ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತ್ತೆ ಸ್ಪರ್ಧಿಸಿದರೆ ಜನ ನಗುತ್ತಾರೆ: ಮಾಜಿ ಸಂಸದ ಡಿ.ಕೆ. ಸುರೇಶ್

Published 24 ಜೂನ್ 2024, 16:29 IST
Last Updated 24 ಜೂನ್ 2024, 16:29 IST
ಅಕ್ಷರ ಗಾತ್ರ

ಬೆಂಗಳೂರು: ‘ಜನ ನನ್ನನ್ನು ತಿರಸ್ಕರಿಸಿದ್ದಾರೆ. ಮತ್ತೆ ಚುನಾವಣೆಗೆ ಸ್ಪರ್ಧಿಸಿದರೆ ಜನ ನಗುತ್ತಾರೆ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.

‘ಚನ್ನಪಟ್ಟಣದಲ್ಲಿ ನೀವು ಸ್ಪರ್ಧೆ ಮಾಡುವುದಿಲ್ಲವೇ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ಜನ ಹೇಳಿದರೂ, ಸ್ಪರ್ಧಿಸುವ ಮನಸ್ಥಿತಿ ನಮಗೂ ಇರಬೇಕು. ಜನ ನನಗೆ ವಿಶ್ರಾಂತಿ ಪಡೆಯಲು ಹೇಳಿದ್ದು, ಬೇರೆಯವರಿಗೆ ಕೆಲಸ ಮಾಡಲು ಹೇಳಿದ್ದಾರೆ. ಬೇರೆಯವರು ಕೆಲಸ ಮಾಡಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ’ ಎಂದರು.

‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಯಾರು ಅಭ್ಯರ್ಥಿ’ ಎಂದು ಕೇಳಿದಾಗ, ‘ಜನ ಯಾರನ್ನು ಬಯಸುತ್ತಾರೋ ಅವರು ಸ್ಪರ್ಧಿಸಬೇಕು. ರಾಮನಗರ ಜಿಲ್ಲೆ ನಮ್ಮ ಸ್ವಂತ ಜಿಲ್ಲೆ. ಪಕ್ಷದ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಶಿವಕುಮಾರ್ ಅವರ ಮೇಲೆ ಜವಾಬ್ದಾರಿ ಇದೆ. ಕ್ಷೇತ್ರದಲ್ಲಿ ಶಾಸಕರು ಇಲ್ಲದ ಕಾರಣ ಶಿವಕುಮಾರ್ ಅವರು ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಜನ ಕೂಡ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ’ ಎಂದರು.

‘ಡಿ.ಕೆ. ಶಿವಕುಮಾರ್ ಮತ್ತು ನನ್ನನ್ನು ಸ್ಮರಿಸದಿದ್ದರೆ ಕುಮಾರಸ್ವಾಮಿ ಅವರ ರಾಜಕಾರಣ ಹಾಗೂ ದಿನಚರಿ ನಡೆಯುವುದಿಲ್ಲ. ಪ್ರತಿ ವಿಚಾರದಲ್ಲೂ ನಮ್ಮ ಹೆಸರು ಎಳೆದು ತರುತ್ತಾರೆ’ ಎಂದು ಟೀಕಿಸಿದರು.

‘ಮುಂದೆ ನಮ್ಮ ಸರ್ಕಾರ ಬರುತ್ತದೆ’ ಎಂದು ಅಧಿಕಾರಿಗಳಿಗೆ ಕುಮಾರಸ್ವಾಮಿ ಎಚ್ಚರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಜನ ಆಶೀರ್ವಾದ ಮಾಡಿದ್ದು, ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾಗಿದ್ದಾರೆ. ಅವರು ಜನರನ್ನು ಹಾಗೂ ಅಧಿಕಾರಿಗಳನ್ನು ಮೊದಲಿನಿಂದಲೂ ಬೆದರಿಸಿಕೊಂಡು ಬಂದಿದ್ದು, ಈಗಲೂ ಅದನ್ನೇ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT