ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ತೊರೆದು ಮತ್ತೆ ಬಿಜೆಪಿಗೆ ಮರಳಿದ ಜಗದೀಶ ಶೆಟ್ಟರ್

Published 25 ಜನವರಿ 2024, 7:52 IST
Last Updated 25 ಜನವರಿ 2024, 7:52 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿದ ಕಾರಣಕ್ಕೆ ಮುನಿಸಿಕೊಂಡು ಬಿಜೆಪಿ ತೊರೆದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಒಂಬತ್ತು ತಿಂಗಳಲ್ಲೇ ಬಿಜೆಪಿಗೆ ಮರಳಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್‌ ಸಮ್ಮುಖದಲ್ಲಿ ಶೆಟ್ಟರ್ ಅವರು ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಜರಿದ್ದರು. 

ಶೆಟ್ಟರ್ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ವಯಸ್ಸಿನ ಕಾರಣಕ್ಕೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಟಿಕೆಟ್‌ ನೀಡಲೇಬೇಕು ಎಂದು ಶೆಟ್ಟರ್ ಪಟ್ಟು ಹಿಡಿದಿದ್ದರು.

ಪಕ್ಷದ ರಾಷ್ಟ್ರೀಯ ನಾಯಕರು ಮನವೊಲಿಸಲು ಪ್ರಯತ್ನಿಸಿದ್ದರು. ಟಿಕೆಟ್‌ ಸಿಗದಿದ್ದಾಗ ಅವರು 2023ರ ಏಪ್ರಿಲ್‌ 17ರಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದಿಂದ ಅವರನ್ನು ಪಕ್ಷ ಕಣಕ್ಕೆ ಇಳಿಸಿತ್ತು. ಅವರು 35 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಬಳಿಕ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲಾಗಿತ್ತು.  

ವಿಧಾನ ‍ಪರಿಷತ್‌ ಸದಸ್ಯ ಸ್ಥಾನಕ್ಕೆ ಹಾಗೂ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಶೆಟ್ಟರ್‌ ಗುರುವಾರ ತಿಳಿಸಿದರು.

ಕಾಂಗ್ರೆಸ್‌ನವರು ನನಗೆ ಒಳ್ಳೆಯ ರೀತಿಯಲ್ಲಿ ಗೌರವ ನೀಡಿ ಸ್ಥಾನಮಾನ ನೀಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಿಂದ ದೇಶದ ಪ್ರಗತಿಗೆ ಹೆಚ್ಚಿನ ಕೆಲಸ ಮಾಡಿದ್ದಾರೆ. ಅವರು ಮತ್ತೆ ಪ್ರಧಾನಿ ಆಗಬೇಕು. ಅವರ ನಾಯಕತ್ವದಲ್ಲಿ ದೇಶಕ್ಕೆ ಹಾಗೂ ಪಕ್ಷಕ್ಕೆ ಹೆಚ್ಚು ಶಕ್ತಿ ಬರಬೇಕು ಎಂಬ ಉದ್ದೇಶದಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. 
–ಜಗದೀಶ ಶೆಟ್ಟರ್‌ 

ಶೆಟ್ಟರ್ ಕ್ಷಿಪ್ರ ಆಪರೇಷನ್‌

  • ಶೆಟ್ಟರ್ ಅವರನ್ನು ಬಿಜೆಪಿ ಶಾಸಕ ರಮೇಶ ಜಾರಕಿಹೋಳಿ ಭೇಟಿ ಮಾಡಿ ಚರ್ಚಿಸುವ ಮೂಲಕ ಪಕ್ಷಕ್ಕೆ ಸೆಳೆಯುವ ಪ್ರಯತ್ನಕ್ಕೆ ಚಾಲನೆ

  • ಶೆಟ್ಟರ್ ಅವರೊಂದಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಪಡಣವೀಸ್‌ ಚರ್ಚೆ. ಎರಡು ದಿನಗಳ ಹಿಂದೆ ಶೆಟ್ಟರ್‌ ಜತೆಗೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತುಕತೆ

  • ಆಪ್ತ ಶಂಕರ ಪಾಟೀಲ ಮುನೇನಕೊಪ್ಪ ಅವರೊಂದಿಗೆ ಮಂಗಳವಾರ ರಾತ್ರಿ ನವದೆಹಲಿಗೆ ಬಂದ ಶೆಟ್ಟರ್‌ 

  • ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಗುರುವಾರ ಬೆಳಿಗ್ಗೆ ಚರ್ಚಿಸಿದ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ

  • ಅಮಿತ್‌ ಶಾ ಅವರನ್ನು ಶೆಟ್ಟರ್‌ ಗುರುವಾರ ಮಧ್ಯಾಹ್ನ ಭೇಟಿ ಮಾಡಿ ಸಮಾಲೋಚನೆ

  • ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ

  • ಬಳಿಕ ಪಕ್ಷದ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆ

ಹಿರಿಯರ ಆಸೆ ಮೇರೆಗೆ ಯಾವುದೇ ಅಪೇಕ್ಷೆ ಇಲ್ಲದೆ ಅವರು ಮನೆಗೆ ಮರಳಿದ್ದಾರೆ. ಇದರಿಂದ ಪಕ್ಷಕ್ಕೆ ದೊಡ್ಡ ಬಲ ಬಂದಂತಾಗಿದೆ.
–ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ದೆಹಲಿಯಲ್ಲಿದ್ದರೂ ಜೋಶಿ ದೂರ

ಹುಬ್ಬಳ್ಳಿ–ಧಾರವಾಡ ಲೋಕಸಭಾ ಕ್ಷೇತ್ರದ ಸದಸ್ಯರೂ ಆಗಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಶೆಟ್ಟರ್ ಅವರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ. 

ಜೋಶಿ ಅವರು ಗುರುವಾರ ಬೆಳಿಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಹೆದ್ದಾರಿ ಯೋಜನೆಗಳ ಕುರಿತು ಮನವಿ ಸಲ್ಲಿಸಿದರು. ಬಳಿಕ ಕಲ್ಲಿದ್ದಲು ಇಲಾಖೆಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದರು. ಆದರೆ, ಶೆಟ್ಟರ್ ಅವರು ಪಕ್ಷದ ಕೇಂದ್ರದ ನಾಯಕರನ್ನು ಭೇಟಿಯಾಗುವ ಸಂದರ್ಭದಲ್ಲಿ ಜೋಶಿ ಇರಲಿಲ್ಲ. 

ತಾನು ಬಿಜೆಪಿ ಬಿಡಲು ಪ್ರಲ್ಹಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರೋಕ್ಷ ಕಾರಣ ಎಂದು ಶೆಟ್ಟರ್ ಅವರು ಅಮಿತ್‌ ಶಾ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ವರಿಷ್ಠರು ಜೋಶಿ ಅವರೊಂದಿಗೆ ಸಮಾಲೋಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕಾರ್ಯಕರ್ತರ ಅಪೇಕ್ಷೆಯಂತೆ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆ ಆಗಿದ್ದು, ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ 25 ಸ್ಥಾನಗಳನ್ನು ಗೆಲ್ಲಲಿದೆ.
–ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ

ಲೋಕಸಭಾ ಚುನಾವಣೆಗೆ ಸ್ಪರ್ಧೆ? 

ಶೆಟ್ಟರ್ ಅವರನ್ನು ಹಾವೇರಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಬಗ್ಗೆ ಬಿಜೆಪಿ ವರಿಷ್ಠರು ಉತ್ಸುಕರಾಗಿದ್ದಾರೆ. 

ಟಿಕೆಟ್‌ ಭರವಸೆ ನೀಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. 

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಮಾತಿಗೆ ಬಿಜೆಪಿ ವರಿಷ್ಠರು ಹೆಚ್ಚಿನ ಮನ್ನಣೆ ನೀಡಿರಲಿಲ್ಲ. ಶೆಟ್ಟರ್ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಪಕ್ಷದಲ್ಲಿ ಲಿಂಗಾಯತ ನಾಯಕರನ್ನು ತುಳಿಯಲಾಗುತ್ತಿದೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತು.

ಲಿಂಗಾಯತರು ಮುನಿಸಿಕೊಂಡಿದ್ದು ಬಿಜೆಪಿ ಸೋಲಿಗೆ ಕಾರಣ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿದ್ದವು. ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಮತಗಳನ್ನು ಸೆಳೆಯುವ ಉದ್ದೇಶದಿಂದ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

‘ಕಾಂಗ್ರೆಸ್‌ ಇಬ್ಭಾಗವಾಗುವ ಸಾಧ್ಯತೆ’

ಕಾಂಗ್ರೆಸ್‌ನ ಪ್ರಮುಖ ನಾಯಕರು ಬಿಜೆಪಿಗೆ ಬರಲಿದ್ದು, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಇಬ್ಭಾಗವಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಅವರ ಘರ್ ವಾಪಸಿ ಆರಂಭವಷ್ಟೇ. ಬಿಜೆಪಿ ಬಿಟ್ಟು ಹೋದವರು ಘರ್‌ ವಾಪಸಿ ಆಗುವುದರ ಜತೆಗೆ ಕಾಂಗ್ರೆಸ್‌ನ ಪ್ರಮುಖ ನಾಯಕರೂ ಬರುತ್ತಾರೆ. ಲೋಕಸಭಾ ಚುನಾವಣೆಗೂ ಮೊದಲೇ ಭಾರಿ ಪ್ರಮಾಣದ ಬದಲಾವಣೆ ಆಗಲಿದೆ ಎಂದರು.

'ಶೆಟ್ಟರ್ ಮರಳಿಗೂಡಿಗೆ'

‘ಕಾಂಗ್ರೆಸ್‌ ಪಕ್ಷದೊಳಗಿನ ಉಸಿರುಗಟ್ಟುವ ವಾತಾವರಣವನ್ನು ತಡೆದುಕೊಳ್ಳಲಾಗದೇ ಜಗದೀಶ ಶೆಟ್ಟರ್‌ ಮರಳಿ ತಮ್ಮ ಗೂಡು ಸೇರಿದ್ದಾರೆ. ಆಪರೇಷನ್‌ ಕಮಲದಿಂದ ಬಂದಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಶೆಟ್ಟರ್ ಅವರು ಸಂಘಪರಿವಾರದ ಹಿನ್ನೆಲೆಯವರು. ಅವರು ಮುಸ್ಲಿಮರನ್ನು ಓಲೈಸುವ ಪಕ್ಷಕ್ಕೆ ಏಕಾಏಕಿ ಸೇರಿ ಬಿಟ್ಟಿದ್ದರು. ಅವರ ಸ್ಥಿತಿ ರಾಮನವಮಿಗೂ ಇಮಾಮ್‌ ಸಾಬಿಗೂ ಏನು ಸಂಬಂಧ ಎನ್ನುವಂತೆ ಆಗಿತ್ತು ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

ಮುಸ್ಲಿಮರ ಓಲೈಕೆ ಮತ್ತು ಹಿಂದುಗಳ ಕಡೆಗಣನೆ ನೋಡಿ ಅವರಿಗೆ ಉಸಿರುಗಟ್ಟುವ ವಾತಾವರಣ ಉಂಟಾಗಿತ್ತು. ಇದೀಗ ಮರಳಿಗೂಡಿಗೆ ಬಂದಿರುವುದು ನಮಗೆಲ್ಲ ಸಂತಸವಾಗಿದೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಮೂರು ರಾಜ್ಯಗಳಲ್ಲಿ ಬಿಜೆಪಿಯ ಗೆಲುವು ಇನ್ನೂ ಮೊದಲಾದ ಕಾರಣಗಳಿಂದ ಕಾಂಗ್ರೆಸ್‌ನಿಂದ ಇನ್ನಷ್ಟು ನಾಯಕರು ಬಿಜೆಪಿಗೆ ಬರಲಿದ್ದಾರೆ. ಇನ್ನೇನಿದ್ದರೂ ‘ಕಾಂಗ್ರೆಸ್ ಚೋಡೊ’ ಎಂಬ ಘೋಷಣೆ ಕೇಳಿಬರಲಿದೆ.

ಕಾಂಗ್ರೆಸ್‌ನಲ್ಲಿದ್ದಾಗ ಶೆಟ್ಟರ್‌ ಉವಾಚ

  • ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಬೇಕು ಎಂಬುದು ನನ್ನನ್ನು ಸೇರಿಸಿ ಕೋಟ್ಯಂತರ ಜನರ ಅಭಿಲಾಷೆ. ಆದರೆ, ಬಿಜೆಪಿ ಧರ್ಮದಲ್ಲಿ ರಾಜಕೀಯ ಬೆರೆಸಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದೆ

  • ರಾಮಮಂದಿರ ಉದ್ಘಾಟನೆ ಮುಖ್ಯವೋ, ಕಾಂಗ್ರೆಸ್‌ ಪಕ್ಷ ಟೀಕಿಸುವುದು ಮುಖ್ಯವೋ? ಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ ಹೋಗದಿದ್ದರೆ ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟಿ, ಲೋಕಸಭಾ ಚುನಾವಣೆಗೆ ಉಪಯೋಗಿಸಿಕೊಳ್ಳುವುದು ಬಿಜೆಪಿಯ ಷಡ್ಯಂತ್ರ

  • ಕಾಂಗ್ರೆಸ್‌ ಹಿಂದೂ ವಿರೋಧಿಯಾಗಿದ್ದರೆ, ಹಿಂದೂಗಳು ಮತ ಹಾಕದಿದ್ದರೆ ರಾಜ್ಯದಲ್ಲಿ 136 ಸ್ಥಾನ ಬರಲು ಸಾಧ್ಯವಿತ್ತೇ? ಧಾರ್ಮಿಕ ವಿಷಯಗಳು ಭಾವನಾತ್ಮಕ ಹಾಗೂ ತಾತ್ಕಾಲಿಕವಾಗಿದ್ದು, ಬಿಜೆಪಿ ಇದನ್ನೇ ಮುಂದಿಟ್ಟುಕೊಂಡು ಮಾತನಾಡುತ್ತಿದ್ದರೆ ಜಾಸ್ತಿ ದಿನ ಇರುವುದಿಲ್ಲ

  • ಶ್ರೀಕಾಂತ ಪೂಜಾರಿಗೆ ಸಂಬಂಧಿಸಿದ ಬೆಳವಣಿಗೆಗಳು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದಿವೆ. ಇದರ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕೈವಾಡವಿದೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಅವರು ಹಿಂದೂ–ಮುಸ್ಲಿಮರ ನಡುವೆ ವೈಮನಸ್ಸು ಮೂಡಿಸುತ್ತಿದ್ದಾರೆ

  • ನಾನು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಆ ಪಕ್ಷದಿಂದ ಹೊರ ಹೋಗುವವರನ್ನು ತಡೆಯುವ ಕೆಲಸವಾಗುತ್ತಿದೆ. ನಾನು ಮತ್ತೆ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಈವರೆಗೂ ನನ್ನನ್ನು ಯಾರೂ ಭೇಟಿಯಾಗಿಲ್ಲ. ಭೇಟಿಯಾಗುವ ಅಗತ್ಯವೂ ಇಲ್ಲ.

  • ಯಾರದ್ದೋ ವೈಯಕ್ತಿಕ ಹಿತಾಸಕ್ತಿಗಾಗಿ ನನಗೆ ಟಿಕೆಟ್ ತಪ್ಪಿಸಿ ಅಪಮಾನ ಮಾಡಲಾಯಿತು. ಅದನ್ನು ಸಹಿಸಲು ಸಾಧ್ಯವಾಗದೆ ಅಲ್ಲಿಂದ ಹೊರಬಂದಿರುವೆ. ಪಕ್ಷಕ್ಕಾಗಿ ದುಡಿದ ವ್ಯಕ್ತಿಗೆ ಟಿಕೆಟ್ ನೀಡಿಲ್ಲ ಎಂದಾದರೆ, ತತ್ವ, ಸಿದ್ಧಾಂತ ಏಕೆ ಬೇಕು? ಕೆ.ಎಸ್.ಈಶ್ವರಪ್ಪ ಅವರಿಗೂ ನನ್ನಂತೆ ಆಗಿದ್ದರೆ ಅವರಿಗೆ ಗೊತ್ತಾಗುತ್ತಿತ್ತು

  • ಚಿತ್ತಾಪುರದಲ್ಲಿ ಪ್ರಿಯಾಂಕ್‌ ಖರ್ಗೆ ವಿರುದ್ಧ 80 ಕ್ರಿಮಿನಲ್ ಪ್ರಕರಣ ಇದ್ದ ವ್ಯಕ್ತಿಗೆ ಟಿಕೆಟ್ ನೀಡಲಾಯಿತು. ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಲಾಯಿತು. ಅಡ್ವಾಣಿ, ವಾಜಪೇಯಿ ಅವರ ಕಾಲದಲ್ಲಿದ್ದ ಭ್ರಷ್ಟಾಚಾರ ರಹಿತ ವ್ಯವಸ್ಥೆ ಈಗಿನ ಬಿಜೆಪಿಯಲ್ಲಿಲ್ಲ

  • ಬಿಜೆಪಿಯವರು ಚುನಾವಣೆ ಸಂದರ್ಭ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಅದು ಎಲ್ಲಿಂದ ಬರುತ್ತದೆ? ಅವರೇನು ಸತ್ಯ ಹರಿಶ್ಚಂದ್ರರಾ? ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ

  • ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಖುಷಿಯಿಂದ ಪ್ರಯಾಣಿಸುತ್ತಿದ್ದಾರೆ. ಈಗ ಒಂದೇ ‘ಗ್ಯಾರಂಟಿ’ ಅನುಷ್ಠಾನದಿಂದ ವಿರೋಧ ಪಕ್ಷಗಳಲ್ಲಿ ನಡುಕ ಶುರುವಾಗಿದೆ

  • ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 75 ರಿಂದ 80 ವಯಸ್ಸಿನ ನಾಯಕರಿಗೆ ಟಿಕೆಟ್ ನೀಡಿದೆ. ನನಗೆ ಟಿಕೆಟ್ ನೀಡದ ಪರಿಣಾಮ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ಎಚ್ಚೆತ್ತುಕೊಂಡಿದೆ

  • ನನಗೆ ಟಿಕೆಟ್ ಕೈ ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕಾರಣ. ತಮ್ಮ ಮಾನಸ ಪುತ್ರ ಮಹೇಶ ಟೆಂಗಿನಕಾಯಿಗೆ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೊಡಿಸಲು ನನಗೆ ತಪ್ಪಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT