದೆ ಮೊಂಡಾಟ ಆಡುತ್ತಿದ್ದೇವೆಂದು ಮೇಲ್ಮನವಿ ವಿಚಾರಣೆಯ ಸಂದರ್ಭದಲ್ಲಿ ಪ್ರಾಧಿಕಾರಕ್ಕೆ ಅನ್ನಿಸಬಾರದು ಎಂದು ಕಾನೂನು ತಂಡ ಸಲಹೆ ನೀಡಿದೆ. ಅದರಂತೆ ಸರ್ವಪಕ್ಷಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ಅವರು ವಿವರಿಸಿದರು. 

‘ಜುಲೈ 11ರಂದು ನಡೆದಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ ಮೂರನೇ ಸಭೆಯಲ್ಲಿ, ಜುಲೈ 12ರಿಂದ ಈ ತಿಂಗಳ ಕೊನೆಯವರೆಗೆ ನಿತ್ಯ ಒಂದು ಟಿಎಂಸಿ ಅಡಿಯಂತೆ ನೀರು ಬಿಡಲು ಆದೇಶಿಸಲಾಗಿದೆ. ಕಾವೇರಿ ತೀರದ ಸಚಿವರು, ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು 12ರಂದು ಸಭೆ ನಡೆಸಿ, ಮಳೆ ಅಭಾವದಿಂದ ಒಳಹರಿವಿನಲ್ಲಿ ಕೊರತೆ ಇದ್ದು, ನೀರು ಬಿಡದಿರಲು ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತು’ ಎಂದರು.

‘ಸರ್ವಪಕ್ಷ ಸಭೆಯಲ್ಲಿ ಬಿಜೆಪಿ, ಜೆಡಿಎಸ್, ರೈತ ಸಂಘದವರು, ಕಾನೂನು ತಂಡದ ಮುಖ್ಯಸ್ಥರಾದ ಮೋಹನ್ ಕಾತರಕಿ ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿತ್ಯ ಒಂದು ಟಿಎಂಸಿ ಅಡಿ ನೀರು ಬಿಡಲು ಸಾಧ್ಯವಿಲ್ಲ. ಮೇಲ್ಮನವಿ ಸಲ್ಲಿಸಬೇಕು’ ಎಂದು ಸರ್ವಪಕ್ಷಗಳ ಸದಸ್ಯರ ಅಭಿಪ್ರಾಯವಾಗಿತ್ತು‌’ ಎಂದರು.

‘ಕಾವೇರಿ ತೀರದಲ್ಲಿರುವ ನಮ್ಮ ನಾಲ್ಕು ಜಲಾಶಯಗಳ ಪೈಕಿ ಕಬಿನಿ ಶೇ 96, ಹಾರಂಗಿ ಶೇ 76, ಹೇಮಾವತಿ ಶೇ 56, ಕೆಆರ್‌ಎಸ್‌ ಶೇ 54ರಷ್ಟು ನೀರು ಭರ್ತಿಯಾಗಿದೆ. ಅಂದರೆ, ಒಟ್ಟು ಶೇ 63ರಷ್ಟು ಮಾತ್ರ ಭರ್ತಿ ಆಗಿದೆ. ಕಬಿನಿ ಜಲಾಶಯ ಭರ್ತಿಯಾಗಿದ್ದು, ಜುಲೈ 12 ರಂದು 20 ಸಾವಿರ, 13ರಂದು 19 ಸಾವಿರ, ಭಾನುವಾರ (ಜುಲೈ14) 13 ಸಾವಿರ ಕ್ಯುಸೆಕ್‌ ನೀರಿನ ಒಳ ಹರಿವು ಇತ್ತು. ಜಲಾಶಯದ ಸುರಕ್ಷತೆಗಾಗಿ ಶೇಖರಿಸಿಡಲು ಸಾಧ್ಯವಾಗದ ನೀರು ಹರಿದುಹೋಗಿದೆ’ ಎಂದೂ ಹೇಳಿದರು.

ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಸಚಿವ ಸಂಪುಟದ ಸದಸ್ಯರು, ಕಾವೇರಿ ಜಲಾನಯನ ಪ್ರದೇಶದ ಸಂಸದರು, ಶಾಸಕರು, ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಜಲ ಸಂಪನ್ಮೂಲ ಇಲಾಖೆ ಹೆಚ್ಖುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಮೋಹನ್‌ ಕಾತರಕಿ, ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ನೀರಾವರಿ ಹಾಗೂ ಕಾನೂನು ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಗೈರು: ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಗೈರಾದರು.

ಸಾಮಾನ್ಯ ಮಳೆ ವರ್ಷದಲ್ಲಿ ಜೂನ್ ತಿಂಗಳಲ್ಲಿ 9.40 ಟಿಎಂಸಿ ಅಡಿ ಜುಲೈನಲ್ಲಿ 31.24 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಾಗಿದೆ. ಆದರೆ ಈ ಎರಡೂ ತಿಂಗಳಲ್ಲಿ ಒಟ್ಟು 5 ಟಿಎಂಸಿ ಅಡಿಗೂ ಹೆಚ್ಚು ನೀರು ಬಿಡಲು ಸಾಧ್ಯವಾಗಿದೆ
ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT