ಭಾನುವಾರ, 30 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತ್ತೆ ಸಿ.ಎಂ ಗದ್ದುಗೆಯ ಸದ್ದುಗದ್ದಲ!

ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ; ಸಿದ್ದರಾಮಯ್ಯ ಎದುರೇ ಬೇಡಿಕೆ ಮಂಡಿಸಿದ ಸ್ವಾಮೀಜಿ
Published 28 ಜೂನ್ 2024, 0:55 IST
Last Updated 28 ಜೂನ್ 2024, 0:55 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚುವರಿಯಾಗಿ ಜಾತಿವಾರು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಕೂಗು ವಾರದೀಚೆಗೆ ಭುಗಿಲೆದ್ದಿದ್ದ ಬೆನ್ನಲ್ಲೇ, ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರು ಸಿದ್ದರಾಮಯ್ಯನವರ ಎದುರೇ ಒತ್ತಡ ಹೇರಿರುವುದು ಚರ್ಚೆಯ ದಿಕ್ಕನ್ನು ಬದಲಿಸಿದೆ.

ಲೋಕಸಭಾ ಚುನಾವಣೆ ಮುಗಿದ ಬಳಿಕ, ಸಮುದಾಯವಾರು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ವಿಚಾರವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರಸ್ತಾವಿಸಿದ್ದರು. ಸಚಿವರಾದ ಜಿ. ಪರಮೇಶ್ವರ, ಕೆ.ಎನ್. ರಾಜಣ್ಣ, ಬಿ.ಜೆಡ್. ಜಮೀರ್ ಅಹಮದ್ ಖಾನ್, ಎಚ್.ಸಿ. ಮಹದೇವಪ್ಪ ಈ ಮಾತಿಗೆ ಸಹಮತ ಸೂಚಿಸಿದ್ದರು. ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರು ಈ ವಿಷಯದಲ್ಲಿ ಮತ್ತೆ ಮತ್ತೆ ಮಾತನಾಡುತ್ತಿದ್ದರು.

ಇದಕ್ಕೆ ತಿರುಗೇಟು ನೀಡುವಂತೆ ಪ್ರತಿಕ್ರಿಯಿಸಿದ್ದ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗಾ, ‘ಕೆಪಿಸಿಸಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಮಾಡುವುದು ಪದ್ಧತಿ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ಡಜನ್ ಉಪಮುಖ್ಯಮಂತ್ರಿ ಮಾಡಲಿ’ ಎಂದು ಒತ್ತಾಯಿಸಿದ್ದರು. 

ಈ ಬೆಳವಣಿಗೆಗಳು ಪಕ್ಷದ ಮೇಲೆ ಪರಿಣಾಮ ಬೀರುತ್ತಿರುವುದನ್ನು ಗಮನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ವಿಷಯವನ್ನು ಪ್ರಸ್ತಾಪಿಸಿದಂತೆ ಸಚಿವ ರಾಜಣ್ಣ ಅವರಿಗೆ ಗುರುವಾರ ಬೆಳಿಗ್ಗೆಯಷ್ಟೇ ತಾಕೀತು ಮಾಡಿದ್ದರು. 

ಸ್ವಾಮೀಜಿ ಸಿಡಿಸಿದ ಕಿಡಿ:

ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಚಂದ್ರಶೇಖರ ಸ್ವಾಮೀಜಿ, ಸಿದ್ದರಾಮಯ್ಯನವರು ಇನ್ನು ಮುಂದೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಿ ಎಂಬ ಬೇಡಿಕೆ ಮಂಡಿಸಿದರು.

ವೇದಿಕೆಯಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌. ತಂಗಡಗಿ, ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಅವರೂ ಇದ್ದರು.

ಕಾಂಗ್ರೆಸ್‌ನ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಸಿದ್ದರಾಮಯ್ಯ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ತಾವು ತಟಸ್ಥ ಎಂದಿದ್ದಾರೆ.

ಶಿವಕುಮಾರ್ ಜತೆಗೆ ಗುರುತಿಸಿಕೊಂಡಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ‘ಅದೂ ಒಂದು ಕಾಲ ಬರುತ್ತದೆ. ಎರಡು ವರ್ಷಕ್ಕೋ, ಎರಡೂವರೆ ವರ್ಷಕ್ಕೋ ಅದೆಲ್ಲ ಪಕ್ಷದ ವೇದಿಕೆಯಲ್ಲಿ ತೀರ್ಮಾನವಾಗುತ್ತದೆ’ ಎಂದು ಪ್ರತಿಪಾದಿಸಿದ್ದಾರೆ.

---

ಎಲ್ಲ ವಿಚಾರಗಳ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಆ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ

-ಸಿದ್ದರಾಮಯ್ಯ ಮುಖ್ಯಮಂತ್ರಿ

ಸಿ.ಎಂ ಸ್ಥಾನವನ್ನು ಶಿವಕುಮಾರ್‌ಗೆ ಬಿಟ್ಟುಕೊಡಬೇಕು ಎಂದು ಸ್ವಾಮೀಜಿ ನೀಡಿರುವ ಹೇಳಿಕೆಯು ಸ್ವಾಮೀಜಿ ಸ್ವಪ್ರೇರಣೆಯಿಂದಲೋ ಅಥವಾ ಶಿವಕುಮಾರ್ ಅವರೇ ಹೇಳಿಸಿದರೋ ಗೊತ್ತಿಲ್ಲ.

-ಆರ್‌.ಅಶೋಕ ವಿರೋಧ ಪಕ್ಷದ ನಾಯಕ

ರಾಜಕಾರಣದಲ್ಲಿ ಅಭಿಮಾನಪೂರ್ವಕವಾಗಿ ಇಂತಹ ಹೇಳಿಕೆಗಳನ್ನು ಮಧ್ಯೆ ಮಧ್ಯೆ ನೀಡುವುದು ಸಹಜ. ಅವರ ಮಾತಿಗೆ ಹೆಚ್ಚು ಗಮನ ಕೊಡಬಾರದು. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ.

-ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ

ಶಿವಕುಮಾರ್‌ಗೆ ಅಧಿಕಾರ ಬಿಟ್ಟುಕೊಡಿ: ಚಂದ್ರಶೇಖರ ನಾಥ ಸ್ವಾಮೀಜಿ

‘ಎಲ್ಲರೂ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಆಸ್ವಾದ ಮಾಡಿದ್ದಾರೆ. ನಮ್ಮ ಶಿವಕುಮಾರ್‌ ಒಬ್ಬರು ಮಾತ್ರ ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಇನ್ನು ಮುಂದೆ ಶಿವಕುಮಾರ್‌ ಅವರಿಗೆ ಅಧಿಕಾರ ಬಿಟ್ಟುಕೊಟ್ಟು ಅವರಿಗೆ ಒಳ್ಳೆಯದಾಗಲಿ ಎಂದು ಹರಸಬೇಕು. ಸಿದ್ದರಾಮಯ್ಯ ಮನಸ್ಸು ಮಾಡಿದರೆ ಮಾತ್ರ ಇದು ಸಾಧ್ಯ’ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾ ಮಠದ ಚಂದ್ರಶೇಖರ ನಾಥ ಸ್ವಾಮೀಜಿ ಹೇಳಿದರು. ‘ಶಿವಕುಮಾರ್ ಅವರು ಒಕ್ಕಲಿಗರು ಎಂಬ ಕಾರಣಕ್ಕೆ ನಾವು ಹೀಗೆ ಹೇಳಿದ್ದಲ್ಲ. ಅವರು ರಾಜ್ಯದಲ್ಲಿ ಓಡಾಡಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ ಮಾಡುತ್ತಿದ್ದಾರೆ. ಅವರ ನಂತರ ಕಾಂಗ್ರೆಸ್‌ನ ಇತರ ನಾಯಕರಿಗೂ ಅಧಿಕಾರ ಸಿಗಲಿ’ ಎಂದು ಪ್ರತಿಪಾದಿಸಿದರು.

‘ಸ್ವಾಮೀಜಿ ಹೇಳಿದ ತಕ್ಷಣ ಬಿಟ್ಟುಕೊಡೋಕೆ ಆಗತ್ತಾ?’

‘ಸ್ವಾಮೀಜಿ ಹೇಳಿದ ತಕ್ಷಣ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡೋಕೆ ಆಗುತ್ತಾ? ಯಾರಾದರೂ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡೋಕೆ ಹೋಗ್ತಾರಾ?  ಆ ಸ್ವಾಮೀಜಿಗಳು ಅವರ ಸ್ಥಾನ ಬಿಟ್ಟು ಕೊಡ್ತಾರಾ’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರು ಪ್ರಶ್ನಿಸಿದರು. ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂಬುದಾಗಿ ಸ್ವಾಮೀಜಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಅವರು ‘ಸ್ವಾಮೀಜಿಗೆ ಕೇಳಿ ನೋಡಿ.. ನಾನೇ ಸ್ವಾಮೀಜಿ ಆಗ್ತೇನೆ. ನಾಳೆಯಿಂದಲೇ ನಾನು ಕಾವಿ ಬಟ್ಟೆ ಹಾಕಿಕೊಳ್ಳುತ್ತೇನೆ. ಅವರು ತಮ್ಮ ಸ್ಥಾನ ಬಿಟ್ಟು ಕೊಡುತ್ತಾರಾ’ ಎಂದು ಸವಾಲು ಹಾಕಿದರು. ‘ಅವರೂ (ಮುಖ್ಯಮಂತ್ರಿ) ಬಿಟ್ಟು ಕೊಡಲ್ಲ. ಇವರೂ (ಸ್ವಾಮೀಜಿ) ಸಹ ಬಿಟ್ಟುಕೊಡಲ್ಲ. ಸ್ವಾಮೀಜಿ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಸದುದ್ದೇಶದಿಂದ ಹೇಳಿದ್ದಾರೋ ದುರುದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ವಾಕ್‌ ಸ್ವಾತಂತ್ರ್ಯವಿದೆ ಮಾತನಾಡುತ್ತಾರೆ. ಮುಂದಿನ 10 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದು ರಾಜಣ್ಣ ಹೇಳಿದರು.

ಡಿಸಿಎಂ ಹುದ್ದೆ ಬಯಸುವವರು ಹೈಕಮಾಂಡ್‌ ಬಳಿ ಹೋಗಲಿ: ಡಿಕೆಶಿ

‘ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಮಾತನಾಡುವವರು ಮಾಧ್ಯಮಗಳ ಮುಂದೆ ಮಾತನಾಡುವುದರ ಬದಲು ತಮ್ಮ ಆಕಾಂಕ್ಷೆಗಳ ಬಗ್ಗೆ ಹೈಕಮಾಂಡ್‌ ಬಳಿ ಪರಿಹಾರ ಕಂಡುಕೊಳ್ಳಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ‘ಮಾಧ್ಯಮಗಳ ಮುಂದೆ ಮಾತನಾಡಿದರೆ ಪ್ರಚಾರ ಸಿಗುತ್ತದೆಯೇ ಹೊರತು ಪರಿಹಾರ ಸಿಗುವುದಿಲ್ಲ’ ಎಂದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ‘ತುಂಬಾ ಸಂತೋಷ ಸಮಯ ವ್ಯರ್ಥ ಮಾಡದೇ ಹೈಕಮಾಂಡ್‌ ಬಳಿ ಹೋಗಿ ಪರಿಹಾರ ಕಂಡುಕೊಳ್ಳಲಿ. ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಲಿ. ವೈದ್ಯರ ಬಳಿ ಹೋದರೆ ಔಷಧಿ ಕೊಡುತ್ತಾರೆ. ವಕೀಲರ ಬಳಿ ಹೋದರೆ ನ್ಯಾಯ ಕೊಡಿಸುತ್ತಾರೆ. ಯಾರು ಎಲ್ಲಿಗೆ ಬೇಕಾದರೂ ಹೋಗಲಿ ನನ್ನದೇನೂ ಅಭ್ಯಂತರವಿಲ್ಲ’ ಎಂದು ಶಿವಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT