ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಸೋದ್ಯಮ ಇಲಾಖೆ | ಬೇರೆಡೆ ಇಟ್ಟ ಹಣ ವಾಪಸ್‌ಗೆ ಗಡುವು: ಎಚ್‌.ಕೆ.ಪಾಟೀಲ

Published 14 ಜೂನ್ 2024, 19:37 IST
Last Updated 14 ಜೂನ್ 2024, 19:37 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿರುವ ನಿಗಮ ಮತ್ತು ಮಂಡಳಿಗಳು ಹಣಕಾಸು ಇಲಾಖೆ ಮಾರ್ಗಸೂಚಿ ಉಲ್ಲಂಘಿಸಿ ಮಾರ್ಗಪಲ್ಲಟ ಮಾಡಿರಬಹುದಾದ ಸರ್ಕಾರದ ಹಣವನ್ನು ಮುಖ್ಯವಾಹಿನಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಸೂಚನೆ ನೀಡಿದ್ದಾರೆ.

ಬೇರೆ ಬೇರೆ ಖಾತೆಗಳಲ್ಲಿ ಹಣವನ್ನು ಮುಖ್ಯವಾಹಿನಿಗೆ 48 ಗಂಟೆಗಳಲ್ಲಿ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಬೇಕು ಮತ್ತು ಈ ಕುರಿತು ವಿವರವಾದ ವರದಿಯನ್ನು 72  ಗಂಟೆಗಳಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ಒದಗಿಸಬೇಕು ಎಂದು ಅವರು ಪ್ರವಾಸೋದ್ಯಮ ಇಲಾಖೆ ಪ್ರಧಾನಕಾರ್ಯದರ್ಶಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮ ಮತ್ತು ಮಂಡಳಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಣಕಾಸು ಅಶಿಸ್ತಿನ ವರದಿಗಳ ಹಿನ್ನೆಲೆಯಲ್ಲಿ ನಮ್ಮ ಇಲಾಖೆ ವ್ಯಾಪ್ತಿಯಲ್ಲಿ ಬರುವ ನಿಗಮ–ಮಂಡಳಿಗಳು, ಅಂಗ–ಸಂಸ್ಥೆಗಳಲ್ಲಿ ಹಣಕಾಸು ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸಲು ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದಿದ್ದಾರೆ.

ಪತ್ರದ ಮುಖ್ಯಾಂಶಗಳು:

  • ಇಲಾಖೆಯ ಹಣವನ್ನು ಬ್ಯಾಂಕಿನಲ್ಲಿ ಠೇವಣಿ  ಇರಿಸುವ ಸಂದರ್ಭದಲ್ಲಿ ಸರ್ಕಾರದ ಮಾನದಂಡಗಳನ್ನು (ಆರ್ಥಿಕ ಇಲಾಖೆ ಮಾನದಂಡಗಳು) ಮಾತ್ರ ಪಾಲಿಸುವುದು. ಠೇವಣಿ ಇರಿಸುವ ಸಂದರ್ಭದಲ್ಲಿ ಅಂತಹ ಉದ್ದೇಶಕ್ಕೆ ಲಭ್ಯವಿರುವ ಹಣಕಾಸಿನ ಪೂರ್ಣ ಮಾಹಿತಿಯನ್ನು ಮತ್ತು ಅದಕ್ಕೆ ಬೇಕಾದ ಅವಶ್ಯಕತೆಗಳನ್ನು ಕಡತದಲ್ಲಿ ದಾಖಲಿಸಬೇಕು.

  • ಅಗತ್ಯವಿಲ್ಲದ ಮತ್ತು ನಿಯಮಬಾಹಿರವಾದ ಯಾವುದೇ ಠೇವಣಿಯ ಮೇಲೆ ಓವರ್‌ ಡ್ರಾಫ್ಟ್‌ ಸೌಲಭ್ಯ ಪಡೆಯುವಂತಿಲ್ಲ. 

  • ಹಣಕಾಸಿನ ವರ್ಗಾವಣೆ ಮತ್ತು ವ್ಯವಹಾರಗಳನ್ನು ಕಾಯಂ ಸಿಬ್ಬಂದಿ ಮಾತ್ರ ನಿರ್ವಹಿಸಬೇಕು.

  • ಎಲ್ಲ ಹಣಕಾಸಿನ ಸ್ವೀಕೃತಿಗಳನ್ನು ಕೇವಲ ಡಿಜಿಟಲ್‌ ಅಥವಾ ಆನ್‌ಲೈನ್‌ ಪಾವತಿ ಆಧಾರದ ತಂತ್ರಜ್ಞಾನ ಬಳಕೆ ಮಾಡುವುದು.

  • ಪ್ರತಿಯೊಂದು ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ಒಂದೇ ಖಾತೆಗೆ ವರ್ಗಾಯಿಸಿ ಕಾಯಂ ಸಿಬ್ಬಂದಿ ಮೂಲಕ ನಿರ್ವಹಣೆ ಮಾಡಿ ಸೂಕ್ತವಾದ ಹಣಕಾಸು ವರ್ಗಾವಣೆ ದಾಖಲೆಗಳಲ್ಲಿ ಕಾಯ್ದಿರಿಸಬೇಕು.

  • ಕಾಲ– ಕಾಲಕ್ಕೆ ನಿಯಮಾನುಸಾರ ಆಂತರಿಕ ಲೆಕ್ಕಪರಿಶೋಧನೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಮಾಡಲಾಗುವ ಟಿಪ್ಪಣಿಗಳ ಕುರಿತು ಕೈಗೊಂಡ ಕ್ರಮಗಳನ್ನು ಕಾಲ ಕಾಲಕ್ಕೆ ಇಲಾಖೆ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT