ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ: ಮತ್ತೆ ಐದು ವರ್ಷ ವಿಸ್ತರಣೆ

Published 29 ನವೆಂಬರ್ 2023, 15:55 IST
Last Updated 29 ನವೆಂಬರ್ 2023, 15:55 IST
ಅಕ್ಷರ ಗಾತ್ರ

ನವದೆಹಲಿ: ದೇಶದ 81.35 ಕೋಟಿ ಫಲಾನುಭವಿಗಳಿಗೆ ಉಚಿತವಾಗಿ ಆಹಾರಧಾನ್ಯ ಒದಗಿಸುವ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ಮತ್ತೆ ಐದು ವರ್ಷ ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಈ ಯೋಜನೆ ಅಡಿ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯ ವಿತರಿಸಲಾಗುತ್ತದೆ. ದೇಶದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 2020ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ‘ಯೋಜನೆಯನ್ನು 2024ರ ಜನವರಿ 1ರಿಂದ ಅನ್ವಯವಾಗುವಂತೆ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ. ಐದು ವರ್ಷಗಳ ಅವಧಿಗೆ ಸುಮಾರು ₹11.80 ಲಕ್ಷ ಕೋಟಿಗಳಷ್ಟು ವೆಚ್ಚವಾಗಲಿದೆ’ ಎಂದರು.

ಆಹಾರ ಧಾನ್ಯಗಳ ವಿತರಣೆಯು (ಅಕ್ಕಿ, ಗೋಧಿ ಮತ್ತು ಧಾನ್ಯಗಳು / ಸಿರಿಧಾನ್ಯಗಳು) ಆಹಾರ ಭದ್ರತೆಯನ್ನು ಬಲಪಡಿಸುತ್ತದೆ. ದೇಶದ ಬಡ ಮತ್ತು ದುರ್ಬಲ ವರ್ಗಗಳ ಆರ್ಥಿಕ ಸಂಕಷ್ಟ ತಗ್ಗಿಸುತ್ತದೆ. 5 ಲಕ್ಷಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳ ಜಾಲದ ಮೂಲಕ ಎಲ್ಲ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಧಾನ್ಯಗಳನ್ನು ಉಚಿತವಾಗಿ ತಲುಪಿಸಲಾಗುವುದು ಎಂದರು.

15 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌

15,000 ಮಹಿಳಾ ಸ್ವ ಸಹಾಯ ಗುಂಪುಗಳಿಗೆ(ಎಸ್‌ಎಚ್‌ಜಿ) 2024–25ರ ಹಣಕಾಸು ವರ್ಷದಿಂದ ಎರಡು ವರ್ಷಗಳಲ್ಲಿ ಡ್ರೋನ್‌ಗಳನ್ನು ಒದಗಿಸಲು ₹1,261 ಕೋಟಿ ವಿನಿಯೋಗಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ.

'2024–25 ಹಾಗೂ 2025–26ರ ಹಣಕಾಸು ವರ್ಷದಲ್ಲಿ ಆಯ್ದ 15,000 ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ವಿತರಿಸುವ ಯೋಜನೆ ಇದಾಗಿದೆ. ಸ್ವಸಹಾಯ ಗುಂಪುಗಳು ಈ ಡ್ರೋನ್‌ಗಳನ್ನು ರೈತರಿಗೆ ಕೃಷಿ ಕೆಲಸಕ್ಕೆ ಬಾಡಿಗೆ ನೀಡಿ ಆದಾಯ ಗಳಿಸಬಹುದಾಗಿದೆ’ ಎಂದು ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದರು. 

ಈ ಯೋಜನೆಯು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಸುಸ್ಥಿರ ಉದ್ಯಮಕ್ಕೆ ನೆರವಾಗಲಿದ್ದು, ಜೀವನೋಪಾಯಕ್ಕೆ ಅನುಕೂಲವಾಗಲಿದೆ. ಈ ಮೂಲಕ ವರ್ಷಕ್ಕೆ ಕನಿಷ್ಠ ಪಕ್ಷ ₹1 ಲಕ್ಷ ಆದಾಯ ಗಳಿಸಬಹುದಾಗಿದೆ ಎಂದು ಹೇಳಿದರು.

ಆಗಸ್ಟ್ 15ರ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಡ್ರೋನ್ ತಂತ್ರಜ್ಞಾನದೊಂದಿಗೆ ಸ್ವಸಹಾಯ ಗುಂಪುಗಳಿಗೆ ಶಕ್ತಿ ನೀಡುವುದಾಗಿ ಮೋದಿ ಘೋಷಿಸಿದ್ದರು. ಗ್ರಾಮೀಣ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಮರ್ಥ್ಯವನ್ನು ಹೆಚ್ಚಿಸುವ ವಿಷಯದ ಪ್ರಸ್ತಾಪದ ಸಂದರ್ಭ ಹೇಳಿದ್ದರು.

ಪಿಎಂ ಜನ್‌ ಮನ್‌ಗೆ ₹24,104 ಕೋಟಿ: ಇದಲ್ಲದೆ, ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನಕ್ಕೆ (ಪಿಎಂ ಜನ್‌ ಮನ್)‌  ಒಟ್ಟು ₹24,104 ಕೋಟಿಯ (ಕೇಂದ್ರ ಪಾಲು ₹15,336 ಕೋಟಿ ಮತ್ತು ರಾಜ್ಯದ ಪಾಲು ₹8,768 ಕೋಟಿ) ಅನುಮೋದನೆ ನೀಡಿದೆ.

ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಈ ಮೊತ್ತ ವಿನಿಯೋಗಿಸಲಾಗುವುದು. ಇದು ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಗೆ ಸುಧಾರಿತ ಲಭ್ಯತೆ, ರಸ್ತೆ ಮತ್ತು ದೂರಸಂಪರ್ಕ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳಂತಹ ಮೂಲಸೌಲಭ್ಯಗಳನ್ನು ಒದಗಿಸುತ್ತದೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ಮಿಷನ್ ಅನ್ನು ಕಾರ್ಯಗತಗೊಳಿಸಲು ₹15,000 ಕೋಟಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಕಾರ್ಯ ಉದ್ದೇಶದ ನಿಯಮಕ್ಕೆ ಅಸ್ತು

ಕೇಂದ್ರ ಸಚಿವ ಸಂಪುಟವು 16 ನೇ ಹಣಕಾಸು ಆಯೋಗದ ಕಾರ್ಯ ಉದ್ದೇಶದ ನಿಯಮಕ್ಕೆ ಅನುಮೋದನೆ ನೀಡಿದೆ. 

ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಆದಾಯ ಹಂಚಿಕೆ, ರಾಜ್ಯಗಳಿಗೆ ಅನುದಾನ ಹಂಚಿಕೆಗೆ ಶಿಫಾರಸು ಮಾಡುವುದರ ಜೊತೆಗೆ, ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಕಷ್ಟು ಸಂಪನ್ಮೂಲಗಳನ್ನು ಖಚಿತಪಡಿಸಿಕೊಳ್ಳಲು, ವಿಪತ್ತು ನಿರ್ವಹಣೆಗೆ ಕ್ರಮಗಳನ್ನು ಸೂಚಿಸಲು ಆಯೋಗವನ್ನು ಕೇಳಲಾಗಿದೆ ಎಂದು ಸಚಿವ ಅನುರಾಗ್ ಠಾಕೂರ್ ಅವರು ಹೇಳಿದರು.

16ನೇ ಹಣಕಾಸು ಆಯೋಗವು ತನ್ನ ವರದಿಯನ್ನು ಅಕ್ಟೋಬರ್ 2025 ರೊಳಗೆ ಸಲ್ಲಿಸಲಿದೆ. 2026ರ ಏಪ್ರಿಲ್‌ನಿಂದ ಐದು ವರ್ಷಗಳ ಅವಧಿಗೆ ಶಿಫಾರಸುಗಳು ಅನ್ವಯವಾಗಲಿವೆ.

‘ರಾಜ್ಯಗಳು, ಕೇಂದ್ರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಪಡೆದ ನಂತರ ಆಯೋಗವು ಶಿಫಾರಸುಗಳನ್ನು ನೀಡಲಿದೆ’ ಎಂದು ಅವರು ಹೇಳಿದರು. 

16ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಸರ್ಕಾರ ಶೀಘ್ರವೇ ನೇಮಕ ಮಾಡಲಿದೆ ಎಂದರು.

15ನೇ ಹಣಕಾಸು ಆಯೋಗವನ್ನು 2017ರ ನವೆಂಬರ್‌ 27ರಂದು ರಚಿಸಲಾಗಿತ್ತು. 2020ರಲ್ಲಿ ಆಯೋಗ ವರದಿ ನೀಡಿತ್ತು. ಆಯೋಗದ ಶಿಫಾರಸುಗಳು 2025-26ರ ಹಣಕಾಸು ವರ್ಷದವರೆಗೆ ಜಾರಿಯಲ್ಲಿರಲಿವೆ.

‘ಆಯೋಗವು ವಿಪತ್ತು ನಿರ್ವಹಣಾ ಉಪಕ್ರಮಗಳಿಗೆ ಹಣಕಾಸು ಒದಗಿಸುವ ಪ್ರಸ್ತುತ ವ್ಯವಸ್ಥೆಗಳನ್ನು ಪರಿಶೀಲಿಸಬಹುದು. ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ರಚಿಸಲಾದ ನಿಧಿಗಳನ್ನು ಉಲ್ಲೇಖಿಸಿ ಮತ್ತು ಅದರ ಬಗ್ಗೆ ಸೂಕ್ತ ಶಿಫಾರಸುಗಳನ್ನು ಮಾಡಬಹುದು’ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. 

ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಮುಂದುವರಿಕೆ:  ತ್ವರಿತ ವಿಶೇಷ ನ್ಯಾಯಾಲಯಗಳನ್ನು 2026ರ ಮಾರ್ಚ್‌ 31ರ ವರೆಗೆ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಮುಂದುವರಿಸಲು ಸಂಪುಟ ಅನುಮೋದಿಸಿದೆ. ಇದರೊಂದಿಗೆ ₹1,952 ಕೋಟಿಯನ್ನು ಕೇಂದ್ರ ಸರ್ಕಾರದ ಪಾಲಿನ ಹಣದ ಜೊತೆಗೆ ನಿರ್ಭಯಾ ನಿಧಿಯನ್ನು ಒದಗಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT